ಉತ್ತರಾಖಂಡದ ಸಿಲ್ಕ್ಯಾರಾದಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಗುರುವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಹೊರತರುವ ನಿರೀಕ್ಷೆಯಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಬುಧವಾರ ಸಂಜೆಯಿಂದಲೇ ಹೊಸ ಅತ್ಯಾಧುನಿಕ ತಂತ್ರಜ್ಞಾನದ ಡ್ರಿಲ್ಲಿಂಗ್ ಮಷಿನ್ ನಿಂದ ಕಾರ್ಮಿಕರಿಗೆ ಸಮೀಪಿಸುವ ಕಾರ್ಯ ಭರದಿಂದ ಸಾಗಿದೆ.
ಕಮಾಂಡೆಂಟ್ ನೇತೃತ್ವದ 15 ಜನರ ಎನ್‌ಡಿಆರ್‌ಎಫ್ ತಂಡವು ಕಳೆದ 10 ದಿನಗಳಿಂದ ಕುಸಿದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಹೊರತೆಗೆಯಲು ಕಾರ್ಯ ನಿರ್ವಹಿಸುತ್ತಿದೆ. ಕಾರ್ಮಿಕರು ಸಿಲುಕಿರುವ ಅವಶೇಷಗಳ ಇನ್ನೊಂದು ಬದಿಗೆ ಪೈಪ್ ಮೂಲಕ ಹೇಗೆ ಹೋಗುತ್ತಾರೆ ಎಂಬುದರ ಕುರಿತು ಎನ್‌ಡಿಆರ್‌ಎಫ್ ಜವಾನರು ಅಣಕು ಡ್ರಿಲ್ ನಡೆಸಿದ್ದಾರೆ ಎಂದು ಎನ್‌ಡಿಆರ್‌ಎಫ್ ಸೆಕೆಂಡ್ ಇನ್ ಕಮಾಂಡ್ ರವಿಶಂಕರ್ ಬಧಾನಿ ಪಿಟಿಐಗೆ ತಿಳಿಸಿದ್ದಾರೆ.
41 ಜನ ಕಾರ್ಮಿಕರ ರಕ್ಷಣೆಯ ನಂತರ ರಾಜ್ಯಕ್ಕೆ ಸೇರಿದ ಕಾರ್ಮಿಕರನ್ನು ಏರ್‌ಲಿಫ್ಟ್ ಮಾಡಲು ಜಾರ್ಖಂಡ್ ಸರ್ಕಾರ ಯೋಜಿಸಿದೆ. ಜಾರ್ಖಂಡ್ ಗೆ ಸೇರಿದ ಸುಮಾರು 15 ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದಾರೆ. ರಕ್ಷಣಾ ಸ್ಥಳದಲ್ಲಿ ಹಾಜರಿದ್ದ ಜಾರ್ಖಂಡ್ ಕಾರ್ಮಿಕ ಇಲಾಖೆಯ ಅಧಿಕಾರಿಯೊಬ್ಬರು ಪಿಟಿಐಗೆ ರಾಜ್ಯ ಸರ್ಕಾರವು ತಮ್ಮ ರಾಜ್ಯಕ್ಕೆ ಸೇರಿದ ಕಾರ್ಮಿಕರನ್ನು ವಿಮಾನದಲ್ಲಿ ಕರೆತರಲು ಯೋಜಿಸಿದೆ ಎಂದು ತಿಳಿಸಿದ್ದಾರೆ. ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಉತ್ತರಕಾಶಿಯ ಚಿಲ್ಯಾನಿಸೌರ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗುವುದು, ಅಲ್ಲಿ 41 ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ಹೊಂದಿರುವ ಪ್ರತ್ಯೇಕ ವಾರ್ಡ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಉತ್ತರಕಾಶಿ ಸುರಂಗ ಕುಸಿತದ ದುರ್ಘಟನೆ ನಂತರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ದೇಶದಾದ್ಯಂತ ನಿರ್ಮಾಣ ಹಂತದಲ್ಲಿರುವ ಎಲ್ಲಾ 29 ಸುರಂಗಗಳ ಸುರಕ್ಷತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೈಗೊಳ್ಳಲಿದೆ ಎಂದು ಪ್ರಾಧಿಕಾರ ಹೇಳಿದೆ. “ಎನ್‌ಎಚ್‌ಎಐ ಅಧಿಕಾರಿಗಳು, ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ತಜ್ಞರ ತಂಡ ಮತ್ತು ಇತರ ಸುರಂಗ ತಜ್ಞರೊಂದಿಗೆ ಕಾಮಗಾರಿ ಹಂತದಲ್ಲಿರುವ ಸುರಂಗ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ ಮತ್ತು ಈ ಬಗ್ಗೆ ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರೆ” ಎಂದು ಹೇಳಿಕೆ ತಿಳಿಸಿದೆ.