ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪತ್ರಕರ್ತರ ಹಕ್ಕುಗಳನ್ನು ಕಸಿಯುತ್ತಿದೆ, ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂಬ ಆರೋಪದ ನಡುವೆಯೇ ಈಗ ಬಿಜೆಪಿ ವಿರುದ್ಧ ವರದಿ ಮಾಡಿದ ಹಿನ್ನೆಲೆಯಲ್ಲಿ ಪತ್ರಕರ್ತರೊಬ್ಬರ ಮೇಲೆ 11 ಎಫ್ಐಆರ್ ದಾಖಲಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರು ಮಹಿಳೆಯೊಬ್ಬಳ ಜೊತೆಗಿದ್ದರೆನ್ನಲಾದ ವಿವಾದಿತ ವೀಡಿಯೊ ಹಲವು ಸದ್ದು ಮಾಡಿದೆ. ಮಧ್ಯಪ್ರದೇಶ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರಿಗೆ ಸಂಬಂಧಿಸಿದ ವಿಡಿಯೋ ಬಗ್ಗೆ ಅವರ ಹೆಸರನ್ನೂ ಉಲ್ಲೇಖಿಸದೇ ವರದಿ ಮಾಡಲಾಗಿತ್ತು.
ಈ ಬಗ್ಗೆ ಮಧ್ಯಪ್ರದೇಶ ಮೂಲದ ದೈನಿಕ್ ಖುಲಾಸಾ ಪತ್ರಿಕೆಯ ವರದಿಗಾರ ಜಲಂ ಸಿಂಗ್ ಕಿರಾರ್ ಅವರು ಸೆ. 7 ರಂದು ಮಹಿಳೆಯೊಬ್ಬಳ ಜೊತೆಗಿದ್ದರೆನ್ನಲಾದ ವಿವಾದಿತ ವೀಡಿಯೊದ ಬಗ್ಗೆ ಉಲ್ಲೇಖಿಸಿ ಬರೆಯಲಾಗಿತ್ತು.
ಆದರೆ ವರದಿಗಾರ ಜಲಂ ಸಿಂಗ್ ಕಿರಾರ್ ಅವರು ಎಲ್ಲೂ ಸಹ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಅವರ ಹೆಸರನ್ನು ನೇರವಾಗಿ ಎಲ್ಲೂ ಸಹ ಉಲ್ಲೇಖಿಸಿ ಬರೆದಿರಲಿಲ್ಲ. ವಿವಾದಿತ ವೀಡಿಯೊ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜಕಾರಣಿಯೊಬ್ಬರಿಗೆ ಗುನಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ ಎಂದು ಬರೆಯಲಾಗಿತ್ತು.
ವರದಿ ಮಾಡಿದ ಬೆನ್ನಲ್ಲೇ ವರದಿಗಾರ ಜಲಂ ಸಿಂಗ್ ಕಿರಾರ್ ಮೇಲೆ 11 ಎಫ್ಐಆರ್ ದಾಖಲಾಗಿದೆ. ಬೇರೆ ಮೂರನೇ ವ್ಯಕ್ತಿಗಳ ಹೆಸರಿನಲ್ಲಿ ಬ್ಲಾಕ್ ಮೇಲ್, ಸುಲಿಗೆ, ಫೋರ್ಜರಿ ಇತರೆ ಆರೋಪಗಳನ್ನು ಹೊರಿಸಿ ಅವರ ವಿರುದ್ಧ ಒಂದರ ಹಿಂದೆ ಒಂದರಂತೆ ಪ್ರಕರಣ ದಾಖಲಿಸಲಾಗಿದೆ.
ವರದಿಯಲ್ಲಿ ಯಾವುದೇ ರಾಜಕಾರಣಿಗಳ ಹೆಸರನ್ನೂ ಉಲ್ಲೇಖಿಸದಿದ್ದರೂ ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಿ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ ಎಂದು ದೈನಿಕ್ ಖುಲಾಸಾ ಪತ್ರಿಕೆಯ ಸಂಪಾದಕ ಸುರೇಶ್ ಆಚಾರ್ಯ ವಾದಿಸಿದ್ದಾರೆ. ಸಚಿವರೊಬ್ಬರು, ಸಿಂಗ್ ವಿರುದ್ಧ ಇತರಿಂದ ಬಹುಸಂಖ್ಯೆಯ ದೂರುಗಳು ದಾಖಲಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಒಂದು ಕಡೆ ನರೇಂದ್ರ ಮೋದಿ ಅಮೇರಿಕಾ ಸಂಸತ್ತಿನಲ್ಲಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಯಾವುದೇ ದಕ್ಕೆ ಆಗಿಲ್ಲ ಎಂದು ಪ್ರತಿಪಾದಿಸಿದರೆ, ಇನ್ನೊಂದು ಕಡೆ ಅವರದೇ ಪಕ್ಷದ ಸಚಿವರೊಬ್ಬರು ಪತ್ರಕರ್ತರ ಮೇಲೆ ಈ ರೀತಿಯಲ್ಲಿ ಸ್ವಾತಂತ್ರ್ಯ ಕಸಿಯುವ ಕೆಲಸಕ್ಕೆ ಮುಂದಾಗಿದ್ದು ವಿಪರ್ಯಾಸವೇ ಸರಿ ಎಂದು ಹಲವು ಪತ್ರಿಕೆಗಳು ಇದನ್ನು ಖಂಡಿಸಿ ವರದಿ ಮಾಡಿವೆ.