ಹೋರಾಟಗಾರ ಉಮರ್ ಖಾಲಿದ್ ಒಬ್ಬ ‘ರಾಷ್ಟ್ರವಾದಿ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಂಗಳವಾರ ಬಣ್ಣಿಸಿದ್ದಾರೆ. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (ಎನ್ಎಲ್ಎಸ್ಐಯು) ‘ಲಾ ಆಂಡ್ ಸೊಸೈಟಿ ಕಮಿಟಿ’ಯು ಸೆಪ್ಟೆಂಬರ್ 14 ರಂದು ಆಯೋಜಿಸಿದ್ದ, ಪ್ರಸ್ತುತ ಮುಂದೂಡಲಾಗಿರುವ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಆರ್ಎಸ್ಎಸ್ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರೋಧಿಸಿದ್ದಕ್ಕೆ ಹರಿಪ್ರಸಾದ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಉಮರ್ ಖಾಲಿದ್ ಬಗ್ಗೆ ಮಾತನಾಡಲು ಎಬಿವಿಪಿಗೆ ಯಾವುದೇ ಹಕ್ಕಿಲ್ಲ ಎಂದಿರುವ ಹರಿಪ್ರಸಾದ್, “ದೇಶದ ಮೊದಲ ಭಯೋತ್ಪಾದಕ ಹಾಗೂ ದೇಶದ್ರೋಹಿ ನಾಥೂರಾಂ ಗೋಡ್ಸೆಯನ್ನು ಆರಾಧಿಸುವ ಎಬಿವಿಪಿಗೆ ಉಮರ್ ಖಾಲಿದ್ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ. ಫೆಬ್ರವರಿ 2020ರ ಈಶಾನ್ಯ ದೆಹಲಿ ಗಲಭೆಯ ಪಿತೂರಿ ಆರೋಪದಡಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಉಮರ್ ಖಾಲಿದ್ ಜೈಲುಪಾಲಾಗಿ ಆರು ವರ್ಷ ಹಾಗೂ ಶರ್ಜೀಲ್ ಇಮಾಮ್ ಜೈಲುಪಾಲಾಗಿ ಆರೂವರೆ ವರ್ಷ ಕಳೆದ ಹಿನ್ನೆಲೆಯಲ್ಲಿ ಈ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಎನ್ಎಲ್ಎಸ್ಐಯು ಸಮಿತಿ ಆಯೋಜಿಸಿತ್ತು.
ಹರಿಪ್ರಸಾದ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಎಬಿವಿಪಿ, ಯಾವ ಆಧಾರದ ಮೇಲೆ ಖಾಲಿದ್ ಅವರನ್ನು ರಾಷ್ಟ್ರವಾದಿ ಎಂದು ಕರೆಯಲಾಗುತ್ತಿದೆ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ತಿರುಗೇಟು ನೀಡಿದೆ. ಭಾರತೀಯ ಸಂಸತ್ತಿನ ಮೇಲೆ ದಾಳಿ ನಡೆಸಿ ಭದ್ರತಾ ಸಿಬ್ಬಂದಿಯ ರಕ್ತ ಹರಿಸಿದ ಭಯೋತ್ಪಾದಕ ಅಫ್ಜಲ್ ಗುರುವನ್ನು ಬಹಿರಂಗವಾಗಿ ಬೆಂಬಲಿಸಿದ ವ್ಯಕ್ತಿಯನ್ನು ಕಾಂಗ್ರೆಸ್ ಹೇಗೆ ರಾಷ್ಟ್ರವಾದಿ ಎಂದು ಕರೆಯುತ್ತದೆ ಎಂದು ಎಬಿವಿಪಿ ಬೆಂಗಳೂರು ಕಾರ್ಯದರ್ಶಿ ಅಭಿನಂದನ್ ಮಿರ್ಜಿ ಪ್ರಶ್ನಿಸಿದ್ದಾರೆ.
ಈ ಮಧ್ಯೆ, ಎನ್ಎಲ್ಎಸ್ಐಯುನಲ್ಲಿ ಯೋಜಿಸಲಾಗಿದ್ದ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಹಾಗೂ ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಲ್ಹಾದ್ ಜೋಶಿ ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಪತ್ರ ಬರೆದಿದೆ.
