ಕರಾವಳಿಗರ ಎದೆಯ ಭಾಷೆಯಾದ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆಯನ್ನು ನೀಡಬೇಕು, ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ತುಳುವರು ನಡೆಸಿದ ಹೋರಾಟಗಳು, ಚಳುವಳಿಗಳು ನಡೆದುಬಂದ ಹಾದಿಯನ್ನು ಅವಲೋಕಿಸುವ ಪ್ರಯತ್ನ ಚರಣ್ ಐವರ್ನಾಡು ಬರೆಯುತ್ತಿರುವ ಈ ಸರಣಿ ಲೇಖನಗಳಲ್ಲಿದೆ. ಮಾತೃಭಾಷೆಗಳ ಉಳಿವಿಗೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿರುವ ʼವಿಶ್ವ ಮಾತೃಭಾಷಾʼ ದಿನದ ವಿಶೇಷ ಲೇಖನವಿದು.
ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆಯನ್ನು ನೀಡಬೇಕು, ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದನ್ನು ಆಗ್ರಹಿಸಿ ಅಭಿಯಾನಗಳೂ, ಸಾಮಾಜಿಕ ಜಾಲತಾಣಗಳಲ್ಲಿ ಚಳವಳಿಗಳನ್ನೂ ಮಾಡಲಾಗಿದೆ. ತುಳುವರ ಈ ಬೇಡಿಕೆಗಳು ತುಳುನಾಡಿನ ಸಂಸದ, ಶಾಸಕರ ಆಶ್ವಾಸನೆಗಳಾಗಿವೆಯೇ ಹೊರತು ಈಡೇರಿಲ್ಲ.
ತುಳು ಚಳುವಳಿ 1928 ರಲ್ಲಿ ಉಡುಪಿಯಲ್ಲಿ ಎಸ್ ಯು ಪಣಿಯಾಡಿಯವರ ನೇತೃತ್ವದಲ್ಲಿ ಆರಂಭವಾಗಿ 1948ರ ಸಮಯದಲ್ಲಿ ನಿಂತುಹೋಗುತ್ತದೆ. 1928ರಲ್ಲಿ ಪಣಿಯಾಡಿಯವರು ಉಡುಪಿಯಲ್ಲಿ ತುಳುವ ಮಹಾಸಭೆಯನ್ನು ಸ್ಥಾಪಿಸಿದರು. ಇವರ ಜೊತೆಗೆ ನಿಂತವರು ತುಳು ವಿದ್ವಾಂಸ ಅಮ್ಮುಂಜೆ ಶೀನಪ್ಪ ಹೆಗ್ಗಡೆಯವರು (ಪೊಳಲಿ ಶೀನಪ್ಪ ಹೆಗ್ಗಡೆ). 1927 ರಲ್ಲಿ ಮಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಮರುವರ್ಷವೇ ತುಳುವ ಮಹಾಸಭೆ ಸ್ಥಾಪನೆಗೊಂಡಿತು. ಇದರ ಜೊತೆಗೆ ತುಳು ಪುಸ್ತಕಗಳ ಪ್ರಕಟಣೆಗಾಗಿ ʼತುಳುವ ಸಾಹಿತ್ಯಮಾಲೆʼ ಆರಂಭವಾಯಿತು.
ತುಳುವ ಸಾಹಿತ್ಯಮಾಲೆಯ ಮೊದಲ ಪುಸ್ತಕ ಬಡಕಬೈಲು ಪರಮೇಶ್ವರಯ್ಯನವರ ʼಕಿಟ್ನರಾಜಿ ಪರ್ಸಂಗʼ. ಇವರು ಸಂಸ್ಕೃತ ಕೃತಿ ಬಜಗೋವಿಂದಂ ಅನ್ನು ಕನ್ನಡ ಮತ್ತು ತುಳುವಿಗೆ ಅನುವಾದಿಸಿದರು. ಇದರ ಜೊತೆ ಸ್ವಾತಂತ್ರ್ಯ ಹೋರಾಟಗಾರ ಎನ್ ಎಸ್ ಕಿಲ್ಲೆಯವರ ʼಕಾನಿಗೆʼ, ಪೊಳಲಿ ಶೀನಪ್ಪ ಹೆಗ್ಗಡೆಯವರ ಮಿತ್ಯನಾರಾಯಣ ಕತೆ, ತುಳುವಾಲ ಬಲಿಯೇಂದ್ರ, ಬಂಗಾರ್ದಂಗಿದ ಕತೆ ಪುಸ್ತಕಗಳು ಪ್ರಕಟವಾದವು. ಪಣಿಯಾಡಿಯವರು ತುಳುವಿನ ಮೊದಲ ಕಾದಂಬರಿ ʼಸತೀ ಕಮಲೆʼ ಬರೆದರು. ಕಲ್ಲೆಯವರು ತಮ್ಮ ರಾಷ್ಟ್ರೀಯ ಚಳುವಳಿ ಹೋರಾಟಗಳನ್ನು ತುಳುವಿನಲ್ಲಿಯೇ ಮಾಡುತ್ತಿದ್ದರು.
ಎಸ್ ಯು ಪಣಿಯಾಡಿಯವರು 1930ರಲ್ಲಿ ಬರೆದ In Defence of a Tulunad Province ಲೇಖನದಲ್ಲಿ ತುಳುವಿಗೆ ಪ್ರತ್ಯೇಕ ರಾಜ್ಯ ಏಕೆ ಬೇಕು ಎಂಬುದನ್ನು ವಿವರಿಸುತ್ತಾರೆ. ಅವಿಭಜಿತ ಕೆನರಾ ಜಿಲ್ಲೆಯ ಬಹುಸಂಖ್ಯಾತರ ತಾಯಿನುಡಿ ತುಳು ಎಂಬ ಕಾರಣಕ್ಕೆ ತುಳುನಾಡು ಪ್ರಾಂತ್ಯದ ರಚನೆಯನ್ನು ನಾನು ಬೆಂಬಲಿಸುತ್ತೇನೆ ಎನ್ನುತ್ತಾರೆ. ಪಣಿಯಾಡಿಯವರು ತುಳುನಾಡು ಎಂಬ ಪದವೇ ಕೆಲವು ಚಳುವಳಿಕಾರರ ಕೃತಕ ಸೃಷ್ಟಿ ಎಂಬ ವಾದವನ್ನು ಅಲ್ಲಗೆಳೆಯುತ್ತಾರೆ. 1921ರ ಜನಗಣತಿಯ ಪ್ರಕಾರ ತುಳುವರ ಸಂಖ್ಯೆ5 ಲಕ್ಷದ 30 ಸಾವಿರ ಮತ್ತು ಕನ್ನಡ, ಕೊಂಕಣಿ, ಮಲಯಾಳ ಭಾಷೆಯಾಡುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆಯೇ ಹೊರತು ತುಳುವರ ಸಂಖ್ಯೆ ಏರುತ್ತಿಲ್ಲ ಎನ್ನುತ್ತಾರೆ.
ಇದಕ್ಕೆ ಅವರು ಕೊಡುವ ಕಾರಣಗಳೆಂದರೆ,
1. ಹೊರನಾಡಿನಲ್ಲಿ ತುಳುವರು ಕನ್ನಡಿಗರೆಂದು ಕರೆಸಿಕೊಳ್ಳುವುದು.
2. ಮನೆಯಲ್ಲಿ ತುಳುವಿನಲ್ಲಿ ವ್ಯವಹರಿಸದೇ ಇರುವುದು.
3. ಬಾಸೆಲ್ ಮಿಷನ್ ಹೆಸರು ʼಕರ್ನಾಟಕ ಮಿಷನ್ʼ ಎಂದು ಮರುನಾಮಕರಣಗೊಂಡ ಮೇಲೆ ತಾಯಿನುಡಿಯನ್ನು ತುಳುವಿನಿಂದ ಕನ್ನಡಕ್ಕೆ ಬದಲಾಯಿಸಿಕೊಂಡದ್ದು.
4. ತುಳುವರು ರೋಮನ್ ಕ್ಯಾಥೋಲಿಕ್ ಆಗಿ ಪರಿವರ್ತನೆ ಹೊಂದಿ ಕೊಂಕಣಿಗೆ, ಇಸ್ಲಾಂಗೆ ಮತಾಂತರಗೊಂಡು ಉರ್ದು ಮತ್ತು ಮಲಯಾಳಂಗೆ ಬದಲಾಗಿರುವುದು.
ಕೇವಲ ಸಾಂಸ್ಕೃತಿಕ ಹಿನ್ನಲೆಯಿಂದ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಇಡದೆ ಬ್ಯಾಂಕಿಂಗ್, ಆಮದು-ರಪ್ತು ವ್ಯವಹಾರ, ವಿಮೆ ಮೊದಲಾದ ಕ್ಷೇತ್ರಗಳಲ್ಲಿ ಮುಂದುವರೆದಿದ್ದ ತುಳುನಾಡು ಆರ್ಥಿಕವಾಗಿ ತುಳುನಾಡು ಸ್ವತಂತ್ರವಾಗುವಷ್ಟು ಸಬಲವಾಗಿದೆ ಎಂದು ಪಣಿಯಾಡಿಯವರು ಹೇಳುತ್ತಾರೆ.
ಪಣಿಯಾಡಿಯವರಿಗೆ ತುಳು ಚಳುವಳಿಯನ್ನು ಹಾದಿ ತಪ್ಪಿಸುತ್ತಿರುವವರ ಬಗ್ಗೆ ಅರಿವಿತ್ತು. ತಮ್ಮ In Defence of a Tulunad Province ಲೇಖನವನ್ನು ತುಳು ಭಾಷೆ- ಸಂಸ್ಕೃತಿಯ ಪುನರುಜ್ಜೀವನ ಅರ್ಥಹೀನ ಮತ್ತು ಶಕ್ತಿಯ ದುರುಪಯೋಗ, ಈ ಶಕ್ತಿಯನ್ನು ಜನೋಪಕಾರಿ ಕನ್ನಡದ ಅಭಿವೃದ್ದಿಗೆ ಬಳಸಿಕೊಳ್ಳಬೇಕು ಎಂಬ ವಾದದ ಪೊಳ್ಳುತನವನ್ನು ಬಯಲಿಗೆ ತರಲು ಬರೆದಿದ್ದೇನೆ ಎನ್ನುತ್ತಾರೆ.
ಪಣಿಯಾಡಿಯವರು ಕೆನರಾ ಜಿಲ್ಲೆಗೆ ʼಅವಿಭಜಿತ ದ.ಕ ತುಳುನಾಡುʼ ಎಂಬ ಹೆಸರಿಡುವ ಪ್ರಸ್ತಾಪವನ್ನು ಕಾಂಗ್ರೆಸ್ ಸಭೆಯಲ್ಲಿ ಮಂಡಿಸುವಾಗ ಅದಕ್ಕೆ ಬೆಂಬಲ ಸಿಗಲಿಲ್ಲ. ಇವರು ಮದರಾಸಿಗೆ ಹೋದ ನಂತರ ತುಳುವ ಮಹಾಸಭೆ ಸಂಸ್ಥೆಯನ್ನು ಪೊಳಲಿಗೆ ಸ್ಥಳಾಂತರಿಸಿ ಶೀನಪ್ಪ ಹೆಗ್ಗಡೆಯವರು 1948 ರ ತನಕ ಅದರ ಕಾರ್ಯಾಧ್ಯಕ್ಷರಾಗಿ ಮುನ್ನಡೆಸಿದರು.
ಎಸ್ ಯು ಪಣಿಯಾಡಿ
ಪಣಿಯಾಡಿಯವರಿಗೆ ತುಳುವಿನಲ್ಲಿ ಸಾಹಿತ್ಯವಿಲ್ಲ ಎಂಬ ಅಪಪ್ರಚಾರದ ಬಗ್ಗೆ ಅಸಮಧಾನವಿತ್ತು. ತುಳುವಿಗೆ ಸಮೃದ್ಧವಾದ ಸಾಹಿತ್ಯವಿದೆ ಎನ್ನುತ್ತಾ ಬೆಳೆಯುತ್ತಿರುವ ತುಳುವಿಗೆ ಪ್ರತಿರೋಧ ಒಡ್ಡುವುದು ಅನ್ಯಾಯ ಎಂದು ಟೀಕಿಸುತ್ತಾರೆ. ಮಲಯಾಳಂನ ಉದಾಹರಣೆ ನೀಡುತ್ತಾ ಆ ಭಾಷೆ ಹೇಗೆ ಕಳೆದ ಒಂದು ಶತಮಾನದಿಂದ ಸಾಹಿತ್ಯಿಕವಾಗಿ ಬೆಳೆಯಿತು ಎಂದು ತುಳುವನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಅವರು ತುಳುವ ಸಾಹಿತ್ಯ ಮಾಲೆ ಪ್ರಕಾಶನವನ್ನು ಆರಂಭಿಸಿದರು. ಇದರ ಅಡಿಯಲ್ಲಿ ತುಳುವಿನ ಸಾಲು ಸಾಲು ಕೃತಿಗಳು ಪ್ರಕಟವಾದವು. ಹೀಗೆ ಆರಂಭವಾದ ತುಳು ಚಳುವಳಿ, ಪ್ರತ್ಯೇಕ ರಾಜ್ಯದ ಬೇಡಿಕೆಗಳು ಕಾಲಾಂತರದಲ್ಲಿ ತಣ್ಣಗಾದರೂ ತುಳುವಿನಲ್ಲಿ ಬರಹಗಳು, ಸಂಶೋಧನೆಗಳು, ಪುಸ್ತಕಗಳು ಬಂದವು. ತುಳು ಭಾಷೆ, ಸಂಸ್ಕೃತಿ ಮತ್ತು ಚರಿತ್ರೆಯ ಬಗ್ಗೆ ವ್ಯಾಪಕ ಚರ್ಚೆಗಳಾದವು.
1936 ರಲ್ಲಿ ಎ ಬಿ ಶೆಟ್ಟಿಯವರು ತಮ್ಮ ನವಯುಗ ಪತ್ರಿಕೆಯಲ್ಲಿ ತಿಂಗಳಿಗೊಂದು ಪುರವಣಿಯನ್ನು ಮೂರು ವರ್ಷಗಳ ಕಾಲ ಪ್ರಕಟಿಸಿದರು. ಬಾಸೆಲ್ ಮಿಷನ್ ವಿದ್ವಾಂಸರು ಮತ್ತು ಬ್ರಿಟೀಷ್ ಸಂಶೋಧಕರು ತುಳುವಿನ ಸಂಸ್ಕೃತಿ ಮತ್ತು ಚರಿತ್ರೆಯ ಅಧ್ಯಯನದಲ್ಲಿ ತಳೆದ ಆಸಕ್ತಿ ಮತ್ತು ಬರಹಗಳಿಂದ ಪ್ರಭಾವಿತರಾಗಿ ತುಳುನಾಡಿನ ಚರಿತ್ರೆಯನ್ನು ಬರೆಯುವ ದೇಸೀ ಚರಿತ್ರೆಕಾರರು ಹುಟ್ಟಿಕೊಂಡರು. ಶೀನಪ್ಪ ಹೆಗ್ಗಡೆ, ಗಣಪತಿ ರಾವ್ ಐಗಳ್, ಗೋವಿಂದ ಪೈ ಮೊದಲಾದವರು ತುಳುನಾಡಿನ ಚರಿತೆಯನ್ನು ಬರೆದರು. ಇವೆಲ್ಲವೂ ಚರಿತ್ರೆಯನ್ನು ಬರೆಯವ ಇಂದಿನ ಶಿಸ್ತಬದ್ದ ಅಕಾಡೆಮಿಕ್ ಮಾನದಂಡಗಳ ಮೂಲಕ ನೋಡುವ ಕ್ರಮದ ಹೊರತಾಗಿ ಒಳ್ಳೆಯ ದಾಖಲೀಕರಣವಾಗಿ ಮತ್ತು ಮುಂದಿನ ಚರಿತ್ರೆಕಾರರಿಗೆ ಅಧ್ಯಯನ ನಡೆಸಲು ಮಾರ್ಗ ಹಾಕಿಕೊಟ್ಟವು. ಈ ಪರಂಪರೆಯನ್ನು ಮುಂದುವರಿಸಿದವರು ಅಕಾಡೆಮಿಕ್ ಹಿನ್ನೆಲೆಯಿಂದ ಬಂದ ಪಾದೂರು ಗುರುರಾಜ ಭಟ್, ಬಿ ಎ ಸಾಲೆತ್ತೂರು ಮೊದಲಾದ ವಿದ್ವಾಂಸರು.
ತುಳು ನಾಟಕಗಳಿಗೆ ಪ್ರೋತ್ಸಾಹ
ತುಳು ಚಳುವಳಿ ತುಳು ನಾಟಕಗಳಿಗೆ ಪ್ರೋತ್ಸಾಹ ನೀಡಿತು. ತುಳುವಿನ ಮೊದಲ ನಾಟಕ ಯಾವುದೆಂಬುದು ನಮಗೆ ತಿಳಿದಿಲ್ಲದೇ ಇದ್ದರೂ ʼಉಪದೇಶದ ದಾಟಿ” ಎಂಬ ಸಾಮಾಜಿಕ ನಾಟಕ ಅವುಗಳಲ್ಲಿ ಒಂದು. ಆದರೆ ಇದರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚರ್ಚೆಯಲ್ಲಿದ್ದ ವರದಕ್ಷಿಣೆ, ಮದ್ಯಪಾನ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡುವ ನಾಯಕ ʼರಮಾನಂದʼ ನಲ್ಲಿ ಗಾಂಧೀ ಪ್ರಭಾವ ಮತ್ತು ರಾಷ್ಟ್ರೀಯತೆಯ ಗ್ರಹಿಕೆಯನ್ನು ಗುರುತಿಸಲಾಗಿದೆ. 1933 ರಲ್ಲಿ ಪಣಿಯಾಡಿಯವರ ಪ್ರಕಾಶನದಲ್ಲಿ ಪ್ರಕಟವಾದ ಮಾಧವ ತಿಂಗಳಾಯರ ʼಜನಮರ್ಲ್ʼ ನಾಟಕ ತುಳುವಿನಲ್ಲಿ ಪುಸ್ತಕವಾಗಿ ಪ್ರಕಟವಾದ ಮೊದಲ ನಾಟಕ. ಇದರ ನಂತರ ಇನ್ನೂರ ಆರಕ್ಕೂ ಅಧಿಕ ನಾಟಕಗಳು ಪುಸ್ತಕಗಳಾಗಿ ಪ್ರಕಟವಾದವು. ಪಣಿಯಾಡಿಯವರು ನೂರಾರು ನಾಟಕಗಳನ್ನು ತಮ್ಮ ಪ್ರಕಾಶನದಿಂದ ಪ್ರಕಟಿಸಿದರು. ಅಸಂಖ್ಯಾತ ನಾಟಕಗಳು ಪ್ರದರ್ಶನಗೊಂಡವು. ʼಬಂಗುಡೆ ಮದಿಮಾಯೆ ಬೂತಾಯಿ ಮದಿಮಾಳ್ ತೋಡುಡೆ ಪೋನಗ….ʼ ಎಂಬ ಹಾಡಿನ ಖ್ಯಾತಿಯ ಕೆಮ್ತೂರು ದೊಡ್ಡಣ್ಣ ಶೆಟ್ಟಿಯವರು ನಾಟಕಗಳನ್ನು ತುಳು ಪ್ರದೇಶದ ವ್ಯಾಪ್ತಿಯನ್ನು ಮೀರಿ ಪ್ರದರ್ಶಿಸಿದರು. ವಿಶುಕುಮಾರ್, ಕೆ ಎನ್ ಟೈಲರ್, ಮಚ್ಚೇಂದ್ರನಾಥ್, ಎಂ ಎಸ್ ಇಬ್ರಾಹಿಂ, ಸೀತಾರಮ್ ಕುಲಾಲ್ ಮೊದಲಾದ ನಾಟಕಕಾರರ ನಾಟಕಗಳು ತುಳುನಾಡಿನಾದ್ಯಂತ ಪ್ರಚಾರದಲ್ಲಿದ್ದವು, ತುಳುವರ ಮನೆಗೆ ಇವುಗಳ ಕ್ಯಾಸೆಟ್ ಗಳು, ನಾಟಕದ ಪುಸ್ತಕಗಳು ಬಂದವು. ಶಾಲಾ ವಾರ್ಷಿಕೋತ್ಸವ, ಜಾತ್ರೆ, ಯುವಕ ಸಂಘಗಳು ಮೊದಲಾದೆಡೆ ತುಳು ನಾಟಕಗಳು ಅಬ್ಬರ ಮಾಡಿದವು.
ತುಳು ಸಿನೇಮಾಗಳ ಹುಟ್ಟು
ತುಳು ನಾಟಕಗಳ ಜನಪ್ರಿಯತೆ ತುಳು ಸಿನೇಮಾಗಳ ಹುಟ್ಟಿಗೆ ಕಾರಣವಾಯಿತು. 1971ರಲ್ಲಿ ಕೊಡಗಿನ ಎಸ್ ಆರ್ ರಾಜನ್ ಅವರು ತುಳುನಾಡಿನ ಸ್ನೇಹಿತರನ್ನು ಸೇರಿಸಿಕೊಂಡು ತುಳು ನಾಟಕ ಕಲಾವಿದರನ್ನು ಬಳಸಿಕೊಂಡು ಆಗಲೇ ಜನಪ್ರಿಯವಾಗಿದ್ದ ʼಎನ್ನ ತಂಗಡಿʼ ನಾಟಕವನ್ನು ಸಿನೇಮಾ ಮಾಡಿದರು. ಈ ಚಿತ್ರ ಜ್ಯೋತಿ ಥಿಯೇಟರ್ ನಲ್ಲಿ ಎರಡು ವಾರಗಳ ಕಾಲ ಓಡಿತು. ಮುಂದೆ ಕೆ ಎನ್ ಟೇಲರ್ ಅವರ ʼದಾರೆದ ಬುಡೆದಿʼ 1971 ಶರವು ಪಿಕ್ಚರ್ಸ್ ಬ್ಯಾನರ್ ನ ಅಡಿ ನಿರ್ಮಿಸಲಾಯಿತು. ಲೀಲಾವತಿ ಅಭಿನಯದ ಈ ಚಿತ್ರ ರೂಪವಾಣಿ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಒಂದೇ ದಿನದಲ್ಲಿ ಐದು ಶೋ ನೀಡಿ ದಾಖಲೆ ನಿರ್ಮಿಸಿತು. ಮುಂದೆ ಆರೂರು ಪಟ್ಟಾಭಿ, ಶಮೀನ್ ಮತ್ತು ಅನ್ಸರ್ ಬೇಗಂ, ವಿಶುಕುಮಾರ್ ಮೊದಲಾದ ನಿರ್ದೇಶಕರು ಚಲನಚಿತ್ರಗಳನ್ನು ನಿರ್ಮಿಸಿದರು. 1973 ರ ಜೂನ್ 15 ರಂದು ಜ್ಯೋತಿ ಥಿಯೇಟರ್ ನಲ್ಲಿ ಬಿಡುಗಡೆಯಾದ ʼಕೋಟಿ ಚೆನ್ನಯʼ ಸಿನೇಮಾ 124 ದಿನಗಳ ಕಾಲ ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿತು. ಮಿನುಗು ತಾರೆ ಕಲ್ಪನಾ ಅಭಿನಯದ ಈ ಚಿತ್ರದ ಕೋಟಿ ಮತ್ತು ಚೆನ್ನಯ ಪಾತ್ರದ ಸುಭಾಷ್ ಪಡಿವಾಳ ಮತ್ತು ವಾಮನ್ ರಾಜ್ ಜೋಡಿಯನ್ನು ತುಳುನಾಡು ಇನ್ನೂ ಮರೆತಿಲ್ಲ! ಈ ಚಿತ್ರವನ್ನು ಸರಿ ಸುಮಾರು ಹದಿನೈದು ವರ್ಷಗಳ ತನಕ ಶಾಲೆಗಳಲ್ಲಿ ಸೆಲ್ಯಲಾಯಿಡ್ ರೀಲ್ ಬಳಸಿ ಮಕ್ಕಳಿಗೆ ತೋರಿಸಲಾಗುತ್ತಿತ್ತು. ಮುಂದೆ ಸಾಲು ಸಾಲು ಸಿನೇಮಾಗಳು ಬಂದರೂ, ಮಧ್ಯೆ ಕೊಂಚ ವಿರಾಮ ಸ್ಥಗಿತವಾದರೂ ಇಂದು ತುಳು ಚಲನಚಿತ್ರ ರಂಗ ಬೆಳೆಯುತ್ತಿದೆ.
(ಮುಂದುವರಿಯುವುದು…)
ಚರಣ್ ಐವರ್ನಾಡು