ಹಾಸನ : ಹಾಸನದಲ್ಲಿ ಘನಘೋರ ದುರಂತ ಸಂಭವಿಸಿದೆ. ಯಮನಂತೆ ಬಂದ ಟ್ರಕ್ 10 ಯುವಕರನ್ನು ಬಲಿ ಪಡೆದಿದೆ. ಸರ್ಕಾರ (Government) ಪರಿಹಾರ ನೀಡಲು ಚೌಕಾಶಿ ಮಾಡುತ್ತಿದೆ. ಇದರ ಮಧ್ಯೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸುದ್ದಿಗೋಷ್ಠಿ ನಡೆಸಿದ್ದು, ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ದೇವೇಗೌಡರು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ರು. ಬಳಿಕ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ‘ನಾನು ಆಡಳಿತವನ್ನು ದೂಷಿಸಲು ಹೋಗಲ್ಲ. ಪೊಲೀಸರು ಸ್ವಲ್ಪ ಜಾಗರೂಕರಾಗಿರಬೇಕಿತ್ತು. ನಾನು ರಾಜಕೀಯ ಬೆರೆಸಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆ ಮೃತರ ಮನೆಗಳಿಗೆ ಹೋಗಿ ಕುಟುಂಬಸ್ಥರೊಂದಿಗೆ ಚರ್ಚಿಸಿದ್ದೇವೆ ಎಂದು ದೇವೇಗೌಡರು ಹೇಳಿದ್ದಾರೆ. ಮುಖ್ಯಮಂತ್ರಿಗಳು 5 ಲಕ್ಷ ನೀಡಿದ್ದಾರೆ ಎಂದು ಗುರುತಿಸಿದ್ದಾರೆ. ಇನ್ನೂ ಹೆಚ್ಚು ಕೊಡಬೇಕು ಎಂದು ಕೆಲವರ ಅಭಿಪ್ರಾಯವಿದೆ ಎಂದಿದ್ದು, ಆದರೆ, ರಾಜ್ಯದಲ್ಲಿ ರಸ್ತೆ ಅಪಘಾತಗಳು ಪ್ರತಿನಿತ್ಯ ಆಗುತ್ತಲೇ ಇರುತ್ತವೆ. ನಾನಾ ಕಾರಣಗಳಿಗೆ ಅಪಘಾತಗಳು ಆಗುತ್ತಿವೆ. ಅದರ ಮಾಹಿತಿಯನ್ನು ಇಟ್ಟುಕೊಂಡು ಮಾತನಾಡುತ್ತಿದ್ದೇನೆ. ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಚಿಂತೆ ವ್ಯಕ್ತಪಡಿಸಿದ್ದಾರೆ.
‘ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿ’
‘ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿ. ನೆರೆ ರಾಜ್ಯದವರಿಗೆ ಹೆಚ್ಚು ಪರಿಹಾರ ನೀಡಿದ್ದೀರಿ. ಹಾಸನದಲ್ಲಿ ಬಡ ಕುಟುಂಬದ ಮಕ್ಕಳು ಸಾವನ್ನಪ್ಪಿದ್ದಾರೆ. ಆದ್ದರಿಂದ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿ’ ಎಂದು ರಾಜ್ಯ ಸರ್ಕಾರಕ್ಕೆ ದೇವೇಗೌಡರು ಒತ್ತಾಯಿಸಿದ್ದಾರೆ.
‘JDSನಿಂದ 1 ಲಕ್ಷ ಪರಿಹಾರ ನೀಡುತ್ತೇವೆ’
ಮೊಸಳೆ ಹೊಸಳ್ಳಿಯಲ್ಲಿ ಅಪಘಾತ ಪ್ರಕರಣದ ಬಗ್ಗೆ ಖೇದ ವ್ಯಕ್ತಪಡಿಸಿದ ದೇವೇಗೌಡ್ರು, ‘ಮೃತರ ಕುಟುಂಬಕ್ಕೆ ತಲಾ 1 ಲಕ್ಷ ಪರಿಹಾರ ನೀಡುತ್ತೇವೆ. JDSನಿಂದ 1 ಲಕ್ಷ ಪರಿಹಾರ ಕೊಡುತ್ತೇವೆ. ಗಾಯಾಳುಗಳಿಗೆ JDSನಿಂದ ಹಣಕಾಸು ನೆರವು ಸಿಗಲಿದೆ. ಗಂಭೀರವಾಗಿ ಗಾಯಗೊಂಡವರಿಗೆ 25 ಸಾವಿರ ನೀಡುತ್ತೇವೆ. ಮಧ್ಯಮ ಗಾಯಾಳುಗಳಿಗೆ 20 ಸಾವಿರ ಕೊಡುತ್ತೇವೆ. ಸಣ್ಣಪುಟ್ಟ ಗಾಯಾಳುಗಳಿಗೆ 15 ಸಾವಿರ ನೆರವು ನೀಡುತ್ತೇವೆ’ ಎಂದು ದೇವೇಗೌಡರು ಹೇಳಿದ್ದಾರೆ.
‘ನನ್ನ ಕೆಲಸ ಮುಗಿದಿಲ್ಲ, ಇನ್ನೂ ಬಾಕಿ ಇದೆ’
‘ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿಲ್ಲ. ನನ್ನ ಕೆಲಸ ಮುಗಿದಿಲ್ಲ, ಇನ್ನೂ ಬಾಕಿ ಇದೆ’ ಎಂದು ಮಾಜಿ ಪ್ರಧಾನಿ H.D.ದೇವೇಗೌಡ ಹೇಳಿದ್ದಾರೆ. ‘ನಾನು ಸಂಕಲ್ಪ ಮಾಡಿರೋದ್ರಿಂದ ಶಕ್ತಿ ಬಂದಿದೆ. ಶಕ್ತಿ ಇರುವವರೆಗೆ ಹೋರಾಟ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.