ಸೋನಿಯಾ ಪುಸ್ತಕ ವಿವಾದ | ಪುಸ್ತಕಗಳ ಬೈಂಡಿಂಗ್ ಮಾತ್ರವಲ್ಲ, ಪ್ರಕಾಶಕರ ಬೆನ್ನೆಲುಬು ಕೂಡ ಗಟ್ಟಿ ಇರಬೇಕು: ಪೆಂಗ್ವಿನ್‌, ಕೇಂದ್ರ ಸರ್ಕಾರದ ವಿರುದ್ಧ ಅರುಣ್ ಶೌರಿ ವಾಗ್ದಾಳಿ

ದೆಹಲಿ: ಸಾರ್ವಜನಿಕ ಮಹತ್ವವುಳ್ಳ ಮತ್ತು ಸಮಾಜಕ್ಕೆ ಅಗತ್ಯವಿರುವ ಉತ್ತಮ ಸಾಹಿತ್ಯ ಹಾಗೂ ಪುಸ್ತಕಗಳನ್ನು ಓದುಗರಿಗೆ ತಲುಪಿಸುವುದು ಪ್ರಕಾಶಕರ ಪ್ರಾಥಮಿಕ ಕರ್ತವ್ಯವಾಗಿದ್ದು, ಇಂತಹ ಸಂದರ್ಭಗಳಲ್ಲಿ ಪ್ರಕಾಶಕರು ಹಿಂಜರಿಯಬಾರದು ಎಂದು ಹಿರಿಯ ಪತ್ರಕರ್ತ ಹಾಗೂ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಅಭಿಪ್ರಾಯಪಟ್ಟಿದ್ದಾರೆ. ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಕರಣ್ ಥಾಪರ್ ಅವರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ವಿದ್ಯಮಾನಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ಕೇವಲ ಪುಸ್ತಕಗಳ ಬೈಂಡಿಂಗ್‌ಗೆ ಮಾತ್ರ ಗಟ್ಟಿ ಬೆನ್ನೆಲುಬು (strong spine) ಇದ್ದರೆ ಸಾಲದು, ಪುಸ್ತಕ ಪ್ರಕಾಶಕರಿಗೂ ಗಟ್ಟಿಯಾದ ಬೆನ್ನೆಲುಬು (ಧೈರ್ಯ) ಇರಬೇಕು” ಎಂದು ಶೌರಿ ಚಾಟಿ ಬೀಸಿದರು. ಪುಸ್ತಕ ಅಥವಾ ಪ್ರಕಟಣೆಗಳನ್ನು ತಡೆಯುವ ಮತ್ತು ನಿಯಂತ್ರಿಸುವ ಪ್ರವೃತ್ತಿಯು ಪ್ರಬಲ ಸರ್ಕಾರದ ಲಕ್ಷಣವಲ್ಲ; ಬದಲಾಗಿ ಅದು ಆಡಳಿತದಲ್ಲಿರುವವರ ಆತಂಕ ಮತ್ತು ದೌರ್ಬಲ್ಯದ ಸಂಕೇತ ಎಂದು ಅವರು ಬಣ್ಣಿಸಿದರು.

ದೇಶವನ್ನು ‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ’ ಅಥವಾ ‘ಪ್ರಜಾಪ್ರಭುತ್ವದ ತಾಯಿ’ ಎಂದು ಕರೆಯುವ ಮೂಲಕ ನಾವು ನಮ್ಮನ್ನು ನಾವೇ ಮರುಳು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದ ಶೌರಿ, ಭಾರತದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಿರಂಕುಶ ಆಡಳಿತದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ನಿರ್ಬಂಧದ ಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರಕ್ಕೆ ಕಳಂಕ ತರುತ್ತಿದ್ದು, 56 ಇಂಚಿನ ಎದೆಯುಳ್ಳ ಪ್ರಬಲ ಆಡಳಿತವೆಂಬ ಬಿಂಬಿಕೆಯ ಬದಲು ಅತಿಯಾದ ಅಂಜಿಕೆ ಹೊಂದಿರುವ ದುರ್ಬಲ ಸರ್ಕಾರವನ್ನು ಇದು ಪ್ರದರ್ಶಿಸುತ್ತಿದೆ ಎಂದು ಅವರು ಟೀಕಿಸಿದರು.

Related Articles

ಇತ್ತೀಚಿನ ಸುದ್ದಿಗಳು