Home ಅಂಕಣ ಸುಳ್ಳು ಸುದ್ದಿ ಪತ್ತೆ ವ್ಯವಸ್ಥೆ ನಿಲ್ಲಿಸಲಿರುವ ಮೆಟಾ: ಭಾರತದಲ್ಲಿ ಏನಾಗಬಹುದು?

ಸುಳ್ಳು ಸುದ್ದಿ ಪತ್ತೆ ವ್ಯವಸ್ಥೆ ನಿಲ್ಲಿಸಲಿರುವ ಮೆಟಾ: ಭಾರತದಲ್ಲಿ ಏನಾಗಬಹುದು?

0
2015 ಸೆಪ್ಟೆಂಬರ್‌ನಲ್ಲಿ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ನನ್ನು ಬೇಟಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ

ಜನವರಿ 7, 2025 ಮಂಗಳವಾರ ಥರ್ಡ್‌-ಪಾರ್ಟಿ-ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು ನಿಲ್ಲಿಸುವುದಾಗಿ ಮೆಟಾ ಘೋಷಿಸಿದೆ. ಇದನ್ನು ಅಮೇರಿಕಾದಿಂದ ಆರಂಭಿಸಲು ತೀರ್ಮಾನಿಸಿದೆ. ಈ ಮೂಲಕ 130 ದೇಶಗಳ 90 ಸಂಸ್ಥೆಗಳ ಜೊತೆಗೆ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಥ್ರೆಡ್‌ನಲ್ಲಿ ಸುಳ್ಳು ಸುದ್ದಿ ಪತ್ತೆಗಾಗಿ ಮಾಡಿಕೊಂಡಿದ್ದ ಒಪ್ಪಂದವನ್ನು ಮೆಟಾ ನಿಲ್ಲಿಸಲಿದೆ.

ಮೆಟಾ ಸುಳ್ಳು ಸುದ್ದಿ ಪತ್ತೆಗಾಗಿ ಈ ವ್ಯವಸ್ಥೆಯನ್ನು 2016 ರಲ್ಲಿ ಆರಂಭಿಸಿತು. ಈಗ ಇದನ್ನು ನಿಲ್ಲಿಸಿ, X ನಲ್ಲಿರುವ ನೋಟ್ಸ್‌ನಂತೆ ಸಾಮೂಹಿಕ ( crowdsourced) ಫ್ಯಾಕ್ಟ್‌ ಚೆಕ್ಕಿಂಗ್‌ ಮಾದರಿಯನ್ನು ಜಾರಿಗೆ ತರಲಿದೆ. ಇದರಲ್ಲಿ ಬಳಕೆದಾರರು ಮಾಹಿತಿಯ ಬಗ್ಗೆ ತಮ್ಮ ಸ್ಪಷ್ಟನೆಯನ್ನು ನೀಡಲು ಸಾಧ್ಯವಿದೆ, ಈ ಸ್ಪಷ್ಟೀಕರಣವು ಜನರ ದಾರಿ ತಪ್ಪಿಸುವ ಪೋಸ್ಟ್‌ನ ಪಕ್ಕದಲ್ಲಿಯೇ ಕಾಣಿಸಿಕೊಳ್ಳಲಿದೆ.

ಸದ್ಯ ಇದನ್ನು ಅಮೇರಿಕಾದಿಂದ ಆರಂಭಿಸಲಾಗುತ್ತಿದೆ, ನಂತರ ಇತರ ದೇಶಗಳಲ್ಲೂ ಇದನ್ನು ಜಾರಿಗೊಳಿಸಲಿದೆ. ಅಮೇರಿಕಾದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಸಂತೋಪಡಿಸಲು, ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುವ ಟ್ರಂಪನ್ನು ಮೆಚ್ಚಿಸಲು ಮೆಟಾ ಈ ದಾರಿ ಹಿಡಿದಿದೆ ಎಂಬ ಟೀಕೆಗಳು ಜಾಗತಿಕವಾಗಿ ಕೇಳಿಬರುತ್ತಿದೆ.

ಮೆಟಾದ ಈ ನಡೆಯು ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಸರ್ಕಾರವಿರುವ ಭಾರತದಂತಹ ದೇಶಗಳಲ್ಲಿ ಸರ್ಕಾರದ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇದೆ.

ಮೆಟಾದ ಪಾಲಿಸಿಯಲ್ಲಿ ಆಗುವ ಬದಲಾವಣೆಯಿಂದ ಏನಾಗಲಿದೆ?

ಸದ್ಯದ ಸಂದರ್ಭದಲ್ಲಿ ಫ್ಯಾಕ್ಟ್‌ ಚೆಕ್ಕರ್‌ಗಳು ಒಂದು ಪೋಸ್ಟ್‌ ಅನ್ನು ಸುಳ್ಳು ಎಂದು ಹೇಳಿದರೆ, ಮೆಟಾ ಆ ಪೋಸ್ಟ್‌ನ ವಿಸಿಬಿಲಿಟಿ ಮತ್ತು ರೀಚ್‌ ಕಡಿಮೆ ಮಾಡುವ ಮೂಲಕ ಹೆಚ್ಚೆಚ್ಚು ಜನರಿಗೆ ತಲುಪದಂತೆ ಮಾಡುತ್ತದೆ. ಅಲ್ಲದೇ, ಅದು ಸುಳ್ಳು ಸುದ್ದಿ ಎಂದು ಪೋಸ್ಟ್‌ ಮೇಲೆ ಲೇಬಲ್‌ ಮಾಡುತ್ತದೆ, ಜೊತೆಗೆ ಸತ್ಯ ಏನು ಎಂದು ತಿಳಿಯಲು ಲಿಂಕ್‌ ಅನ್ನು ನೀಡುತ್ತದೆ.

ಮೆಟಾದ ಹೊಸ ಮಾನದಂಡವು, X ನ ಪಾಲಿಸಿಯಂತೆ ಕೆಲಸ ಮಾಡಲಿದೆ. ಎಕ್ಸ್‌ನ ಮಾಲೀಕ ಎಲನ್‌ ಮಸ್ಕ್‌ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆತ್ಮೀಯ ಸ್ನೇಹಿತ ಎಂಬುದನ್ನು ಮರೆಯುವಂತಿಲ್ಲ. X ನ ಪಾಲಿಸಿಯು ಪ್ರೋಗ್ರಾಂಗೆ ಸೈನ್‌ಅಪ್‌ ಮಾಡಿದ ಖಾತೆಗಳು ಮಾಡುವ ಎಲ್ಲಾ ಸಮುದಾಯ ಟಿಪ್ಪಣಿ (ಜನರ ಅಭಪ್ರಾಯ)ಯನ್ನು ಪ್ರಕಟಿಸಲು ಅನುಮತಿ ನೀಡುತ್ತದೆ. ಹೆಚ್ಚು ಜನ ಸಮ್ಮತಿಸಿದ್ದಾರೆ ಎಂಬ ಕಾರಣಕ್ಕೆ ಆ ನೋಟ್‌ ಅನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ, “ವೈವಿಧ್ಯಮಯ ದೃಷ್ಟಿಕೋನಗಳಿಂದ” ಕೂಡಿರುವ ಖಾತೆಗಳ ನೋಟ್‌ಗಳು ಉಪಯುಕ್ತ ಎಂದು ಅನ್ನಿಸಿದರೆ ಮಾತ್ರ ಆ ನೋಟ್‌ ಎಲ್ಲಿರಿಗೂ ಕಾಣಿಸಲಿದೆ.

ಮಂಗಳವಾರದ ತನ್ನ ಪ್ರಕಟಣೆಯಲ್ಲಿ, ಮೆಟಾ ಈ ವಿಧಾನವು X ನಲ್ಲಿ ಕೆಲಸ ಮಾಡಿದೆ ಮತ್ತು “ಪಕ್ಷಪಾತ ಕಡಿಮೆಯಾಗುತ್ತದೆ” ಎಂದು ಹೇಳಿಕೊಂಡಿದೆ .

ಇದರಿಂದ, ಒಂದು ಪೋಸ್ಟ್‌ ಸುಳ್ಳು ಸುದ್ದಿಯಾಗಿದ್ದರೂ, ಬಹುಪಾಲು ಜನರು ಅದನ್ನು ಸತ್ಯವೆಂದು ಕರೆದರೂ ಆ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಲಿದೆ. ಸುಳ್ಳನ್ನು ಸತ್ಯ ಎಂದು ಹೇಳುವವರ ನೋಟ್‌ಗಳು ಹೆಚ್ಚಾದರೆ, ಆ ಸುಳ್ಳು ಅಧಿಕೃತ ಮಾಹಿತಿಯಂತೆ ಹರಡುವ ಸಾಧ್ಯತೆ ಇದೆ. ‌

ಟ್ರಂಪ್‌ ಕೃಪೆಗಾಗಿ ಈ ಸರ್ಕಸ್?

ಅಮೇರಿಕಾದಲ್ಲಿ ಟ್ರಂಪ್‌ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವಾಗ, ಟ್ರಂಪ್‌ ಆಶೀರ್ವಾದ ಪಡೆಯಲು ಮೆಟಾ ಮತ್ತು ಎಕ್ಸ್‌ ಈ ಸರ್ಕಸ್‌ ನಡೆಸುತ್ತಿರುವಂತೆ ಕಾಣುತ್ತದೆ. ಟ್ರಂಪ್‌ನ ಕಟ್ಟರ್‌ ಬೆಂಬಲಿಗ, ಬಲಪಂಥೀಯ ಜೋಯಲ್ ಕಪ್ಲಾನ್ ಅವರನ್ನು ಜಾಗತಿಕ ವ್ಯವಹಾರಗಳ ಮುಖ್ಯಸ್ಥರನ್ನಾಗಿ ಮೆಟಾ 2025 ರ ಜನವರಿ 2 ರಂದು ನೇಮಿಸಿತು. ಇದು ಸರ್ಕಾರಕ್ಕೆ ಹತ್ತಿರ ಇರುವ ವ್ಯಕ್ತಿಯನ್ನು ಕೂರಿಸಿಕೊಂಡು ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವಂತೆ, ಸರ್ಕಾರದ ಸುಳ್ಳುಗಳನ್ನು ಸುಲಭವಾಗಿ ಪ್ರಚಾರ ಮಾಡಲು ಸಾಧ್ಯವಾಗುವಂತೆ ಮಾಡುವ ತಂತ್ರದಂತೆ ಕಾಣುತ್ತದೆ.

ಟ್ರಂಪ್‌ ಹಾಗೂ ಅವರ ಬೆಂಬಲಿಗರು ಫ್ಯಾಕ್ಟ್‌ ಚೆಕ್ಕರ್‌ಗಳ ಮೇಲೆ ಸತತವಾಗಿ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಇವರ ಈ ನಡೆಗೆ ಪೂರಕವಾಗಿ, ಬೆಂಬಲವಾಗಿ ಮೆಟಾ ಹಂತ ಹಂತವಾಗಿ ಥರ್ಡ್‌-ಪಾರ್ಟಿ ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು ನಿಲ್ಲಿಸಲು ಹೊರಟಿದೆ. ಇದರ ಜೊತೆಗೆ ದ್ವೇಷ ಹರಡುವ ನಡವಳಿಕೆಗಳ ಮೇಲೆ ನಿಯಂತ್ರಣ ಹೇರಲು ಇದ್ದ ಪಾಲಿಸಿಯಲ್ಲಿಯೂ ಬದಲಾವಣೆಯನ್ನು ಮೆಟಾ ತಂದಿದೆ.

ಇದನ್ನು ಓದಿ: LGBTQ+ ಗಳನ್ನು ಮಾನಸಿಕ ರೋಗಿಗಳೆಂದು ಅವಮಾನಿಸಲು ಮೆಟಾ ಅನುಮತಿ!

ಇದರಿಂದ ಟ್ರಂಪ್‌ ಅವರಿಗೆ ದೊಡ್ಡ ಲಾಭವಾದರೂ, ಬದಿಯಲ್ಲಿ ಲಾಭ ಪಡೆಯುವವರು ನರೇಂದ್ರ ಮೋದಿ ಹಾಗೂ ಬಿಜೆಪಿ ಎಂಬುದು ಭಾರತದ ವಿಚಾರದಲ್ಲಿ ಸತ್ಯ.

ಸದ್ಯ ಯಾವ ರೀತಿಯಲ್ಲಿಯೂ ಉಪದ್ರವನ್ನು ನೀಡದ ಪೋಸ್ಟ್‌ಗಳೂ ಸೆನ್ಸಾರ್‌ ಆಗುತ್ತಿವೆ ಎಂದು ಫ್ಯಾಕ್ಟ್‌ ಚೆಕ್ಕರ್‌ಗಳ ಮೇಲೆ ಆರೋಪಿಸುವಂತೆ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. “ಮೆಟಾ ನಿರ್ಬಂಧಿಸುತ್ತಿದೆ. ಇದರಿಂದ ಜನರು ಫೇಸ್‌ಬುಕ್‌ ಜೈಲಿನನಲ್ಲಿ ಬಂಧಿಗಳಾಗಿರುವಂತೆ ಭಾವಿಸುತ್ತಾರೆ, ಅವರಿಗೆ ನಾವು ನಿಧಾನವಾಗಿ ಪ್ರತಿಕ್ರಿಯೆ ನೀಡುತ್ತೇವೆ,” ಎಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠವನ್ನು ಮೆಟಾ ಹೇಳಿದೆ.

ಆದರೆ, ಯಾವುದೇ ಫ್ಯಾಕ್ಟ್‌ ಚೆಕ್ಕರ್‌ಗಳೂ ಮೆಟಾದಲ್ಲಿ ಪೋಸ್ಟ್‌ ಅನ್ನು ಸೆನ್ಸಾರ್‌ ಮಾಡಿಲ್ಲ, ಮತ್ತು ಮಾಡಲು ಸಾಧ್ಯವೂ ಇಲ್ಲ. ಅವರು ಮೆಟಾದ ಟೂಲ್‌ಗಳನ್ನು ಮತ್ತು ನಿಯಮಗಳನ್ನು ಬಳಸಿಕೊಂಡು ಪೋಸ್ಟ್‌ಗಳ ಸ್ವತಂತ್ರ ವಿಮರ್ಶೆಯನ್ನು ಮಾಡಿ, ಅದನ್ನು ಸುಳ್ಳು ಅಥವಾ ಸತ್ಯ ಎಂದು ನಿರ್ಧರಿಸಿ ನಿಖರ ಆಕರಗಳ ಮೂಲಕ ತಮ್ಮ ತೀರ್ಮಾಣವನ್ನು ದೃಢೀಕರಿಸುತ್ತಾರೆ. ಆ ನಂತರ ಆ ಸುದ್ದಿಯನ್ನು ಸೆನ್ಸಾರ್‌ ಮಾಡುವುದು, ಬಿಡುವುದು ಮೆಟಾಕ್ಕೆ ಬಿಟ್ಟ ಕೆಲಸವಾಗಿದೆ. “More Speech and Fewer Mistakes” ಎನ್ನುವ ಮೆಟಾ, 2024 ರ ಅಕ್ಟೋಬರ್‌ನಲ್ಲಿ ಪ್ರಕಟಿಸಿದ Regulation (EU) 2022/2065 – Digital Services Act – Transparency Report for Facebook ವರದಿಯಲ್ಲಿ, ಮೆಟಾದಲ್ಲಿ ಮಾಡಲಾಗುವ ಸುಳ್ಳು ಸುದ್ದಿ ಪತ್ತೆಯಲ್ಲಿ ಕೇವಲ 3% ಮಾತ್ರ ದೂರುಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.

ಮೆಟಾ ಥರ್ಡ್-ಪಾರ್ಟಿ-ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು ನಿಲ್ಲಿಸುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯಾತ್ಮಕ ಬದಲಾವಣೆಗಳು ನಡೆಯುವ ಸಾಧ್ಯತೆಗಳಿವೆ. ಫ್ಯಾಕ್ಟ್‌ ಚೆಕ್ಕಿಂಗ್‌ನಿಂದ ಉಪಯೋಗವಿಲ್ಲ ಎಂಬುದು, ಸೆನ್ಸಾರ್‌ ಮಾಡಿದಂತಾಗುತ್ತದೆ ಎಂಬಿತ್ಯಾದಿ ಕಾರಣಗಳನ್ನು ನೀಡುವ ಮೆಟಾ ಮುಂದೆ ಹೆಚ್ಚು ಹೆಚ್ಚು ತಪ್ಪು ಮಾಹಿತಿಗಳು-ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಲು ಕಾರಣವಾಗಬಹುದು.

ಮೆಟಾದ ಈ ನಡೆಯಿಂದ ಮೋದಿ ಸರ್ಕಾರದ ಬೇಳೆ ಬೇಯುತ್ತಾ?

ಸದ್ಯ ಫ್ಯಾಕ್ಟ್‌ ಚೆಕ್ಕಿಂಗ್‌ ನಿಲ್ಲಿಸುವ ಮೆಟಾ, ಈ ಕೆಲಸವನ್ನು ಮೊದಲು ಅಮೇರಿಕಾದಲ್ಲಿ ಆರಂಭಿಲಿದೆ. ಇದರಿಂದ ಟ್ರಂಪ್‌ ಸರ್ಕಾರಕ್ಕೆ ಲಾಭವಾಗಲಿದೆ ಎಂಬುದನ್ನು ಜಾಗತಿಕ ಮಟ್ಟದ ತಜ್ಞರು, ವಿಶ್ಲೇಷಕರು ಒಪ್ಪಿಕೊಂಡಿದ್ದಾರೆ. ಇದರಿಂದ ಭಾರತಕ್ಕೆ ಏನು ಲಾಭವಾಗಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಟ್ರಂಪ್‌ ನಂತೆ ಮೋದಿಯವರೂ, ಅವರಿಬ್ಬರ ಬೆಂಬಲಿಗರೂ ಭಾರತದಲ್ಲಿ ಫ್ಯಾಕ್ಟ್‌ ಚೆಕ್ಕರ್‌ಗಳ ಮೇಲೆ ಅಸಹನೆಯನ್ನು ಹೊಂದಿರುವುದನ್ನು ನಾವು ಅನೇಕ ನಿದರ್ಶನಗಳ ಮೂಲಕ ನೋಡಬಹುದು.

2020 ರ ಅಗಸ್ಟ್‌ನಲ್ಲಿ, ಭಾರತದ ಬಿಜೆಪಿ ನಾಯಕರ ದ್ವೇಷ ಭಾಷಣದ ಮೇಲೆ ನಿರ್ಬಂಧ ಹೇರಬೇಡಿ, ಇದರಿಂದ ಕಂಪನಿಯ ನಿರೀಕ್ಷೆಗಳಿಗೆ ಹಾನಿಯಾಗುತ್ತದೆ ಎಂದು ತನ್ನ ಸಿಬ್ಬಂದಿಗಳಿಗೆ ಫೇಸ್‌ಬುಕ್‌ನ ಭಾರತದ ಸಾರ್ವಜನಿಕ ನೀತಿ ಮುಖ್ಯಸ್ಥೆ ಆಂಖಿ ದಾಸ್ ಹೇಳಿದ್ದಾರೆ ಎಂದು ದಿ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿತ್ತು. ಈ ಸಂದರ್ಭದಲ್ಲಿ ಅಂಖಿ ದಾಸ್‌ ಮೇಲೆ ಬಿಜೆಪಿ ನಾಯಕರನ್ನು ಫೇಸ್‌ಬುಕ್‌ನ ದ್ವೇಷ ಭಾಷಣದ ನಿಯಮಗಳಿಂದ ರಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂತು.

ಈ ಆರೋಪವನ್ನು ನಿರಾಕರಿಸಿದ ಫೇಸ್‌ಬುಕ್‌, “ತಾನು ಯಾವುದೇ ಪಕ್ಷದ ಪರವಾಗಿ ಇಲ್ಲ,” ಎಂದು ಸಮರ್ಥನೆ ಮಾಡಿಕೊಂಡಿತ್ತು. ಇದಾಗಿ ಎರಡು ತಿಂಗಳು ಕಳೆದ ಮೇಲೆ, 2020 ರ ಅಕ್ಟೋಬರ್‌ 27 ರಂದು ಅಂಖಿ ದಾಸ್‌ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದರು. ಮೆಟಾ ಹಾಗೂ ಭಾರತ ಸರ್ಕಾರದ ನಡುವಿನ ಸಂಬಂಧ ಅಸ್ಪಷ್ಟ ಹಾಗೂ ಅಪಾರದರ್ಶಕವಾಗಿ ಕಂಡು ಬರುತ್ತದೆ.

ಈಗ X ನ ಮಾದರಿಯನ್ನು ಅನುಸರಿಸಲು ಮೆಟಾ ಹೊರಟಿದೆ. 2024 ರಲ್ಲಿ ಯುರೋಪಿನ ಫ್ಯಾಕ್ಟ್-ಚೆಕಿಂಗ್ ಸ್ಟ್ಯಾಂಡರ್ಡ್ಸ್ ನೆಟ್‌ವರ್ಕ್‌ ನಡೆಸಿದ ಅಧ್ಯಯನವು ಸುಮಾರು 69% ಟ್ವಿಟ್‌ಗಳನ್ನು ಸುಳ್ಳು ಅಥವಾ ತಪ್ಪುದಾರಿಗೆಳೆಯುವವು ಎಂದು ಫ್ಯಾಕ್ಟ್‌-ಚೆಕ್ಕರ್‌ಗಳು ಹೇಳಿರುವುದನ್ನು ಬಹಿರಂಗಪಡಿಸಿದೆ. ಆದರೆ X ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಇಲ್ಲ.

ಈಗ ಮೆಟಾ ತನ್ನ ಹೊಸ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೆ ತಂದರೆ, ಅದನ್ನು ಮೊದಲು ಬಿಜೆಪಿ ಹೈಜಾಕ್‌ ಮಾಡಿಕೊಳ್ಳುತ್ತದೆ. ಈ ಹಿಂದೆ ಪ್ರೆಸ್‌ ಇನ್ಪಾರ್ಮೇಷನ್‌ ಬ್ಯೂರೋ (PIB) ಅಡಿಯಲ್ಲಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ತನ್ನದೇ ಆದ ಫ್ಯಾಕ್ಟ್‌ ಚೆಕ್ಕಿಂಗ್‌ ಘಟಕ ಆರಂಭಿಸಲು ಹೊರಟಾಗ, ಆ ಅಧಿಸೂಚನೆಗೆ ಸುಪ್ರೀಂ ಕೋರ್ಟ್‌ ತಡೆಯನ್ನು ಒಡ್ಡಿತ್ತು.

ಸರ್ಕಾರಗಳೇ ಫ್ಯಾಕ್ಟ್‌-ಚೆಕ್ಕಿಂಗ್‌ ಯೂನಿಟ್‌ಗಳನ್ನು ಆರಂಭಿಸುವುದು ನರಿಯನ್ನು ಕೋಳಿಗೂಡಿನ ಕಾವಲು ಕಾಯಲು ಹೇಳಿ ಬೀಗದ ಕೀಯನ್ನು ಕೊಟ್ಟಂತೆ. ಸರ್ಕಾರಗಳು ಈ ಫ್ಯಾಕ್ಟ್‌-ಚೆಕ್ಕಿಂಗ್‌ ಯೂನಿಟ್‌ಗಳ ಮೂಲಕ ತಮ್ಮನ್ನು ಟೀಕಿಸುವ, ಪ್ರಶ್ನಿಸುವ ದನಿಗಳನ್ನು ಸುಲಭವಾಗಿ ಹತ್ತಿಕ್ಕಲು ಸಾಧ್ಯ.

ಭಾರತದಲ್ಲಿ ಸದ್ಯ ಮೆಟಾದ ಜೊತೆಗೆ ಸಹಯೋಗವನ್ನು ಹೊಂದಿರುವ ಥರ್ಡ್‌-ಪಾರ್ಟಿ-ಫ್ಯಾಕ್ಟ್‌-ಚೆಕ್ಕಿಂಗ್‌ ಸಂಸ್ಥೆಗಳೆಂದರೆ, AFP – ಹಬ್, ಬೂಮ್, ಫ್ಯಾಕ್ಟ್ ಕ್ರೆಸೆಂಡೋ, ದಿ ಹೆಲ್ದೀ ಇಂಡಿಯನ್‌ ಪ್ರಾಜೆಕ್ಟ್ , ಫ್ಯಾಕ್ಟ್ಲೀ, ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ , ನ್ಯೂಸ್‌ಚೆಕ್ಕರ್ , ನ್ಯೂಸ್‌ಮೀಟರ್ , ನ್ಯೂಸ್‌ಮೊಬೈಲ್ ಫ್ಯಾಕ್ಟ್ ಚೆಕ್ಕರ್ , ದಿ ಕ್ವಿಂಟ್ , ವಿಶ್ವಸ್.ನ್ಯೂಸ್ .‌

ಮೆಟಾ ತನ್ನ ಪಾಲಿಸಿಯಲ್ಲಿ ತಂದಿರುವ ಬದಲಾವಣೆಗಳು ಭಾರತದಲ್ಲಿ ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದು ಅಮೇರಿಕಾದಲ್ಲಿ ಆಗುವ ಬದಲಾವಣೆಗಳಿಂದ ಗ್ರಹಿಸಬಹುದು. ಅಧಿಕಾರದಲ್ಲಿ ಇರುವವರಿಗೆ ತಾನು ನೀಡಿದ ಮಾತನ್ನು ಉಳಿಸಿಕೊಳ್ಳಲು ಮೆಟಾ ಈ ರೀತಿಯ ಸರ್ಕಸ್‌ ಮಾಡುತ್ತಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಅಮೇರಿಕಾದಲ್ಲಿ ಏನಾಗಲಿದೆಯೋ, ಅದು ಭಾರತದಲ್ಲೂ ಆಗುವ ಸಾಧ್ಯತೆ ಇದೆ.

You cannot copy content of this page

Exit mobile version