ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಸಲ್ಲಿಕೆಗೆ ದಿನಾಂಕ ನಿಗದಿಯಾಗಿದೆ. ಇದೇ 24 ಶುಕ್ರವಾರದಂದು ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಜನಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಈ ಹಿನ್ನೆಲೆಯಲ್ಲಿ ಜಾತಿ ಜನಗಣತಿ ವರದಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇತ್ತ ದೇಶಾದ್ಯಂತ ಜಾತಿಗಣತಿ ವರದಿ ನಡೆದು ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯ ಕೊಡಿಸುವ ನನ್ನ ನಿರ್ಧಾರ ಅಚಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಷ್ಟೆ ಅಲ್ಲದೆ ಯಾವುದೇ ನಿಖರವಾದ ಯೋಜನೆ ಅನುಷ್ಠಾನಗೊಳ್ಳಲು ಜಾತಿ ಗಣತಿಯ ಅಡಿಯಲ್ಲಿ ನಡೆದ ಈ ವರದಿ ಅತ್ಯಂತ ಅವಶ್ಯಕ. ಈ ಮೂಲಕ ಸಾಮುದಾಯಿಕವಾಗಿ ಸಲ್ಲಬೇಕಾದ ಸರ್ಕಾರದ ವಿವಿಧ ಯೋಜನೆಗಳನ್ನು ಸುಲಭವಾಗಿ ಅನುಷ್ಠಾನಗೊಳಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇನ್ನೊಂದು ಕಡೆ ಜಾತಿಗಣತಿ ವರದಿ ಹೊರತರದಂತೆ ಸರ್ಕಾರಕ್ಕೆ ಮನವಿ ಮಾಡಿದ ಪತ್ರದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಹಿ ಇರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಕ್ಕಲಿಗರ ಒಕ್ಕೂಟದಿಂದ ಹೊರಡಿಸಿದ ಈ ಮನವಿ ಪತ್ರದಲ್ಲಿ ಜಾತಿಗಣತಿಯ ವರದಿ ಹೊರತರಬಾರದು ಎಂದು ಸೂಚಿಸಿದೆ. ಕೇವಲ ಒಕ್ಕಲಿಗ ಮಾತ್ರವಲ್ಲ, ಪ್ರಬಲ ಲಿಂಗಾಯತ ವರ್ಗ ಸಹ ಜಾತಿಗಣತಿ ವರದಿಗೆ ತಮ್ಮ ವಿರೋಧ ವ್ಯಕ್ತಪಡಿಸಿದೆ.
ಹಾಗೆಯೇ ಜಾತಿ ಜನಗಣತಿ ಮುಂದಿನ ಲೋಕಸಭೆ ಚುನಾವಣೆ ಮೇಲೆಯೂ ಪರಿಣಾಮ ಬೀರಲಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಎಚ್ಚರಿಸಿದೆ ಎಂದು ತಿಳಿದು ಬಂದಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ಹೋರಾಡಲು ಈ ವರದಿ ಅಸ್ತ್ರವಾಗಲಿದೆ ಎಂದೂ ಅಂದಾಜಿಸಲಾಗಿದೆ. ವರದಿಯಿಂದ ಒಬಿಸಿ ವರ್ಗಗಳು ಕಾಂಗ್ರೆಸ್ ಕಡೆ ಮುಖ ಮಾಡಬಹುದು. ಇತ್ತ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಮತಗಳಲ್ಲಿ ಕೊಂಚ ಮಟ್ಟಿಗೆ ಆಚೀಚೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.