ಕನ್ನಡ ಸಾರಸ್ವತ ಲೋಕದ ದೊಡ್ಡ ಕೊಂಡಿ, ಕವಿ, ಸಾಹಿತಿ ಹೆಚ್.ಎಸ್.ವೆಂಕಟೇಶಮೂರ್ತಿ ನಿಧನರಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ವಯೋ ಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.
ಮೂಲತಃ ಅಂದಿನ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ಜನಿಸಿದ ಹೆಚ್ ಸ್ ವೆಂಕಟೇಶಮೂರ್ತಿಯವರು ತಮ್ಮ ಆಪ್ತ ವಲಯದಲ್ಲಿ ಹೆಚ್ಎಸ್ವಿ ಎಂದೇ ಹೆಸರುವಾಸಿ. ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಕುಗ್ರಾಮದಲ್ಲಿ ನಾಗರತ್ನಮ್ಮ ಮತ್ತು ನಾರಾಯಣ ಭಟ್ಟ ದಂಪತಿಗಳಿಗೆ ಜನಿಸಿದರು.
ತಮ್ಮ ಸ್ವಂತ ಹಳ್ಳಿಯಲ್ಲಿ ಶಾಲಾ ಶಿಕ್ಷಣ ಪಡೆದ ನಂತರ ಹೊಳಲ್ಕೆರೆಯಲ್ಲಿ ಅಧ್ಯಯನ ಮಾಡಿ ನಂತರ ಚಿತ್ರದುರ್ಗದಲ್ಲಿ ಕಾಲೇಜು ತರಬೇತಿ ಪಡೆದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಉಪನ್ಯಾಸಕರಾಗಿ ಮತ್ತು ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು.
ವೃತ್ತಿ ಜೀವನದ ಜೊತೆ ಜೊತೆಗೇ ಸಾಹಿತ್ಯ ಕೃಷಿಯಲ್ಲಿ ಅಪಾರ ಹೆಸರು ಮಾಡಿ ಪ್ರಸಿದ್ಧಿ ಪಡೆದರು. ತಮ್ಮ ಸಾಹಿತ್ಯ ಕೃಷಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಿನೆಮಾ ಸಾಹಿತ್ಯಕ್ಕೆ ಫಿಲಂ ಫೇರ್ ಪ್ರಶಸ್ತಿಗಳೂ ಸಹ ಸಂದಿವೆ. 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಅವರು ತಮ್ಮ ಸೇವೆ ಸಲ್ಲಿಸಿದ್ದಾರೆ.
ಇವರ ಅನೇಕ ಕವಿತೆಗಳು ಜನಪ್ರಿಯವಾಗಿವೆ. ಸುಗಮ ಸಂಗೀತ ವಲಯದಲ್ಲಿ ಹಾಗೂ ಸಿನೆಮಾಗಳಲ್ಲೂ ಇವರ ಹಾಡುಗಳು ಹೆಚ್ಚು ಜನಪ್ರಿಯತೆ ಪಡೆದು ಜನಮಾನಸದಲ್ಲಿ ಹೆಸರಾಗಿವೆ.