ಬಹಳಷ್ಟು ದಿನಗಳಿಂದ ಇದನ್ನ ಬರೀಬೇಕು ಅನ್ಕೊಂಡಿದ್ದೆ.. ಆದರೆ ವೈಯಕ್ತಿಕ ವಿಷಯಗಳನ್ನು ಉದಾಹರಣೆಯಾಗಿ ಇಟ್ಕೊಂಡು ಒಂದು ವಿಷಯವನ್ನು ಗಂಭೀರವಾಗಿ ಬರೆಯುವಷ್ಟು ಸೋಷಿಯಲ್ ಸ್ಪೇಸ್ ನನಗಿಷ್ಟ ಇಲ್ಲ. ಆದರೆ ಈ ಬೌಂಡರಿಗಳನ್ನು ದಾಟಿ ಮನದಾಳದ ಮಾತುಗಳನ್ನು ಬರೆಯುತ್ತಿದ್ದೇನೆ…
ಕೆಲವು ವರ್ಷಗಳ ಹಿಂದೆ ನಾನು ಭಯಂಕರ ಬ್ರೇಕ್ ಅಪ್ ಎದುರಿಸಿದ್ದೆ. ಇನ್ನು 50 ವರ್ಷಗಳಿಗಾಗುವಷ್ಟು ಕಟ್ಟಿದ್ದ ಕನಸಿನ ಆಶಾಗೋಪುರ ದೊಪ್ ಅಂತ ಧರೆಗುರುಳಿತ್ತು.. ಸ್ವಾಭಾವಿಕವಾಗಿ, ಸಹಜವಾಗಿ ನನ್ನ ಕಣ್ಣಿಂದ ಕಣ್ಣೀರು ಧಾರಾಕಾರವಾಗಿ ಹರಿಯಿತು. ಇದರ ತೀವ್ರತೆ ಎಷ್ಟಿತ್ತೆಂದರೆ ನಾನು ಕೂತ್ರೆ, ನಿಂತ್ರೆ ನಂಗೇ ಗೊತ್ತಿಲ್ಲದೆ ಧಾರಾಕಾರವಾಗಿ ಕಣ್ಣೀರು ಬರಲಾರಂಭಿಸಿತು. ಆದರೆ ಈ ಸಮಾಜ ನನಗೆ ಆ ಕಾಲಘಟ್ಟದಲ್ಲಿ ಸಾಂತ್ವನ ಹೇಳುವ ಬದಲು “ನೀನು ಗಂಡಸು ಕಣ್ಣೀರು ಹಾಕಬಾರದು, ಕಣ್ಣೀರು ಹೆಣ್ಣು ಮಕ್ಕಳ ಜಾಗೀರು” ಅಂತೆಲ್ಲಾ ಹೇಳಿತು.ಆಫೀಸು, ಸ್ನೇಹಿತರ ವರ್ಗ ಎಲ್ಲಾ ಕಡೆ ಈ ಡೈಲಾಗು ಪುನರಾವರ್ತಿಸಿತು. ವಿಪರ್ಯಾಸ ಏನೆಂದರೆ ತೀರಾ ಆತ್ಮೀರಾದ ಹೆಣ್ಣು ಮಕ್ಕಳು/ಹೆಂಗಸರ ಬಾಯಿಂದಲೂ “ದರ್ದ್ ಕೊ ಸೆಹೆನೆವಾಲೊಂಕೋ ಮರ್ದ್ ಕೆಹ್ತೆ ಹೇ” ಅನ್ನೋ ಡೈಲಾಗ್ ಬಂದಿತ್ತು..ಗಂಡಾದರೇನು,ಹೆಣ್ಣಾದರೇನು ಭಾವನೆಗಳನ್ನು ವ್ಯಕ್ತಪಡಿಸೋಕೆ ಯಾರಾದರೇನು ಎಂಬ ಅಭಿಪ್ರಾಯಕ್ಕೆ ಯಾರು ಬೆಲೆ ಕೊಡಲಿಲ್ಲ. ಆ ಘಟನೆಗಳು ನನ್ನ ಸುಪ್ತ ಮನಸ್ಸಿನಲ್ಲಿ ಜಾಗೃತಿಯ ಜೊತೆಗೆ ಕೆಲವು ಉತ್ಕೃಷ್ಟ ಸಂದೇಶ ಟ್ರಾನ್ಸ್ ರೂಪದಲ್ಲಿ ದಾಖಲಾಗಿ ಬಿಡ್ತು…
ಕಾಲ ಬದಲಾಗಿದೆ – “ಗಂಡು ಅಳಬಾರದು” ಅನ್ನೋ ಕಾನ್ಸೆಪ್ಟೇ ನನ್ನ ತಲೆಲೀ ಕುಂತಿದೆ. ಇಮೋಷನ್ ಬ್ಯಾಗೇಜ್ ಇಟ್ಕೊಂಡ ಮೊಟ್ಟೆಯೊಂದು ಹೊರಬಂದು ಚಿಟ್ಟೆಯಾಗಿ ಹಾರಿಯಾಗಿದೆ.. ಈ ಕ್ರಿಯೆಗೆ ನಾವು “ಮೆಟಮಾರ್ಫಸಿಸ್” ಅಂತಿವಿ.. ಗಂಡೆಂದರೆ ಹೀಗೆಯೇ ಇರಬೇಕು ಅನ್ನೋದು ಎಲ್ಲಿ ದಾಖಲಾಗಬೇಕೋ ಅಲ್ಲಿ ದಾಖಲಾಗಿದೆ. ಈ ಮೆಟಮಾರ್ಫಸಿಸ್ ಕ್ರಿಯೆ ಚಾಲ್ತಿಯಲ್ಲಿರುವಾಗ ಬಹಳಷ್ಟು ಜನ ನನ್ನ “ಸ್ತ್ರೀ ವಿರೋಧಿ” ಅಂದ್ರು, ಇನ್ನು ಕೆಲವರು “ನಾರ್ಸಿಸ್ಟ್” ಅಂದ್ರು. ಇಂಥಹ ಬಿರುದು ಸಿಗುವಾಗ ನನಗೆ ಒಂದು ದೊಡ್ಡ ಪ್ರಶಸ್ತಿ ಕೊಟ್ಟಷ್ಟೇ ಸಂತೋಷವಾಗುತ್ತೆ. ಈ ಮೆಟಮಾರ್ಫಸಿಸ್ ಕ್ರಿಯೆಯಲ್ಲಿ ನನ್ನಿಂದ ದೂರವಾದವರು ಅನೇಕರು, ಆದರೆ ನನಗೆ ರಿಗ್ರೇಟ್ಸ್ ಇಲ್ಲ..
ಆ ದಿನ ನಾನು ಅಳೋವಾಗ ಒಬ್ಬರು ಹೆಗಲು ಕೊಡದೆ ಇದ್ದರು ಪರವಾಗಿಲ್ಲ, ನನ್ನ ಇಮೋಷನ್ನುಗಳನ್ನು ಆಡಿಕೊಳ್ಳದೆ ಇದ್ದಿದ್ದರೆ ನಿಮ್ಮ ಮಧ್ಯೆ ಇವತ್ತು ರೂಸ್ವೆಲ್ಟ್ ಒಬ್ಬ ಆದರ್ಶ ಪುರುಷ, ಫೆಮಿನಿಸ್ಟ್ ಪುರುಷನಾಗಿರುತ್ತಿದ್ದ. But this universe had different plans you know ! ನಿಮಗೆ ನಾನು ಮೊದಲಿನಂತಾಗಬೇಕು ಅನ್ನೋ ಆಸೆ ಇದ್ದರೆ ನಿಮ್ಮ ಗ್ರಹಿಕೆ ತಪ್ಪು – Im thoroughly enjoying this phase of my life.
ಇಷ್ಟು ಓದಿದ ಮೇಲೂ ನಿಮ್ಮ ಸಹನೆಗೆ ನಾನು ಆಭಾರಿಯಾಗಿದ್ದೇನೆ. ಆದರೆ ಕಣ್ಣೀರು, ಇಮೋಷನ್ ಅನ್ನೋದು ಜೆಂಡರ್ ನ್ಯೂಟ್ರಲ್ ಅನ್ನೋ ಸತ್ಯ ನಿಮಗೆ ಅರ್ಥವಾಗಬೇಕು. ಹೆಣ್ಣೆಂದರೆ ಅಳುಮುಂಜಿ, ಗಂಡೆಂದರೆ ಗಟ್ಟಿಗ ಅನ್ನೋ ನಿಮ್ಮ ಧೋರಣೆಗಳು ಬದಲಾಗಬೇಕು. ಈ ವಿಷಯಗಳಲ್ಲಿ ನಿಮ್ಮಗಳ ಮೆಟಾಮಾರ್ಫಸಿಸ್ ಕ್ರಿಯೆ ಆಗಬೇಕು… ಈ ಸೂಕ್ಷ್ಮತೆ ಅರ್ಥ ಮಾಡಿಕೊಂಡವರಿಗೆ “ಮಹಿಳಾ ದಿನಾಚರಣೆ”ಯ ಶುಭಾಶಯಗಳು. ಆದರೂ ನಿಮ್ಮಗಳ ಬಾಯಿಂದ ನಾನೊಬ್ಬ “ಸ್ತ್ರೀ ವಿರೋಧಿ, ನಾರ್ಸಿಸ್ಟ್” ಅಂತ ಬಾಯಿ ತುಂಬಾ ಕರಿಸಿಕೊಳ್ಳುವುದು ಈ ಹುಡುಗನ… ಐ ಯಾಮ್ ಸಾರಿ .. ಈ ಗಂಡಸಿನ ಆಸೆ…