Home ವಿದೇಶ ತರಗತಿಗಳು ನಡೆಯುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ. 22 ವಿದ್ಯಾರ್ಥಿಗಳು ಸಾವು!

ತರಗತಿಗಳು ನಡೆಯುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ. 22 ವಿದ್ಯಾರ್ಥಿಗಳು ಸಾವು!

0

ನೈಜೀರಿಯಾ, ಜುಲೈ 13: ನೈಜೀರಿಯಾದಲ್ಲಿ ಶುಕ್ರವಾರ (ಜುಲೈ 12) ಭೀಕರ ಅಪಘಾತ ಸಂಭವಿಸಿದೆ. ಉತ್ತರ-ಮಧ್ಯ ನೈಜೀರಿಯಾದಲ್ಲಿ ಎರಡು ಅಂತಸ್ತಿನ ಶಾಲಾ ಕಟ್ಟಡವು ಇದ್ದಕ್ಕಿದ್ದಂತೆ ಕುಸಿದಿದೆ.

ತರಗತಿ ವೇಳೆ ಅಪಘಾತ ಸಂಭವಿಸಿದೆ. ಈ ಅವಘಡದಲ್ಲಿ 22 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿದ್ದಾರೆ. ಅವಶೇಷಗಳಡಿ ಸಿಲುಕಿರುವ ವಿದ್ಯಾರ್ಥಿಗಳನ್ನು ಹೊರತರಲು ರಕ್ಷಣಾ ತಂಡ ಮತ್ತು ಭದ್ರತಾ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ. ಬುಸಾ ಬುಜಿ ಸಮುದಾಯದ ಸೇಂಟ್ಸ್ ಅಕಾಡೆಮಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು 15 ವರ್ಷದೊಳಗಿನವರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬುಸಾ ಬುಜಿ ಸಮುದಾಯದ ಸೇಂಟ್ಸ್ ಅಕಾಡೆಮಿ ಕಾಲೇಜಿನಲ್ಲಿ ತರಗತಿಗಳು ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಶಾಲಾ ಕಟ್ಟಡವು ಕುಸಿದಿದೆ. ಒಟ್ಟು 154 ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿದ್ದಾರೆ. ಅವರಲ್ಲಿ 132 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ವಕ್ತಾರ ಆಲ್ಫ್ರೆಡ್ ಅಲಾಬೊ ತಿಳಿಸಿದ್ದಾರೆ. ಎಲ್ಲಾ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಈ ಅಪಘಾತದಲ್ಲಿ ಇಲ್ಲಿಯವರೆಗೆ 22 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ನೈಜೀರಿಯಾದ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಶಾಲಾ ಕಟ್ಟಡ ಕುಸಿದ ನಂತರ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿದರು. ಮಕ್ಕಳಿಗಾಗಿ ಅಳಲು ತೋಡಿಕೊಂಡ ವಿದ್ಯಾರ್ಥಿಗಳ ಪಾಲಕರು ಪಾಳು ಬಿದ್ದ ಜಾಗಕ್ಕೆ ಹೋಗಲು ಯತ್ನಿಸಿದ್ದು, ಅಧಿಕಾರಿಗಳು ತಡೆದರು. ರಕ್ಷಣಾ ತಂಡವು ಅಗೆಯುವ ಯಂತ್ರಗಳ ಸಹಾಯದಿಂದ ಅವಶೇಷಗಳಡಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ನಿರತವಾಗಿದೆ.

ನೈಜೀರಿಯಾ ಸರ್ಕಾರವು ದುರಂತಕ್ಕೆ ಸ್ಪಂದಿಸಿದೆ. ಶಾಲೆಯ ದುರ್ಬಲ ರಚನೆ ಮತ್ತು ನದಿ ದಡದಲ್ಲಿದ್ದ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಕೂಡಲೇ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಗುರುತಿಸಿ ಮುಚ್ಚುವಂತೆ ಅಧಿಕಾರಿಗಳಿಗೆ ಸರಕಾರ ಸೂಚಿಸಿದೆ. ಆಫ್ರಿಕಾದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ನೈಜೀರಿಯಾದಲ್ಲಿ ಕಟ್ಟಡ ಕುಸಿತಗಳು ಸಾಮಾನ್ಯವಾಗಿವೆ. ಕಳೆದ ಎರಡು ವರ್ಷಗಳಲ್ಲಿ ಇಂತಹ ಹತ್ತಕ್ಕೂ ಹೆಚ್ಚು ಘಟನೆಗಳು ವರದಿಯಾಗಿವೆ.

You cannot copy content of this page

Exit mobile version