Tuesday, June 18, 2024

ಸತ್ಯ | ನ್ಯಾಯ |ಧರ್ಮ

ನ್ಯೂಸ್ ಆಂಕರ್ ಗಳಿಗೆ ಬಹಿಷ್ಕಾರ | ಅಹಿಂಸಾತ್ಮಕ ‘ಶಾಕ್ ಟ್ರೀಟ್ ಮೆಂಟ್’

‘ಇಂಡಿಯಾ’ ಮೈತ್ರಿಕೂಟವು ನ್ಯೂಸ್ ಚಾನಲ್ ಗಳನ್ನು ಸಾರಾಸಗಟಾಗಿ ಬಹಿಷ್ಕರಿಸಿಲ್ಲ. ಹಾಗೆ ಬಹಿಷ್ಕರಿಸುವುದಿದ್ದರೆ ರಾಹುಲ್ ಕನ್ವಲ್, ಪಲ್ಲವಿ ಘೋಷ್, ಅಂಜನಾ ಓಂ ಕಶ್ಯಪ್, ರಜತ್ ಶರ್ಮಾ ಇನ್ನೂ ಸುಮಾರು ಒಂದೆರಡು ಡಜನ್ ಗೋದಿ ಆಂಕರ್ ಗಳನ್ನು ಬಹಿಷ್ಕರಿಸಬಹುದು. ಆದರೆ ‘ಇಂಡಿಯಾ’ ಅದನ್ನು ಮಾಡಿಲ್ಲ. ತೀರಾ ಪಕ್ಷಪಾತಿಯಾಗಿರುವ ಮತ್ತು ಬಹಿರಂಗವಾಗಿಯೇ ಸರಕಾರದ ಚಿಯರ್ ಲೀಡರ್ ಗಳಂತೆ ಕೆಲಸ ಮಾಡುವವರನ್ನು ಮಾತ್ರ ಬಹಿಷ್ಕರಿಸಿದೆಶ್ರೀನಿವಾಸ ಕಾರ್ಕಳ

28 ರಾಜಕೀಯ ಪಕ್ಷಗಳ ಹೊಸ ಮೈತ್ರಿಕೂಟ INDIA ವು ದೇಶದ ಪ್ರತಿಷ್ಠಿತ ವಾರ್ತಾ ಮಾಧ್ಯಮಗಳ 14 ನ್ಯೂಸ್ ಆಂಕರ್ ಗಳು ನಡೆಸಿಕೊಡುವ ಚರ್ಚೆಗಳಲ್ಲಿ ತಮ್ಮ ಪ್ರತಿನಿಧಿಗಳು ಭಾಗವಹಿಸುವುದಿಲ್ಲ ಎಂದು ಘೋಷಿಸಿರುವುದು ಈಗ ಭಾರೀ ಚರ್ಚೆಯ ವಿಷಯವಾಗಿದೆ. ಈ ನಿರ್ಧಾರವನ್ನು ಖಂಡಿಸುವಾಗ ಸಂವಿಧಾನ, ತುರ್ತುಪರಿಸ್ಥಿತಿಯ ಮನಸ್ಥಿತಿ, ಅಭಿವ್ಯಕ್ತಿ ಸ್ವಾತಂತ್ರ್ಯ ಹೀಗೆ ನಾನಾ ಅಸಂಗತ ವಿಷಯಗಳನ್ನೆಲ್ಲ ಎಳೆದು ತರಲಾಗಿದೆ.

ತನಗೆ ಅನುಕೂಲವಾಗುವಂತೆ ನಡೆದುಕೊಳ್ಳದ ಪತ್ರಿಕಾ ಕಚೇರಿಗಳ ಮೇಲೆ ತನ್ನ ಕೇಂದ್ರೀಯ ಏಜನ್ಸಿಗಳನ್ನು ಛೂಬಿಟ್ಟ, ಆಮಿಷ ಮತ್ತು ಧಮಕಿಯ ಮೂಲಕ ವ್ಯವಸ್ಥಿತವಾಗಿ ಪತ್ರಿಕಾ ಸ್ವಾತಂತ್ರ್ಯವನ್ನು ಹರಣ ಮಾಡಿರುವ, ಅಂತಾರಾಷ್ಟ್ರೀಯವಾಗಿ ಪತ್ರಿಕಾ ಸ್ವಾತಂತ್ರ್ಯದಲ್ಲಿ ಭಾರತವು ಕೊನೆಯ ಸಾಲಿನಲ್ಲಿ ಕಾಣಿಸಿಕೊಳ್ಳಲು ಕಾರಣವಾಗಿರುವ ಮತ್ತು ಅನೇಕ ಪತ್ರಕರ್ತರನ್ನು ಜೈಲಿಗೆ ತಳ್ಳಿದ ನರೇಂದ್ರ ಮೋದಿಯವರ ಸರಕಾರದ ಹಿಂದಿರುವ ಬಿಜೆಪಿಯು ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿರುವುದಂತೂ Pot calling kettle black ಎಂಬಂತೆ ಇನ್ನೂ ಚೋದ್ಯದ ಸಂಗತಿಯಾಗಿದೆ.

ಪತ್ರಿಕಾ ಮಾಧ್ಯಮವು ಪ್ರಜಾತಂತ್ರದ ನಾಲ್ಕನೇ ಅಂಗ ಎನ್ನುತ್ತೇವೆ. ಇದು ಅಧಿಕೃತವಲ್ಲ. ಒಂದು ನಂಬಿಕೆ, ಒಂದು ಆಶಯ. ಸರಕಾರವನ್ನು ಪ್ರಶ್ನಿಸುವ, ಆಮೂಲಕ ಜನರ ದನಿಯಾಗುತ್ತ ಅದು ಜನತಂತ್ರದ ನಾಲ್ಕನೇ ಅಂಗವಾಗಿ ಕೆಲಸ ಮಾಡಬೇಕು ಎಂಬುದು ಜನರ ಬಯಕೆ. ಈ ಬಯಕೆಗೆ ಅನುಗುಣವಾಗಿ ಕೆಲಸ ಮಾಡಿದ ಒಂದು ದೊಡ್ಡ ಇತಿಹಾಸ ಸ್ವಾತಂತ್ರ್ಯ ಹೋರಾಟ ಕಾಲದಿಂದಲೂ ಭಾರತೀಯ ಪತ್ರಿಕಾ ರಂಗಕ್ಕೆ ಇತ್ತು. ದೇಶದ ಮೇಲೆ ತುರ್ತುಸ್ಥಿತಿ ಹೇರಿದಾಗಲೂ ಪತ್ರಿಕೆಗಳು ತಮ್ಮ ಈ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸಿದ್ದವು.

ಬದಲಾದ ಪರಿಸ್ಥಿತಿ

ಆದರೆ ಈ ಪರಿಸ್ಥಿತಿ ಪೂರ್ಣ ಬದಲಾದುದು ಈಗ್ಗೆ ಕೇವಲ ಒಂದೆರಡು ದಶಕಗಳಿಂದ. ಅದೂ ಟಿಲಿವಿಶನ್ ವಾರ್ತಾ ಮಾಧ‍್ಯಮಗಳು ಸಂಪೂರ್ಣವಾಗಿ ಉದ್ಯಮಿಗಳ ಕೈಸೇರಿದ ಬಳಿಕ. ಕಳೆದ ಸುಮಾರು ಒಂದು ದಶಕದಿಂದ ದೇಶದ, ವಿಶೇಷವಾಗಿ ಟೆಲಿವಿಶನ್ ವಾರ್ತಾ ಮಾಧ್ಯಮಗಳು ಹೇಗೆ ಕೆಲಸ ಮಾಡುತ್ತಿವೆ, ಯಾರ ಪರ ನಿಲ್ಲುತ್ತಿವೆ ಎನ್ನುವುದನ್ನು ಪರಾಂಬರಿಸುವ ಯಾರಿಗೇ ಆದರೂ ಈ ಸತ್ಯ ಅರ್ಥವಾದೀತು.

ಹಿಂದೆ ಟಿವಿ ಡಿಬೇಟುಗಳು ನಡೆಯುತ್ತಿದ್ದಾಗ ಅದರ ಸಮನ್ವಯಕಾರರು ಬಹುತೇಕ ತಟಸ್ಥರಾಗಿದ್ದು ಅಲ್ಲಿದ್ದ ಪ್ರತಿಯೊಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನೂ ಸಮಾನವಾಗಿ ನಡೆಸಿಕೊಳ್ಳುತ್ತಿದ್ದರು. ಮಾತನಾಡಲು ಅವರಿಗೆಲ್ಲ ಸಮಾನ ಅವಕಾಶ ಕೊಡುತ್ತಿದ್ದರು. ಶೌಟಿಂಗ್ ಮ್ಯಾಚ್ ಗೆ ಅಲ್ಲಿ ಅವಕಾಶವಿರಲಿಲ್ಲ. ಪರಿಣಾಮವಾಗಿ ಒಂದು ಅರ್ಥಪೂರ್ಣ ಚರ್ಚೆ ಅಲ್ಲಿ ನಡೆಯುತ್ತಿತ್ತು.

ಕ್ರಮೇಣ ಟಿವಿ ಚಾನಲ್ ಗಳು ಒಂದು ಪಕ್ಷದ (ಬಿಜೆಪಿ) ಮುಖವಾಣಿಯಂತೆ ಕೆಲಸ ಮಾಡಲಾರಂಭಿಸಿದ ಮೇಲೆ, ಅವು ತಮ್ಮದೇ ರಾಜಕೀಯ ಅಜೆಂಡಾಗಳನ್ನು ಮುಂದುವರಿಸಲು ಕಾರ್ಯಕ್ರಮಗಳನ್ನು ಬಳಸಿಕೊಳ್ಳಲಾರಂಭಿಸಿದವು. ಡಿಬೇಟ್ ನಡೆಸಿಕೊಡುವ ಆಂಕರ್ ಮೊದಲೇ ಬಿಜೆಪಿ ಒಲವಿಗರು, ಆಮೇಲೆ ಪ್ಯಾನಲಿಸ್ಟ್ ಗಳಲ್ಲಿ ಒಬ್ಬರು ಬಿಜೆಪಿ ಅಧಿಕೃತ ವಕ್ತಾರರು, ಇನ್ನೊಬ್ಬರು ಪೊಲಿಟಿಕಲ್ ಅನಾಲಿಸ್ಟ್ ಸೋಗಿನಲ್ಲಿ ಸಂಘ ಪರಿವಾರದ ವ್ಯಕ್ತಿ. ಅಲ್ಲಿಗೆ ಬಿಜೆಪಿಯ ಮೂವರು ಪ್ಯಾನಲಿಸ್ಟ್ ಗಳು ಇದ್ದಂತಾಯಿತು. ಲೆಕ್ಕ ಭರ್ತಿಗೆ ಒಬ್ಬರು ಕಾಂಗ್ರೆಸ್ ಅಥವಾ ಇತರ ಪಕ್ಷಗಳವರು. ಇಲ್ಲಿ ಎಲ್ಲಿದೆ ಸಮತೋಲನ?!

ಚರ್ಚೆಯಲ್ಲಿ ಬಿಜೆಪಿ ಮಂದಿಗೆ ಧಾರಾಳ ಸಮಯದ ಅವಕಾಶ, ಕಾಂಗ್ರೆಸ್ ಅಥವಾ ಇತರ ಮಂದಿ ಮಾತನಾಡುವಾಗ ಪ್ರತಿ ಹಂತದಲ್ಲಿಯೂ ಆಂಕರ್ ಅಥವಾ ಬಿಜೆಪಿ ಪ್ರತಿನಿಧಿಯಿಂದ ಮಧ್ಯಪ್ರವೇಶ. ಕೆಲವೊಮ್ಮೆ ವಿಪಕ್ಷದ ಪ್ರತಿನಿಧಿಗಳು ಮಾತನಾಡುವಾಗ ಮೈಕ್ ಆಫ್! ಒಟ್ಟಿನಲ್ಲಿ ಡಿಬೇಟ್ ತುಂಬಾ ಗದ್ದಲ. ಕೊನೆಗೆ ಉಳಿಯುವುದು ಚಾನಲ್ ಬಯಕೆಯಂತೆಯೇ ಬಿಜೆಪಿ ಸೃಷ್ಟಿಸಿದ ನೆರೇಟಿವ್ ಮಾತ್ರ!

ಬಹಿಷ್ಕಾರಕ್ಕೆ ಆಗ್ರಹ

ಇದು ಕಳೆದ ಸುಮಾರು ಒಂದು ದಶಕದಿಂದ ನಡೆಯುತ್ತಲೇ ಬಂದಿದೆ. ಇದೇ ಕಾರಣಕ್ಕೆ ಇಂತಹ ಡಿಬೇಟ್ ಗಳನ್ನು ನೋಡುವುದನ್ನೇ ಜನ ನಿಲ್ಲಿಸಿದ್ದಾರೆ. ಕಾಂಗ್ರೆಸ್ ನಂತಹ ವಿಪಕ್ಷಗಳ ಮೇಲೆ ಇಂತಹ ಡಿಬೇಟ್ ಗಳಿಗೆ ಹೋಗಬಾರದು ಎಂಬ ಒತ್ತಡ ಅನೇಕ ಮೂಲೆಗಳಿಂದ ಬಂದಿತ್ತು. ಆದರೆ ಕಾಂಗ್ರೆಸ್ ಅನೇಕ ಕಾರಣಗಳಿಗೆ ಈ ಡಿಬೇಟ್ ಗಳನ್ನು ಬಹಿಷ್ಕರಿಸಲಿಲ್ಲ. ಮೊದಲನೆಯದಾಗಿ ಜನತಂತ್ರ ಮೌಲ್ಯಗಳಿಗೆ ಬೆಲೆ ಕೊಡಬೇಕು ಎನ್ನುವುದು. ಎರಡನೆಯದಾಗಿ ಈ ಚಾನಲ್ ಗಳು ಮುಂದಾದರೂ ತಮ್ಮ ತಪ್ಪು ಸರಿಪಡಿಸಿಕೊಂಡಾವು ಎನ್ನುವ ಆಶಾವಾದ. ಮೂರನೆಯದಾಗಿ, ಪಕ್ಷದ ಅಧಿಕೃತ ವಕ್ತಾರರು ಹೋಗದಿದ್ದರೆ ಅನಧಿಕೃತ ವಕ್ತಾರರನ್ನು ಕೂರಿಸಿಕೊಂಡು ಚಾನೆಲ್ ಗಳು ಡಿಬೇಟ್ ನಡೆಸುತ್ತವೆ ಎನ್ನುವ ಆತಂಕ.

ಆದರೆ ಈಗ ಪರಿಸ್ಥಿತಿ ಕೈಮೀರಿ ಹೋಗಿದೆ. ಸರಕಾರವನ್ನು ಪ್ರಶ್ನಿಸಬೇಕಾದ ಈ ಕೆಲವು ಮಾಧ್ಯಮಗಳು ವಿಪಕ್ಷಗಳನ್ನು ಪ್ರಶ್ನಿಸುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿವೆ. ಸರಕಾರದಿಂದ ಅಂತರ ಕಾಪಾಡಿಕೊಳ್ಳಬೇಕಾದ ಇವು ಯಾವ ನಾಚಿಕೆಯೂ ಇಲ್ಲದೆ ಬಹಿರಂಗವಾಗಿಯೇ ಸರಕಾರದ ದಲ್ಲಾಳಿಯಂತೆ ಕೆಲಸ ಮಾಡುತ್ತಿವೆ. ಇನ್ನೇನು ಕೆಲವೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಯೂ ನಡೆಯಲಿದ್ದು ಆಗ ಈ ಮಾರಿಕೊಂಡ ಮಾಧ್ಯಮಗಳ ಈ ಅನೈತಿಕ ಚಟುವಟಿಕೆ ಇನ್ನೂ ಹೆಚ್ಚಾಗಲಿದೆ. ಈ ಉದ್ದೇಶದಿಂದಲೇ ಈಗ ಇಂಡಿಯಾ ಮೈತ್ರಿಕೂಟವು ಒಂದು ಸ್ಪಷ್ಟ ನಿರ್ಧಾರಕ್ಕೆ ಬಂದಿದೆ.

ಸಾರಾಸಗಟಾಗಿ ಬಹಿಷ್ಕರಿಸಿಲ್ಲ

ಇಲ್ಲಿ ಗಮನಿಸತಕ್ಕ ಮುಖ್ಯ ಅಂಶಗಳೆಂದರೆ, ‘ಇಂಡಿಯಾ’ ಮೈತ್ರಿಕೂಟವು ನ್ಯೂಸ್ ಚಾನಲ್ ಗಳನ್ನು ಸಾರಾಸಗಟಾಗಿ ಬಹಿಷ್ಕರಿಸಿಲ್ಲ. ಬಿಜೆಪಿಯ ಅಜೆಂಡಾ ಚಲಾಯಿಸುವ ಕೆಲವು ಆಂಕರ್ ಗಳ ಡಿಬೇಟ್ ಗಳಿಗೆ ಹೋಗುವುದಿಲ್ಲ ಎಂದಷ್ಟೇ ಹೇಳಿದ್ದಾರೆ.

ಈ ಡಿಬೇಟ್ ಗಳೇನೂ ವರ್ಷದ ಉದ್ದಕ್ಕೂ ನಡೆಯುವುದಿಲ್ಲ. ವಾರದಲ್ಲಿ ಮೂರ್ನಾಲ್ಕು ದಿನ ಮಾತ್ರ ನಡೆಯುತ್ತಿರುತ್ತದೆ. ಇತರ ಆಂಕರ್ ಗಳು ನಡೆಸಿಕೊಡುವ ಕಾರ್ಯಕ್ರಮಗಳಿಗೆ ಈ ವಕ್ತಾರರು ಹೋಗುವುದರಿಂದ ಡಿಬೇಟ್ ಗಳು ಯಥಾಪ್ರಕಾರ ನಡೆಯುತ್ತಿರುತ್ತವೆ. ಇದರಿಂದ ದಾರಿ ತಪ್ಪಿದ ಚಾನಲ್ ಗಳಿಗೆ ಒಂದು ಸಂದೇಶ ರವಾನೆಯಾಗುತ್ತದೆ ಎನ್ನುವುದನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ನಷ್ಟವಿಲ್ಲ.

ಬಹಿಷ್ಕರಿಸುವುದಿದ್ದರೆ ರಾಹುಲ್ ಕನ್ವಲ್, ಪಲ್ಲವಿ ಘೋಷ್, ಅಂಜನಾ ಓಂ ಕಶ್ಯಪ್, ರಜತ್ ಶರ್ಮಾ ಇನ್ನೂ ಸುಮಾರು ಒಂದೆರಡು ಡಜನ್ ಗೋದಿ ಆಂಕರ್ ಗಳನ್ನು ಬಹಿಷ್ಕರಿಸಬಹುದು. ಆದರೆ ‘ಇಂಡಿಯಾ’ ಅದನ್ನು ಮಾಡಿಲ್ಲ. ತೀರಾ ಪಕ್ಷಪಾತಿಯಾಗಿರುವ ಮತ್ತು ಬಹಿರಂಗವಾಗಿಯೇ ಸರಕಾರದ ಚಿಯರ್ ಲೀಡರ್ ಗಳಂತೆ ಕೆಲಸ ಮಾಡುವವರನ್ನು ಮಾತ್ರ ಬಹಿಷ್ಕರಿಸಿದೆ.

ಇದನ್ನು ತಪ್ಪು ಎನ್ನುವವರು ಮುಂದಿಡುತ್ತಿರುವ ವಾದಗಳು ಅತಾರ್ಕಿಕವೂ, ಹಾಸ್ಯಾಸ್ಪದವೂ ಆಗಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ‘ಯಾರೊಡನೆ ಮಾತನಾಡಬೇಕು, ಮಾತನಾಡಬಾರದು ಎಂದು ನಿರ್ಧರಿಸುವ ಹಕ್ಕು ಕೂಡಾ ನಮಗಿದೆ’ ಎನ್ನುವುದನ್ನು ಮರೆಯಬಾರದು. ಡಿಬೇಟ್ ಗಳಿಗೆ ಹೋಗುವುದು ಕಡ್ಡಾಯವಲ್ಲ. ಅದು ನಮ್ಮ ಆಯ್ಕೆಯ ಸ್ವಾತಂತ್ರ್ಯ.

ಇಂದು ಪತ್ರಿಕಾ ಸ್ವಾತಂತ್ರ್ಯ ಮತ್ತು ಜನತಂತ್ರದ ಮೌಲ್ಯಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಿರುವ ಮತ್ತು ಬಿಟ್ಟಿ ಉಪದೇಶ ನೀಡುತ್ತಿರುವ ಇದೇ ಬಿಜೆಪಿ 2014 ರಲ್ಲಿ ಎನ್ ಡಿ ಟಿ ವಿ ಯನ್ನು ಬಹಿಷ್ಕರಿಸಿತ್ತು ಮತ್ತು ತನ್ನ ಆಗಿನ ಆ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿತ್ತು. ಸರಕಾರವನ್ನು ಕುರಿತ ‘ನಕಾರಾತ್ಮಕ ವರದಿ’ಗಳನ್ನು ನಿರ್ಮೂಲಗೊಳಿಸಲು ಇದೇ ಬಿಜೆಪಿ ಸರಕಾರದ ಕೇಂದ್ರ ಮಂತ್ರಿಗಳ ತಂಡ ಸಲಹೆಗಳನ್ನೂ ನೀಡಿತ್ತು ಎನ್ನುವುದನ್ನು ಮರೆಯದಿರೋಣ.

ಪತ್ರಿಕಾ ಧರ್ಮಕ್ಕೆ ಸಂಪೂರ್ಣ ತಿಲಾಂಜಲಿ ನೀಡಿ, ದೇಶದ ಜನತಂತ್ರ ವ್ಯವಸ್ಥೆಗೆ ತೀವ್ರ ಹಾನಿ ಮಾಡುತ್ತಿರುವ ಮಾಧ್ಯಮಗಳಿಗೆ ಇಂತಹ ಒಂದು ಅಹಿಂಸಾತ್ಮಕ ಮತ್ತು ಜನತಾಂತ್ರಿಕ ‘ಶಾಕ್ ಟ್ರೀಟ್ ಮೆಂಟ್’ ಅಗತ್ಯ ಇತ್ತು ಎನ್ನುವುದು ಬಹಳ ಮಂದಿಯ ಅಭಿಪ್ರಾಯ. ಜನತಂತ್ರದಲ್ಲಿ, ಹಳಿ ತಪ್ಪುವ ಸಂಸ್ಥೆಗಳನ್ನು ಮತ್ತೆ ಹಳಿಗೆ ತರಲು ಇಂತಹ ಕೆಲವು ಕೆಲಸಗಳು ಅನಿವಾರ್ಯ. ಇದರಲ್ಲಿ ಬೆಚ್ಚಿಬೀಳುವ ಅಥವಾ ಆಘಾತಕ್ಕೊಳಗಾಗುವ ಸಂಗತಿಗಳೇನೂ ಇಲ್ಲ.

ಶ್ರೀನಿವಾಸ ಕಾರ್ಕಳ

ಸಾಮಾಜಿಕ ಚಿಂತಕರು

ಇದನ್ನೂ ಓದಿ-ಸಂವಿಧಾನ ರಕ್ಷಣೆ | ಆದ್ಯತೆಗಳೂ ಬಾಧ್ಯತೆಗಳೂ

Related Articles

ಇತ್ತೀಚಿನ ಸುದ್ದಿಗಳು