Home ಅಂಕಣ ದುಡಿಯುವ ಜನರ ಪ್ರತಿರೋಧಗಳು ಮತ್ತು ಸಂವೇಧನಾರಹಿತ ಸರ್ಕಾರಗಳು (ಕೊರಳು ಕೊಳಲು ಅಂಕಣ)

ದುಡಿಯುವ ಜನರ ಪ್ರತಿರೋಧಗಳು ಮತ್ತು ಸಂವೇಧನಾರಹಿತ ಸರ್ಕಾರಗಳು (ಕೊರಳು ಕೊಳಲು ಅಂಕಣ)

0

ಪ್ರಪಂಚದಾದ್ಯಂತ ಬಂಡವಾಳಶಾಹಿ ನೀತಿ-ಕ್ರಮಗಳನ್ನು ಅನುಸರಿಸುತ್ತಿರುವ ಅನೇಕ ದೇಶಗಳ ಸರ್ಕಾರಗಳ ವಿರುದ್ಧ ದುಡಿಯುವ ಮಂದಿ ತಮ್ಮದೆ ಆದ ರೀತಿಯಲ್ಲಿ ಸಂಘಟನೆಗೊಂಡು ಪ್ರತಿರೋಧವನ್ನು ಒಡ್ಡುತ್ತಿದ್ದಾರೆ.  ಅಂದರೆ ಮುಖ್ಯವಾಹಿನಿಯ ನಿರೂಪಣೆಗೆ ಭಿನ್ನವಾಗಿ ಪರ್ಯಾಯ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನಗಳಿಂದ ಅವರು ದಾಪುಗಾಲು ಹಾಕುತ್ತಿದ್ದಾರೆ.  ಅಂದರೆ ಅವರಿಗೆ ವರ್ಗ, ಜಾತಿ, ಮತ, ಜನಾಂಗ, ಲಿಂಗ ತಾರತಮ್ಯ ಇತ್ಯಾದಿಗಳನ್ನು ಪಕ್ಕಕ್ಕಿಡುವ ಪರ್ಯಾಯ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳ ಅರಸುವಿಕೆಯಲ್ಲಿದ್ದಾರೆ. ಅವರಿಗೆ ಬೇಕಿರುವುದು ಪ್ರಗತಿಪರ, ಸಮೃದ್ಧ, ಶಾಂತಿಯ ಹಾಗೂ ನೆಮ್ಮದಿಯ ನಾಳೆಗಳು.  ಶೋಷಣೆ, ಹಿಂಸೆ ಮತ್ತು ಕಣ್ಣುಗಳಿಗೆ ಮಣ್ಣೇರೆಚುಜವ ಆಳುವ ವರ್ಗಗಳ ಬಂಡವಾಳಶಾಹಿ ಕುಟಿಲ ಕಾರ್ಯತಂತ್ರಗಳ ಬಗೆಗೆ ಕ್ರಮೇಣ ಅವರಲ್ಲಿ ಹೇವರಿಕೆ ಉಂಟಾಗುತ್ತಿದೆ. ಸಾಂಪ್ರದಾಯಿಕ ವ್ಯವಸ್ಥೆಗಳು ಎತ್ತಿಹಿಡಿಯುತ್ತ ಬಂದಿರುವ ವಿವಿಧ ತೆರನಾದ ಅಸಮಾನತೆ ಹಾಗೂ ಅನ್ಯಾಯ, ಯಥಾಸ್ಥಿತಿಯ ಬಗೆಗೆ ಕ್ರಮೇಣ ಅರಿವು ಮೂಡಿ ಬರುತ್ತಿದೆ.

ಹೀಗಾಗಿ ನಾವು ವಿಶ್ವದ ಅನೇಕ ಭಾಗಗಳಲ್ಲಿ ಪ್ರತಿಗಾಮಿ ಮತ್ತು ಸರ್ವಾಧಿಕಾರಿ ಆಳುವ ವರ್ಗಗಳ ವಿರುದ್ಧ ಭಿನ್ನ ಬಗೆಯ ಸಾಮೂಹಿಕ ಪ್ರತಿರೋಧವನ್ನು ಕಾಣುತ್ತಿದ್ದೇವೆ.  ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌, ಹವಾಮಾನ ಬದಲಾವಣೆ ಕುರಿತ ಕ್ರಿಯೆಗಳು, ರೈತಾಪಿ ವರ್ಗದ ಪ್ರತಿಭಟನೆಗಳು, ಯುದ್ಧ, ಬಂಡವಾಳಶಾಹಿ ಹಾಗೂ ಝಿಯೋನಿಸ್ಟ್‌ ವಿರೋಧಿ ಚಳುವಳಿಗಳು  ರಾಜಕೀಯ ಹೋರಾಟಗಳ ಮುಖ್ಯ ಹಾಗೂ ಗಮನೀಯ ರೂಪಗಳಾಗಿ ಹೊರಹೊಮ್ಮಿವೆ.  ಇಂತಹ ಹಲವು ಚಳುವಳಿಗಳಿಗೆ ಜನತೆ ಮತ್ತು ಭೂಮಿಯ ಹಿತ, ಅವರ/ಅವುಗಳ ಸುಸ್ಥಿರ ಭವಿಷ್ಯದ ದೃಷ್ಟಿಯಿಂದ ಸಾಮಾಜಿಕ ಮತ್ತು ಪರ್ಯಾವರಣದ ನೆಲೆಗಳಲ್ಲಿ ಬದಲಾವಣೆಗಳು ಜರುಗಬೇಕೆಂಬ ಆಶೋತ್ತರಗಳಿವೆ.  ಆದರೆ ಇಂತಹ ಚಳುವಳಿಗಳನ್ನು ಮೊಟಕುಗೊಳಿಸಲು ದುಡಿಯುವ ಮಂದಿಯ ಮೇಲೆ ರಾಷ್ಟ್ರೀಯ ಸಾರ್ವಬೌಮತ್ವ, ಸಾಂಸ್ಕೃತಿಕ ಐಕ್ಯತೆ, ಮತೀಯ, ಜನಾಂಗೀಯ ಮತ್ತು ಜಾತೀಯ ನೆಲೆಗಳನ್ನು ರಕ್ಷಿಸಲಾಗುತ್ತದೆ ಎಂಬ ಹೆಸರಿನಲ್ಲಿ ನಾನಾ ತೆರನಾದ ಪ್ರಹಾರಗಳನ್ನು ಆಳುವ ವರ್ಗಗಳು ನಡೆಸುತ್ತ ಬರುತ್ತಿವೆ.

ಮೇಲೆ ಪ್ರಸ್ತಾಪಿಸಿರುವ ಪ್ರಹಾರಗಳ ಮೂಲಕ ಬಂಡವಾಳಶಾಹಿ ವ್ಯವಸ್ಥೆಯ ಹಿತಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಆಳುವ ವರ್ಗಗಳು ನಾಲ್ಕು ಧ್ಯೇಯೋದ್ದೇಶಗಳನ್ನು ಹೊಂದಿವೆ. ಮೊದಲನೆಯದಾಗಿ ಅವು ದುಡಿಯುವ ಮಂದಿಯನ್ನು ತಮ್ಮ ರಚಿತ ಅಸ್ಮಿತೆಗಳು ಮತ್ತು ಮೇಲ್ಪದರದ ಹಿತಗಳಲ್ಲೇ ಇರಲು ರಾಷ್ಟ್ರವಾದ, ಸಂಸ್ಕೃತಿ, ಮತ, ಸಂಪ್ರದಾಯ ಮತ್ತು ಕುಟುಂಬ ಗೌರವ ಮುಂತಾದ ವಿಷಯಗಳನ್ನು ಬಳಸಿಕೊಳ್ಳುತ್ತವೆ.  ಎರಡನೆಯದಾಗಿ, ಅವು ದುಡಿಯುವ ಮಂದಿಯ ಒಗ್ಗಟ್ಟನ್ನು ಮುರಿದು, ಅವರು ರ್ಯಾಡಿಕಲ್‌, ಪ್ರಜಾತಾಂತ್ರಿಕ ಬದಲಾವಣೆಗೆ ಪಕ್ಕಾಗದಂತೆ ಕಾರ್ಯತಂತ್ರಗಳನ್ನು ರೂಪಿಸುತ್ತವೆ.  ಮೂರನೆಯದಾಗಿ, ಅವರ ಅನುಭವಗಳ ಹಂಚಿಕೆ ಮತ್ತು ಐಕಮತ್ಯದ ಅಡಿಯಲ್ಲಿ ರೂಪುಗೊಳ್ಳುವ ಪ್ರಗತಿಪರ ಪ್ರಜ್ಞೆಯನ್ನು ನಾಶ ಪಡಿಸಲು ಪ್ರಯತ್ನಿಸುತ್ತವೆ.  ನಾಲ್ಕನೆಯದಾಗಿ, ಆಳುವ ವರ್ಗಗಳು ಒಂದು ಸುಭದ್ರ(ಸೆಕ್ಯುರಿಟಿ) ಪ್ರಭುತ್ವ  ಮತ್ತು ಸರ್ವಾಧಿಕಾರದ, ಕಾರ್ಪೊರೇಟ್‌ ಸರ್ಕಾರಗಳ ರಚನೆಗೆ ಬುನಾದಿಯನ್ನು ಹಾಕುತ್ತವೆ.  ಹೀಗೆ ಮಾಡುವುದರ ಮೂಲಕ ಅವು ಆಳುವ ಎಲೈಟ್‌ಗಳ ಹಾಗೂ ಆಳ್ವಿಕೆಯಲ್ಲಿರದ ಎಲೈಟ್‌ಗಳ ಹಿತವನ್ನು ಕಾಯುತ್ತವೆ.  ಅವು ಪ್ರತಿಭಟನೆಗಳು, ಪ್ರತಿರೋಧಗಳು ಹಾಗೂ ಭಿನ್ನಮತಗಳನ್ನು ದಮನಗೊಳಿಸುವ ಪೊಲೀಸ್‌ ರಾಜ್ಯದ ನಿರ್ಮಾಣಕ್ಕೆ ಏನುಬೇಕೋ ಎಲ್ಲವನ್ನೂ ಮಾಡುತ್ತವೆ. ಕ್ರಮೇಣ ಇವೆಲ್ಲ ಪ್ರಜಾತಾಂತ್ರಿಕ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುತ್ತವೆ.

ನಮ್ಮ ದೇಶದಲ್ಲಿ 1970ರ ದಶಕದ ಮಧ್ಯಭಾಗದಲ್ಲಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ತುರ್ತುಪರಿಸ್ಥಿತಿಯನ್ನು ಘೋಷಿಸಿತು.  ಜನತೆ ಅನೇಕ ಪರಿಯ ದಮನಕಾರಿ ಕ್ರಮಗಳನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎದುರಿಸಬೇಕಾಯಿತು.  ಅನೇಕ ವಿರೋಧ ಪಕ್ಷಗಳ ನಾಯಕರನ್ನು ಬಂಧಿಸಲಾಯಿತು.  ಪತ್ರಿಕಾ ಸ್ವಾತಂತ್ರ್ಯದ ಜೊತೆಗೆ ಇತರ ಸ್ವಾತಂತ್ರ್ಯಗಳಿಗೆ ಧಕ್ಕೆಯಾಯಿತು.  ತುರ್ತುಪರಿಸ್ಥಿತಿಯ ಮುನ್ನ, ಅಂದರೆ 1960 ದಶಕದ ಕೊನೆಯ ಮತ್ತು 1970 ದಶದಕ ಮೊದಲ ವರ್ಷಗಳಲ್ಲಿ ಇದೇ ಇಂದಿರಾ ಗಾಂಧಿ ಮುಂದಾಳತ್ವವಿದ್ದ ಕಾಂಗ್ರೆಸ್‌ ಸರ್ಕಾರ ಬ್ಯಾಂಕ್‌ ರಾಷ್ಟ್ರೀಕರಣ, ಪ್ರೈವಿ ಪರ್ಸ್‌ಗಳ( ಮಾಜಿ ರಾಜಕುಟುಂಬಗಳಿಗೆ ನೀಡಲಾಗುತ್ತಿದ್ದ ವಿಶೇಷ ಭತ್ಯೆಗಳು ಹಾಗೂ ಇತರ ಸೌಕರ್ಯಗಳು) ರದ್ದತಿ ಮುಂತಾದ ದಿಟ್ಟ ಕ್ರಮಗಳನ್ನು ಜಾರಿ ಮಾಡಿತ್ತು.  ಆದರೆ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಘೋಷಿಸಲ್ಪಟ್ಟ ತುರ್ತುಪರಿಸ್ಥಿತಿ ನಮ್ಮ ದೇಶದ ಇತಿಹಾಸದ ಒಂದು ಕರಾಳ ಅಧ್ಯಾಯವೇ ಸರಿ.  ಮಿಶ್ರ ಆರ್ಥಿಕ ನೀತಿಗಳನ್ನು ಆ ಕಾಲಘಟ್ಟದ ಕೇಂದ್ರ ಸರ್ಕಾರ ಅನುಸರಿಸುತ್ತಿದ್ದರೂ, ಸಮಾಜವಾದಿ ಕ್ರಮಗಳತ್ತಲೂ ಅದು ವಾಲಿತ್ತು ಎಂದರೆ ಅತಿಶಯೋಕ್ತಿಯಾಗಲಾರದು.

ಆದರೆ 1990 ದಶಕದ ಆದಿಯಲ್ಲಿ ಜಾರಿಯಾದ ಜಾಗತೀಕರಣ(ಪ್ರಸ್ತುತ ಕಾಲಘಟ್ಟದ), ಖಾಸಗೀಕರಣ, ಉದಾರೀಕರಣದ ಮತ್ತಿತರ ನವಉದಾರವಾದಿ ನೀತಿಗಳು ಸಮಾಜವಾದಿ ಕ್ರಮಗಳಿಗೆ ಕಂಠಕಪ್ರಾಯವಾದವು.  ಆ ಕಾಲದಲ್ಲಿ ಹಿಂದುತ್ವ ರಾಜಕೀಯ ಪ್ರವರ್ಧಮಾನದಲ್ಲಿತ್ತು.  ಅಧಿಕಾರದ ಗದ್ದುಗೆಗಾಗಿ ಈ ಶಕ್ತಿಗಳು ರಾಜಕಾರಣದಲ್ಲಿ ಮತವನ್ನು ಬೆರೆಸಿದವು.  ಬಂಡವಾಳದ ಜೊತೆ ಕೋಮುವಾದ ಜೊತೆಗೂಡಿತು.  ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಷಡ್ಯಂತರಗಳು ರಚನೆಗೊಂಡವು.  ಕಳೆದ ಒಂದೆರಡು ದಶಕಗಳಲ್ಲಿ, ನಮ್ಮ ದೇಶದಲ್ಲಿ  ನಾವು ಮತ್ತು ಅವರು ಎಂಬ ಸಮಾಜ ವಿಭಜಕ ನೋಟ-ನಡೆಗಳು ಕಳವಳಕಾರಿ ಮಟ್ಟವನ್ನು ತಲುಪಿದವು.  ಅಲ್ಪಸಂಖ್ಯಾತರ ಮೇಲೆ ಅವ್ಯಾಹತ ಆಕ್ರಮಣಗಳಾದವು.  ಹಿಂದೂ ರಾಷ್ಟ್ರವಾದ ಮುನ್ನೆಲೆಗೆ ಬಂದಿತು. ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ನಮ್ಮಲ್ಲಿ ದುಡಿಯುವ ಮಂದಿ ಮತ್ತು ಕಾರ್ಮಿಕ ಸಂಘಗಳು ಮೇಲೆ ಪ್ರಸ್ತಾಪಿಸಿರುವ ಪರಿಸ್ಥಿತಿಯನ್ನು ಹೇಗೆ ಎದುರುಗೊಳ್ಳುತ್ತಿವೆ, ಅವುಗಳು ಯಾವ ಬಗೆಯ ಪ್ರತಿರೋಧಗಳನ್ನು ಒಡ್ಡುತ್ತಿವೆ ಎಂಬುದು ಅಧ್ಯಯನಯೋಗ್ಯ ವಿಷಯವೇ ಸರಿ.  ಹಿಂದೆ, ಕಾರ್ಮಿಕ ಸಂಘಗಳು ಸಾಮಾಜಿಕ ಬದಲಾವಣೆಯ ಸಾಧನಗಳು ಎಂದು ಪರಿಭಾವಿಸಲಾಗಿತ್ತು.  ಆದರೆ ಅವು ಈ ಆಶಯಕ್ಕೆ ತಕ್ಕಂತೆ ನಡೆದುಕೊಂಡಿವೆಯೇ? ಅವು ಬರೀ ಎಕನಾಮಿಸಂ( ಸದಸ್ಯರ ಆರ್ಥಿಕ ಸೌಕರ್ಯಗಳ ಒಟ್ಟು ವಿಷಯಗಳು) ಮಾತ್ರ ಸೀಮಿತವಾಗಿವೆಯೆ? ನಮ್ಮ ದೇಶದಲ್ಲಿ ಬಂಡವಾಳ ಮತ್ತು ಕೋಮುವಾದ ಮಿಳಿತ ಪ್ರಕ್ರಿಯೆಗಳಿಗೆ ಅವುಗಳಿಂದ ಯಾವ ತೆರನಾದ ಕಾರ್ಯತಂತ್ರಗಳು ರೂಪುಗೊಂಡಿವೆ, ಅವು ಎಷ್ಟು ಜಾರಿಯಾಗಿವೆ? ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕ್ರತಿಕ ವಿಚಾರಗಳ ಬಗೆಗೆ ಸೂಕ್ತವಾದ ಶಿಕ್ಷಣವನ್ನು ಸದಸ್ಯರಿಗೆ ನೀಡಲಾಗುತ್ತಿದೆಯೇ? ನಾಯಕತ್ವದ ವಿಕೇಂದ್ರೀಕರಣ ಜರಗುತ್ತಿದೆಯೇ ಎಂಬಿತ್ಯಾದಿ ಪ್ರಶ್ನೆಗಳು ದುಡಿಯುವ ಮಂದಿಯ ಶ್ರೇಯಸ್ಸನ್ನು ಬಯಸುವ, ನೈಜ ತುಡಿತಗಳುಳ್ಳ ಮಂದಿಯನ್ನು ಕಾಡುತ್ತಿವೆ.

ಸುರಂಗದ ಕೊನೆಯಲ್ಲಿ ಬೆಳಕು ಕಾಣಿಸುತ್ತದೆ, ಅಲ್ಲವೇ?

  • ಮ ಶ್ರೀ ಮುರಳಿ ಕೃಷ್ಣ

                  

You cannot copy content of this page

Exit mobile version