ಲಂಚ ಪಡೆಯುವ ವೇಳಿ ಲೋಕಾ ದಾಳಿ, ಹಾಸನದ ಸೆಸ್ಕಾಂ ಇಂಜಿನಿಯರ್ ಬಂಧನ

ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುರನಕ್ಕಿ ಗ್ರಾಮದಲ್ಲಿ ಲಂಚ (Corruption) ಪಡೆಯುತ್ತಿದ್ದ ಸೆಸ್ಕಾಂ (CESC) ಕಿರಿಯ (Bribe) ಇಂಜಿನಿಯರ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಏನಿದು ಪ್ರಕರಣ?
ನುರನಕ್ಕಿ ಸೆಸ್ಕಾಂ ಶಾಖೆಯ ಕಿರಿಯ ಇಂಜಿನಿಯರ್ ದೇವರಾಜು ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ. ಶಶಾಂಕ್ ಎಂಬ ರೈತರು ತಮ್ಮ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ದೇವರಾಜು ಅವರ ಬಳಿ ಮನವಿ ಮಾಡಿದ್ದರು. ಈ ಕೆಲಸ ಮಾಡಿಕೊಡಲು ಅಧಿಕಾರಿ 5000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಕುರಿತು ರೈತ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ದೇವರಾಜು ಅವರು ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಇನ್ಸ್ಪೆಕ್ಟರ್ ಶಿಲ್ಪಾ ಹಾಗೂ ಅವರ ತಂಡ ದಾಳಿ ನಡೆಸಿ, ಹಣದ ಸಮೇತ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಫೋನ್‌ಪೇ ಮೂಲಕ ಲಂಚ ಪಡೆಯುತ್ತಿದ್ದ ಕೊಪ್ಪಳ ಆರ್‌ಟಿಓ ಸಿಬ್ಬಂದಿ ಲೋಕಾಯುಕ್ತ

ಕೊಪ್ಪಳದ (Koppala) ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (RTO) ನಡೆದ ಭ್ರಷ್ಟಾಚಾರದ (Corruption) ವಿರುದ್ಧ ಲೋಕಾಯುಕ್ತ (Lokayukta) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಂಚ (Bribe) ಪಡೆಯುತ್ತಿದ್ದ ಇಬ್ಬರನ್ನು ರೆಡ್‌ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಆರ್‌ಟಿಓ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಂಜಿತ್ ಸಹಾಜಾನಂದ ಹಾಗೂ ಖಾಸಗಿ ಡ್ರೈವಿಂಗ್ ಸ್ಕೂಲ್‌ನಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ವಿನಯಕುಮಾರ ಎಂಬುವವರೇ ಬಂಧಿತ ಆರೋಪಿಗಳು.

ಶೋರೂಮ್‌ಗಳಿಗೆ ಟ್ರೇಡ್ ಲೈಸೆನ್ಸ್ ನೀಡುವ ಸಲುವಾಗಿ ನಈಮ್ ಅಕ್ರಮ್ ಕೆ.ಎಸ್. ಎಂಬುವವರಿಂದ ಈ ಇಬ್ಬರು 21,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಪೈಕಿ ಲಂಚದ ಹಣವನ್ನು ಫೋನ್‌ಪೇ ಮೂಲಕ ಸ್ವೀಕರಿಸುವಾಗ ಪೊಲೀಸರು ದಾಳಿ ಮಾಡಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಲಂಚ ನೀಡಲು ಇಷ್ಟವಿಲ್ಲದ ನಈಮ್ ಅಕ್ರಮ್ ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರು. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಲೋಕೇಶ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ದಾಳಿಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಸುನೀಲ್, ಚಂದ್ರಪ್ಪ ಹಾಗೂ ಶೈಲಾ ಎಸ್. ಪಾಟೀಲ ಶೆಟ್ಟರ್ ಸೇರಿದಂತೆ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು