ಸಿಎಂ ಸಿದ್ದರಾಮಯ್ಯ ನಾನು ಒಟ್ಟಿಗೆ ಕೆಲಸ ಮಾಡಿದ್ದೇವೆ: ಹೆಚ್.ಡಿ. ದೇವೇಗೌಡ
ಹಾಸನ : ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೆ ಕೆಲಸ ಮಾಡಿದ್ದೇವೆ. ಇಂದು ನಾವು ಬೇರೆ ಪಕ್ಷಗಳಲ್ಲಿ ಇದ್ದರೂ, ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಒಗ್ಗಟ್ಟಿನಿಂದ ನಡೆಯುವುದು ಅವಶ್ಯಕ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸ್ಪಷ್ಟಪಡಿಸಿದರು.
ದುಃಖದ ಮನೆಗಳಿಗೆ ಸಾಂತ್ವಾನ : ನಗರ ಪ್ರವಾಸದ ಆರಂಭದಲ್ಲಿ ಇತ್ತೀಚಿನ ದುರಂತದಲ್ಲಿ ಸಾವಿಗೀಡಾದ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವಾನ ಸೂಚಿಸಿದ ದೇವೇಗೌಡರು, ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. “93ನೇ ವಯಸ್ಸಿನಲ್ಲಿರುವ ನಾನು ರಾಜಕೀಯ ಲಾಭಕ್ಕಾಗಿ ಮಾತನಾಡುವುದಿಲ್ಲ. 65 ವರ್ಷಗಳ ರಾಜಕೀಯ ಜೀವನದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಶಕ್ತಿಮೀರಿ ಹೋರಾಟ ಮಾಡಿದ್ದೇನೆ. ಜನರ ಒಳಿತಿನ ವಿಷಯದಲ್ಲಿ ರಾಜಕೀಯ ಮಾಡುವುದು ತಕ್ಕುದಲ್ಲ” ಎಂದು ಹೇಳಿದರು.
ಹೆದ್ದಾರಿ ಯೋಜನೆಗೆ ಕೇಂದ್ರದ ನೆರವು ಅಗತ್ಯ : ಬೆಂಗಳೂರು, ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ಮುಗಿದಿರುವುದನ್ನು ಉಲ್ಲೇಖಿಸಿದ ಅವರು, “ಉಳಿದ ಕಾಮಗಾರಿಗಾಗಿ ಅಗತ್ಯವಿರುವ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಹೈದರಾಬಾದ್ ? ಬೆಂಗಳೂರು ರಸ್ತೆಯೂ ಪೂರ್ತಿಯಾಗಬೇಕು. ಈ ಮೂರು ಪ್ರಮುಖ ರಸ್ತೆಗಳು (ಚೆನ್ನೈ, ಬೆಂಗಳೂರು, ಹೈದರಾಬಾದ್?ಬೆಂಗಳೂರು, ಶಿರಾಡಿಘಾಟ್) ಸಂಪೂರ್ಣವಾದರೆ ರಾಜ್ಯದ ಅಭಿವೃದ್ಧಿಗೆ ದೊಡ್ಡ ದಾರಿ ತೆರೆದುಕೊಳ್ಳುತ್ತದೆ” ಎಂದು ಅಭಿಪ್ರಾಯಪಟ್ಟರು. ಆಸ್ಕರ್ ಫರ್ನಾಂಡಿಸ್ ಅವರ ಕಾಲದಲ್ಲಿ 10 ಕಿಲೋಮೀಟರ್ ಉದ್ದದ ಸುರಂಗ ನಿರ್ಮಾಣದ ಮನವಿ ಮಾಡಿದ್ದೆ. ಆದರೆ ಇನ್ನೂ ಅದು ಆಗಿಲ್ಲ. ಈಗ ಬೆಟ್ಟಗಳು ನಿರಂತರ ಕುಸಿಯುತ್ತಿವೆ. ಇದಕ್ಕೆ ಶಾಶ್ವತ ಪರಿಹಾರವೆಂದರೆ ಸುರಂಗ ನಿರ್ಮಾಣ. ಸುರಂಗ ನಿರ್ಮಾಣ ಮಾಡಿದ ನಂತರ ಮರಗಳನ್ನು ನೆಡಿಸಿ ಅರಣ್ಯವನ್ನೂ ಬೆಳೆಸಬಹುದು. ಆದಷ್ಟು ಬೇಗ ಈ ಕೆಲಸ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು” ಎಂದು ಒತ್ತಾಯಿಸಿದರು.
ಜಲಸಂಪನ್ಮೂಲದ ಬಗ್ಗೆ ಎಚ್ಚರಿಕೆ: ಈ ವರ್ಷ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿವೆ. ಆದರೆ ಯಾವಾಗಲೂ ಹೀಗಾಗುವುದಿಲ್ಲ. ಮುಂದಿನ ದಿನಗಳಲ್ಲಿ ಬರ ಎದುರಾಗಬಹುದು. ಮಹದಾಯಿ ಯೋಜನೆ ಕುರಿತು ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಕಾವೇರಿ ಹಾಗು ಮಹದಾಯಿ ಅಚ್ಚುಕಟ್ಟು ಪ್ರದೇಶದ ಕೃಷಿ ಉಳಿಸಿಕೊಳ್ಳಲು ನೀರಿನ ಲಭ್ಯತೆ ಖಚಿತವಾಗಬೇಕು ಎಂದು ದೇವೇಗೌಡ ಹೇಳಿದರು.
ಅವರು ಬೆಂಗಳೂರಿನ ನೀರಿನ ಅವಶ್ಯಕತೆ ಕುರಿತೂ ಮಾತನಾಡಿ, “ಪ್ರಸ್ತುತ ನಗರಕ್ಕೆ ವರ್ಷಕ್ಕೆ 30 ಟಿಎಂಸಿ ನೀರು ಬೇಕಾಗಿದೆ. ಜನಸಂಖ್ಯೆ ಏರಿಕೆಯಿಂದ ಬೇಡಿಕೆ ಶೀಘ್ರದಲ್ಲೇ 50 ಟಿಎಂಸಿಗೆ ಏರಲಿದೆ. ಆದ್ದರಿಂದ ಕಾವೇರಿ ನೀರನ್ನು ಉಳಿಸಿಕೊಳ್ಳಲು ಗಂಭೀರ ಕ್ರಮ ಅಗತ್ಯ” ಎಂದು ಎಚ್ಚರಿಸಿದರು. ಪ್ರಸ್ತುತ ಬೆಂಗಳೂರಿನ ಕೊಳಚೆ ನೀರನ್ನು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಇದರಿಂದ ಅಲ್ಲಿನ ಬೆಳೆಗಳಿಗೆ ಹಾನಿಯಾಗಿದೆ. ಇದರ ಕುರಿತ ವರದಿಯನ್ನು ತರಿಸಿಕೊಂಡು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇನೆ” ಎಂದು ಹೇಳಿದರು.
ರಾಜಕೀಯ ನಿವೃತ್ತಿ ಇಲ್ಲ : ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ದೇವೇಗೌಡರು, “ಇನ್ನೂ 11ತಿಂಗಳು ರಾಜ್ಯಸಭಾ ಅವಧಿ ಉಳಿದಿದೆ. ಆದರೆ ಅವಧಿ ಮುಗಿದ ಮೇಲೂ ನಾನು ಹೋರಾಟ ನಿಲ್ಲಿಸುವುದಿಲ್ಲ. ಅಗತ್ಯವಿದ್ದರೆ ವೀಲ್‌ಚೇರ್‌ನಲ್ಲಿಯೇ ಸಂಸತ್ತಿಗೆ ಹೋಗುವ ಶಕ್ತಿ ನನ್ನಲ್ಲಿದೆ. ನನ್ನ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ಆದರೂ ರಾಜ್ಯದ ಹಿತಕ್ಕಾಗಿ ಹೋರಾಡುವ ಮನೋಬಲ ನನಗಿದೆ” ಎಂದು ಧ್ವನಿಮಾಡಿದರು.
ಮೋದಿ ಬಗ್ಗೆ ಮೆಚ್ಚುಗೆ : ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಮಾತನಾಡಿದ ದೇವೇಗೌಡರು, “ಮೋದಿ ಅವರು ತಮ್ಮ ಅವಧಿಯನ್ನು ಸಂಪೂರ್ಣವಾಗಿ ಮುಗಿಸುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ. ನಮ್ಮ ಸಂಬಂಧ ಮೈತ್ರಿ ಬಳಿಕ ಆರಂಭವಾದುದಲ್ಲ. ಕಳೆದ 10 ವರ್ಷಗಳಿಂದ ನಾವು ಪರಸ್ಪರ ಗೌರವದಿಂದ ಇದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ಮೋದಿ ಅವರು ಸದಾ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ” ಎಂದು ಪ್ರಶಂಸಿಸಿದರು. ಜಿಲ್ಲೆಯ ಹಿಂದುಳಿತ ಸ್ಥಿತಿಯನ್ನು ಉಲ್ಲೇಖಿಸಿದ ಅವರು, “ಇಂದು ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳಿವೆ. ಆದರೆ ಹಾಸನದಲ್ಲಿ ಮಾತ್ರ ಇನ್ನೂ ಆಗಿಲ್ಲ. ಕೈಗಾರಿಕಾ ಕಾರಿಡಾರ್ ವಿಸ್ತರಣೆ ನಡೆದರೆ ಜಿಲ್ಲೆಯ ಜನತೆಗೆ ಮಹತ್ವದ ಪ್ರಯೋಜನವಾಗಬಹುದು. ಹಾಸನದ ಜನರ ಹಿತಕ್ಕಾಗಿ ನನ್ನ ಹೋರಾಟ ಮುಂದುವರಿಯುತ್ತದೆ” ಎಂದು ಹೇಳಿದರು. ಅಭಿವೃದ್ಧಿ, ಜಲಸಂಪನ್ಮೂಲ, ಪರಿಸರ, ಪಶ್ಚಿಮಘಟ್ಟದ ಸಮಸ್ಯೆಗಳು, ರಾಜಕೀಯ ಭವಿಷ್ಯ ಮುಂತಾದ ವಿಷಯಗಳ ಕುರಿತಂತೆ ದೇವೇಗೌಡರು ತಮ್ಮ ನಿಲುವು ಸ್ಪಷ್ಟಪಡಿಸಿದರು. “ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ” ಎಂಬ ಅವರ ಸಂದೇಶ ಜಿಲ್ಲೆಯಲ್ಲಿ ಭರವಸೆ ಮೂಡಿಸಿದೆ. ಇದೆ ವೇಳೆ ಶಾಸಕರಾದ ಎಚ್.ಪಿ. ಸ್ವರೂಪ್, ಮಾಜಿ ಶಾಸಕ ಲಿಂಗೇಶ್, ಜೆಡಿಎಸ್ ನಾಯಕರು ಹೆಚ್.ಕೆ. ಕುಮಾರಸ್ವಾಮಿ, ಎಸ್. ದ್ಯಾವೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.