Home ರಾಜಕೀಯ 40% ಕಮಿಷನ್ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವಂತೆ ಶ್ರಮಿಸಿ: ಮಲ್ಲಿಕಾರ್ಜುನ್‌ ಖರ್ಗೆ

40% ಕಮಿಷನ್ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವಂತೆ ಶ್ರಮಿಸಿ: ಮಲ್ಲಿಕಾರ್ಜುನ್‌ ಖರ್ಗೆ

0

ಬೆಂಗಳೂರು: 40% ಕಮಿಷನ್ ಸರ್ಕಾರ ಕಿತ್ತೊಗೆಯಲು, ಕಾಂಗ್ರಸ್‌ ಸರ್ಕಾರ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಕಾಂಗ್ರೆಸ್‌ ಪಕ್ಷದ ನಾಯಕರು, ಸದಸ್ಯರು ಹಾಗೂ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಈ ಕುರಿತು ಸರ್ವೋದಯ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಒಬ್ಬ ಕಾರ್ಮಿಕ ಕುಟುಂಬದಲ್ಲಿ ಹುಟ್ಟಿ ಬೆಳೆದು, ವಿದ್ಯಾರ್ಥಿ ಸಂಘಟನೆ ಕಟ್ಟಿ ಅದರ ಅಧ್ಯಕ್ಷನಾಗಿ ಜವಳಿ ಕಾರ್ಮಿಕರ ಸಂಘಗಳ ಜತೆ ಕೆಲಸ ಮಾಡಿ ಅಲ್ಲಿ ಆರಿಸಿ ಬಂದಿದ್ದೆ. ನಾವು ನಮ್ಮ ಸ್ವಂತ ಶಕ್ತಿ ಮೇಲೆ ಮುಂದೆ ಬಂದಾಗ ಬೇರೆಯವರು ಅದನ್ನು ಗುರುತಿಸುತ್ತಾರೆ. ಆಗ ನಿಮ್ಮಲ್ಲಿರುವ ಶಕ್ತಿಗೆ ಬೆಂಬಲ ಸಿಗುತ್ತದೆ ಎಂದು ಹೇಳಿದರು.

ನನ್ನ ಸಂಘಟನೆ ನೋಡಿ ಕಾಂಗ್ರೆಸ್ 1969ರಲ್ಲೀ ಇಬ್ಬಾಗ ಆದಾಗ ನಮ್ಮ ಜಿಲ್ಲೆಯ ಕನ್ವೀನರ್ ಧರ್ಮರಾವ್ ಅವರು ಗುಲ್ಬರ್ಗಾ ಬ್ಲಾಕ್ ಅಧ್ಯಕ್ಷರಾಗಿ ಪಕ್ಷ ಕಟ್ಟಲು ನೇರವಾಗಿ. ನಿಮಗೆ ಇತ್ತ ಭವಿಷ್ಯ ಇದೆ ಎಂದು ಪ್ರೋತ್ಸಾಹ ನೀಡಿದರು.

ದೇಶದಲ್ಲಿ ಕಾಂಗ್ರೆಸ್ ಬಲವಾಗಿ ಅಧಿಕಾರಕ್ಕೆ ಬರಲಿದೆ. ಇಂದಿರಾ ಗಾಂಧಿ ಅವರು ಬೆಳೆಯುತ್ತಾರೆ. ನೀವು ಪ್ರಮುಖರಾಗಿ ಇರಬೇಕು ಎಂದರು. ದೇವರಾಜ ಅರಸು ಅವರು ಕನ್ವೀನರ್ ಆಗಿದ್ದಾಗ ನಾನು, ಧರ್ಮ ಸಿಂಗ್ ಸೇರಿದಂತೆ 10-15 ಯುವಕರನ್ನು ಕರೆದು ಪಕ್ಷದ ಕೆಲಸ ಮಾಡಿ ನಿಮಗೆ ಪಕ್ಷದಿಂದ ಟಿಕೆಟ್ ನೀಡುವುದಾಗಿ ಭರವಸೆ ನೀಡಿದರು.

1969ರಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾದೆ ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಕೆಪಿಸಿಸಿ ಉಪಾಧ್ಯಕ್ಷನಾಗಿ, ಕೆಪಿಸಿಸಿ ಅಧ್ಯಕ್ಷನಾಗಿ, ಸಿಡಬ್ಲ್ಯೂಸಿ ಸದಸ್ಯನಾಗಿ ಹಾಗೂ ಈಗ ಎಐಸಿಸಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ.

ನಾನು ಒಂದೇ ಬಾರಿಗೆ ಈ ಸ್ಥಾನಕ್ಕೆ ಜಿಗಿದಿಲ್ಲ. ಹಂತ ಹಂತವಾಗಿ ಬೆಳೆದಿದ್ದೇನೆ. ಎಲ್ಲವೂ ಒಂದೇ ಬಾರಿಗೆ ಆಗುವುದಿಲ್ಲ. ಇಂತಹ ಚಿಂತನೆ ಇರಬಾರದು. ಸೇವೆ ಮಾಡಬೇಕು, ಗುರಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ನಾವು ಅಧಿಕಾರಕ್ಕೆ ಪಕ್ಷ ಸೇರುವುದಿಲ್ಲ. ಪಕ್ಷದ ತತ್ವ ಸಿದ್ಧಾಂತ ಅರಿತು ಪಕ್ಷ ಅಧಿಕಾರಕ್ಕೆ ಬಂದಾಗ ಅದನ್ನು ಜಾರಿಗೊಳಿಸಲು ಕೆಲಸ ಮಾಡಬೇಕು. ಪಕ್ಷದ ತತ್ವ ಸಿದ್ಧಾಂತ ಬೆಳೆಸಲು ಶ್ರಮಿಸಬೇಕು. ನೆಹರೂ, ಅಂಬೇಡ್ಕರ್, ಗಾಂಧಿ ಅವರ ವಿಚಾರ ಅರಿಯದಿದ್ದರೆ ಮನಬಂದಂತೆ ನಡೆದುಕೊಳ್ಳುತ್ತಾರೆ. ಯಾರಿಗೆ ಬದ್ಧತೆ, ನಂಬಿಕೆ ಇರುತ್ತದೆಯೋ ಅವರು ಎಂದಿಗೂ ಪಕ್ಷ ಬಿಡುವುದಿಲ್ಲ ಎಂದರು.

ಹಲವು ಜನ ಮಂತ್ರಿ ಸ್ಥಾನ, ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂದು ಪಕ್ಷ ಬಿಡುತ್ತಾರೆ. ನಾವು ಕುರ್ಚಿಗಾಗಿ ಪಕ್ಷ ಸೇರಬಾರದು. ನಾವು ಇಂದು ನಂಬಿರುವ ತತ್ವ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಆಮೂಲಕ ಪಕ್ಷಕ್ಕೆ ಶಕ್ತಿ ತುಂಬಬೇಕು. ನಮ್ಮ ವಿಚಾರಧಾರೆಗೆ ಧಕ್ಕೆ ಆದಾಗ ನನ್ನ ನೋವುಗಳನ್ನು ಬದಿಗಿಟ್ಟು ಪಕ್ಷದ ಜತೆಗೆ ಇರುತ್ತೇನೆ. ಇದನ್ನು ನಾವು ತಿಳಿಯಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಬಹಳ ಮಂದಿ ನೀವು 70 ವರ್ಷದಲ್ಲಿ ಏನು ಮಾಡಿದ್ದೀರಿ ಎಂದು ಕೇಳುತ್ತಾರೆ. ನಾವು 70 ವರ್ಷದಲ್ಲಿ ಏನೂ ಮಾಡದಿದ್ದರೆ ದೇಶ ಇಷ್ಟು ಗಟ್ಟಿಯಾಗಿ ಒಂದಾಗಿರಲು ಸಾಧ್ಯವಾಗುತ್ತಿರಲಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಆಳವಾಗಿ ಬೇರೂರಿರುವುದು, ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಉಳಿಯಬೇಕು. ಆಗ ಮೋದಿ, ಶಾ ಉಳಿಯುತ್ತಾರೆ. ನಿಮಗೆ ಹಕ್ಕು, ಮೂಲಭೂತ ಅಧಿಕಾರ ಸಿಗುತ್ತದೆ. ನಾವು ಹೆದರಿ ಮನೆಯಲ್ಲಿ ಕೂತರೆ ಏನೂ ಆಗುವುದಿಲ್ಲ. ಈ ದೇಶ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕಾದರೆ ನೀವು ಜನರನ್ನು ಸಂಘಟಿಸಬೇಕು. ಆಗ ದೇಶದಲ್ಲಿರುವ ಕೆಟ್ಟ ಸರ್ಕಾರ ಕಿತ್ತೊಗೆಯಲು ಸಾಧ್ಯ ಎಂದರು.

ಮೋದಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಮನಬಂದಂತೆ ಮಾತನಾಡುತ್ತಾರೆ. ಇವರು ಮೋದಿ ಅವರ ಶಾಲೆಯಲ್ಲಿ ಕಲಿತವರೆ? ಇವರು ನಾವು ಮಾಡಿರುವ ಶಾಲೆ, ಕಾಲೇಜಿನಲ್ಲಿ ಓದಿ, ನಮ್ಮ ಸಾರ್ವಜನಿಕ ಉದ್ದಿಮೆಯಲ್ಲಿ ದುಡಿದು ಬೆಳೆದಿದ್ದಾರೆ. ಆದರೂ ಇವರು ನೀವು ಏನು ಮಾಡಿದ್ದೀರಿ ಎಂದು ಕೇಳುತ್ತಾರೆ ಎಂದು ಕಿಡಿಕಾರಿದರು.

ನಾವು ದೇಶ ರಕ್ಷಣೆ ಮಾಡಿ ದೇಶವನ್ನು ಒಗ್ಗಟ್ಟಾಗಿ ಇಟ್ಟಿದ್ದೇವೆ. ಬಾಂಗ್ಲಾ ಪ್ರತ್ಯೇಕ ದೇಶ ಮಾಡಿದ್ದು ಇಂದಿರಾ ಗಾಂಧಿ. ದೇಶದ ವಿದೇಶಾಂಗ ನೀತಿ ಮಾಡಿದ್ದು ನೆಹರೂ ಅವರು. ಪದೇ ಪದೇ ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಏನು ಮಾಡಿದ್ದಾರೆ ಎಂದು ಟೀಕೆ ಮಾಡುವುದಲ್ಲ. ಸೋನಿಯಾ ಗಾಂಧಿ ಅವರು ಮಾಡಿರುವ ತ್ಯಾಗ ನೀವು ಮಾಡಿಲ್ಲ. ಯುಪಿಎ ಮೊದಲ ಸರ್ಕಾರ ಸಮಯದಲ್ಲಿ ಸೋನಿಯಾ ಗಾಂಧಿ ಅವರಿಗೆ ಪ್ರಧಾನಿ ಆಗುವಂತೆ ಕೇಳಿದಾಗ ನಾನು ಪ್ರಧಾನಿ ಆಗುವುದಿಲ್ಲ ಎಂದು, ದೇಶದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಸ್ಥಾನ ತ್ಯಾಗ ಮಾಡಿದರು ಎಂದು ಹೇಳಿದರು.

ನಾವು ಒಂದು ಚೇರ್ಮನ್, ಮಂತ್ರಿ ಸ್ಥಾನ, ಪಕ್ಷದ ಹುದ್ದೆ ಸಿಗಲಿಲ್ಲ ಎಂದರೆ ಮುನಿಸಿಕೊಳ್ಳುತ್ತೇವೆ. ಆ ಕುಟುಂಬದ ತ್ಯಾಗ ಬಲಿದಾನ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಪ್ರಾಣತ್ಯಾಗ, ರಾಜಕೀಯದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ತ್ಯಾಗ ಮಾಡಿದ್ದಾರೆ. ಅವರು ಪ್ರಧಾನಿ ಆಗಬಹುದಿತ್ತು ಆದರೆ ಆಗಲಿಲ್ಲ. ಗಾಂಧಿ ಕುಟುಂಬ ಸದಸ್ಯರೇ ಅಧ್ಯಕ್ಷರಾಗಿ ಇರಬೇಕು ಎಂದು ಕೇಳಿದೆವು. ಆಗ ನಾವು ಆಗುವುದಿಲ್ಲ. ನೀವು ಚುನಾವಣೆ ನಡೆಸಿ ಅಲ್ಲಿ ಗೆಲ್ಲುವವರು ಪಕ್ಷದ ಅಧ್ಯಕ್ಷರಾಗುತ್ತಾರೆ ಎಂದು ಹೇಳಿದವರು ತ್ಯಾಗಮೂರ್ತಿ ಸೋನಿಯಾ ಗಾಂಧಿ  ಎಂದು ಮಲ್ಲಿಕಾರ್ಜುನ್‌ ಖರ್ಗೆ ತಿಳಿಸಿದರು.

ಅವರು ಪಕ್ಷದಲ್ಲಿ ಒಗ್ಗಟ್ಟು ಇರಬೇಕು, ಬೆಳೆಯಬೇಕು ಎಂದು ಈ ತ್ಯಾಗ ಮಾಡಿದ್ದಾರೆ. ಇಂದು ಆರ್ ಎಸ್ ಎಸ್, ಮೋದಿ, ಶಾ ಅವರು ಕಿರುಕುಳ ನೀಡುತ್ತಿದ್ದಾರೆ. ಪದೇ ಪದೆ ನಮ್ಮ ಪಕ್ಷದ ವಿರುದ್ಧ ಮಾತನಾಡುತ್ತಾರೆ. ಗಾಂಧಿ ಕುಟುಂಬ ಈ ಚುನಾವಣೆ ನಿಲ್ಲಲಿಲ್ಲ, ಆದರೂ ಬಿಜೆಪಿ ಅವರು ಮಾತನಾಡುವುದು ನಿಲ್ಲಿಸಲ್ಲ. ನಮ್ಮ ಪಕ್ಷದ ಬಗ್ಗೆ ನಿಮಗೆ ಯಾಕೆ ಚಿಂತೆ? ದೇಶ ಮುನ್ನಡೆಸುವ ಬಗ್ಗೆ ಗಮನಹರಿಸಿ ಎಂದು ಹೇಳಿದರು.

ಈ ದೇಶದಲ್ಲಿ  ಸ್ವತಂತ್ರ್ಯ ಸಿಗುವ ಮುನ್ನ 400 ಕಾಲೇಜು ಇದ್ದವು. ಇಂದು 11 ಲಕ್ಷ ಶಾಲೆ ಕಾಲೇಜು ಇವೆ. 1947ದಲ್ಲಿ 2 ಲಕ್ಷ ಪ್ರಾಥಮಿಕ ಶಾಲೆ ಇದ್ದವು. 2014ರಲ್ಲ 7 ಲಕ್ಷ ಪ್ರಾಥಮಿಕ ಶಾಲೆ ಇದ್ದವು. 877 ಹೈಸ್ಕೂಲ್ ಇದ್ದವು ಇಂದು 1 ಲಕ್ಷ ಹೈಸ್ಕೂಲ್ ಇದ್ದಾವೆ. 27 ವಿವಿ ಇದ್ದವು ಇಂದು 723 ವಿವಿ ಗಳಿವೆ ಎಂದು ಮಾಹಿತಿ ನೀಡಿದರು.

ಅಕ್ಷರಸ್ಥ ಪ್ರಮಾಣ ಶೇ16 ರಷ್ಟಿತ್ತು 2014ರಲ್ಲಿ ಇದು ಶೇ.74 ರಷ್ಟು ಆಯಿತು. ಪರಿಶಿಷ್ಟ ಜಾತಿ ಪಂಗಡದವರು 08%ರಷ್ಟು ಅಕ್ಷರಸ್ಥರು ಇದ್ದರು. ಇಂದು 67% ಇದ್ದಾರೆ ಎಂದರು.

ಸ್ವಾತಂತ್ರ ಪೂರ್ವದಲ್ಲಿ 4 ಲಕ್ಷ ಕಿಮೀ ಇದ್ದ ರಸ್ತೆ ಇಂದು 54 ಲಕ್ಷ ಕಿಮೀ ರಸ್ತೆ ಮಾಡಿದ್ದೇವೆ. ಸರ್ಕಾರಿ ನೌಕರಿ ವಿಚಾರ. ವಾಡಿ ಗದಗ 2200 ಕೋಟಿ ಯೋಜನೆಗೆ ನಾವು ನಿರ್ಧರಿಸಿದೆವು. ಅದಕ್ಕೆ ಅಂದಿನ ಸಿಎಂ ಸಿದ್ದರಾಮಯ್ಯ ಅಡಿಗಲ್ಲು ಹಾಕಬೇಕಿತ್ತು. ಆಗ ನಾನು ಈ ಯೋಜನೆಗೆ ಗೈರಾದೆ. ಕಾರಣ ಕೋಲಾರದಲ್ಲಿ ರೈಲ್ವೆ ಬೋಗಿ ಯೋಜನೆ ಮಂಜೂರು ಮಾಡಲು ಗೈರಾದೆ. ಆದರೆ ಮೋದಿ ಒಂದು ರೈಲು ಚಾಲನೆಗೂ ಹೋಗಿ ಪ್ರಚಾರ ಪಡೆಯುತ್ತಾರೆ. ನನ್ನ ಕಾಲದಲ್ಲಿ ಅಂತಹ 27 ರೈಲು ಆರಂಭಿಸಿದ್ದೇನೆ. ಇಂತಹ ದೊಡ್ಡ ಯೋಜನೆ ಕೊಟ್ಟರೂ ಪ್ರಚಾರ ಪಡೆಯಲಿಲ್ಲ ಎಂದು ಹೇಳಿದರು.

ಗುಜರಾತ್ ಚುನಾವಣೆಯಲ್ಲಿ ಕಳೆದ 9 ದಿನದಿಂದ ಪ್ರಚಾರ ಮಾಡುತ್ತಿದ್ದಾರೆ. ಯಾವ ಮಟ್ಟಕ್ಕೆ ಎಂದರೆ ಮೋರ್ಬಿ ಸೇತುವೆ ರಿಪೇರಿಗೆ 2 ಕೋಟಿ ನೀಡಲಾಗಿತ್ತು. ಇವರು 2 ಕೋಟಿ ಯೋಜನೆ ಉದ್ಘಟನೆ ಮಾಡಿದರು. ಇವರ ಕೈಗುಣವೋ ಏನೋ ಉದ್ಘಾಟನೆ ಮಾಡಿದ 5 ದಿನದಲ್ಲೇ ಸೇತುವೆ ಬಿದ್ದು ಹೋಯಿತು. 138 ಜನ ಸತ್ತರು. ಇದಕ್ಕೆ ಯಾರು ಜವಾಬ್ದಾರಿ ಹೊತ್ತರು? ಯಾರಾದರೂ ರಾಜೀನಾಮೆ ಕೊಟ್ಟರು? ಅದೇ ಪಶ್ಚಿಮ ಬಂಗಾಲದಲ್ಲಿ ಸೇತುವೆ ಬಿದ್ದಾಗ ದೇವರು ಇವರ ಆಡಳಿತ ನೋಡಿ ಬೇಸತ್ತು ಸೇತುವೆ ಕೆಡವಿದ್ದಾನೆ ಎಂದು ಹೇಳಿದ್ದರು ಎಂದರು.

ನಾವು ಮಾಡಿದ ಪ್ರತಿ ಕೆಲಸಕ್ಕೆ ಅಡ್ಡಗಾಲು ಹಾಕಿದ್ದಾರೆ. ಹೆಸರು ಬದಲಿಸುತ್ತಾರೆ. ನೀವು ಸತ್ಯನಾಶ ಮಾಡುತ್ತಿದ್ದೀರಿ. ನಾವು ಸತ್ಯದ ಪರವಾಗಿದ್ದೇವೆ. ನೀವು ಸುಳ್ಳು ಹೇಳಿ ಬದುಕುತ್ತಿದ್ದೀರಿ. ಮತ ಪಡೆಯಲು ಜಾತಿ ಧರ್ಮ ನಡುವೆ ದ್ವೇಷ ಬಿತ್ತುತ್ತಿದ್ದಾರೆ. ಮಹಿಳೆ ಮೇಲಿನ ದೌರ್ಜನ್ಯ ವಿರುದ್ಧ ಒಂದು ದಿನ ಧ್ವನಿ ಎತ್ತಿಲ್ಲ. ಮಾತೆತ್ತಿದರೆ ಗುಹೆ, ಮಂದಿರದಲ್ಲಿ ಪ್ರಾರ್ಥನೆ ಮಾಡುವುದಾಗಿದೆ. ದೇವರ ಪೂಜೆ ನಿಮ್ಮ ಮನೆಯಲ್ಲಿ ಮಾಡಿ. ಉಪವಾಸದಲ್ಲಿ ಜನ ಸಾಯಿತ್ತಿದ್ದು, ನಿರುದ್ಯೋಗ ಹೆಚ್ಚುತ್ತಿದೆ. ಬೆಲೆ ಏರಿಕೆಯಾಗಿದೆ. ರೂಪಾಯಿ ಮೌಲ್ಯ ಕುಸಿಯುತ್ತಿದೆ. ಈ ಬಗ್ಗೆ ಮಾತನಾಡುವ ಬದಲು ಕಾಂಗ್ರೆಸ್ ವಿರುದ್ಧ ಮಾತನಾಡುತ್ತಾರೆ ಎಂದು ಟೀಕಿಸಿದರು.

ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು 3500 ಕಿಮೀ ಪಾದಯಾತ್ರೆ ಆರಂಭಿಸಿದ ನಂತರ ಬಿಜೆಪಿಗೆ ನಡುಕ ಹುಟ್ಟಿದೆ. ಈಗ ರಾಹುಲ್ ಗಾಂಧಿ ಅವರ ಬಗ್ಗೆ ಜನರ ಪ್ರೀತಿ ಕಂಡು ದಿಗಿಲು ಹುಟ್ಟಿದೆ.

ನೀವು ಕಾಂಗ್ರೆಸ್ ಪಕ್ಷದ ಬಗ್ಗೆ ಯೋಚಿಸಬೇಡಿ. ನಾವು ಒಟ್ಟಾಗಿದ್ದೇವೆ. ನಮ್ಮನ್ನು ಬೇರೆ ಮಾಡಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಎಲ್ಲಾ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಸರ್ಕಾರಿ ಹುದ್ದೆ ತುಂಬುತ್ತೆವೆ. ನಾವು ಅಧಿಕಾರದಲ್ಲಿದ್ದಾಗ ಶಿಕ್ಷಣ ಇಲಾಖೆಯಲ್ಲಿ 18 ಸಾವಿರ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಿದ್ದೆವು. ದೇಶದಲ್ಲಿ 14 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ. ಅವುಗಳನ್ನು ಯಾಕೆ ತುಂಬುತ್ತಿಲ್ಲ. ಕಾರಣ ಬಡವರು ದಲಿತರಿಗೆ ಉದ್ಯೋಗ ಸಿಗುತ್ತದೆ. ಹೀಗಾಗಿ ಅವರು ತುಂಬಲ್ಲ ಎಂದು ಹೇಳಿದರು.

ಯುವಕರಿಗೆ ಕೆಲಸ ಕೊಡಿ. ಬಡವರಿಗೆ ಹಣ ಬಂದರೆ ಅವರು ಹೊಟ್ಟೆ ತುಂಬಾ ಊಟ ಮಾಡುತ್ತಾರೆ. ರೈಲ್ವೆಯಲ್ಲಿ 1.34 ಲಕ್ಷ ಹುದ್ದೆ ತುಂಬುವುದಾಗಿ ಹೇಳಿದ್ದಾರೆ. ಈ ಹುದ್ದೆ ಹಲವು ವರ್ಷಗಳಿಂದ ಖಾಲಿ ಇದ್ದರೂ ತುಂಬಲಿಲ್ಲ. ಆದರೆ ಸಂಸತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈಗ ತುಂಮಬುವುದಾಗಿ ಹೇಳುತ್ತಿದ್ದಾರೆ ಎಂದರು.

ಹಿಮಾಚಲ, ಗುಜರಾತ್, ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿ ಹೇಳುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. 8 ವರ್ಷದಲ್ಲಿ 16 ಕೋಟಿ ಉದ್ಯೋಗ ಎಲ್ಲಿ? ಹೊಸ ಉದ್ಯೋಗ ಸೃಷ್ಟಿಸುವುದಿರಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳೇ ತುಂಬುತ್ತಿಲ್ಲ ಎಂದು ವ್ಯಂಗಿಸಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಬೇಕಾದ ಅನುದಾನ, ಸಿದ್ದರಾಮಯ್ಯ ಅವರ ಕಾಲದಲ್ಲಿ ತರಲಾದ ಎಸ್ ಸಿಪಿ ಟಿಎಸ್ ಪಿ ಯೋಜನೆ ಅನುದಾನ ನೀಡದೆ, ಅವುಗಳನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು

ನನಗೆ ಇಂದು ನೀವು ಗೌರವಿಸಿ ಅಭಿನಂದಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೀರಿ. ನೀವು ನನಗೆ ಯಾವಾಗ ಗೌರವ ನೀಡುತ್ತೀರಿ ಎಂದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಾಗ ಗೌರವ ಸಲ್ಲಿಸಿದಂತೆ ಆಗುತ್ತದೆ. ಈ ಹಾರ ತುರಾಯಿ ಸಾಮಾನ್ಯ. ನನಗೆ ನಿಜವಾಗಿ ಗೌರವ ಸಲ್ಲುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ. ಹೀಗಾಗಿ ವೇದಿಕೆ ಮೇಲೆ ಇರುವ ನಾಯಕರು ತಮ್ಮ ಸಣ್ಣ ಪುಟ್ಟ ವ್ಯತ್ಯಾಸ ಮರೆತು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

40% ಕಮಿಷನ್ ಸರ್ಕಾರ ಕಿತ್ತೊಗೆಯಲು ನಮ್ಮ ಸರ್ಕಾರ ಬರಬೇಕು. ಅದಕ್ಕಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ಅನೇಕ ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ನೀಡಿದ್ದೀರಿ. ಈಗ ಮತ್ತೆ ಅದೇ ಕೆಲಸ ಮಾಡಬೇಕು ಎಂದರು.

ನಾವು ಒಗ್ಗಟ್ಟಾಗಿ ಮುಂದೆ ಸಾಗಿದರೆ ಇದನ್ನು ಸಾಧಿಸಬಹುದು. ಮುನಿಸಿಕೊಂಡಿರುವವರು, ನಮ್ಮಿಂದ ದೂರ ಆಗಿರುವವರು, ಹೊಸ ಯುವಕರನ್ನು ಪಕ್ಷಕ್ಕೆ ಕರೆ ತನ್ನಿ. ಪಕ್ಷದ ಅಧ್ಯಕ್ಷನಾದ ನಂತರ ನಾನು ಮಾಡಬೇಕಾದ ಕೆಲಸಗಳು ಇವೆ. ಉದಯಪುರ ಸಭೆ ನಿರ್ಣಯಗಳನ್ನು ಕಾರ್ಯಕ್ರಮಗಳನ್ನು ಜಾರಿ ತರಲು ಆರಂಭಿಸಿದ್ದು, ಎಲ್ಲವನ್ನೂ ಒಂದೊಂದಾಗಿ ಅನುಷ್ಟಾನಕ್ಕೆ ತರಲು ಮುಂದಾಗಿದ್ದೇನೆ ಎಂದು ತಿಳಿಸಿದರು.

ಯುವಕರಿಗೆ 50%, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಎಲ್ಲಾ ಘಟಕಗಳಿಗೆ ಜವಾಬ್ದಾರಿ ನೀಡಿ. ಸಂಘಟನೆಗೆ ಅವಕಾಶ ನೀಡಿ ಎಂದರು.

ಮಾಧ್ಯಮಗಳಲ್ಲಿ ನಮ್ಮ ವಿಚಾರ ಹೆಚ್ಚು ಪ್ರಚಾರ ಆಗುವುದಿಲ್ಲ. ಹೀಗಾಗಿ ಮನೆ ಮನೆಗೆ ಹೋಗಿ ಪಕ್ಷದ ಪರ ಪ್ರಚಾರ ಮಾಡಿ. ನಾವು ಪಟ್ಟಣ ಬಿಟ್ಟು ಹಳ್ಳಿ ಹಳ್ಳಿಗೆ ಹೋಗಿ ಜನರಿಗೆ ಮನವರಿಕೆ ಮಾಡಿದಾಗ ಮಾತ್ರ ಬಿಜೆಪಿ ಎದುರಿಸಲು ಸಾಧ್ಯ. ಪಕ್ಷಕ್ಕೆ ಶಕ್ತಿ ತುಂಬಲು ಸಾಧ್ಯ. ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯಿಂದ ಸಿಗುತ್ತಿರುವ ಲಾಭವನ್ನು ಸರಿಯಾಗಿ ಬಳಸಿಕೊಳ್ಳಬೇಕು. ರಾಜ್ಯದ ಯಾತ್ರೆ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಹೇಳಿದ ಅವರು, ಅದ್ದೂರಿ ಸ್ವಾಗತ ಮಾಡಿದ ಎಲ್ಲಾ ನಾಯಕರಿಗೆ ಧನ್ಯವಾದ ಅರ್ಪಿಸಿದರು.

You cannot copy content of this page

Exit mobile version