ಲೋಕಸಭಾ ಚುನಾವಣೆಗೂ ಮೂರು ತಿಂಗಳ ಮೊದಲು ದಾಖಲಾಗಿದ್ದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಈಗ ದಿಢೀರ್ ತಿರುವು ಪಡೆದುಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಂಧನದ ಸಾಧ್ಯತೆಯ ಅನುಮಾನ ಹುಟ್ಟು ಹಾಕಿದೆ.
ಫೆ.2 ರಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಮನೆಗೆ ತಮ್ಮ 17 ವರ್ಷದ ಮಗಳ ಜೊತೆಗೆ ಹೋಗಿದ್ದ ತಾಯಿಯೊಬ್ಬರ ಕಡೆಯಿಂದ ದೂರು ದಾಖಲಾಗಿತ್ತು. ದೂರಿನಂತೆ, ಬಾಲಕಿ ಜತೆ ಅನುಚಿತವಾಗಿ ಯಡಿಯೂರಪ್ಪನವರು ವರ್ತಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸದಾಶಿವನಗರ ಠಾಣೆಗೆ ಮಾ.14 ರಂದು ಸಂತ್ರಸ್ತೆ ತಾಯಿ ದೂರು ನೀಡಿದ್ದರು. ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು.
ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಆರಂಭದಲ್ಲಿ ಇದು ಸತ್ಯಕ್ಕೆ ದೂರವಾದ ಆಪಾದನೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಪ್ರಕರಣದಲ್ಲಿ ಹುರುಳಿಲ್ಲ ಎನ್ನುವ ಕಾರಣಕ್ಕೆ ಯಡಿಯೂರಪ್ಪನವರು ಜಾಮೀನಿಗೆ ಅರ್ಜಿ ಹಾಕಿರಲಿಲ್ಲ. ಅಷ್ಟೇ ಅಲ್ಲದೇ ಸಂತ್ರಸ್ತೆಯ ತಾಯಿಯ ಬಗ್ಗೆ ಅನೇಕ ಆಪಾದನೆ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಯಡಿಯೂರಪ್ಪ ಲಘುವಾಗಿ ಪರಿಗಣಿಸಿದ್ದರು. ಈಗ ಅದೇ ಯಡಿಯೂರಪ್ಪನವರಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂತ್ರಸ್ತೆ ತಾಯಿ ಈಗಾಗಲೇ ಸುಮಾರು 53 ಗಣ್ಯ ವ್ಯಕ್ತಿಗಳ ಮೇಲೆ ಇದೇ ರೀತಿ ಪ್ರಕರಣ ದಾಖಲಿಸಿದ್ದು, ಆಕೆಯನ್ನು ಮಾನಸಿಕ ಅಸ್ವಸ್ಥೆ ಎಂದು ಗೃಹ ಸಚಿವ ಪರಮೇಶ್ವರ್ ಕೂಡ ಹೇಳಿದ್ದರು. ಅಲ್ಲದೇ ಪ್ರಕರಣ ಸಂಬಂಧ ಸಿಐಡಿ ನೋಟಿಸ್ ನೀಡಿದಾಗಲೆಲ್ಲ ಯಡಿಯೂರಪ್ಪ ಅವರು ಸಿಐಡಿ ಕಚೇರಿಗೆ ಖುದ್ದು ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದರು. ಆದರೆ ಈಗ ಯಡಿಯೂರಪ್ಪ ಬಂಧನದ ಮಹತ್ವದ ಸುಳಿವು ಸಿಕ್ಕಿದೆ.
ಸಧ್ಯಕ್ಕೆ ಪ್ರಕರಣ ಸಂಬಂಧ ಯಡಿಯೂರಪ್ಪ ಅವರಿಗೆ ಸಿಐಡಿ ಮಂಗಳವಾರ ದಿಢೀರ್ ನೋಟಿಸ್ ನೀಡಿ ಬುಧವಾರವೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಇನ್ನೊಂದೆಡೆ ಇದೇ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಆದೇಶ ಕೋರಿ ಹೈಕೋರ್ಟ್‌ನಲ್ಲಿ ಸಂತ್ರಸ್ತೆ ಕುಟುಂಬ ಮನವಿ ಮಾಡಿದೆ.
ಈಗ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಯಡಿಯೂರಪ್ಪನವರು ಅನಿವಾರ್ಯವಾಗಿ ಜಾಮೀನು ಪಡೆಯಲು ಮುಂದಾಗಬೇಕಾಗಿದೆ ಎಂಬುದು ಕಾನೂನು ಪಂಡಿತರ ಲೆಕ್ಕಾಚಾರ.