ಅಧಿಕಾರಕ್ಕಿಂತ ಜನಸೇವೆಯೇ ನನ್ನ ಆದ್ಯತೆ – TVK ಮುಖ್ಯಸ್ಥ ವಿಜಯ್

ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ನೀಡಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಮುಖ್ಯಸ್ಥ ವಿಜಯ್,(Vijay) ತಮ್ಮ ಪಕ್ಷದ ಗೆಲುವಿನ ಕುರಿತು ಮೊದಲ ಅಧಿಕೃತ ಹೇಳಿಕೆ ನೀಡಿದ್ದಾರೆ. ಅತ್ಯಂತ ವಿನಮ್ರತೆಯಿಂದ ಜನಾದೇಶವನ್ನು ಒಪ್ಪಿಕೊಂಡಿರುವ ಅವರು, ತಮಗೆ ಅಧಿಕಾರಕ್ಕಿಂತ ಜನರ ಸೇವೆಯೇ ಪರಮೋಚ್ಚ ಎಂದು ಸಾರಿದ್ದಾರೆ.

ಇದು ಜನರ ಗೆಲುವು
 ಫಲಿತಾಂಶದ ನಂತರ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ವಿಜಯ್, “ಈ ಗೆಲುವು ಕೇವಲ ನನ್ನೊಬ್ಬನಿಗೆ ಸಂದಿದ್ದಲ್ಲ, ಇದು ಬದಲಾವಣೆ ಬಯಸಿದ ತಮಿಳುನಾಡಿನ ಪ್ರತಿಯೊಬ್ಬ ನಾಗರಿಕನ ಜಯವಾಗಿದೆ. ಜನತೆ ಇಟ್ಟಿರುವ ಈ ನಂಬಿಕೆಯನ್ನು ನಾನು ಗೌರವಿಸುತ್ತೇನೆ,” ಎಂದು ಹೇಳಿದ್ದಾರೆ. ರಾಜಕೀಯವು ಕೇವಲ ಜನಸೇವೆಯ ಒಂದು ಸಾಧನವಾಗಬೇಕೇ ಹೊರತು ಅದೇ ಅಂತಿಮ ಗುರಿಯಾಗಬಾರದು ಎಂಬುದು ವಿಜಯ್ ಅವರ ನಿಲುವಾಗಿದೆ.

ಜನರೇ ಮೊದಲು‘ ಎಂಬ ಮಂತ್ರ:
ತಮ್ಮ ಪಕ್ಷದ ಸಿದ್ಧಾಂತವನ್ನು ಪುನರುಚ್ಚರಿಸಿದ ಅವರು, “ನಮ್ಮ ಸಂಘಟನೆಯ ಮೂಲಮಂತ್ರ ‘ಮೊದಲು ಜನತೆ, ಆಮೇಲೆ ರಾಜಕಾರಣ’ (People First, Politics Later). ಇದೇ ಹಾದಿಯಲ್ಲಿ ನಾವು ಮುನ್ನಡೆಯುತ್ತೇವೆ,” ಎಂದು ಸ್ಪಷ್ಟಪಡಿಸಿದ್ದಾರೆ. ಗೆಲುವಿನ ಸಂಭ್ರಮದಲ್ಲಿರುವ ತಮ್ಮ ಬೆಂಬಲಿಗರಿಗೆ ಕಿವಿಮಾತು ಹೇಳಿರುವ ವಿಜಯ್, “ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಅವಹೇಳನ ಮಾಡಬಾರದು ಅಥವಾ ದ್ವೇಷದ ರಾಜಕಾರಣಕ್ಕೆ ಕೈಹಾಕಬಾರದು. ಸಂಯಮದಿಂದ ವರ್ತಿಸುವ ಮೂಲಕ ಹೊಸ ರಾಜಕೀಯ ಸಂಸ್ಕೃತಿಯನ್ನು ಬೆಳೆಸಬೇಕು,” ಎಂದು ಕಟ್ಟುನಿಟ್ಟಾಗಿ ನಿರ್ದೇಶಿಸಿದ್ದಾರೆ.

ತಮಿಳುನಾಡು ಇತಿಹಾಸದಲ್ಲಿ ಹೊಸ ಶಕೆ, ಸಿಎಂ ಆಗಿ ದಳಪತಿ ವಿಜಯ್ ಪ್ರಮಾಣವಚನ ಸ್ವೀಕಾರಕ್ಕೆ ಮಹೂರ್ತ ಫಿಕ್ಸ್

ತಮಿಳುನಾಡು ರಾಜಕೀಯದಲ್ಲಿ ದಶಕಗಳ ಕಾಲ ಆಧಿಪತ್ಯ ಮೆರೆದಿದ್ದ ದ್ರಾವಿಡ ಪಕ್ಷಗಳ ಕೋಟೆಯನ್ನು ಧೂಳೀಪಟ ಮಾಡಿರುವ ನಟ ವಿಜಯ್ (Vijay) ಈಗ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದ್ದಾರೆ. ಮೇ 7ರಂದು ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಈ ಅದ್ಧೂರಿ ಸಮಾರಂಭ ನಡೆಯುವ ಸಾಧ್ಯತೆಯಿದೆ. ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷವು 234 ಸದಸ್ಯ ಬಲದ ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ತಮಿಳುನಾಡು ರಾಜಕೀಯ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಸಂಚಲನ ಎಂದು ವಿಶ್ಲೇಷಿಸಲಾಗುತ್ತಿದೆ. ಬಹುಮತಕ್ಕೆ ಬೇಕಾದ 118ರ ಗಡಿ ತಲುಪಲು ಕೇವಲ 10 ಸ್ಥಾನಗಳ ಕೊರತೆಯಿದ್ದು, ಸರ್ಕಾರ ರಚಿಸಲು ವಿಜಯ್ ಅವರು ಕಾಂಗ್ರೆಸ್, ಪಿಎಂಕೆ, ಎಡಪಕ್ಷಗಳು ಮತ್ತು ವಿಸಿಕೆ ಪಕ್ಷಗಳ ಬೆಂಬಲ ಕೋರುವ ಸಾಧ್ಯತೆಯಿದೆ. ಈ ಗೆಲುವಿನ ಮೂಲಕ 1977ರಿಂದ ರಾಜ್ಯವನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಸುದೀರ್ಘ ಪಾರುಪತ್ಯಕ್ಕೆ ವಿಜಯ್ ಬ್ರೇಕ್ ಹಾಕಿದ್ದಾರೆ. ಸಿನಿಮಾದಿಂದ ಬಂದು ಮುಖ್ಯಮಂತ್ರಿಯಾಗುತ್ತಿರುವ ವಿಜಯ್ ಅವರು ಈಗ ಎನ್.ಟಿ. ರಾಮರಾವ್, ಎಂ.ಜಿ. ರಾಮಚಂದ್ರನ್ ಮತ್ತು ಜಯಲಲಿತಾ ಅವರಂತಹ ದಿಗ್ಗಜ ನಾಯಕರ ಸಾಲಿಗೆ ಸೇರ್ಪಡೆಯಾಗುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು