Home ಜನ-ಗಣ-ಮನ ನಾಡು-ನುಡಿ ತುಳು ಭಾಷಾ ಚಳುವಳಿಯ ಹಾದಿ | ಭಾಗ ೨

ತುಳು ಭಾಷಾ ಚಳುವಳಿಯ ಹಾದಿ | ಭಾಗ ೨

0

ತುಳುವಿಗೆ ಸಮರ್ಥ ರಾಜಕೀಯ ಪ್ರಾತಿನಿಧ್ಯದ ಕೊರತೆಯಿದೆ. ತುಳುವನ್ನು ಪ್ರತಿನಿಧಿಸುವ ಸಂಸದ ಮೊದಲಾದ ನಾಯಕರ ಮಾತುಗಳಲ್ಲಿ ತುಳುವಿನ ವೈಶಿಷ್ಟ್ಯವನ್ನು ಪ್ರಭಾವ ಪೂರ್ಣವಾಗಿ ಹೇಳಬಲ್ಲ ಸಾಮರ್ಥ್ಯ ಇಲ್ಲ. ತುಳು ಭಾಷೆಯ ಬಗೆಗಿನ ಚರ್ಚೆ ಹಿಂದೆ ಸರಿಯಲು ಇಲ್ಲಿ ಆಳವಾಗಿ ಬೇರೂರಿದ ಕೋಮುವಾದವೇ ಕಾರಣ. ಇದು ಚರಣ್‌ ಐವರ್ನಾಡು ಬರೆಯುತ್ತಿರುವ ಸರಣಿ ಲೇಖನಗಳ ಎರಡನೇ ಭಾಗ

ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ದೇಶ ಹೊರಳಿದ ಮೇಲೆ ತುಳು  ಹೋರಾಟಗಳು ಇನ್ನಷ್ಟೂ ಹೆಚ್ಚಾಗಿವೆ. ತುಳುನಾಡಿನ ಸಂದರ್ಭದಲ್ಲೂ ರಾಜಪ್ರಭುತ್ವ ಇದ್ದಾಗ ತುಳುವ ರಾಜವಂಶಗಳು ತಮ್ಮ ಪ್ರತ್ಯೇಕತೆಗಾಗಿ ಹೋರಾಡಿವೆ. ಪ್ರತ್ಯೇಕವಾಗಿ ಸ್ವತಂತ್ರವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸಿವೆ. ಇದನ್ನು ಹತ್ತಿಕ್ಕುವ ಯತ್ನವನ್ನು ಇವರನ್ನು ಸಾಮಂತ ರಾಜರನ್ನಾಗಿ ಇಟ್ಟುಕೊಂಡು ಆಳಿದ ಮೇಲಿನ ದೊರೆಗಳು ಮಾಡಿದ್ದಾರೆ. ತುಳು ಭಾಷೆಗೆ ಪ್ರತ್ಯೇಕ ರಾಜ್ಯವನ್ನು ನೀಡಬೇಕು ಎಂಬ ಪಣಿಯಾಡಿಯವರ ಹೋರಾಟ ಪ್ರತ್ಯೇಕ ರಾಜ್ಯವನ್ನು ಕಟ್ಟುವ ಮಟ್ಟಿಗೆ ಬೆಳೆಯದೇ ಇದ್ದರೂ ತುಳುವಿನಲ್ಲಿ ಸೃಜನಶೀಲ ಮತ್ತು ಬೌದ್ಧಿಕ ಚಟುವಟಿಕೆಗೆ ನಾಂದಿಯಾಯಿತು. ಇಂದು ತುಳುವರು ಮತ್ತು ಕನ್ನಡಿಗರ ನಡುವೆ ಹುಟ್ಟುತ್ತಿರುವ ಘರ್ಷಣೆಯ ಸ್ವರೂಪ ಸಣ್ಣದೇ ಆಗಿದ್ದರೂ ಇದು ಮುಂದೆ ಬೆಳೆಯುವ ಲಕ್ಷಣಗಳನ್ನು ಹೊಂದಿದೆ. ಸದ್ಯದ ಹೋರಾಟಗಳು ತುಳುವಿನಲ್ಲಿ ವೈಚಾರಿಕವಾಗಿ ಮತ್ತು ಸಾಹಿತ್ಯಿಕವಾಗಿ ಪ್ರಕಟವಾಗುವ ಲಕ್ಷಣಗಳನ್ನು ಹೊಂದಿಲ್ಲ. ಇವು ವ್ಯಕ್ತವಾಗುವ ಸ್ವರೂಪಗಳು ಸಾಮಾಜಿಕ ಜಾಲತಾಣಗಳ ಮೂಲಕ ಆರಂಭವಾಗುವಾಗ ಅದಕ್ಕೆ ಪೂರಕವಾಗಿ ಹೋರಾಟಕ್ಕೆ ಸಾಹಿತ್ಯಗಳು ರಚನೆಗೊಳ್ಳುತ್ತಿವೆ. ಹೀಗೆ ಹುಟ್ಟಿಕೊಳ್ಳುವ ಹೋರಾಟಗಳು ಎಷ್ಟು ದಿನಗಳ ತನಕ ಬಾಳಿಕೆ ಬರಲಿವೆ ಎಂಬುದು ಪ್ರಶ್ನಾರ್ಹ!

ಪೊಳಲಿ ಶೀನಪ್ಪ ಹೆಗ್ಗಡೆ

ಕಳೆದ ಒಂದು ದಶಕಗಳಿಂದ ಈಚೆಗೆ ತುಳುವಿನಲ್ಲಿ ನಡೆಯುತ್ತಿದ್ದ ಸಂಶೋಧನಾ ಚಟುವಟಿಕೆಗಳು, ಅಕಾಡೆಮಿಕ್‌ ಚರ್ಚೆಗಳು ಸ್ಥಗಿತವಾದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಕರಾವಳಿಯಲ್ಲಿ ಬೆಳೆಯುತ್ತಿರುವ ವಿಷಕಾರಿ ರಾಜಕೀಯ ವಾತಾವರಣ. ಕಳೆದ ಐದು ದಶಕಗಳನ್ನೇ ತೆಗೆದುಕೊಂಡರೂ ತುಳುವಿನಲ್ಲಿ ಅಪೂರ್ವ ವಿದ್ವಾಂಸರು ಬಂದಿದ್ದಾರೆ. ತುಳುವಿನ ಜಾನಪದ, ಚರಿತ್ರೆ, ಯಕ್ಷಗಾನ ಮೊದಲಾದ ವಿಚಾರಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಮಹಾನ್‌ ವಿದ್ವಾನ್‌ ಪರಂಪರೆ ತುಳುವಿನಲ್ಲಿದೆ. ಈ ಎಲ್ಲಾ ಚರ್ಚೆಗಳು ಮೂಲೆಗೆ ಸರಿದು ಹುಟ್ಟಿಕೊಳ್ಳುತಿರುವ ತುಳುವಿನ ಚಳುವಳಿಗಳ ಬಗ್ಗೆ ವೈಯಕ್ತಿಕವಾಗಿ ನನಗೆ ಅನುಮಾನವಿದೆ. ಇಂದಿನ ʼಒಡೆದು ಆಳುವʼ ಮತ್ತು ಕೋಮು ರಾಜಕಾರಣದ ಪ್ರಭಾವ ಇಂದಿನ ತಲೆಮಾರನ್ನು ಆಳವಾಗಿ ಪ್ರಭಾವಿಸಿದ ಫಲವಾಗಿ ತುಳುವಿನ ಹೋರಾಟವೂ ಅದೇ ಹಾದಿಯನ್ನು ಅನುಸರಿಸುವ ಭಯವನ್ನು ಹುಟ್ಟುಹಾಕಿದೆ. ತುಳು ಭಾಷೆಯ ಬಗೆಗಿನ ಚರ್ಚೆ ಹಿಂದೆ ಸರಿಯಲು, ಸೃಜನಶೀಲ ಚಟುವಟಿಕೆಗಳು ಕುಂಠಿತವಾಗಲು ಇಲ್ಲಿ ಆಳವಾಗಿ ಬೇರೂರಿದ ಕೋಮುವಾದವೇ ಕಾರಣ.

ಪಣಿಯಾಡಿಯವರಿಗೆ ಇದರ ಅರಿವು ಇದ್ದಂತಿತ್ತು. “ತುಳು ಚಳುವಳಿಗೆ ಮತೀಯ ಬಣ್ಣ ಹಚ್ಚಲಾಗುತ್ತಿದೆ. ತುಳು ಭಾಷೆ ಯಾವುದೇ ಮತದಾರರ ಗುತ್ತಿಗೆ ಅಲ್ಲ. ಬ್ರಾಹ್ಮಣರು, ಹಿಂದುಗಳು, ಹಿಂದುವೇತರರು ತಮ್ಮ ದಿನನಿತ್ಯದ ವ್ಯವಹಾರವನ್ನು ಈ ಭಾಷೆಯಲ್ಲಿ ನಡೆಸುತ್ತಾರೆ. ಇದು ಮತೀಯ ಚಳುವಳಿ ಅಲ್ಲ; ಭಾಷಾ ಚಳುವಳಿ ಎಂಬುದನ್ನು ಎಲ್ಲರ ಗಮನಕ್ಕೆ ತರುತ್ತಿದ್ದೇನೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಕೋಮುವಾದದ ಪ್ರಭಾವ ದಟ್ಟವಾಗಿ ಹರಡಿರುವ ಕರಾವಳಿಯಲ್ಲಿ ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ರಾಜಕೀಯ ನಾಯಕರಿಗೆ ತುಳುವನ್ನು ಪ್ರತಿನಿಧಿಸುವ ಸಾಮರ್ಥ್ಯ ಇಲ್ಲ!

ತುಳುವಿಗೆ ಸಮರ್ಥ ರಾಜಕೀಯ ಪ್ರಾತಿನಿಧ್ಯದ ಕೊರತೆಯಿದೆ. ತುಳುವನ್ನು ಪ್ರತಿನಿಧಿಸುವ ಸಂಸದ ಮೊದಲಾದ ನಾಯಕರ ಮಾತುಗಳಲ್ಲಿ ತುಳುವಿನ ವೈಶಿಷ್ಟ್ಯವನ್ನು ಪ್ರಭಾವ ಪೂರ್ಣವಾಗಿ ಹೇಳಬಲ್ಲ ಸಾಮರ್ಥ್ಯ ಇಲ್ಲ. ತುಳುವನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸಲು ಬೇಕಾಗಿರುವುದು, ಕರ್ನಾಟಕದಲ್ಲಿ ಕನ್ನಡದಂತೆ ತುಳುವಿಗೆ ಸ್ಥಾನಮಾನವನ್ನು ಕಲ್ಪಸಲು ಇರಬೇಕಾದ್ದು ʼದಕ್ಷಿಣ ಕನ್ನಡಕ್ಕೆ ಬೆಂಕಿ ಹಾಕಲುʼ ಬೇಕಿರುವ ಸಾಮರ್ಥ್ಯ ಅಲ್ಲ! ತುಳುವಿನ ಬಗ್ಗೆ ಅರಿವು.

ಕರಾವಳಿಯು ಭಾರತೀಯ ರಾಜಕಾರಣದ ಅನೇಕ ಸ್ಥಿತ್ಯಂತರಗಳಿಗೆ ತನ್ನನ್ನು ಸ್ವಾತಂತ್ರ್ಯ ಪೂರ್ವದಿಂದಲೇ ತೆರೆದುಕೊಂಡಿದೆ. ಕೋಮು ರಾಜಕಾರಣ ಅವಿಭಜಿತ ದಕ್ಷಿಣ ಕನ್ನಡವನ್ನು ತನ್ನ ಪ್ರಯೋಗಶಾಲೆಯಾಗಿ ಮಾಡಿಕೊಂಡಿದೆ. ಎರಡು ಸಾವಿರ ವರ್ಷಗಳಿಗಿಂತಲೂ ಹಿಂದೆಯಿಂದ ಪ್ರಪಂಚದ ಅನೇಕ ದೇಶಗಳ ಜೊತೆಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದ ತುಳುನಾಡು ಆಧುನಿಕತೆಗೆ ಬೇಗ ತೆರೆದುಕೊಂಡಿತು. ಭಿನ್ನ ಭಾಷಿಕ ಸಮುದಾಯಗಳ ನಿರಂತರ ವಲಸೆಗಳಿಂದ ಇಲ್ಲಿಯ ಸಂಸ್ಕೃತಿ ರಚನೆಯಾಗಿರುವುದರಿಂದ ತುಳುನಾಡು ಎಂದು ಕರೆಯಲ್ಪಡುವ ಈ ಭೂಭಾಗ ಕೇವಲ ತುಳು ಭಾಷಿಕರನ್ನು ಮಾತ್ರ ಹೊಂದಿಲ್ಲ. ಕನ್ನಡದ ಅನೇಕ ಪ್ರಭೇದಗಳನ್ನು ಮಾತನಾಡುವ ಜನರಿದ್ದಾರೆ, ದೇಶದ ಇತರ ಭಾಗಗಳಲ್ಲಿ ಮಾತನಾಡುವ ಕೊಂಕಣಿ, ಬ್ಯಾರಿ, ಉರ್ದು ಮೊದಲಾದ ಭಾಷೆಗಳು ಮಾತ್ರವಲ್ಲ ತುಳುನಾಡಿನಲ್ಲಿಯೇ ಹುಟ್ಟಿ ಅಪರಿಚಿತವಾಗಿಯೇ ಉಳಿದಿರುವ ಕೊರಗ ಭಾಷೆಯೂ ತುಳುನಾಡಿನದ್ದೇ! ಒಬ್ಬ ತುಳುವ ತನ್ನ ತಾಯಿನುಡಿಯಾದ ತುಳು ಮಾತ್ರವಲ್ಲದೆ ಬ್ಯಾರಿ, ಕೊಂಕಣಿ, ಮಲಯಾಳಂ ಮತ್ತಿತರ ಭಾಷೆಗಳನ್ನೂ ಮಾತನಾಡಬಲ್ಲ. ಇದಕ್ಕೆ ಕಾರಣ ದೇಶದ ಕಡಲು ವ್ಯಾಪಾರಿ ಕೇಂದ್ರಗಳಲ್ಲಿ ಮುಖ್ಯವಾಗಿರುವ ತುಳುನಾಡಿಗೆ   ಕಾರಣಗಳನ್ನಿಟ್ಟುಕೊಂಡು ಬಂದು ನೆಲೆಸಿದ ಸಮುದಾಯಗಳು.

ಕಳೆದ  ಕೆಲವು ದಿನಗಳ ಹಿಂದೆ ತುಳುವಿಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ ೮ನೇ ಪರಿಚ್ಚೇದಕ್ಕೆ ಸೇರಿಸಬೇಕು ಎಂಬ ಟ್ವಿಟ್ಟರ್‌ ಅಭಿಯಾನ ನಡೆಯಿತು. ಫೇಸ್ಬುಕ್‌ ತುಂಬಾ ಇದರ ಬರಹಗಳು ಹರಿದಾಡಿದವು.  ಇಂತಹ ಅಭಿಯಾನಗಳು ಆಗಾಗ ಹುಟ್ಟಿ ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತಿವೆ. ಈ ಅಭಿಯಾನದ ಹಿಂದೆ ಇದ್ದ ಒಂದು ತಕ್ಷಣದ ಕಾರಣವೆಂದರೆ ತುಳು ಧ್ವಜಕ್ಕೆ ಕನ್ನಡಿಗನೊಬ್ಬ ಅವಮಾನ ಮಾಡಿದ ಎಂಬ ಸಂಗತಿ. ಕಾರಣ ಏನೇ ಇದ್ದರೂ ಈ ವಿಚಾರ ಭಾಷೆಯೊಂದು ರಾಜಕೀಯವಾಗಿ ಬಲಗೊಳ್ಳಲು ಸಾಂವಿಧಾನಿಕ ಮಾನ್ಯತೆ ಕೇಳುತ್ತಾ ತನ್ನ ಉಳಿವಿಗಾಗಿ ದನಿ ಎತ್ತುತ್ತಿರುವ ಕಾರಣಕ್ಕೆ ಚರ್ಚೆ ಅಗತ್ಯ.

ಪ್ರಭುತ್ವ ಕೇಂದ್ರಿತ ಬರಹಗಳು ಸಮಾಜದ ಮುಖ್ಯವಾಹಿನಿಯ ವಿಚಾರಗಳಿಗಷ್ಟೇ ಸೀಮಿತಗೊಳ್ಳುತ್ತವೆ.  ಕೆಳಸ್ತರದ ಜನವರ್ಗ ಮತ್ತು ಸ್ಥಳೀಯ ವಿಚಾರಗಳು ನಗಣ್ಯವಾಗುತ್ತವೆ. ಹೀಗಾಗಿ ದೇಶದ ಚರಿತ್ರೆಯ ಮತ್ತು ಸಂಸ್ಕೃತಿಯ ಚರ್ಚೆಗಳಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮುಂದುವರಿದ ಸಮುದಾಯಗಳ ಸಂಸ್ಕೃತಿಗಳ ಮೂಲಕ ದೇಶದ ಸಂಸ್ಕೃತಿಯನ್ನು ನಿರ್ವಚಿಸಲಾಗುತ್ತದೆ. ಭಾರತೀಯ ಸಂಸ್ಕೃತಿ ಎಂಬ ಚರ್ಚೆಯನ್ನು  ವೈದಿಕ ಸಂಸ್ಕೃತಿಯ ಮೂಲಕ ಆರಂಭಿಸುವುದು ಇದೇ ಕಾರಣದಿಂದ. ಇದು ಸಹಜವಾಗಿಯೇ  ವಸಾಹತುಶಾಹಿ ಮತ್ತು ರಾಷ್ಟ್ರೀಯತೆ ಎಂಬೆರಡು ಪರಿಕಲ್ಪನೆಗಳು ಇದಕ್ಕೆ ಪೂರಕವಾಗಿದ್ದ ಕಾರಣದಿಂದ, ಭಾರತದಂತಹ ಬಹುಸಾಂಸ್ಕೃತಿಕ ರಾಷ್ಟ್ರದಲ್ಲೂ ಸ್ಥಳೀಯ ಸಮುದಾಯಗಳು,   ಭಾಷೆಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾಗುತ್ತದೆ.

ಅಸ್ಮಿತೆಯ ಪ್ರಶ್ನೆ ಇಂದು ಕೇವಲ ಶೈಕ್ಷಣಿಕ ವಲಯದಲ್ಲಿ ಮಾತ್ರವಲ್ಲ ಜನಸಮುದಾಯಗಳಲ್ಲಿ ಕೂಡ ಈ ಕುರಿತು ಚಿಂತನೆ ಹುಟ್ಟಿದೆ. ಈ ಕಾರಣಕ್ಕೆ ಅನೇಕ ಸಮುದಾಯಗಳು ತಮ್ಮ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿವೆ. ತಮ್ಮ ಚರಿತ್ರೆಯನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸುತ್ತಿವೆ. ಈ ಮೂಲಕ ತಮ್ಮ ಅಸ್ಮಿತೆಯನ್ನು ಗಟ್ಟಿಗೊಳಿಸುವ ಯತ್ನ ನಡೆಸುತ್ತಿವೆ. ತಮ್ಮ ಹಿರಿಯರ ಬದುಕಿನ ಬೇರುಗಳನ್ನು ಹುಡುಕುತ್ತಲೇ ವರ್ತಮಾನದಲ್ಲಿ ತಮ್ಮ ಅಸ್ತಿತ್ವವನ್ನು ಬಹುಸಮುದಾಯಗಳ ಮಧ್ಯೆ ಸ್ಥಾಪಿಸಲು ಹೊರಟಿವೆ. ಆದರೆ ಈ ಐಡೆಂಟಿಟಿಯ ಸಮಸ್ಯೆ ಕೇವಲ ಸಮುದಾಯಗಳಿಗೆ ಮಾತ್ರ ನಿಲ್ಲದೆ ಭಾಷೆ ಮತ್ತು ಪ್ರದೇಶಗಳ ಅಸ್ಮಿತೆಗೂ ವ್ಯಾಪಿಸಿದೆ. ಭಾಷೆ, ಪ್ರದೇಶ, ಮತ, ಲಿಂಗ, ಜಾತಿ – ಇವೆಲ್ಲವೂ ತಮ್ಮ ಇರುವಿಕೆಯನ್ನು ಗಟ್ಟಿಗೊಳಿಸುತ್ತವೆ. ಇದರ ಮುಂದುವರಿದ ಭಾಗವಾಗಿ ಪ್ರತ್ಯೇಕ ರಾಜ್ಯ, ಭಾಷೆಗೆ ಸಾಂವಿಧಾನಿಕ ಮಾನ್ಯತೆ ಮೊದಲಾದ ಹೋರಾಟಗಳು ಹುಟ್ಟಿಕೊಂಡಿರುವುದು.

ವಸಾಹತು ಆಡಳಿತ ಭಾರತದಿಂದ ಹೋಗುತ್ತಲೇ ಇದು ಹೆಚ್ಚಾಗಿದೆ. ಇದಕ್ಕೆ ಕಾರಣ ವಸಾಹತು ಆಡಳಿತ ತಂದಿರುವ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ತಮ್ಮ ಪಾಲು ಏನು ಎಂಬ ಪ್ರಶ್ನೆ. ಹಿಂದಿಯ ಎದುರು ಕನ್ನಡ ಹೋರಾಡುವ ಹಾಗೆ ಈಗ ಕನ್ನಡ ಪ್ರಧಾನ ಭಾಷೆಯಾಗಿರುವ ಕರ್ನಾಟಕದ ಸ್ವತಂತ್ರ ಭಾಷೆ ತುಳು ತನ್ನ ಸ್ಥಾನ ಏನು ಎಂದು ಕೇಳುತ್ತದೆ. ಒಂದು ವೇಳೆ ತುಳುವಿಗೆ ದಕ್ಕಬೇಕಾದ ಸ್ಥಾನಮಾನ ಸಿಕ್ಕಿದ ಮೇಲೆ ತುಳುವಿನ ಮಧ್ಯೆಯೇ ಹುಟ್ಟಿ ಬೆಳೆದ ಬ್ಯಾರಿ, ಕೊರಗ ಭಾಷೆಗಳ ಸ್ಥಾನಮಾನ ಏನು ಎಂಬ ಚರ್ಚೆ ಆರಂಭವಾಗುತ್ತದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು ಭಾಷಾವಾರು ರಾಜ್ಯಗಳ ರಚನೆ ಆದ ಮೇಲೂ ಈ ಹೋರಾಟ ನಿಂತಿಲ್ಲ. ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತುಳು, ಕೊಡವ ಸೇರಿದಂತೆ ಇನ್ನೂ ಅನೇಕ ಭಾಷೆಗಳು ಹೋರಾಟ ನಡೆಸುತ್ತಿವೆ. ಈ ಹೋರಾಟದಲ್ಲಿ ರಾಷ್ಟ್ರೀಯತೆಯ ಮೂಲ ಲಕ್ಷಣವಾದ ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎಂಬ ಏಕರೂಪಿ ಸಂಸ್ಕೃತಿಯ ಹೇರಿಕೆಗೆ ಸವಾಲಾಗಿ ಪರಿಣಮಿಸುವುದು ಮಾತ್ರವಲ್ಲ ಬಹು ಸಾಂಸ್ಕೃತಿಕ ನೆಲೆಗಳನ್ನು ಜೀವಂತವಾಗಿಡುತ್ತವೆ.

ಸ್ವಾತಂತ್ರ್ಯ ಬಂದ ನಂತರ ಭಾಷಾವಾರು ರಾಜ್ಯಗಳು ರಚನೆಯಾದ ಮೇಲೂ ಯಾವ ಭಾಷೆಗಳನ್ನು ಪ್ರಧಾನ ಭಾಷೆಗಳನ್ನಾಗಿ ಇಟ್ಟುಕೊಳ್ಳಲಾಗಿತ್ತೋ ಅವು ಮತ್ತೆ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿವೆ. ಭಾಷೆಯ ಆಧಾರದ ಮೇಲೆ ಒಮ್ಮೆ ಪ್ರತ್ಯೇಕಗೊಂಡು ಗಣತಂತ್ರದಲ್ಲಿ ಏಕೀಕರಣಗೊಳ್ಳುವ ಒಂದು ಪ್ರಕ್ರಿಯೆ ಮುಗಿದ ಮೇಲೆ ಮತ್ತೆ ಪ್ರತ್ಯೇಕಗೊಳ್ಳಲು ಯತ್ನಿಸುವುದು ಇನ್ನೊಂದು ಪ್ರಕ್ರಿಯೆ. ಇದಕ್ಕೆ ಕಾರಣ ಭಾಷೆಗಳು ಮತ್ತು ಸ್ಥಳೀಯತೆಗೆ ಕಾಲಕಾಲಕ್ಕೆ ಉಂಟಾಗುವ ಅಸ್ತಿತ್ವದ ಭಯ! ತೆಲಂಗಾಣ, ತುಳುನಾಡು, ಕೊಡಗು, ವಿದರ್ಭ, ಸೌರಾಷ್ಟ್ರ, ಬುಂದೆಲ್ ಖಂಡ್, ಉತ್ತರ ಕರ್ನಾಟಕ, ಬೋಡೋ ಲ್ಯಾಂಡ್, ಡಾರ್ಜಿಲಿಂಗ್, ಪೂರ್ವಾಂಚಲ, ಪಶ್ಚಿಮಾಂಚಲ, ಗೂರ್ಖಾಲ್ಯಾಂಡ್ ಮುಂತಾದ ಪ್ರದೇಶಗಳು ಪ್ರತ್ಯೇಕತೆಗಾಗಿ ಹೋರಾಡಿವೆ. ಉತ್ತರಾಂಚಲ, ತೆಲಂಗಾಣ, ಛತ್ತೀಸ್ಗಡ ಮೊದಲಾದವು ಇದರಲ್ಲಿ ಯಶಸ್ಸಾಗಿವೆ.

ಚರಣ್‌ ಐವರ್ನಾಡು

You cannot copy content of this page

Exit mobile version