‘ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗಲಿ, ಬಿಡಲಿ.. ನನ್ನ ಸ್ಪರ್ಧೆ ಖಚಿತ’ ಎಂಬ ನಿರ್ಧಾರದ ಮೇಲೆ ಇಂದು (ಬುಧವಾರ) ಬೆಳಿಗ್ಗೆ 12 ಗಂಟೆಗೆ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಕೆ ಮಾಡುವ ಘೋಷಣೆ ಮಾಡಿದ್ದಾರೆ. ಮಂಗಳವಾರ ಸಂಜೆಯ ವೇಳೆಗೆ ಕಾರ್ಯಕರ್ತರ ಮತ್ತು ಬೆಂಬಲಿಗರ ಸಭೆ ಕರೆದಿದ್ದ ಯೋಗೇಶ್ವರ್, ಕಾರ್ಯಕರ್ತರ ನಿರ್ಧಾರವೇ ಅಂತಿಮ ಎಂಬಲ್ಲಿಗೆ ಸಭೆ ಮುಕ್ತಾಯವಾಗಿದೆ. ಆ ಮೂಲಕ ಸ್ವತಂತ್ರ ಸ್ಪರ್ಧೆಯಾದರೂ ಸರಿಯೇ.. ನಾಮಪತ್ರ ಸಲ್ಲಿಸಿಯೇ ಬಿಡುವ ನಿರ್ಧಾರ ಕೈಗೊಂಡಿದ್ದಾರೆ.
ಈ ನಡುವೆ ಕೊನೆಯ ಕ್ಷಣದ ವರೆಗೂ ಪಕ್ಷದ ಆಯ್ಕೆಯನ್ನು ಯೋಗೇಶ್ವರ್ ನಿಗೂಢವಾಗಿ ಇಟ್ಟಿದ್ದಾರೆ. ಈವರೆಗೂ ಯಾವ ಪಕ್ಷದಿಂದ ತಮ್ಮ ಸ್ಪರ್ಧೆ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಬಿಜೆಪಿಯಿಂದಲೇ ಸ್ಪರ್ಧಿಸಲು ಜೆಡಿಎಸ್ ಅವಕಾಶ ಕಲ್ಪಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿ ಕಾದು ನೋಡುತ್ತಿದ್ದಾರೆ.
ಜೆಡಿಎಸ್ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಲು ಪ್ರಸ್ತಾಪ ಮುಂದಿಟ್ಟಿದ್ದ ದೇವೇಗೌಡರ ಕುಟುಂಬ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲು ಮೀನಮೇಷ ಎಣಿಸುತ್ತಿದ್ದಾರೆ. ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಯೋಗೇಶ್ವರ್ ಅವರಿಗೆ ಜೆಡಿಎಸ್ ಪಕ್ಷದ ಚಿಹ್ನೆಯಡಿ ಸರ್ಧಿಸಲು ಅವಕಾಶ ಕೊಡಿ ಎಂದು ಹೇಳಿದ್ದಾರೆ. ಆದರೆ, ಜೆಡಿಎಸ್ ಸೇರ್ಪಡೆಗೆ ಯೋಗೇಶ್ವರ್ ಒಪ್ಪಿಲ್ಲ.
ಈ ಬಗ್ಗೆ ಬಿಜೆಪಿ ಪಕ್ಷದ ಮೇಲೆಯೇ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ “ಸಾಕಷ್ಟು ಬಗ್ಗಿದ್ದೇನೆ, ಇನ್ನೆಷ್ಟು ಬಗ್ಗಲಿ? ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ?” ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಕಸ್ಮಾತ್ ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಜೆಡಿಎಸ್ ಕೈತಪ್ಪಿದರೆ ಕುಮಾರಸ್ವಾಮಿ ಬಿಜೆಪಿ ವಿರುದ್ದವೇ ತಿರುಗಿ ಬೀಳುವ ಸಾಧ್ಯತೆ ಕೂಡ ಇದೆ ಎಂಬ ಮಾತುಗಳು ಕೇಳಿ ಬಂದಿವೆ.
ಈ ನಡುವೆ ಸಿಪಿ ಯೋಗೇಶ್ವರ್ ಕೇಳದಿದ್ದರೂ “ಸಮಾಜವಾದಿ ಪಕ್ಷದ ನಿಯೋಗವೊಂದು ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿಯಾಗಿ ‘ಬಿ’ ಫಾರಂ ಹಸ್ತಾಂತರಿಸಿದೆ.
ಕಾಂಗ್ರೆಸ್ ಕೂಡಾ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಬರುವುದಾದರೆ ಯಾರಿಗೆ ಬೇಕಾದರೂ ಸ್ವಾಗತ ಎಂಬ ಓಪನ್ ಇನ್ವಿಟೇಷನ್ ಅನ್ನು ಯೋಗೇಶ್ವರ್ ಮುಂದಿಟ್ಟಿದೆ. ಈಗಾಗಲೇ ಕೆಲವು ಕಾಂಗ್ರೆಸ್ ನಾಯಕರೂ ಸಹ ಯೋಗೇಶ್ವರ್ ಸಂಪರ್ಕ ಮಾಡಿದ್ದು ಕೊನೆಯ ಕ್ಷಣದ ವರೆಗೂ ಕಸರತ್ತು ಮುಂದುವರೆಸುವ ಬಗ್ಗೆಯೂ ಮಾತುಕತೆ ನಡೆದಿದೆ.