Home ಆರೋಗ್ಯ ವಿವಾಹವಾಗಿ 24 ದಿನಗಳು.. ಗರ್ಭಕ್ಕೆ 36 ದಿನಗಳು-ಇದು ಕೂಡಾ ಸಾಧ್ಯ!

ವಿವಾಹವಾಗಿ 24 ದಿನಗಳು.. ಗರ್ಭಕ್ಕೆ 36 ದಿನಗಳು-ಇದು ಕೂಡಾ ಸಾಧ್ಯ!

0

ಮದುವೆಯ ದಿನಕ್ಕೂ ಗರ್ಭಕ್ಕೂ ಸಂಬಂಧವಿಲ್ಲ. ಮುಟ್ಟು ಬಂದು 12 ದಿನಗಳ ಬಳಿಕವೇ ಅಂಡಾಣು ಬಿಡುಗಡೆಯಾಗುವುದು. ಅಂಡಾಣು ಬಿಡುಗಡೆಯ ಸಂದರ್ಭದಲ್ಲಿ ಮಿಲನಗೊಂಡರೆ ಗರ್ಭ ನಿಲ್ಲುವ ಸಾಧ್ಯತೆ ಇರುವುದು. ಆದರೆ ಗರ್ಭಸ್ಥ ಶಿಶುವಿನ ಬೆಳವಣಿಗೆಯ ದಿನವನ್ನು ತಾಯಿಗೆ ಮುಟ್ಟು ಬಂದ ದಿನದಿಂದ ಲೆಕ್ಕ ಹಾಕಲಾಗುವುದು – ಶೋಭಲತಾ ಸಿ. ಸ್ಟಾಫ್‌ ನರ್ಸ್‌ ಹಾಗೂ ಸಾಮಾಜಿಕ ಕಾರ್ಯಕರ್ತೆ, ಕಾಸರಗೋಡು

  
ಎಂದಿನಂತೆ
ಇಂದೂ ಕರ್ತವ್ಯದಲ್ಲಿ ನಿರತಳಾಗಿರುವಾಗ ನವದಂಪತಿಗಳ ಆಗಮನವಾಯಿತು. ವಿಚಾರಿಸಲು ಸ್ತ್ರೀರೋಗ ತಜ್ಞರನ್ನು ಕಾಣಬೇಕು ಎಂದರು. ಹೆಸರು ನೋಂದಾಯಿಸಿ ಗೈನಾಕಾಲಜಿಸ್ಟ್ ಅವರ ರೂಮಿಗೆ ಕರೆದುಕೊಂಡು ಹೋದೆ. ಡಾಕ್ಟರ್ ಅವರನ್ನು ಮಾತನಾಡಿಸಿದರು. ಮದುವೆಯಾಗಿ 24 ದಿನಗಳು ಮಾತ್ರ. ಆದರೆ ಆಕೆಗೆ ತಿಂಗಳ ಮುಟ್ಟು ಬಂದಿಲ್ಲ. ಸಹಜವಾಗಿ ವೈದ್ಯೆ ಮೂತ್ರ ಪರೀಕ್ಷೆ (ಗರ್ಭಿಣಿಯೋ ಎಂದು ತಿಳಿಯಲು)ಗೆ ಬರೆದು ಕೊಟ್ಟರು. ಲ್ಯಾಬ್ ಗೆ ಕರೆದುಕೊಂಡು ಹೋಗಿ ಮೂತ್ರ ಪರೀಕ್ಷೆ ಮಾಡಲಾಯಿತು. ಪ್ರೆಗ್ನೆನ್ಸಿ ಟೆಸ್ಟ್ ಪಾಸಿಟಿವ್ ಎಂದು ತೋರಿಸಿತು. ಸಂತೋಷ ತುಳುಕಬೇಕಾದ ಅವರ ಮುಖದಲ್ಲಿ ಗಾಬರಿ ತುಳುಕಿದ್ದು ನನ್ನ ಸೂಕ್ಷ್ಮ ಗಮನಕ್ಕೆ ಬಂತು. ನನ್ನ ಗಮನಿಸುವಿಕೆಯನ್ನು  ಅವರಿಗೆ  ತಿಳಿಯದ ಹಾಗೆ ಮುಚ್ಚಿಟ್ಟು ಪರೀಕ್ಷಾ ವರದಿ ಜತೆ ಅವರನ್ನು ಮತ್ತೆ ಡಾಕ್ಟರ್ ಬಳಿ ಕರೆದೊಯ್ದೆ.

ಡಾಕ್ಟರ್ ನಗುಮುಖದಿಂದ ವರದಿ ನೋಡಿ ” ಗರ್ಭ ನಿಂತ ಸೂಚನೆ ಕಾಣಿಸುತ್ತಿದೆ. ನಿಖರವಾಗಿ ಹೇಳಲು ಸ್ಕ್ಯಾನ್ ಮಾಡಬೇಕು” ಅಂದರು. ಸ್ಕ್ಯಾನಿಂಗ್ ಕೊಠಡಿಗೆ ಕರೆದೊಯ್ಯಲಾಯಿತು. ಸ್ಕ್ಯಾನ್ ವರದಿಯಲ್ಲಿ ಗರ್ಭವು ಗರ್ಭಾಶಯದ ಒಳಗೆ ಬೆಳೆಯುತ್ತಿದ್ದು 36 ದಿನಗಳ ಬೆಳವಣಿಗೆ ತೋರಿಸುತ್ತಿದೆ ಎಂದು ಹೇಳಲಾಗಿತ್ತು. ಸ್ಕ್ಯಾನಿಂಗ್ ರಿಪೋರ್ಟ್ ನೊಂದಿಗೆ ಮತ್ತೆ ವೈದ್ಯರ ಕೊಠಡಿಗೆ ಅವರನ್ನು ಕರೆದೊಯ್ಯಲಾಯಿತು. ವೈದ್ಯರು ರಿಪೋರ್ಟ್ ನೋಡಿ “ಗರ್ಭ ನಿಂತಿರುವುದು ದೃಢವಾಗಿದೆ. ಗರ್ಭಕೋಶದಲ್ಲಿಯೇ ಗರ್ಭ ಬೆಳೆಯುತ್ತಿದೆ. 36 ದಿನಗಳ ಬೆಳವಣಿಗೆ ತೋರಿಸುತ್ತಿದೆ. ಹೃದಯ ಬಡಿತ ತಿಳಿಯಲು ಇನ್ನು ಕೆಲವು ದಿನಗಳು ಕಳೆಯಬೇಕು ” ಎಂದರು.

ದಂಪತಿಗಳ ಮುಖ ವಿವರ್ಣವಾಯಿತು. ಡಾಕ್ಟರ್ ಅವರ  ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದಾಗ, ಗಂಡ ” ಸಾಧ್ಯವಿಲ್ಲ ಡಾಕ್ಟರ್, ಮದುವೆಯಾಗಿ 24 ದಿನಗಳು ಮಾತ್ರವಾಗಿರುವುದು. ಇನ್ನೂ ತಿಂಗಳು ತುಂಬಿಲ್ಲ. 36 ದಿನ ಬೆಳವಣಿಗೆಯ ಗರ್ಭ ಇರಲು ಹೇಗೆ ಸಾಧ್ಯ? ನಿಮ್ಮ ಸ್ಕ್ಯಾನಿಂಗ್  ವರದಿ ಸರಿಯಾಗಿಲ್ಲ ” ಏನೇನೋ ತೊದಲ ತೊಡಗಿದ. ಅವರ ಜ್ಞಾನದ ಅರಿವನ್ನು ತಿಳಿದ  ವೈದ್ಯರು ಶಾಂತರಾಗಿ ವಿವರಿಸತೊಡಗಿದರು.

“ಮದುವೆಯ ದಿನಕ್ಕೂ ಗರ್ಭಕ್ಕೂ ಸಂಬಂಧವಿಲ್ಲ. ಮುಟ್ಟು ಬಂದ ಬಳಿಕ ನಿಮ್ಮ ವಿವಾಹವಾಗಿದೆ. ಮುಟ್ಟು ಬಂದು 12 ದಿನಗಳ ಬಳಿಕವೇ ಅಂಡಾಣು ಬಿಡುಗಡೆಯಾಗುವುದು. ಆ ಸಮಯದಲ್ಲಿ ನಿಮ್ಮ ವಿವಾಹ ನಡೆದಿದೆ. ಅಂಡಾಣು ಬಿಡುಗಡೆಯ ಸಮಯದಲ್ಲಿ ನೀವು ಮಿಲನಗೊಂಡಿರುವಿರಿ ತಾನೆ? ಅಂಡಾಣು ಬಿಡುಗಡೆಯ ಸಂದರ್ಭದಲ್ಲಿ ಮಿಲನಗೊಂಡರೆ ಗರ್ಭ ನಿಲ್ಲುವ ಸಾಧ್ಯತೆ ಇರುವುದು. ಆದರೆ ಗರ್ಭಸ್ಥ ಶಿಶುವಿನ ಬೆಳವಣಿಗೆಯ ದಿನವನ್ನು ತಾಯಿಗೆ ಮುಟ್ಟು ಬಂದ ದಿನದಿಂದ ಲೆಕ್ಕ ಹಾಕಲಾಗುವುದು. ಅಂದರೆ, ಇಲ್ಲಿ ನಿಮಗೆ ವಿವಾಹವಾಗಿ 24 ದಿನಗಳು ಮಾತ್ರ ಆಗಿದ್ದರೂ, ನಿಮ್ಮಾಕೆಗೆ ಮುಟ್ಟು ಬಂದು 36 ದಿನಗಳು ಆದುವು. ಅಂದರೆ ಮುಟ್ಟು ಬಂದು 12 ದಿನಗಳಲ್ಲಿ ನಿಮ್ಮ ವಿವಾಹವಾಗಿದೆ. ನಿಮ್ಮ ಮಿಲನವೂ ಆಗಿದೆ. ಅಂದರೆ, ಅಂಡಾಣು ಬಿಡುಗಡೆಯ ಸಾಧ್ಯತೆ ಇರುವ ದಿನಗಳಲ್ಲಿ ನೀವು ಜತೆಗಿದ್ದೀರಿ ತಾನೆ?  ಗರ್ಭದ ಬೆಳವಣಿಗೆಯ ದಿನಗಳು ಮಿಲನದ ದಿನದ ನಂತರದ ಅವಧಿಯಲ್ಲ. ಮುಟ್ಟು ಬಂದ ದಿನದಿಂದಲೇ ಲೆಕ್ಕ ಹಾಕುವುದು ” ಎಂದು ವಿವರಿಸಿದರು. ದಂಪತಿಗಳ ಮುಖದಲ್ಲಿ ಸಮಾಧಾನ ಮೂಡಿತು.

  “ಹಾಗಿದ್ದರೆ, ಮುಂದೆ ತಗೊಳ್ಳಲು ವಿಟಮಿನ್ ಮಾತ್ರೆಗಳನ್ನು ಬರೆಯುತ್ತೇನೆ” ಎಂದರು ವೈದ್ಯೆ. ಎದುರಿಗಿದ್ದ ದಂಪತಿಗಳಲ್ಲಿ ಪತ್ನಿಯ ಬಾಯಿಯಿಂದ ಮಾತುಗಳು ಹೊರಳಿದವು “ಬೇಡ ಡಾಕ್ಟರ್, ನಮಗೆ ಮದುವೆಯಾಗಿ ಇನ್ನೂ ತಿಂಗಳು ಆಗಿಲ್ಲ. ಈಗಲೇ ನಮಗೆ ಮಗು ಬೇಡ. ನಾನು ಮುಂದೆ ಓದಲಿಕ್ಕಿದೆ. ನಾನು ಈಗಲೇ ಮಗು ಹೆತ್ತರೆ ನನ್ನ ಭವಿಷ್ಯಕ್ಕೆ ತೊಂದರೆ. ಹೇಗಾದರೂ ಈ ಗರ್ಭವನ್ನು ತೆಗೆದು ಬಿಡಿ”

ಡಾಕ್ಟರ್ ಅಧೀರರಾದರು.

“ನೋಡಮ್ಮ, ಕಲಿಯುತ್ತಿರುವೆ ಅಂದಿಯಲ್ಲ, ವಿವಾಹವಾಗಿ ದಾಂಪತ್ಯ ಜೀವನ ನಡೆಸುವಾಗ ಚಿಂತಿಸಬಾರದಿತ್ತೇ? ಗರ್ಭ ಧರಿಸದಂತೆ ಗರ್ಭನಿರೋಧಕ ಬಳಸಬಾರದಿತ್ತೆ? ಮೊದಲ ಗರ್ಭ ನಿವಾರಿಸಲು ನನ್ನಿಂದ ಸಾಧ್ಯವಿಲ್ಲ”

ಆಕೆ “ಯಾಕೆ ಡಾಕ್ಟರ್? ಗರ್ಭಕ್ಕೆ 36 ದಿನಗಳ ಬೆಳವಣಿಗೆ ಮಾತ್ರ ತಾನೆ?”

ಡಾಕ್ಟರ್ “ಹೌದಮ್ಮ, 36 ದಿನಗಳ ಗರ್ಭವನ್ನು ಇಲ್ಲದಾಗಿಸಲು ಸಾಧ್ಯ. ಆದರೆ, ನಿನಗಿದು ಚೊಚ್ಚಲ ಗರ್ಭ. ಮುಂದೆ ಮಕ್ಕಳನ್ನು ಹೆರಬೇಕಾದವಳು ನೀನು. ಚೊಚ್ಚಲ ಗರ್ಭವನ್ನು ನಿವಾರಿಸಿದಲ್ಲಿ ಕೆಲವೊಮ್ಮೆ ಮುಂದೆ ನಿನಗೆ ಗರ್ಭ ನಿಲ್ಲಲು ಕಷ್ಟವಾಗಬಹುದು. ನಿಂತರೂ ಗರ್ಭಪಾತ ಸಂಭವಿಸುವ ಸಾಧ್ಯತೆಯೂ ಇದೆ. ಆದುದರಿಂದ ಮೊದಲ ಗರ್ಭವನ್ನು ನಿವಾರಿಸಿ ನಿನ್ನನ್ನು ಕಷ್ಟಗಳ ಕೂಪಕ್ಕೆ ತಳ್ಳಲು ನಾನು ಇಚ್ಛಿಸುವುದಿಲ್ಲ” ಎಂದರು.

ದಂಪತಿಗಳು ” ಸರಿ ಡಾಕ್ಟರ್, ವಿಟಮಿನ್ ಮಾತ್ರೆಗಳನ್ನು ಬರೆದುಕೊಡಿ” ಎಂದರು. ( ವೈದ್ಯರು ಇಲ್ಲಿ ಗರ್ಭ ನಿವಾರಣೆ ಬೇಡ ಎಂದಿದ್ದರೂ ಬೇಡದ ಗರ್ಭವನ್ನು ನಿವಾರಿಸಿಕೊಳ್ಳುವುದು ಹೆಣ್ಣಿನ ಹಕ್ಕು ಎಂಬುದನ್ನು ಮರೆಯುವಂತಿಲ್ಲ.)

ಡಾಕ್ಟರ್ ಬರೆದು ಕೊಟ್ಟ ಪ್ರಿಸ್ಕ್ರಿಪ್ಶನ್ ಹಿಡಿದು ಅವರು ತುಸು ಬೇಸರದಿಂದಲೇ ಹೊರ ನಡೆದರು.‌

ಇಂತಹ ಘಟನೆಗಳು ಆಗೊಂದು ಈಗೊಂದು ನಡೆಯಬಹುದು. ಹೀಗೆ ನಡೆದಾಗಲೆಲ್ಲ ಅದರ ಕೆಟ್ಟಪರಿಣಾಮ ಬೀರುವುದು ಹೆಣ್ಣಿನ ಮೇಲೆ. ಹೆಣ್ಣಿಗೆ ಬೇರೊಂದು ಸಂಬಂಧ ಇತ್ತೆಂಬ ಗುಮಾನಿಯಲ್ಲಿ ಅವರ ದಾಂಪತ್ಯದಲ್ಲಿ ಬಿರುಕು ಮೂಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ನಿಜ ಸಂಗತಿಯನ್ನು ಅರಿತು ವೈದ್ಯರ ಸಲಹೆಯಂತೆ ನಡೆಯುವುದು ಸರಿಯಾದ ನಡೆ.

ಇಂದಿನದು  ತುಂಬಾ ಮುಂದುವರಿದ ವೈಜ್ಞಾನಿಕ ಯುಗ. ಆದರೂ ಕೆಲವು ಜನರು ನಿರ್ಲಕ್ಷ್ಯದಿಂದ ತಮ್ಮ ಜೀವನದ ಸಂತಸದ ಕ್ಷಣಗಳನ್ನು ಇಲ್ಲದಾಗಿಸಿಕೊಳ್ಳುತ್ತಿದ್ದಾರೆ. ದಾಂಪತ್ಯ ಜೀವನದಲ್ಲಿ ರಸನಿಮಿಷಗಳನ್ನು ಅನುಭವಿಸುವ ವೇಳೆಯಲ್ಲಿ ತಮ್ಮ ಭವಿಷ್ಯವನ್ನು ಮರೆತಿರುತ್ತಾರೆ. ವಿದ್ಯಾರ್ಜನೆಯ ಹಂತದಲ್ಲಿರುವ ಹಲವು ವಿದ್ಯಾರ್ಥಿನಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು  ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವುದಿಲ್ಲ. ಹಾಗೆಂದು ವೈವಾಹಿಕ ಜೀವನ ನಡೆಸುವುದು ತಪ್ಪಲ್ಲ.  ವೈವಾಹಿಕ ಜೀವನದಲ್ಲಿ ಗರ್ಭ ಧರಿಸದಂತಿರಲು ಹಲವಾರು ವಿಧಾನಗಳನ್ನು ಸರಕಾರ ಜ್ಯಾರಿಗೆ ತಂದಿದ್ದರೂ, ಅದನ್ನು ಬಳಸದೆ, ಗರ್ಭಪಾತಗೊಳಿಸುವುದು ಸರ್ವೇ ಸಾಮಾನ್ಯವಾಗಿದೆ. 

ಮೊದಲ ಗರ್ಭವನ್ನು ನಿವಾರಿಸಿ ಭಾವೀ  ಜೀವನದಲ್ಲಿ ಮಕ್ಕಳನ್ನು ಪಡೆಯಲು ಕಷ್ಟ ಪಡುವ ಪರಿತಪಿಸುವ ಹಲವು ದಂಪತಿಗಳನ್ನು ಕಾಣಬಹುದು. ಕೆಲವರಿಗೆ ಯಾವ ತೊಂದರೆಗಳೂ ಇಲ್ಲದಿರಬಹುದು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಬಂದು ದಂಪತಿಗಳಿಗೆ ಮಕ್ಕಳ ನಡುವೆ ಅಂತರ ಪಾಲನೆ, ಗರ್ಭನಿರೋಧಕಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಆರೋಗ್ಯಕ್ಕೆ ಹಾನಿಕರವಲ್ಲದ ಗರ್ಭನಿರೋಧಕಗಳ ಲಭ್ಯತೆ ಇದ್ದರೂ ಜನರು ಅದನ್ನು ಬಳಸಿಕೊಳ್ಳಲು ಹಿಂಜರಿಯುತ್ತಿರುವುದು ವಿಷಾದಕರ. ಸರಕಾರ ನೀಡುವ ಮಾಹಿತಿ, ಸವಲತ್ತುಗಳನ್ನು ಬಳಸಿಕೊಂಡು ಕೌಟುಂಬಿಕ ಜೀವನವನ್ನೂ, ಆರೋಗ್ಯವನ್ನೂ ಸುಂದರವಾಗಿಟ್ಟುಕೊಳ್ಳಬಹುದು.

 ನವದಂಪತಿಗಳು ಆರಂಭದಲ್ಲಿ ಮಗು ಬೇಡ ಎಂದು ತೀರ್ಮಾನಿಸುವುದಿದ್ದಲ್ಲಿ, ಅಥವಾ ಇನ್ಯಾವುದೇ ಕಾರಣಕ್ಕೆ ಮಕ್ಕಳು ಬೇಡ ಎಂದು ಬಯಸುತ್ತಿದ್ದಲ್ಲಿ, ಮಕ್ಕಳ ನಡುವೆ ಅಂತರ ಕಾಪಾಡಲು ಖಾಸಗಿ ಆಸ್ಪತ್ರೆಗಳಲ್ಲೂ, ಸರಕಾರಿ ಆರೋಗ್ಯ ಕೇಂದ್ರಗಳಲ್ಲೂ ಮಾಹಿತಿಯನ್ನು ಪಡೆದುಕೊಳ್ಳಬಹುದು. ಸವಲತ್ತುಗಳ ಸದುಪಯೋಗ ಪಡೆದುಕೊಂಡು ಜೀವನವನ್ನು ಆನಂದದಾಯಕ ಗೊಳಿಸಿಕೊಳ್ಳಬಹುದಲ್ಲವೆ?

ಶೋಭಲತಾ ಸಿ

ಸ್ಟಾಫ್‌ ನರ್ಸ್‌ ಹಾಗೂ ಸಾಮಾಜಿಕ ಕಾರ್ಯಕರ್ತೆ, ಕಾಸರಗೋಡು

You cannot copy content of this page

Exit mobile version