ಜನರ ವಿಶ್ವಾಸವೇ ನ್ಯಾಯಾಂಗದ ನಿಜವಾದ ಸಂಪತ್ತು: ಸಿಜೆಐ ಜಸ್ಟಿಸ್ ಸೂರ್ಯಕಾಂತ್

ನ್ಯಾಯಾಂಗ ವ್ಯವಸ್ಥೆಗೆ ಜನರ ವಿಶ್ವಾಸವೇ ಏಕೈಕ ನೈಜ ಆಸ್ತಿಯಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಜಸ್ಟಿಸ್ ಸೂರ್ಯಕಾಂತ್ ಹೇಳಿದ್ದಾರೆ. ನ್ಯಾಯಾಲಯದಲ್ಲಿ ಮೊಕದ್ದಮೆ ಸೋತ ವ್ಯಕ್ತಿ ಕೂಡ ನ್ಯಾಯಾಂಗವು ತನ್ನೊಂದಿಗೆ ನ್ಯಾಯಸಮ್ಮತವಾಗಿ ವರ್ತಿಸಿದೆ ಎಂಬ ನಂಬಿಕೆ ಹೊಂದಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಾನು ನಿರೀಕ್ಷಿಸಿದಂತೆ ತೀರ್ಪು ಬರಲಿಲ್ಲ ಎಂದ ಮಾತ್ರಕ್ಕೆ ಯಾರೂ ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಳ್ಳಬಾರದು; ಆದರೆ, ವಿಚಾರಣೆಯ ಪ್ರಕ್ರಿಯೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಜನ ಭಾವಿಸಿದರೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯೇ ಕುಸಿದುಬೀಳುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ನವದೆಹಲಿಯ ‘ದಿ ಲೀಲಾ ಪ್ಯಾಲೇಸ್’ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಖ್ಯಾತ ನ್ಯಾಯಶಾಸ್ತ್ರಜ್ಞ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ದಿವಂಗತ ರಾಮ್ ಜೇಠ್ಮಲಾನಿ ಅವರ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮಾತನಾಡಿದರು. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹಾಗೂ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನ್ಯಾಯಾಂಗವು ವಿಮರ್ಶೆಗಳಿಂದ ಎಂದಿಗೂ ದೂರವಿರಬಾರದು ಎಂದು ಪ್ರತಿಪಾದಿಸಿದ ಸಿಜೆಐ, ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಪ್ರಕರಣದ ಸ್ವಯಂಪ್ರೇರಿತ ವಿಚಾರಣೆಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಸಂಸ್ಥೆಯಾಗಿ ನ್ಯಾಯಾಂಗ ವ್ಯವಸ್ಥೆಯು ಟೀಕೆಗಳಿಗೆ ಹಿಂಜರಿಯಬಾರದು ಎಂಬುದನ್ನು ಪುನರುಚ್ಚರಿಸಿದ ಅವರು, ನ್ಯಾಯಾಂಗದ ಕಾರ್ಯವೈಖರಿಯ ಬಗೆಗಿನ ನಿಷ್ಪಕ್ಷಪಾತ, ವಸ್ತುನಿಷ್ಠ ಹಾಗೂ ರಚನಾತ್ಮಕ ಟೀಕೆಗಳು ಕ್ರಿಯಾತ್ಮಕ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಅಗತ್ಯ ಹಾಗೂ ಸಕ್ರಮ ಅಂಗಗಳಾಗಿವೆ ಎಂದು ತಿಳಿಸಿದರು. ಇಂತಹ ಆರೋಗ್ಯಕರ ವಿಮರ್ಶೆಗಳು ಸಾಂಸ್ಥಿಕ ಉತ್ತರದಾಯಿತ್ವವನ್ನು ಹೆಚ್ಚಿಸುವುದರ ಜೊತೆಗೆ ನ್ಯಾಯಾಂಗದಲ್ಲಿ ಸ್ವಯಂ ತಿದ್ದುಪಡಿಗೂ ನೆರವಾಗುತ್ತವೆ ಎಂದರು. ಸಾಮಾನ್ಯ ಜನರಿಗೆ ನ್ಯಾಯಾಲಯಗಳು ಇನ್ನೂ ದೂರದ ಸಂಗತಿಯಾಗಿಯೇ ಕಾಣುತ್ತಿದ್ದು, ನ್ಯಾಯಾಲಯದ ಪ್ರಕ್ರಿಯೆಗಳು ಸಂಕೀರ್ಣವಾಗಿರುವುದರಿಂದ ಕಾನೂನು ಸೂಕ್ಷ್ಮಗಳನ್ನು ಅರಿತ ವಕೀಲರನ್ನು ನೇಮಿಸಿಕೊಳ್ಳುವ ಶಕ್ತಿಯುಳ್ಳವರಿಗೆ ಈ ವ್ಯವಸ್ಥೆ ಹೆಚ್ಚು ಅನುಕೂಲಕರವಾಗಿ ಪರಿಣಮಿಸುತ್ತಿರುವ ವಾಸ್ತವವನ್ನು ಅವರು ಪ್ರಸ್ತಾಪಿಸಿದರು.

ಇದೇ ಸಮಾರಂಭದಲ್ಲಿ ಮಾತನಾಡಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ನ್ಯಾಯಾಂಗ ಮತ್ತು ನ್ಯಾಯಮಂಡಳಿಗಳಲ್ಲಿ ನಡೆಯುವ ಭ್ರಷ್ಟಾಚಾರದಲ್ಲಿ ‘ಫಿಕ್ಸರ್ ವಕೀಲರ’ ಪಾತ್ರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಇಂತಹ ವಕೀಲರ ಗುರುತು ಕಾನೂನು ವಲಯದಲ್ಲಿ ಎಲ್ಲರಿಗೂ ತಿಳಿದಿದ್ದು, ಇವರ ವಿವರಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಜೊತೆ ಹಂಚಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು. ನ್ಯಾಯಾಂಗದ ಮೇಲೆ ಜನಸಾಮಾನ್ಯರಿಗೆ ನಂಬಿಕೆ ಉಳಿಯಬೇಕಾದರೆ ಇಂತಹ ಅಕ್ರಮಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

Related Articles

ಇತ್ತೀಚಿನ ಸುದ್ದಿಗಳು