Home ಅಂಕಣ ಬೊಗಸೆಗೆ ದಕ್ಕಿದ್ದು-89 : ಮುಸ್ಲಿಂ ಶತ್ರು! ಹಿಂದೂ ಕನ್ಫ್ಯೂಸ್! ಬ್ರಾಹ್ಮಣ ಸೇಫ್!! ಇದುವೇ ಆರೆಸ್ಸೆಸ್ಸಿನ ಕಾರ್ಯತಂತ್ರ

ಬೊಗಸೆಗೆ ದಕ್ಕಿದ್ದು-89 : ಮುಸ್ಲಿಂ ಶತ್ರು! ಹಿಂದೂ ಕನ್ಫ್ಯೂಸ್! ಬ್ರಾಹ್ಮಣ ಸೇಫ್!! ಇದುವೇ ಆರೆಸ್ಸೆಸ್ಸಿನ ಕಾರ್ಯತಂತ್ರ

0

“..ಸಾಮರಸ್ಯದ ಮಾತಾಡುವ, ಆದರೆ ಧರ್ಮ, ಜಾತಿ ಆಧಾರಿತ ಹಿಂಸೆಯನ್ನು ಬ್ರಾಹ್ಮಣ ರಕ್ಷಣೆಯ ಗುರಿ ಸಾಧನೆಗೆ ಬಳಸುವ ಆರೆಸ್ಸೆಸ್ಸಿನ “ಹಿಂದೂ” ಅಥವಾ “ಹಿಂದೂತ್ವ” ಎಂಬ ವ್ಯಾಖ್ಯಾನವೇ ಗೊಂದಲಗಳಿಂದ ಕೂಡಿದೆ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ತೀರಾ ಅಲ್ಪ ಸಂಖ್ಯೆಯ ಜನರಿರುವ “ಮೇಲ್ಜಾತಿ”ಯೊಂದರ ನಿಯಂತ್ರಣದಲ್ಲಿರುವ ಆರ್‌ಎಸ್‌ಎಸ್ ಹೇಗೆ ಮೇಲ್ಜಾತಿಗಳಿಂದ ಶತಮಾನಗಳ ಶೋಷಣೆಗೆ ಒಳಗಾಗಿರುವ ಬಹುಸಂಖ್ಯಾತ ಹಿಂದೂಗಳ ಮೇಲೆ ಹಿಡಿತ ಸಾಧಿಸಿದೆ?! ಅದಕ್ಕಾಗಿ ಸಂಘಟನೆಯು ಅನುಸರಿಸುವ ಸಂಕೀರ್ಣವಾದ ತಂತ್ರಗಳು ಮತ್ತು ಕಾರ್ಯವಿಧಾನಗಳನ್ನು ಈಗ ನೋಡೋಣ. ಆರೆಸ್ಸೆಸ್ಸಿನ ಎಲ್ಲಾ ಮಾತು, ಬೋಧನೆ ಮತ್ತು ನಡವಳಿಕೆಗಳು ಪರಸ್ಪರ ವಿರೋಧಿಯಾದ ದ್ವಂದ್ವಗಳಿಂದಲೇ ಕೂಡಿವೆ. ಯಾವುದನ್ನು ಬೇಕಾದರೂ ನೀವು ಪರಿಶೀಲಿಸಿ ನೋಡಿ. ಅವುಗಳಲ್ಲಿ ಮೊದಲನೆಯದು ಅತ್ಯಂತ ವಿರೋಧಾಭಾಸದಿಂದ ಕೂಡಿದ “ಕಳಂಕ ಹಚ್ಚುವ, ಜೊತೆಗೆ ಅನುಸರಿಸುವ” ಎರಡು ನಾಲಗೆಯ ಮಾನಸಿಕ ಕಾರ್ಯವಿಧಾನ.

​ಈ ಪ್ರಕ್ರಿಯೆಯು ಇಡೀ ಸಮುದಾಯಕ್ಕೆ ಕಳಂಕ ಹಚ್ಚುವ ಮೂಲಕ ಪ್ರಾರಂಭವಾಗುತ್ತದೆ, ಅಲ್ಲಿ ಸಂಸ್ಥೆಯು ಇಸ್ಲಾಂ ಅಥವಾ ಕ್ರಿಶ್ಚಿಯನ್ ಸಹಿತ ಪಾಶ್ಚಿಮಾತ್ಯ ಸಂಸ್ಕೃತಿಯಂತಹ ಗುರಿಗಳನ್ನು “ಶತ್ರು”ವಾಗಿ ಗುರುತಿಸುತ್ತದೆ ಮತ್ತು ಅದನ್ನು ಆಕ್ರಮಣಕಾರಿ, ಹೆಚ್ಚು ಸಂಘಟಿತ ಮತ್ತು ಅಸ್ತಿತ್ವಕ್ಕೆ ಬೆದರಿಕೆ ಎಂದು ಲೇಬಲ್ ಮಾಡುತ್ತದೆ. ಇದರ ನಂತರ ತಕ್ಷಣವೇ ಅವುಗಳದ್ದೇ ಅನುಕರಣೆ ನಡೆಯುತ್ತದೆ. ಅಲ್ಲಿ ಆರ್‌ಎಸ್‌ಎಸ್ ತಾನು ಟೀಕಿಸುವ ಗುಂಪಿನ ನಿಖರವಾದ ರಚನಾತ್ಮಕ ಲಕ್ಷಣಗಳನ್ನೇ ನಕಲಿ ಮಾಡುತ್ತದೆ. ಉದಾಹರಣೆಗೆ ಇಸ್ಲಾಮಿನಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲವೆಂದು ಬೊಬ್ಬಿಡುತ್ತಾ ಬುರ್ಖಾ, ತ್ರಿವಳಿ ತಲಾಖ್ ಇತ್ಯಾದಿಗಳನ್ನು ಕಟುವಾಗಿ ಟೀಕಿಸುವ ಆರೆಸ್ಸೆಸ್, ಹಿಂದೂ ಮಹಿಳೆಯನ್ನು ಸಾಂಪ್ರದಾಯಿಕತೆಯ ಹೆಸರಿನಲ್ಲಿ ಮನೆಯೊಳಗೆ ಬಚ್ಚಿಡಲು ಬಯಸುತ್ತದೆ. ತಾಳಿ, ಸಿಂಧೂರ, ಗೃಹಲಕ್ಷ್ಮೀ, ಪಾತಿವ್ರತ್ಯ, ಮುಟ್ಟಿನ ಅಪವಿತ್ರತೆ ಮುಂತಾದ ಪುರುಷ ಪ್ರಧಾನ “ಪಾವಿತ್ರ್ಯದ” ವಿಷಯಗಳ ಬಳಕೆಯ ಮೂಲಕ ಮಹಿಳೆಯರ ಕುರಿತು ಮನುವಿನ ನಿರ್ಬಂಧಗಳನ್ನೇ ನಯವಾಗಿ ಹೇರುತ್ತದೆ. ಮಹಿಳೆಯರ ಕರ್ತವ್ಯ ಇರುವುದು ಮನೆಯಲ್ಲಿಯೇ ಎಂಬ ಆರೆಸ್ಸೆಸ್ಸಿನ ಸರಸಂಘಚಾಲಕರ ಬಹಿರಂಗ ಹೇಳಿಕೆಗಳನ್ನು ನಾವು ಕೇಳಿದ್ದೇವೆ. ಅದರ ಜೊತೆಗೆಯೇ ವಿಜ್ಞಾನ, ಕ್ರೀಡೆ, ಮಿಲಿಟರಿ ಇತ್ಯಾದಿ ಕ್ಷೇತ್ರಗಳಲ್ಲಿ ಸ್ವಂತ ಪ್ರಯತ್ನದಿಂದ ಉನ್ನತ ಸ್ಥಾನಕ್ಕೆ ಏರಿದವರನ್ನು ಹಿಂದೂ ನಾರಿ, ಭಾರತೀಯ ನಾರಿಯೆಂದು ತನ್ನ ಸಾಧನೆ ಎಂಬಂತೆ ಬಣ್ಣಿಸುತ್ತದೆ. ಮಹಿಳೆಯರಿಗೆ “ಜನನಿ”, “ಮಾತಾ” “ನಾರಿ” ಎಂದು ಆರೆಸ್ಸಿಗರು ಹೇಳುವಾಗ ಅದು ಕೆಳಜಾತಿ ಮತ್ತು “ಅನ್ಯ” ಧರ್ಮೀಯರಿಗೆ ಅನ್ವಯಿಸುವುದಿಲ್ಲ. ಅವರು ಅತ್ಯಾಚಾರಿಗಳನ್ನೇ ಸಮರ್ಥಿಸಿ ಸನ್ಮಾನಿಸುತ್ತಾರೆ. (ಹತ್ರಾಸ್ ಇತ್ಯಾದಿ) ತನ್ನ ಜಾತಿಯ ಹೆಣ್ಣು ಮಗುವನ್ನು ತನ್ನರೇ ಶೋಷಿಸಿದಾಗ ಸುಮ್ಮನಿರುವ ಈ ಆರೆಸ್ಸಿಗರು ಅನ್ಯಧರ್ಮೀಯರು ಸಿಕ್ಕಾಗ ಮಾತ್ರವೇ ಅದೊಂದು ದೊಡ್ಡ ವಿಷಯ. ಇದರ ಬಗ್ಗೆ ಸಂಶಯವಿದ್ದರೆ, ನನ್ನ ಪರಿಸರದ ದೊಡ್ಡ ದೊಡ್ಡ ಜನರನ್ನು ಒಳಗೊಂಡ ದೊಡ್ಡ ದೊಡ್ಡ ವಿಷಯಗಳನ್ನು ಹೇಳಬಲ್ಲೆ. ಆರೆಸ್ಸೆಸ್ಸಿನಲ್ಲಿ ಮಹಿಳೆಯ ಸ್ಥಾನಮಾನದ ಬಗ್ಗೆಯೇ ಬೇರೆಯಾಗಿ ನೋಡೋಣ.

ವಿರೋಧಿಸುವವರನ್ನೇ ಅನುಕರಿಸುವವರು!
ತಾವು ಗ್ರಹಿಸಿದ, ಅಥವಾ ಜನರಿಗೆ ತೋರಿಸಿ ಹುಯ್ಲಿಡುವ “ಇಸ್ಲಾಂ ಬೆದರಿಕೆ”ಯನ್ನು ಎದುರಿಸಲು- ಪ್ಯಾರಾಮಿಲಿಟರಿ ಶಿಸ್ತು ಮತ್ತು ಏಕದೇವತಾವಾದಿ ಪ್ರಭುತ್ವದ ಗುರಿಗಳನ್ನು ಅಳವಡಿಸಿಕೊಳ್ಳುವ ಕೇಂದ್ರೀಕೃತ “ಹಿಂದೂ” ಏಕತೆಯನ್ನು ಬಯಸುತ್ತದೆ. “ಮುಸ್ಲಿಮರಲ್ಲಿ ನೋಡಿ: ಎಷ್ಟು ಒಗ್ಗಟ್ಟಿದೆ! ನಮ್ಮಲ್ಲಿ ನಾವುನಾವೇ ಕಚ್ಚಾಡುತ್ತೇವೆ” ಎಂಬ ಒಗ್ಗಟ್ಟಿನ ಮಾತುಗಳನ್ನು ನೀವು ಆರೆಸ್ಸೆಸ್ ಶಾಖೆಗಳಲ್ಲಿ ಕೇಳಬಹುದು. ಈ ಹಿಂದೂ ಏಕತೆಯು ಬ್ರಾಹ್ಮಣ ಶ್ರೇಷ್ಟತೆಯನ್ನು ಒಪ್ಪಿದ ಹಿಂದೂ ಏಕತೆ; ಸಮಾನತೆಯ ಏಕತೆಯಲ್ಲ ಎಂದು ಅದು ನಿಮಗೆ ಹೇಳುವುದಿಲ್ಲ; ಮನೆಗೆ ಹೋಗಿ ತಣ್ಣೀರಿನಲ್ಲಿ ಸ್ನಾನಮಾಡಿದರೂ, ಶಾಖೆಗಳಲ್ಲಿ ದೈಹಿಕವಾಗಿ ಅಸ್ಪೃಶ್ಯತೆ, ಜಾತಿಭೇದ ಆಚರಿಸುವುದಿಲ್ಲ. ಇದನ್ನೇ- “ನೋಡಿ, ನಮಗೆ ಜಾತಿ ಭೇದ ಇಲ್ಲ; ನಾವು ಸಹಪಂಕ್ತಿ ಭೋಜನವನ್ನೂ ಮಾಡುತ್ತೇವೆ” ಎಂದು ದೊಡ್ಡ ಉಪಕಾರ, ಔದಾರ್ಯದ ದಾಟಿಯಲ್ಲಿ ಹೇಳಲಾಗುತ್ತದೆ. ಆರೆಸ್ಸೆಸ್ ತಾನು ವಿರೋಧಿಸುವುದನ್ನೇ ಅನುಕರಿಸುತ್ತದೆ. ಇಸ್ಲಾಮಿನ ಬಹುಪತ್ನಿತ್ವವನ್ನು ವಿರೋಧಿಸುವ ಹಿಂದಿನ ಗುಪ್ತ ಆಶಯವೆಂದರೆ, ಹಿಂದೂತ್ವದಲ್ಲಿ ಸಾಮಾನ್ಯವಾಗಿದ್ದ ಬಹುಪತ್ನಿತ್ವಕ್ಕೆ (ರಾಮಾಯಣ ಮಹಾಭಾರತ ಕಾಲದಿಂದಲೂ) ಈಗ ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಹಳಹಳಿಕೆಯೇ ಆಗಿದೆ. (ಅವರಿಗೆ ನಾಲ್ಕು, ನಮಗೆ ಎಂಟಾದರೂ ಬೇಡವೆ!?) ತಲಾಖ್ ಕುರಿತು ಮಾತಾಡುವವರು- ಹಿಂದೂಗಳಲ್ಲಿ ಇರುವ ಬಹುದೊಡ್ಡ ಸಂಖ್ಯೆಯ- ಹೆಂಡತಿಯನ್ನು ವಿವಾಹ ಬಂಧನದಿಂದ ಮುಕ್ತಗೊಳಿಸದೇ, ನಡುನೀರಿನಲ್ಲಿ ಕೈಬಿಟ್ಟು ಓಡಿದ ಗಂಡಸರ ಕುರಿತು ಮಾತೇ ಆಡುವುದಿಲ್ಲ; ಆರಾಧಿಸುತ್ತದೆ.

​ಇಲ್ಲಿರುವ ದ್ವಂದ್ವ ನಿಲುವುಗಳು ಮತ್ತು ವಿರೋಧಾಭಾಸಗಳು ಕಣ್ಣಿಗೆ ರಾಚುವಂತವವುಗಳು. ಅಬ್ರಹಾಮಿಕ್ ಧರ್ಮಗಳು ಮತ್ತು ಪಾಶ್ಚಿಮಾತ್ಯ ರಾಜಕೀಯ ವ್ಯವಸ್ಥೆಗಳನ್ನು ಸ್ಥಳೀಯ ಸಂಸ್ಕೃತಿಗೆ “ಅನ್ಯಲೋಕ”ದ ಬೆದರಿಕೆಗಳೆಂದು ಸಾರ್ವಜನಿಕವಾಗಿ ತಿರಸ್ಕರಿಸುವಾಗ, “ಅಜೈವಿಕ” ಜೀವಿಯನ್ನು, ಹಾಗಾಗಿ ಅಧಾರ್ಮಿಕ ಜಂತುವನ್ನು ಬೆಂಬಲಿಸುವ ಆರ್‌ಎಸ್‌ಎಸ್- ಆಂತರಿಕವಾಗಿ ಅವುಗಳ ನಿಖರವಾದ ರಚನಾತ್ಮಕ ಮಾದರಿಗಳನ್ನೇ ಅನುಕರಿಸುತ್ತದೆ.

ಐತಿಹಾಸಿಕವಾಗಿ ವಿಕೇಂದ್ರೀಕೃತ, ವೈವಿಧ್ಯಮಯ ಮತ್ತು ಬಹುಸಂಸ್ಕೃತಿಯ, ಬಹುಸಂಪ್ರದಾಯಗಳ ನಮ್ಮ ಭಾರತೀಯ ಸಮಾಜವನ್ನು ಹೆಚ್ಚು ಕೇಂದ್ರೀಕೃತ, ಪ್ರಮಾಣೀಕೃತ ಮತ್ತು ರಾಜಕೀಯವಾಗಿ ಶಸ್ತ್ರೀಕರಣಗೊಂಡ ಏಕ ಸಂಸ್ಕೃತಿಯ ರಾಷ್ಟ್ರೀಯ ಗುರುತಾಗಿ ಪರಿವರ್ತಿಸಲು ಅದು ಪ್ರಯತ್ನಿಸುತ್ತದೆ. ಹೀಗೆ ಮಾಡುವಾಗ ಇತರರಲ್ಲಿ ಟೀಕಿಸುವ ನಿಖರವಾದ ಗುಣಲಕ್ಷಣಗಳನ್ನೇ ನಾಚಿಕೆಯಿಲ್ಲದೆ ಅನುಕರಿಸುತ್ತದೆ. “ ಇಸ್ಲಾಮಿಕ್ ಕಾನೂನು ಇಲ್ಲಿಯೂ ಬರಬೇಕು! ಕದ್ದವರ ಕೈ ಕಡಿಯಬೇಕು!” “ಹೆಣ್ಣುಮಕ್ಕಳು ಸಾಂಪ್ರದಾಯಿಕ ಉಡುಗೆಯನ್ನೇ ಧರಿಸಬೇಕು” ಎಂಬ ಮಾತುಗಳನ್ನು ಆರೆಸ್ಸೆಸ್ಸಿನವರ ನಡುವೆ ನೀವು ಧಾರಾಳ ಕೇಳಬಹುದು. ಮುಸ್ಲಿಮರಲ್ಲಿ ಇವರು ವಿರೋಧಿಸುವುದನ್ನೇ ಇವರು ಹಿಂದೂ ಮಹಿಳೆಯರ ಮೇಲೆ ಹೇರಬಯಸುತ್ತಾರೆ. ಪಾಶ್ಚಾತ್ಯವನ್ನು ವಿರೋಧಿಸುವ ಇವರಿಗೆ ಪಾಶ್ಚಾತ್ಯವಾದ ಎಲ್ಲಾ ಸಾಧನ, ಸೌಲಭ್ಯಗಳು ಬೇಕೇಬೇಕು. ಮತ್ತೆ ಇವರ ಇಟಾಲಿಯನ್, ಜರ್ಮನ್ ಫ್ಯಾಸಿ-ನಾಝಿ ಅನುಕರಣೆಯನ್ನು ನಾವು ಇಲ್ಲಿಯೇ ನೋಡಿದ್ದೇವೆ.

ಅಸ್ಪಷ್ಟತೆಯ ಭಾಷೆ, ಗೊಂದಲ ಪರಿಭಾಷೆಗಳು
ಆರ್‌ಎಸ್‌ಎಸ್- ಚಾಲ್ತಿಯಲ್ಲಿರುವ ರಾಜಕೀಯ ಪರಿಕಲ್ಪನೆಗಳನ್ನು ಮರುರೂಪಿಸಲು, ಸಾರ್ವಜನಿಕ ಗ್ರಹಿಕೆಯನ್ನು ಪ್ರಭಾವಿಸಲು ಮತ್ತು ಕಾನೂನು ಹೊಣೆಗಾರಿಕೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲೆಂದೇ ವಿನ್ಯಾಸಗೊಳಿಸಲಾದ ಆಂತರಿಕ, ವಿಶೇಷ ಶಬ್ದಕೋಶವನ್ನು ತಪ್ಪದೇ ಅವಲಂಬಿಸಿದೆ. ಅದರ ಎಲ್ಲಾ ವ್ಯವಹಾರಗಳಲ್ಲಿ ಬಳಸುವ ಪದಗಳು, ವ್ಯಾಖ್ಯಾನಗಳು ಎರಡರ್ಥವನ್ನು ಹೊಂದಿವೆ. ನಾನಿದನ್ನು ತಿಳಿದುಕೊಳ್ಳಬೇಕು.

ಆರೆಸ್ಸೆಸ್ ತನ್ನನ್ನು “ಸಾಂಸ್ಕೃತಿಕ ಸಂಸ್ಥೆ” ಎಂದು ಹೇಳಿಕೊಳ್ಳುವುದರ ಮೂಲ ಉದ್ದೇಶವು- ತೆರಿಗೆ ವಿನಾಯಿತಿ ಪಡೆಯುವುದು ಮತ್ತು ಅದರ ಅಂಗಸಂಸ್ಥೆಗಳ ರಾಜಕೀಯ ಕ್ರಿಯೆಗಳ ನೇರ ಕಾನೂನು ಹೊಣೆಗಾರಿಕೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಒಂದು ಕುಟಿಲ ಲೆಕ್ಕಾಚಾರ ಮಾಡಿರುವ ಒಂದು ಕಣ್ಕಟ್ಟು ತಂತ್ರವಾಗಿದೆ. ಇದು ಔಪಚಾರಿಕವಾಗಿ ಸಾಂವಿಧಾನಿಕ ಚೌಕಟ್ಟಿನಿಂದ ಹೊರಗೆ ಉಳಿದುಕೊಂಡು, ಹೊರಗಿನಿಂದ ದೇಶದ ರಾಜಕೀಯವನ್ನು ನಿಯಂತ್ರಿಸಲು, ಸಾಂವಿಧಾನಿಕ ಸಂಸ್ಥೆಗಳು ಮತ್ತು ಮೂಲ ರಚನೆಯನ್ನೇ ಬದಲಿಸಲು, ರಾಜ್ಯಾಂಗ ನೀತಿಯನ್ನು ನಿರ್ದೇಶಿಸಲು ಅದಕ್ಕೆ ಅನುವು ಮಾಡಿಕೊಡುತ್ತದೆ.

ಅದರ ಸಂಘಟನೆಯ ವಿಭಾಗಗಳನ್ನೇ ನೋಡಿ. ಉಳಿದ ಸಂಘಟನೆ, ಪಕ್ಷಗಳಂತೆ ಅದು ಪ್ರಜಾಪ್ರಭುತ್ವವಾದಿ ಮತ್ತು ಸಂವಿಧಾನಬದ್ಧ ಆಡಳಿತ ರಾಜಕೀಯ ಘಟಕಗಳನ್ನು ಹೊಂದಿಲ್ಲ. ಅದು ತಾಲೂಕು, ರಾಜ್ಯ, ಘಟಕಗಳನ್ನು ಹೊಂದಿಲ್ಲ! ಆರ್‌ಎಸ್‌ಎಸ್- “ಪ್ರಾಂತ್ಯ” ಮತ್ತು “ಕ್ಷೇತ್ರ”ಗಳಂತಹ ಪರಿಭಾಷೆಗಳನ್ನು ಬಳಸುತ್ತದೆ. ಆದರೆ, ಅದರ ಆಂತರಿಕ ಸಂಘಟನಾ ವ್ಯವಸ್ಥೆಯು ಸಮಾಜದ ಪ್ರತಿಯೊಂದು ಹಂತಕ್ಕೂ ವಿಸ್ತರಿಸಿದೆ. ಅಂದರೆ, ಇದರಲ್ಲಿನ ಮುಖ್ಯ ವ್ಯತ್ಯಾಸವೆಂದರೆ, ಆರ್‌ಎಸ್‌ಎಸ್‌ನ ಗಡಿಗಳು ಸರಕಾರದ ಆಡಳಿತಾತ್ಮಕ ಗಡಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದಿಲ್ಲ. ​ರಾಷ್ಟ್ರೀಯ ಮಟ್ಟದಿಂದ ಹಿಡಿದು ಸ್ಥಳೀಯ ನೆರೆಹೊರೆಯ ಹಂತದವರೆಗೆ ಸಂಘಟನಾ ಸ್ತರಗಳು ಹೀಗಿವೆ:

ಅಖಿಲ ಭಾರತೀಯ (ರಾಷ್ಟ್ರೀಯ ಮಟ್ಟ)ಎಂಬದು ಮಹಾರಾಷ್ಟ್ರದ ನಾಗ್ಪುರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಅತ್ಯುನ್ನತ ಹಂತ. ಕ್ಷೇತ್ರ (ವಲಯ / ಪ್ರದೇಶ) ಎಂಬುದು ಇಡೀ ದೇಶವನ್ನು 11 ಕ್ಷೇತ್ರಗಳ ವಿಂಗಡನೆ (ಉದಾಹರಣೆಗೆ, ದಕ್ಷಿಣ ರಾಜ್ಯಗಳಿಗಾಗಿ ದಕ್ಷಿಣ ಕ್ಷೇತ್ರ / ದಕ್ಷಿಣಾಂಚಲ, ಪಶ್ಚಿಮ ರಾಜ್ಯಗಳಿಗಾಗಿ ಪಶ್ಚಿಮ ಕ್ಷೇತ್ರ/ ಪಶ್ಚಿಮಾಂಚಲ). ಪ್ರತಿಯೊಂದು ಕ್ಷೇತ್ರವೂ ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ರಾಂತ್ಯಗಳನ್ನು ಒಳಗೊಂಡಿರುತ್ತದೆ.

​ಪ್ರಾಂತ್ಯ (ಪ್ರಾಂತ): ಇದು ರಾಜ್ಯ ಮಟ್ಟಕ್ಕೆ ಸಮಾನವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ದೊಡ್ಡ ರಾಜ್ಯಗಳನ್ನು ಹೆಚ್ಚಾಗಿ ಪ್ರಾಂತ್ಯಗಳಾಗಿ ವಿಂಗಡಿಸಲಾಗುತ್ತದೆ (ಉದಾಹರಣೆಗೆ, ಕರ್ನಾಟಕವನ್ನು ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಎಂದು ವಿಭಾಗಿಸಲಾಗಿದೆ).

ವಿಭಾಗ: ಮೂರರಿಂದ ಐದು ಜಿಲ್ಲೆಗಳನ್ನು ಸಂಯೋಜಿಸಿ ಒಂದು ವಿಭಾಗವನ್ನಾಗಿ ಮಾಡಲಾಗುತ್ತದೆ. ಜಿಲ್ಲೆ: ಇದು ಸಾಧಾರಣವಾಗಿ ಸರ್ಕಾರದ ಕಂದಾಯ ಜಿಲ್ಲೆಗೆ ಸಮಾನವಾಗಿರುತ್ತದೆ, ಆದರೆ ಆರ್‌ಎಸ್‌ಎಸ್ ತನ್ನ ಅನುಕೂಲಕ್ಕೆ ತಕ್ಕಂತೆ ಗಡಿಗಳನ್ನು ನಿರ್ಧರಿಸುತ್ತದೆ. ​(ಖಂಡ / ನಗರ): ಖಂಡ ಎಂದರೆ ಗ್ರಾಮೀಣ ಎಂಬುದು ತಾಲ್ಲೂಕಿಗೆ ಸಮಾನವಾದ ಪ್ರದೇಶ. ನಗರ: ನಗರ ಅಥವಾ ಪಟ್ಟಣಗಳ ಸಣ್ಣ ನಿರ್ವಹಣಾ ಘಟಕಗಳು.

ಕೆಳಮಟ್ಟದಲ್ಲಿ ​ಮಂಡಲ / ಬಸ್ತಿ (ಬ್ಲಾಕ್ / ಬಡಾವಣೆ): ಮಂಡಲ (ಗ್ರಾಮೀಣ)ಎಂದರೆ 10ರಿಂದ 12 ಹತ್ತಿರದ ಹಳ್ಳಿಗಳ ಸಮೂಹ. ಬಸ್ತಿ (ನಗರ ಪ್ರದೇಶ): ಸುಮಾರು 10,000 ಜನಸಂಖ್ಯೆಯನ್ನು ಹೊಂದಿರುವ ವಸತಿ ಬಡಾವಣೆ/ಪ್ರದೇಶ. ಮತ್ತು, ಶಾಖೆ… ಮತ್ತು ಇದುವೇ ಮೂಲ ಘಟಕ. ಗ್ರಾಮ ಅಥವಾ ಬಡಾವಣೆಯ ಮಟ್ಟದಲ್ಲಿ ದಿನನಿತ್ಯ ನಡೆಯುವ ಅತ್ಯಂತ ಮೂಲಭೂತ ಕಾರ್ಯಕಾರಿ ಘಟಕ. ಇದುವೇ ಸಮಾಜಕ್ಕೆ ಮಕ್ಕಳ ಮಟ್ಟದಲ್ಲಿ ವಿಷಬೆರೆಸುವ- ಸಮಾಜದ ಕುಡಿಯುವ ನೀರಿನ ಟಾಂಕಿ.

ಇಂತಾ ಒಂದು ವ್ಯವಸ್ಥೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಹೊರಗಿನವರಿಗೆ ತುಂಬಾ ಕಷ್ಟ- ಜನವರಿ, ಫೆಬ್ರುವರಿ ಅಭ್ಯಾಸವಾಗಿರುವವರಿಗೆ ಚೈತ್ರ, ವೈಶಾಖದಲ್ಲಿ ವ್ಯವಹರಿಸುವುದು ಹೇಗೆ ಕಷ್ಟವೋ ಹಾಗೆ! ಇದು ಅದರ ಗೌಪ್ಯತೆಯ ಅಜೆಂಡಾದ ಭಾಗವೂ ಹೌದು. ಸಾಮಾನ್ಯ ಕಾರ್ಯಕರ್ತನಿಗೆ ಆದೇಶ ಎಲ್ಲಿಂದ ಬರುತ್ತಿದೆ ಎಂದೂ ಗೊತ್ತಿರುವುದಿಲ್ಲ! ಆರೆಸ್ಸೆಸ್ ಕುರಿತು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್ಸಿನಂತ ಪಕ್ಷಗಳು, ಅಥವಾ ಕಾರ್ಯಕರ್ತರ ಆಧಾರದಲ್ಲಿ ನಿಂತಿರುವ ಕಮ್ಯುನಿಸ್ಟ್ ಪಕ್ಷಗಳು ಕೂಡಾ ಹೆಣಗುವುದು ಇದೇ ಕಾರಣಕ್ಕೆ. ಯಾಕೆಂದರೆ, ಎಲ್ಲಾ ಪಕ್ಷಗಳಲ್ಲೂ ಆರೆಸ್ಸೆಸ್ ನಿಷ್ಟರು ಆಳವಾಗಿ ಕುಳಿತಿದ್ದು, ಅವರನ್ನು ಅದು ತನ್ನ ಹಿತಾಸಕ್ತಿಗಾಗಿ “ಬಳಸಿ”ಕೊಳ್ಳುತ್ತಿದೆ.

ಅದು ಬಳಸುವ ಪಾರಿಭಾಷಿಕ ಪದಗಳನ್ನು ಪರಿಶೀಲಿಸಿ ನೋಡಿ. ಸಾಮಾಜಿಕ “ಸಾಮರಸ್ಯ” ಎಂಬ ಪದವನ್ನು ಸಾಮಾಜಿಕ “ಸಮಾನತೆ”ಗೆ ಪರ್ಯಾಯ ಪದವಾಗಿ ಬಳಸುತ್ತದೆ. ನಿಜವಾದ ಸಮಾನತೆಗೆ ಜಾತಿ ಶ್ರೇಣೀಕರಣದ ನಿರ್ಮೂಲನ ಮತ್ತು ಸಂಪನ್ಮೂಲಗಳ ಮರುಹಂಚಿಕೆ ಅಗತ್ಯವಿದೆ. ಅದುವೇ ಪ್ರಜಾಪ್ರಭುತ್ವದ ಹೋರಾಟ. ಆದರೆ, ಆರೆಸ್ಸೆಸ್ಸಿಗೆ ಬೇಕಾದುದು ಅಸಮಾನತೆಗಳನ್ನು ಸಹಿಸಿಕೊಂಡು, ಮೇಲ್ಜಾತಿ ಪ್ರಾಬಲ್ಯವನ್ನು ಒಪ್ಪಿಕೊಂಡ ಸಾಮಾಜಿಕ ಸಾಮರಸ್ಯ. ವಿಭಿನ್ನ ಜಾತಿಗಳು ತಮ್ಮ ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಮೇಲುಕೀಳಿನ ಜಾತಿವ್ಯವಸ್ಥೆಗಳಲ್ಲೇ ಶಾಂತಿಯುತವಾಗಿ ಬದುಕಲು, ಗಣ್ಯ ಪ್ರಾಬಲ್ಯವನ್ನು ಸವಾಲು ಮಾಡದೆ, ಈಗಿರುವ ಸ್ಥಾನದಲ್ಲೇ ಪರಸ್ಪರಿಗೆ “ಅರ್ಹ” ಗೌರವವನ್ನು ನೀಡುವ “ಸಮರಸ”ದ ಜೀವನವನ್ನು ಅದು ಪ್ರತಿಪಾದಿಸುತ್ತದೆ. ಅಂದರೆ, ಕರಾವಳಿಯಲ್ಲಿ ನನ್ನ ಅನುಭವದಂತೆ- “ಗೌಡರು ದಲಿತರಿಗೆ ಬಡಿಯಿರಿ, ಬ್ರಾಹ್ಮಣರ ಎದುರು ನಿಲ್ಲಬೇಡಿ. ಶೆಟ್ರು ಬಿಲ್ಲವರನ್ನು ಬಡಿಯಿರಿ, ನಾವು ನಿಮಗೆ ನಮ್ಮ ನಂತರದ ಸ್ಥಾನ ಕೊಡುತ್ತೇವೆ. ಬಿಲ್ಲವರೇ, ನಮ್ಮ ಮಾರ್ಗದರ್ಶನದಲ್ಲಿ ಶೆಟ್ರಿಗೆ ಹೆಚ್ಚು ಹಾರಲು ಬಿಡಬೇಡಿ. ಅವರಿಗಿಂತಲೂ ನೀವು ಬೀರರು…ಎಲ್ಲರೂ ಸೇರಿ ಮುಸ್ಲಿಮರಿಗೆ ಬಡಿಯಿರಿ… ನಾವು ಬ್ರಾಹ್ಮಣರು… ಹಿಂದೂ ಧರ್ಮದ ಪ್ರಕಾರ ನಮಗೆ ಹೊಡೆದರೆ…. ಗೊತ್ತುಂಟಲ್ಲಾ? ಪಾಪ..ನರಕ..” ಇದು ಆಳವಾಗಿ ಕರಾವಳಿಯಲ್ಲಿ ಸೇರಿಹೋಗಿರುವ ಆರೆಸ್ಸೆಸ್ ಚಿಂತನೆ. ಭಾರತೀಯ “ಸಾಮರಸ್ಯ”! ಆದರೂ, ಈ “ಸಾಮರಸ್ಯ” ಕೂಡಾ ಎಲ್ಲಾ ಭಾರತೀಯರಿಗೆ, ಹಿಂದೂಯೇತರರಿಗೆ ವಿಸ್ತರಿಸುವುದಿಲ್ಲ.

ಸಾಮರಸ್ಯದ ಮಾತಾಡುವ, ಆದರೆ ಧರ್ಮ, ಜಾತಿ ಆಧಾರಿತ ಹಿಂಸೆಯನ್ನು ಬ್ರಾಹ್ಮಣ ರಕ್ಷಣೆಯ ಗುರಿ ಸಾಧನೆಗೆ ಬಳಸುವ ಆರೆಸ್ಸೆಸ್ಸಿನ “ಹಿಂದೂ” ಅಥವಾ “ಹಿಂದೂತ್ವ” ಎಂಬ ವ್ಯಾಖ್ಯಾನವೇ ಗೊಂದಲಗಳಿಂದ ಕೂಡಿದೆ. “ಬ್ರಾಹ್ಮಣರು ಹಿಂದೂಗಳಲ್ಲ” ಎಂಬ ಪೇಜಾವರದ ಆರೆಸ್ಸೆಸ್ ವಿಚಾರಾಧೀನ ದಿವಂಗತ ಮಠಾಧೀಶರ ಪ್ರಸಿದ್ಧ ಹೇಳಿಕೆಯ ಹಿನ್ನೆಲೆಯಲ್ಲಿ ಈ ಕುರಿತು ಮುಂದೆ ನೋಡೋಣ.

You cannot copy content of this page

Exit mobile version