ಬಡವರು, ದಲಿತರ ಪರ ನಿಂತರೆ ನಕ್ಸಲರಲ್ಲ, ಮೋದಿಯ ವಿಕಸಿತ ಭಾರತ ಬರೀ ಘೋಷಣೆ: ಸ್ಯಾಮ್ ಪಿತ್ರೋಡಾ ತಿರುಗೇಟು

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಭಾಷಣದಲ್ಲಿ ಬಳಸಿದ್ದ ‘ದಿಮಾಗಿ ನಕ್ಸಲ್’ (ಮಾನಸಿಕ ನಕ್ಸಲರು) ಪದಪ್ರಯೋಗ ಹಾಗೂ 2047ರ ‘ವಿಕಸಿತ ಭಾರತ’ದ ಸಂಕಲ್ಪದ ಕುರಿತು ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯವಿರುತ್ತದೆ, ಆದರೆ ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರ ಪರ ನಿಲ್ಲುವವರನ್ನು ನಕ್ಸಲರು ಅಥವಾ ಕಮ್ಯುನಿಸ್ಟರು ಎಂದು ಹಣೆಪಟ್ಟಿ ಕಟ್ಟುವುದು ಆಧಾರರಹಿತ ಎಂದು ಅವರು ಹೇಳಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, “ಯಾರಾದರೂ ಬಡವರ ಪರ, ದಲಿತರ ಪರ ಅಥವಾ ಅಲ್ಪಸಂಖ್ಯಾತರ ಪರ ಮಾತನಾಡಿದರೆ ಅವರು ನಕ್ಸಲರಲ್ಲ, ಬದಲಾಗಿ ಹೆಚ್ಚು ಮಾನವೀಯತೆ ಉಳ್ಳವರು. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಗಡಿಗಳಿಲ್ಲದ ಪರಿಕಲ್ಪನೆ ಬೆಳೆಯುತ್ತಿದೆ ಮತ್ತು ಭವಿಷ್ಯದ ತಂತ್ರಜ್ಞಾನಗಳಾದ ಎಐ (AI), ರೋಬೋಟಿಕ್ಸ್ ಮತ್ತು ಡ್ರೋನ್‌ಗಳ ಬಳಕೆಯ ಬಗ್ಗೆ ಚರ್ಚೆಗಳು ನಡೆಯಬೇಕಿದೆ. ಆದರೆ ನಾವು ಪರೀಕ್ಷಾ ಅಕ್ರಮಗಳು, ಶಿಥಿಲಗೊಂಡ ಶಾಲಾ ಕಟ್ಟಡಗಳು ಮತ್ತು ಬಿಸಿಯೂಟದಲ್ಲಿ ಹುಳುಗಳು ಬೀಳುವಂತಹ ಕಳಪೆ ವ್ಯವಸ್ಥೆಗಳಲ್ಲೇ ಸಿಲುಕಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ನೆಲದ ವಾಸ್ತವವನ್ನು ಮರೆಮಾಚಿ ಜನರಿಗೆ ಸುಳ್ಳು ಹೇಳುವುದು ಸರಿಯಲ್ಲ ಎಂದ ಪಿತ್ರೋಡಾ, “2047ರ ವೇಳೆಗೆ ವಿಕಸಿತ ಭಾರತ ಎನ್ನುವುದು ಕೇವಲ ಒಂದು ಆಕರ್ಷಕ ಘೋಷಣೆಯಷ್ಟೇ. ಸಾಮಾನ್ಯ ಜನರ ಬುದ್ಧಿವಂತಿಕೆಯನ್ನು ಯಾರೂ ಕಡೆಗಣಿಸಬಾರದು, ಜನರಿಗೆ ವಾಸ್ತವದ ಅರಿವಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೊರೆತ ಸಬಲೀಕರಣದ ಕ್ಷಣದಂತೆ, ನಮಗೆ 2047ರಲ್ಲೂ ಬರೀ ಘೋಷಣೆಗಳ ಬದಲಿಗೆ ಜನರ ನಿಜವಾದ ಶ್ರೇಯೋಭಿವೃದ್ಧಿಯ ಸಂಕಲ್ಪ ಬೇಕಿದೆ” ಎಂದು ಪ್ರತಿಪಾದಿಸಿದರು.

Related Articles

ಇತ್ತೀಚಿನ ಸುದ್ದಿಗಳು