ಹಾಸನ: ಈ ಕಾಲ ಸರಕಾರಿ ನೌಕರರ ಕಾಲವಲ್ಲ, ಬದಲಾಗಿ ಸ್ವಂತ ಉದ್ಯೋಗ ಮಾಡುತ್ತೇವೆ ಎಂದು ಯಾರು ಹೊರಡುತ್ತಾರೋ ಅವರಿಗಿದು ಸೂಕ್ತ ಕಾಲ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ. ತಿಳಿಸಿದರು.
ಜಿಪಂ ಹೊಯ್ಸಳ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಕೆಪೆಕ್ ಲಿಮಿಟೆಡ್ ಇವರ ಜಂಟಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರಕಾರಿ ನೌಕರರ ಕಾಲ ಇದಲ್ಲ. ಏನಿದ್ದರೂ ಉದ್ಯಮಿದಾರರ ಕಾಲ, ಫಲಾನುಭವಿಗಳು ಇದರ ಸದುಪಯೋಗ ಪಡೆದು ಕೊಳ್ಳುಬೇಕು. ಈ ಸ್ಕಿಂ ನಲ್ಲಿ ಲೋನ್ ಪಡೆಯಬೇಕೆಂದು ಹೇಳಿದಾಗ ಅವರಿಗೆ ಸಹಾಯ ಮಾಡಬೇಕು. ರೈತರಿಗೆ ಶಕ್ತಿ ತುಂಬುವ ಕೆಲಸ ಇಲಾಖೆಯವರು ಮಾಡಬೇಕು ಎಂದು ಸಲಹೆ ನೀಡಿದರು.
ದೊಡ್ಡ ದೊಡ್ಡ ಉದ್ಯಮ ಬೇರೆ, ಲೋಕಲ್ ಉದ್ಯಮಿಗೆ ಹೆಚ್ಚಿನ ಪವರ್ ಇರುತ್ತದೆ. ಸ್ತ್ರೀ ಶಕ್ತಿ ಗುಂಪು ಹಾಗೂ ಅನೇಕ ವೈಯಕ್ತಿಕ ಸಂಸ್ಥೆಗಳು ಚೆನ್ನಾಗಿ ವ್ಯಾಪಾರ, ವ್ಯವಹಾರ ಮಾಡುತ್ತಾರೆ. ವ್ಯವಸ್ಥಿತವಾಗಿ ಸರಕಾರದ ಸಾಲ ತೆಗೆದುಕೊಂಡು ಶಿಸ್ತು ಬದ್ಧವಾಗಿ ಮಾಡಿದರೆ ಅದರಲ್ಲಿ ಯಶಸ್ಸು ಕಾಣಬಹುದು ಎಂದರು.
ಅನೇಕ ಬಾರಿ ಮಾರುಕಟ್ಟೆಯಲ್ಲಿ ಒಳ್ಳೆಯ ದರ ಸಿಗುವುದಿಲ್ಲ. ವಿವಿಧ ಬೆಳೆ ರೋಗಗಳಿಗೆ ತುತ್ತಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದೇ ರೀತಿ ಅನೇಕ ಸಮಸ್ಯೆಗಳನ್ನು ರೈತರು ಎದುರಿಸುತ್ತಿರುತ್ತಾರೆ. ಇಂತಹ ಕಿರು ಉದ್ಯಮ ರೈತರಿಗೆ ತುಂಬ ಸಹಾಯವಾಗಲಿದೆ ಎಂದು ಕಿವಿಮಾತು ಹೇಳಿದರು.
ಬರೀ ಕೃಷಿಯಲ್ಲೇ ತೊಡಗಿದರೆ ತುಂಬ ಕಷ್ಟವಾಗುತ್ತದೆ. ಇದರ ಜೊತೆಯಲ್ಲಿ ಯಾವುದಾದರೂ ಒಂದು ಕಿರು ಉದ್ಯಮ ಸ್ಥಾಪಿಸಲು ಮುಂದಾದರೆ ಸರಕಾರ ಸಂಪೂರ್ಣ ಆರ್ಥಿಕ ಬೆಂಬಲ ಕೊಡುತ್ತೇವೆ ಎಂದು ಸಲಹೆ ನೀಡಿದರು. ಇದರ ಅವಕಾಶವನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.