Home ಅಂಕಣ ಆತ್ಮಹತ್ಯೆ ತಡೆಗಟ್ಟುವುದು ನಾಗರೀಕ ಸಮಾಜದ ಕರ್ತವ್ಯ

ಆತ್ಮಹತ್ಯೆ ತಡೆಗಟ್ಟುವುದು ನಾಗರೀಕ ಸಮಾಜದ ಕರ್ತವ್ಯ

0

ಇಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ.. ಪ್ರಪಂಚದಾದ್ಯಂತ ದೊಡ್ಡ ಪಿಡುಗಾಗಿರುವ ಆತ್ಮಹತ್ಯೆಗೆ ಸಂಬಂಧಿಸಿದ ಅನೇಕ ಕಾರಣಗಳು ಮತ್ತು ಅದರ ಪರಿಹಾರಗಳ ಬಗ್ಗೆ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ಪದ್ಮರೇಖಾ.ಎಸ್ ಬರೆದಿದ್ದಾರೆ.

ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ. ಆತ್ಮಹತ್ಯೆ ಎಂಬುದು ಪ್ರಪಂಚದ ಎಲ್ಲ ದೇಶಗಳನ್ನು ಭಾದಿಸುತಿರುವ ಸಾಮಾಜಿಕ ಸಮಸ್ಯೆಯಾಗಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಹಾಗೆಯೇ ಭಾರತದಲ್ಲಿಯೂ ಸಹ ಸಾಮಾಜಿಕ ಪಿಡುಗಾಗಿದೆ. ಎಲ್ಲಾ ವಯೋಮಾನದವರನ್ನು ಮತ್ತು ಸಮುದಾಯ, ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಭೇದವಿಲ್ಲದೆ ಸಾರ್ವತ್ರಿಕವಾಗಿ ಎಲ್ಲರನ್ನು ಭಾದಿಸುತಿರುವ ಸಾಮಾಜಿಕ ಪಿಡುಗಾಗಿದೆ. ಆತ್ಮಹತ್ಯೆ ವ್ಯಕ್ತಿಯೊಬ್ಬ ತನ್ನ ಜೀವನವನ್ನು ಕೊನೆಗೊಳಿಸಿಕೊಳ್ಳಬೇಕೆಂಬ ಅಸಹಾಯಕತೆ ಮತ್ತು ನಿರಾಶಯ ಮನೋಭಾವದ ಅಂತಿಮ ಹಂತದ ಯೋಚನೆ ಅಥವಾ ಹಟಾತ್ ವರ್ತನೆ ಆಗಿರುತ್ತದೆ.

              ಪ್ರತಿ ವರ್ಷ ನಮ್ಮ ದೇಶದಲ್ಲಿ ಒಂದು ಲಕ್ಷಕ್ಕಿಂತಲೂ ಅಧಿಕವಾದ ಆತ್ಮಹತ್ಯಾ ಸಾವುಗಳು ಸಂಭವಿಸುತ್ತದೆ.
ಕೌಟುಂಬಿಕ ಸಮಸ್ಯೆಗಳು ಆತ್ಮಹತ್ಯೆಗೆ ಮೊದಲ ಪ್ರಮುಖ ಕಾರಣವಾಗಿದೆ. ನಂತರದಲ್ಲಿ ದೀರ್ಘಕಾಲಿಕ ಕಾಯಿಲೆಗಳು, ಮಾದಕ ದ್ರವ್ಯ ಮಾದಕ ವಸ್ತು ವ್ಯಸನ, ವೈವಾಹಿಕ ಸಮಸ್ಯೆಗಳು, ಪ್ರೀತಿ ಪ್ರೇಮ ಪ್ರಕರಣಗಳು, ಆರ್ಥಿಕ ಸಂಕಷ್ಟಗಳು, ನಿರುದ್ಯೋಗ ಪರೀಕ್ಷೆಗಳಲ್ಲಿ ವಿಫಲತೆ, ಪ್ರೀತಿ ಪಾತ್ರರ ಸಾವು, ಔದ್ಯೋಗಿಕ ಸಮಸ್ಯೆಗಳು, ಆಸ್ತಿ ವಿವಾದಗಳು, ಬಡತನ, ಸಮಾಜದಲ್ಲಿ ತನ್ನ ಗೌರವಕ್ಕೆ ಧಕ್ಕೆ ಬರುವುದು, ವಿವಾಹೇತರ ಸಂಬಂಧಗಳು ಮತ್ತು ಇತರೆ ಅಂಶಗಳು ಆತ್ಮಹತ್ಯೆಗೆ ಕಾರಣಗಳೆಂದು ಗುರುತಿಸಲಾಗಿದೆ.

ಸಾಯುವ ಬಗ್ಗೆ ಪದೇ ಪದೇ ಮಾತನಾಡುವುದು ಸಾಯಲು ಕಾರಣಗಳನ್ನು ಹುಡುಕುವುದು ಅತಿಯಾದ ನಿರಾಶಾವಾದ ಅಥವಾ ನಾನು ಬದುಕಲು ಕಾರಣಗಳೆ ಇಲ್ಲ ಎಂದು ಭಾವಿಸುವುದು, ಕುಟುಂಬಕ್ಕೆ ಮತ್ತು ಸಮಾಜಕ್ಕೆ ಹೊರೆಯಾಗಿದ್ದೇನೆ ಎಂಬ ಭಾವನೆ, ಮದ್ಯಪಾನ ಮತ್ತು ಮಾದಕ ವಸ್ತುಗಳ ಹೆಚ್ಚಾದ ಬಳಕೆ, ಅತಿ ಕಡಿಮೆ ಅಥವಾ ಹೆಚ್ಚು ನಿದ್ದೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮಾನಸಿಕವಾಗಿ ಕುಗ್ಗಿದಂತಹ ಮತ್ತು ತಾನು ಒಂಟಿ ಎಂಬ ಭಾವನೆ, ಮರಣಪೂರ್ವ ಪತ್ರ ಡೆತ್ ನೋಟ್ ಬರೆದಿಡುವುದು, ವಿಲ್ ಮಾಡುವುದು ಮತ್ತು ಇತರೆ ಅಸಾಮಾನ್ಯ ವರ್ತನೆಗಳು, ಕುಟುಂಬದಲ್ಲಿನ ಆತ್ಮಹತ್ಯಾ ಸಾವುಗಳು ಮತ್ತು ಇತರೆ ನಡವಳಿಕೆಯಲ್ಲಿನ ಬದಲಾವಣೆಗಳು ಆತ್ಮಹತ್ಯೆಯ ಯೋಚನೆಯ ಎಚ್ಚರಿಕೆ ಚಿಹ್ನೆಗಳಾಗಿರುತ್ತವೆ.

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ ಆತ್ಮಹತ್ಯೆಗೆ ಸಂಬಂಧಿಸಿದಂತೆ 2022 ರಲ್ಲಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಇತ್ತೀಚಿನ ಅಂಕಿ ಅಂಶಗಳಾಗಿದ್ದು ಇದರ ಪ್ರಕಾರ 2022 ರ ವರ್ಷದಲ್ಲಿ ನಮ್ಮ ದೇಶದಲ್ಲಿ 1,70,924 ಆತ್ಮಹತ್ಯಾ ಸಾವುಗಳು ಸಂಭವಿಸಿದೆ. ಈ ಸಂಖ್ಯೆಯು ಪೊಲೀಸ್ ಠಾಣೆಗಳಲ್ಲಿ  ದಾಖಲಾದ ಆತ್ಮಹತ್ಯಾ ಪ್ರಕಾರಣಗಳಾಗಿದ್ದು  ಸಾಮಾಜಿಕ ಮತ್ತಿ ಕೌಟುಂಬಿಕ ಕಾರಣಗಳಿಂದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗದಿರುವ ಅದೆಷ್ಟೋ ಆತ್ಮಹತ್ಯೆ ಸಾವುಗಳನ್ನು ನಾವು ಕಾಣಬಹುದಾಗಿದೆ. ಆತ್ಮಹತ್ಯೆಯು ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಕಂಡುಬರುತ್ತದೆ.

ಅತಿ ಹೆಚ್ಚು ಆತ್ಮಹತ್ಯೆ  ಅಂದರೆ 22746 ಆತ್ಮಹತ್ಯೆಗಳು ಮಹಾರಾಷ್ಟ್ರ  ರಾಜ್ಯದಲ್ಲಿ ವರದಿಯಾಗಿದ್ದು 13606 ಆತ್ಮಹತ್ಯೆ ಪ್ರಕರಣಗಳು ವರದಿಯಾಗುವ ಮೂಲಕ ಕರ್ನಾಟಕವು ನಾಲ್ಕನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. 18 ರಿಂದ 45 ವರ್ಷದ ವಯೋಮಾನದವರಲ್ಲಿ ಅತಿ ಹೆಚ್ಚು  ಮತ್ತು ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಆತ್ಮಹತ್ಯೆ ಪ್ರವೃತ್ತಿ  ಹೆಚ್ಚಾಗಿ ಕಂಡುಬರುತ್ತದೆ. ಎರಡು ಸಾವಿರದ ಇಪ್ಪತ್ತೆರಡನೇ ವರ್ಷದಲ್ಲಿ 18ರಿಂದ 45 ವರ್ಷ ವಯೋಮಾನದ 80288 ಪುರುಷರು ಮತ್ತು 33145 ಮಹಿಳೆಯರ ಆತ್ಮಹತ್ಯಾ ಸಾವುಗಳು ದೇಶದಾದ್ಯಂತ ವರದಿಯಾಗಿರುತ್ತದೆ. ಖಿನ್ನತೆಯಿಂದ ಬಳಲುತ್ತಿರುವವರಲ್ಲಿ ಆತ್ಮಹತ್ಯೆಯ ಆಲೋಚನೆಯೂ ಸಾಮಾನ್ಯರಿಗಿಂತ 20 ಪಟ್ಟು ಹೆಚ್ಚಿರುತ್ತದೆ ಆದ್ದರಿಂದ ಖಿನ್ನತೆಯನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿ ಆಪ್ತಸಮಾಲೋಚನೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ.

ವಿದ್ಯಾರ್ಥಿಗಳಲ್ಲಿ ಹೆಚ್ಚಿದ  ಆತ್ಮಹತ್ಯಾ ಪ್ರವೃತ್ತಿ :  
   ಹದಿಹರೆಯದ ವಯಸ್ಸಿನಲ್ಲಿ ನೈಸರ್ಗಿಕವಾಗಿ ದೇಹದಲ್ಲಿ ಉಂಟಾಗುವ ಹಾರ್ಮೋನ್ ಗಳ ವ್ಯತ್ಯಾಸ ದೊಂದಿಗೆ ಬಾಹ್ಯ ಅಂಶಗಳು ಸೇರಿದಾಗ ಆತ್ಮಹತ್ಯೆಗೆ ಪ್ರಚೋದನೆ ಉಂಟಾಗುತ್ತದೆ. ಉತ್ತಮ ಅಂಕಗಳೊಂದಿಗೆ ಉತ್ತಮ ಶ್ರೇಣಿಯ ಫಲಿತಾಂಶ ಪಡೆಯಬೇಕೆಂದು ಪೋಷಕರು ಹಾಕುವ ಒತ್ತಡ, ಶಾಲೆಯಲ್ಲಿ ಉಂಟಾಗುವ ಒತ್ತಡ, ಸ್ನೇಹಿತರ ಗುಂಪಿನಿಂದ ಉಂಟಾಗುವ ಒತ್ತಡ, ದೋಷಪೂರಿತ ಶಿಕ್ಷಣ ವ್ಯವಸ್ಥೆ, ಇತರೆ ಪಠ್ಯೇತರ ಚಟುವಟಿಕೆಗಳ ಕೊರತೆ, ಪೋಷಕತ್ವದಲ್ಲಿನ ದೋಷಗಳು, ಕೌಶಲ್ಯದ ಕೊರತೆ, ಕೀಳರಿಮೆ, ಆತ್ಮವಿಶ್ವಾಸದ ಕೊರತೆ, ಹೆಚ್ಚುತ್ತಿರುವ ಮೊಬೈಲ್ ವ್ಯಸನ ಇಂತಹ ಹಲವು ಕಾರಣಗಳು ವಿದ್ಯಾರ್ಥಿಗಳಲ್ಲಿ ಒತ್ತಡ, ಖಿನ್ನತೆ, ಆತಂಕದಂತಹ ಮಾನಸಿಕ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗುತ್ತದೆ ಮತ್ತು ಇದು ಆತ್ಮಹತ್ಯೆಗೆ ಪ್ರಚೋದನೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಎಲ್ಲ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮಾನಸಿಕ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವ ನೀತಿಗಳನ್ನು ರೂಪಿಸಬೇಕೆಂದು ಹಾಗೂ ಮಾನಸಿಕ ಆರೋಗ್ಯ ಬೆಂಬಲ ಮತ್ತು ಸುರಕ್ಷಿತ ವಾತಾವರಣ ತಾರತಮ್ಯ ರಹಿತ ಶಿಕ್ಷಣ ನೀಡುವ ಕುರಿತು ನೀತಿಗಳನ್ನು ರೂಪಿಸಬೇಕೆಂದು ಆದೇಶಿಸಿದೆ. ಅದರಂತೆ ನಮ್ಮ ರಾಜ್ಯದಲ್ಲಿಯೂ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಲ್ಲಿ ಶಿಕ್ಷಣ, ಆರೋಗ್ಯ, ಮಕ್ಕಳ ರಕ್ಷಣಾ ಘಟಕ ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿಯನ್ನು ರಚಿಸುವ ಮೂಲಕ ಆತ್ಮಹತ್ಯೆ ತಡೆಗಟ್ಟುವ ಕಾರ್ಯತಂತ್ರಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.

ಆತ್ಮಹತ್ಯೆಯನ್ನು ತಡೆಗಟ್ಟಲು ಯಾವುದೇ ಪೂರ್ವಗ್ರಹಗಳಿಲ್ಲದೆ ವ್ಯಕ್ತಿಯ ಮಾತುಗಳನ್ನು ಆಲಿಸುವುದು, ಯಾವುದೇ ರೀತಿಯ ಆತ್ಮಹತ್ಯೆ ಯೋಚನೆಯನ್ನು ಗುರುತಿಸಿ ಗಂಭೀರವಾಗಿ ಪರಿಗಣಿಸುವುದು, ಆತ್ಮಹತ್ಯೆ ಆಲೋಚನೆಗಳಿಂದ ಹೊರಬರಲು ದೊರೆಯಬಹುದಾದ ಸಹಾಯ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುವುದು, ಈ ಆಲೋಚನೆಯೂ ಕ್ಷಣಿಕವಾದದ್ದು ಮತ್ತು ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಹೊರಬರಬಹುದು ಎಂದು ಅರ್ಥ ಮಾಡಿಸುವುದು, ಸಾಮಾಜಿಕ ಬೆಂಬಲ ನೀಡುವುದು, ಮನೋರೋಗ ತಜ್ಞರು ಮತ್ತು ಮಾನಸಿಕ ಆರೋಗ್ಯ ವೃತ್ತಿಪರರಿಂದ ಮಾರ್ಗದರ್ಶನ ಚಿಕಿತ್ಸೆ ಪಡೆಯಲು ಸಹಾಯ ಮಾಡುವುದು ನಾಗರಿಕ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಭಾರತದದ್ಯಂತ ಯಾವುದೇ ರೀತಿಯ ಮಾನಸಿಕ ಆರೋಗ್ಯ ಸಲಹೆ ಮತ್ತು ಮಾಹಿತಿಗಾಗಿ ಮಾನಸಿಕ ಆರೋಗ್ಯ ಸಹಾಯವಾಣಿ ಲಭ್ಯವಿದ್ದು 19 ಭಾಷೆಗಳಲ್ಲಿ ಕಾರ್ಯ ನಿರ್ವಹಿಸುವ ಶುಲ್ಕ ರಹಿತ ದೂರವಾಣಿ ಸಂಖ್ಯೆ 14416 ಸಂಖ್ಯೆಗೆ  ಯಾವ ಸಮಯದಲ್ಲಾದರೂ  ಸಹ ಕರೆ ಮಾಡಬಹುದು.

You cannot copy content of this page

Exit mobile version