ರಾಜ್ಯದ ಗ್ರಾಮೀಣ ಜಲಕ್ಷಾಮ ಪರಿಹಾರಕ್ಕೆ 208 ಕೋಟಿ ರೂ – ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ತೀವ್ರ ಅಭಾವವನ್ನು ಹೋಗಲಾಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಮರೋಪಾದಿಯಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಕಳೆದ ಮಾರ್ಚ್‌ನಿಂದ ಈವರೆಗೆ ಒಟ್ಟು 208.67 ಕೋಟಿ ರೂಪಾಯಿಗಳನ್ನು ನೀರಿನ ಕಾಮಗಾರಿಗಳಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.

ತುರ್ತು ಕಾಮಗಾರಿಗಳಿಗೆ ಮತ್ತಷ್ಟು ಹಣ
ಮಂಗಳವಾರ ಈ ಕುರಿತು ಮಾಹಿತಿ ನೀಡಿರುವ ಸಚಿವರು, ಬೇಸಿಗೆಯ ಸಂಕಷ್ಟ ಎದುರಿಸಲು ಇಂದು ಪುನಃ 72 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನವನ್ನು ನೀಡಲಾಗಿದೆ ಎಂದು ಹೇಳಿದರು. ಈ ಹಣವನ್ನು ಹೊಸದಾಗಿ ಕೈಗೊಳ್ಳುವ ಕಾಮಗಾರಿಗಳಿಗೆ ಹಾಗೂ ಈ ಹಿಂದೆ ಟಾಸ್ಕ್ ಫೋರ್ಸ್ ಸಮಿತಿಯ ಅನುಮೋದನೆ ಪಡೆದು ಮುಕ್ತಾಯಗೊಂಡಿದ್ದ ಹಳೆಯ ಬಿಲ್‌ಗಳ ಪಾವತಿಗಾಗಿ ಬಳಸಿಕೊಳ್ಳಲು ಸೂಚಿಸಲಾಗಿದೆ.

ಅಧಿಕಾರಿಗಳಿಗೆ ಸೂಚನೆ

ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಚಿವರು ಹಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ:

  • ಇಳುವರಿ ಕಡಿಮೆಯಾಗಿರುವ ಕೊಳವೆಬಾವಿಗಳನ್ನು ಕೂಡಲೇ ಫ್ಲಶಿಂಗ್ ಮಾಡಿ ಆಳಗೊಳಿಸಬೇಕು.
  • ನೀರಿನ ಮೂಲವೇ ಇಲ್ಲದ ಹಳ್ಳಿಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲು ಅಥವಾ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲು ಆದ್ಯತೆ ನೀಡಬೇಕು.
  • ಬಹಳ ಅನಿವಾರ್ಯವಿದ್ದರೆ ಮಾತ್ರ ಭೂವಿಜ್ಞಾನಿಗಳ ಶಿಫಾರಸಿನ ಮೇರೆಗೆ ಹೊಸ ಕೊಳವೆಬಾವಿಗಳನ್ನು ಕೊರೆಯಲು ಅನುಮತಿ ನೀಡಲಾಗಿದೆ.

ನೀರಿನ ಕಾಮಗಾರಿಗಳ ಹೆಸರಿನಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಸಚಿವರು ಎಚ್ಚರಿಕೆ ನೀಡಿದ್ದಾರೆ. ಎಲ್ಲಾ ಪ್ರಕ್ರಿಯೆಗಳು ಕೆಟಿಪಿಪಿ (KTPP) ಕಾಯ್ದೆಯ ನಿಯಮಗಳಂತೆಯೇ ನಡೆಯಬೇಕು. ಕಾಮಗಾರಿಗಳು ಎಷ್ಟರ ಮಟ್ಟಿಗೆ ಪೂರ್ಣಗೊಂಡಿವೆ ಎಂಬುದನ್ನು ಭೌತಿಕವಾಗಿ ಪರಿಶೀಲಿಸಿದ ನಂತರವೇ ಹಣ ಪಾವತಿ ಮಾಡಲು ಮತ್ತು ಟಾಸ್ಕ್ ಫೋರ್ಸ್ ಸಮಿತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಈ ಅನುದಾನದಿಂದ ರಾಜ್ಯದ 31 ಜಿಲ್ಲೆಗಳ ಗ್ರಾಮೀಣ ಜನತೆಗೆ ತಕ್ಷಣದ ಪರಿಹಾರ ಸಿಗಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಕುಡಿಯುವ ನೀರು ಕೇಳಿದವರ ಮೇಲೆ ಎಫ್.ಐ.ಆರ್- ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದೇನು..?
ರಾಯಚೂರು ಜಿಲ್ಲಾ (Raichur) ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ (Sharanu prakash patil) ಅವರು ಲಿಂಗಸುಗೂರು ತಾಲ್ಲೂಕಿನ ಸರ್ಜಾಪುರ ಗ್ರಾಮದಲ್ಲಿನ ಜನಸಾಮಾನ್ಯರ ವಿರುದ್ಧ ದಾಖಲಾಗಿರುವ ಪೋಲೀಸ್ ದೂರನ್ನು (Police complaint) ಗಂಭೀರವಾಗಿ ಪರಿಗಣಿಸಿ, ಪಾರದರ್ಶಕ ವಿಚಾರಣೆಗೆ ತಕ್ಷಣವೇ ಸೂಚಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯಿಸಿದವರ ಮೇಲೆ ಎಫ್‌ಐಆರ್ ದಾಖಲಿಸಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು