Home ದೇಶ ಸ್ತನ ಕ್ಯಾನ್ಸರ್‌ ಜಾಗೃತಿಗಾಗಿ ಕಿತ್ತಳೆ ಬಳಸಿದ ಯುವರಾಜ್‌ ಸಿಂಗ್‌ ನೇತ್ರತ್ವದ ಎನ್‌ಜಿಒ: ತಿರುಗಿಬಿದ್ದ ಸೋಷಿಯಲ್‌ ಮೀಡಿಯಾ

ಸ್ತನ ಕ್ಯಾನ್ಸರ್‌ ಜಾಗೃತಿಗಾಗಿ ಕಿತ್ತಳೆ ಬಳಸಿದ ಯುವರಾಜ್‌ ಸಿಂಗ್‌ ನೇತ್ರತ್ವದ ಎನ್‌ಜಿಒ: ತಿರುಗಿಬಿದ್ದ ಸೋಷಿಯಲ್‌ ಮೀಡಿಯಾ

0

ಕ್ರಿಕೆಟಿಗ ಯುವರಾಜ್ ಸಿಂಗ್ ನೇತ್ರತ್ವದ ಸರ್ಕಾರೇತರ ಸಂಸ್ಥೆ, YouWeCan ಫೌಂಡೇಶನ್ ಪ್ರಕಟಿಸಿರುವ ಸ್ತನ ಕ್ಯಾನ್ಸರ್ ಜಾಗೃತಿ ಭಿತ್ತಿಪತ್ರವೊಂದು ಸೋಷಿಯಲ್‌ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗೆ ವಿಷಯವಾಗಿದೆ.

ಈ ಚರ್ಚೆಗೆ ಗುರಿಯಾಗಿರುವ ಚಿತ್ರದಲ್ಲಿ ಮಹಿಳೆಯೊಬ್ಬರು ಕೈಯಲ್ಲಿ ಎರಡು ಕಿತ್ತಳೆ ಹಣ್ಣುಗಳನ್ನು ಹಿಡಿದಿದ್ದರೆ, ಇನ್ನೋರ್ವ ಹಿರಿಯ ಮಹಿಳೆ ದೊಡ್ಡ ಪ್ಲಾಸ್ಟಿಕ್‌ ಕ್ರೇಟ್‌ ಒಂದರಲ್ಲಿ ಕಿತ್ತಳೆ ಹಣ್ಣುಗಳನ್ನು ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ʼ’ತಿಂಗಳಿಗೆ ಒಮ್ಮೆ ನಿಮ್ಮ ಕಿತ್ತಳೆಯನ್ನು ಪರೀಕ್ಷಿಸಿಕೊಳ್ಳಿʼ ಎನ್ನುವ ಶೀರ್ಷಿಕೆ ನೀಡಲಾಗಿದೆ.
‘ಕಾಲ್ ಟು ಆಕ್ಷನ್’ ಅಭಿಯಾನದಡಿ ಸ್ತನಗಳನ್ನು ಕಿತ್ತಳೆಗೆ ಹೋಲಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಕ್ಯಾನ್ಸರ್‌ ಚಿನ್ಹೆಗಳನ್ನು ಪತ್ತೆ ಹಚ್ಚುವಲ್ಲಿ ಸ್ವಯಂ ಪರೀಕ್ಷೆಗೆ 25ನೇ ವಯಸ್ಸಿನಿಂದಲೇ ಮಹಿಳೆಯರನ್ನು ಉತ್ತೇಜಿಸುವ ಉದ್ದೇಶದಿಂದ ಈ ಪೋಸ್ಟರ್‌ ತಯಾರಿಸಲಾಗಿದೆ.

ಆದರೆ ಈ ಹೋಲಿಕೆಗೆ ಸಾಕಷ್ಟು ಜನ ಸೋಷಿಯಲ್‌ ಮೀಡಿಯಾ ಬಳಕೆದಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಒಬ್ಬ ಮಹಿಳೆಯಂತೂ ಕಿತ್ತಳೆ ಹಣ್ಣು ಎಂದು ಕರೆಯಲು ನಾನು ಹಣ್ಣುಗಳನ್ನು ನೇತುಬಿಟ್ಟುಕೊಂಡಿರುವ ಮರವಲ್ಲ. ಅವುಗಳನ್ನು ಸ್ತನವೆಂದು ಕರೆಯಲು ಏನು ತೊಂದರೆ ಎಂದು ಕೇಳಿದ್ದಾರೆ.

ಮತ್ತೊಬ್ಬ ಆಕ್ರೋಶಿತ ಬಳಕೆದಾರ “ಇದು ಅತ್ಯಂತ ಅಸಹ್ಯಕರ. ಮೂರನೇ ದರ್ಜೆಯ ವಯಸ್ಕರ ಚಿತ್ರಗಳಲ್ಲಾದರೂ ಇದಕ್ಕಿಂತ ಉತ್ತಮ ಪದಗಳನ್ನು ಬಳಸಲಾಗುತ್ತದೆ. ಇದು ತುಂಬಾ ಲೈಂಗಿಕವಾಗಿದೆ, ಕಾರ್ಯಕ್ರಮದ ಉದ್ದೇಶವನ್ನು ಸಂಪೂರ್ಣವಾಗಿ ಸೋಲಿಸುತ್ತದೆ. ಇದು ಸ್ತನ ಕ್ಯಾನ್ಸರ್ ವಿಷಯದಲ್ಲಿ ಪುರುಷರು ಮತ್ತು ಮಹಿಳೆಯರನ್ನು ಇನ್ನಷ್ಟು ಮಡಿವಂತರನ್ನಾಗಿ ಮಾಡುತ್ತದೆ” ಎಂದಿದ್ದಾರೆ.

ಸಾಮಾನ್ಯವಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ನಗ್ನ ಚಿತ್ರಗಳನ್ನು ಬಳಸುವುದನ್ನು ತಪ್ಪಿಸುವ ಸಲುವಾಗಿ ಈ ರೀತಿ ಕಿತ್ತಳೆ ಹಣ್ಣುಗಳನ್ನು ಬಳಸುವ ಪದ್ಧತಿ ವಿದೇಶಗಳಲ್ಲೂ ಇದೆ. ಆದರೆ ಈ ಕುರಿತು ಇಲ್ಲಿ ಅಷ್ಟು ಮಾಹಿಯಿಲ್ಲದ ಕಾರಣ ಇಂತಹದ್ದೊಂದು ಚರ್ಚೆ ಆರಂಭಗೊಂಡಿದೆ.

ಚರ್ಚೆಗೆ ಸಂಬಂಧಿಸಿದಂತೆ ಕೆಲವು ಟ್ವೀಟ್‌ಗಳನ್ನು ಈ ವರದಿಯೊಂದಿಗೆ ಲಗತ್ತಿಸಲಾಗಿದ್ದು, ಓದುಗರು ಹೆಚ್ಚಿನ ಮಾಹಿತಿಗಾಗಿ ಅವುಗಳನ್ನು ಗಮನಿಸಬಹುದು.

2011ರಲ್ಲಿ ಅಪರೂಪದ ಶ್ವಾಸಕೋಶದ ಕ್ಯಾನ್ಸರ್‌ನೊಂದಿಗೆ ಹೋರಾಡಿದ ಯುವರಾಜ್ ಸಿಂಗ್ ಅವರು ವಿವಿಧ ರೀತಿಯ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲೆಂದು ಎನ್‌ಜಿಒ YouWeCan ಸಂಘಟನೆಯನ್ನು ಪ್ರಾರಂಭಿಸಿದರು. ಈ ಸಂಘಟನೆ ಆರಂಭಿಕ ರೋಗ ಪತ್ತೆ ಅಭಿಯಾನಗಳಲ್ಲಿ ಸಕ್ರಿಯವಾಗಿದೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ಬೆಂಬಲವನ್ನು ನೀಡುತ್ತದೆ.

You cannot copy content of this page

Exit mobile version