ಬೊಗಸೆಗೆ ದಕ್ಕಿದ್ದು-99 : ಸರ್ವಾಧಿಕಾರಿ ದೇಶದಲ್ಲಿ ಭಟ್ಟಂಗಿಗಳು ‘ಕ್ಲಿಕ್’; ಎದುರಾಡಿದರೆ ‘ಕಿಕ್’!
ಲಿಂಕ್ ನಕಲಿಸಲಾಗಿದೆ ✓
“..ಎಲ್ಲಾ ಸರ್ವಾಧಿಕಾರಿಗಳು ತಮ್ಮ ಸುತ್ತ ಭಟ್ಟಂಗಿಗಳ ಗುಂಪನ್ನು (Clique) ನೇಮಿಸಿಕೊಂಡಿರುತ್ತಾರೆ. ಅವರಿಗೆ ಕೆಲವು ಆಪ್ತ ಸಲಹೆಗಾರೂ ಇರುತ್ತಾರೆ. ಹೊಗಳಿದರೆ ಮಾತ್ರ ತಾವು ಕ್ಲಿಕ್ ಆಗುತ್ತಾರೆ. ಎದುರು ಮಾತಾಡಿದರೆ, ಅಪ್ರಿಯವಾದ ಮಾತುಗಳನ್ನು ಆಡಿದರೆ ಕಿಕ್ ಸಿಗುತ್ತದೆ!..” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಎಲ್ಲಾ ಸರ್ವಾಧಿಕಾರಿಗಳು ತಮ್ಮ ಸುತ್ತ ಭಟ್ಟಂಗಿಗಳ ಗುಂಪನ್ನು (Clique) ನೇಮಿಸಿಕೊಂಡಿರುತ್ತಾರೆ. ಅವರಿಗೆ ಕೆಲವು ಆಪ್ತ ಸಲಹೆಗಾರೂ ಇರುತ್ತಾರೆ. ಅದರೆ, ಅವರ ಸಲಹೆಗಳನ್ನು ಇವರು ಕೇಳುತ್ತಾರೆ ಎಂದೇನಲ್ಲ! ಇವರಿಗೂ ಒಂದು ವಿಷಯ ಸ್ಪಷ್ಟವಾಗಿ ಗೊತ್ತಿರುತ್ತದೆ. ಅದೆಂದರೆ: ಹೊಗಳಿದರೆ ಮಾತ್ರ ತಾವು ಕ್ಲಿಕ್ (Click) ಆಗುತ್ತೇವೆ; ಎದುರು ಮಾತಾಡಿದರೆ, ಅಪ್ರಿಯವಾದ ಮಾತುಗಳನ್ನು ಆಡಿದರೆ ಹಿಂಭಾಗಕ್ಕೆ ಒದೆ (kick) ಸಿಗುತ್ತದೆ!
ಅದಕ್ಕಾಗಿ ಅವರು ಯಾವಾಗಲೂ ಸರ್ವಾಧಿಕಾರಿಯ ಯಾವ ತಪ್ಪುಗಳನ್ನೂ ಹೇಳಲುಹೋಗದೆ ಎಲ್ಲವೂ ಸರಿಯಾಗಿದೆ ಎಂದು ಹೊಗಳುತ್ತಾರೆ. ಯಾವಾಗಲೂ ಪ್ರಿಯವಾಗಬಹುದಾದ ಸಲಹೆಗಳನ್ನೇ ನೀಡುತ್ತಾರೆ. ದೇಶವು ಪ್ರಗತಿ ಪಥದಲ್ಲಿದೆ; ಜನರು ತಮ್ಮನ್ನು ಕೊಂಡಾಡುತ್ತಿದ್ದಾರೆ ಎಂದೇ ಹೇಳುತ್ತಾರೆ. ಸದಾ ಅಂಗರಕ್ಷಕಪಡೆಯಿಂದ ಆವರಿಸಲ್ಪಟ್ಟ, ಆಯ್ದ ಜನರನ್ನಷ್ಟೇ ಭೇಟಿಮಾಡುವ ಸರ್ವಾಧಿಕಾರಿಗೆ ವಾಸ್ತವ ಸ್ಥಿತಿ ಏನು ಗೊತ್ತು!? ಹಾಗಾಗಿ ಆತ ತಾನು ಮಾಡಿದ್ದೆಲ್ಲ ಸರಿ ಎಂಬ ಭ್ರಮೆಯಲ್ಲಿರುತ್ತಾನೆ! ಆತನ ಸ್ಥಿತಿ ಬತ್ತಲೆ ರಾಜನ ಹಳೆಯ ಕತೆಯಂತಾಗುತ್ತದೆ. ಆ ಕತೆ ಹೆಚ್ಚುಕಡಿಮೆ ಹೀಗಿದೆ.
ಬತ್ತಲೆ ರಾಜನ ಯಾರಿಗೂ ಕಾಣದ, ಎಲ್ಲರೂ ಹೊಗಳುವ ಬಟ್ಟೆ!
ಒಂದು ದೇಶದಲ್ಲಿ ಒಬ್ಬ ಸರ್ವಾಧಿಕಾರಿ ರಾಜನಿದ್ದ. ಆತ ಪ್ರಜೆಗಳನ್ನು ಮಾತಿನಲ್ಲೇ ಮರುಳು ಮಾಡುತ್ತಾ ಬಣ್ಣಬಣ್ಣದ ಕನಸುಗಳನ್ನು ತೋರಿಸುತ್ತಿದ್ದ. ಆತ ದೇಶ ವಿದೇಶಗಳನ್ನು ಸುತ್ತುತ್ತಾ ವೈಭವದಿಂದ ಕಾಲ ಕಳೆಯುತ್ತಿದ್ದ. ತಾನು ವಿಶ್ವಶ್ರೇಷ್ಟ ನಾಯಕ ಎಂಬ ಭ್ರಮೆ ಆತನ ತಲೆಗೆ ಅಡರಿತ್ತು. ಅವನು ಯಾವಾಗಲೂ ಲಕ್ಷಗಟ್ಟಲೆ ರೂಪಾಯಿ ಬೆಲೆಬಾಳುವ ಬಟ್ಟೆಗಳನ್ನು ತೊಟ್ಟು ಫ್ಯಾಷನ್ ಶೋ ಮಾಡೆಲ್ನಂತೆ ಪ್ರಜೆಗಳ ಎದುರು ಪೋಸು ಕೊಡುತ್ತಿದ್ದ.
ಒಂದು ದಿನ ಅವನ ಅರಮನೆಗೆ ಗುಜರಾತಿನ ಬಟ್ಟೆ ವ್ಯಾಪಾರಿಗಳು ಬಂದರು. ತನ್ನ ಘನತೆಗೆ ತಕ್ಕಂತಹ ಬಟ್ಟೆ ನಿಮ್ಮಲ್ಲಿದೆಯೇ ಎಂದು ಕೇಳಿದ ರಾಜನಿಗೆ ಆ ಬಟ್ಟೆ ವ್ಯಾಪಾರಿಗಳು ತಮ್ಮ ಪೆಟ್ಟಿಗೆಯಲ್ಲಿದ್ದ ಬಗೆ ಬಗೆಯ ಬಟ್ಟೆಗಳನ್ನು ಬಿಚ್ಚಿ ತೋರಿಸಿದರು. ಯಾವುದೂ ರಾಜನಿಗೆ ಇಷ್ಟವಾಗಲಿಲ್ಲ. ವ್ಯಾಪಾರಿಗಳು ತಮ್ಮಲ್ಲಿರುವ ಅತಿ ದುಬಾರಿ, ಶ್ರೇಷ್ಠ ಬಟ್ಟೆಯನ್ನು ತೋರಿಸಿದರೂ ಅವನಿಗೆ ಇಷ್ಟವಾಗಲಿಲ್ಲ.
ಇವನಿಗೆ ಒಂದು ಪಾಠ ಕಲಿಸಲೇಬೇಕು ಎಂದು ಅವರು ನಿರ್ಧರಿಸಿದರು. ಅವರು ಒಂದು ಪೆಟ್ಟಿಗೆಯನ್ನು ರಾಜನ ಮುಂದಿಟ್ಟರು. “ಮಹಾರಾಜರೇ ಈ ಪೆಟ್ಟಿಗೆಯಲ್ಲಿರುವ ವಿಶಿಷ್ಟ ರೀತಿಯ ಈ ತನಕ ಯಾರೂ ಉಟ್ಟಿರದಂತಹ ಬಟ್ಟೆಯನ್ನು ಜಗತ್ತಿನ ಸರ್ವಶ್ರೇಷ್ಟ ರಾಜನಿಗೆ ಅರ್ಪಿಸಬೇಕು ಎಂದಿದ್ದೆವು. ನಿಮಗಿಂತ ದೊಡ್ಡ ರಾಜ ಬೇರೆ ಯಾರಿದ್ದಾರೆ? ಆದುದರಿಂದ ಅದನ್ನು ನಿಮಗೇ ಅರ್ಪಿಸಬೇಕು ಎಂದಿದ್ದೇವೆ. ಆದರೆ ಇದೊಂದು ವಿಶಿಷ್ಟವಾದ ಮಾಯದ ಬಟ್ಟೆ. ಇದನ್ನು ಬಂಗಾರದ ನೂಲುಗಳಿಂದ ನೇಯಲಾಗಿದೆ. ಅಮೂಲ್ಯ ವಜ್ರಗಳಿಂದ ಅಲಂಕರಿಸಲಾಗಿದೆ. ಕಾಮನಬಿಲ್ಲಿನ ಬಣ್ಣಗಳು ಇದರಲ್ಲಿ ಕಂಗೊಳಿಸುತ್ತವೆ” ಎಂದು ಬೊಗಳೆ ಬಿಟ್ಟರು.
“ಆದರೆ, ಈ ಬಟ್ಟೆಯ ಸರ್ವ ಗುಣಗಳು ಕಾಣಬೇಕಾದರೆ ನೋಡುವವರಿಗೂ ಅರ್ಹತೆಯಿರಬೇಕಾಗುತ್ತದೆ. ಈ ಬಟ್ಟೆ ಯಾರ ಕಣ್ಣಿಗಾದರೂ ಕಾಣಬೇಕಾದರೆ ಅವರು ದೇಶಭಕ್ತರಾಗಿರಬೇಕು, ರಾಜನಿಷ್ಟೆ ಉಳ್ಳವರಾಗಿರಬೇಕು. ಕನಸು ಮನಸ್ಸಿನಲ್ಲಿಯೂ ನಿಮ್ಮ ವಿರುದ್ಧ ಯೋಚಿಸಿರಬಾರದು. ಅಂತಹ ಗುಣ ಇರುವ ಎಲ್ಲರಿಗೂ ಈ ಬಟ್ಟೆ ಕಾಣುತ್ತದೆ. ಆದರೆ ನಿಮ್ಮ ಆಸ್ಥಾನದಲ್ಲಿರುವವರಿಗೆ ಈ ಗುಣಗಳು ಇವೆಯೇ ?” ಎಂದು ಬಟ್ಟೆ ವ್ಯಾಪಾರಿಗಳು ಕೇಳಿದರು.
ರಾಜ ಆಸ್ಥಾನಿಗರ ಕಡೆಗೆ ನೋಡಿದ್ದೇ ತಡ- ಅವರೆಲ್ಲರೂ ಒಮ್ಮೆಲೇ ತಾವೆಲ್ಲರೂ ದೇಶಭಕ್ತರೂ, ರಾಜನಿಷ್ಟೆ ಉಳ್ಳವರೂ ಎಂದು ಗಟ್ಟಿಯಾಗಿ ಅರಚಿದರು. ಅವರ ಅರಚಾಟ ನೆರೆಯ ದೇಶಗಳಿಗೂ ಕೇಳಿಸಿತು! ರಾಜನ ಅಪ್ಪಣೆಯಂತೆ ವ್ಯಾಪಾರಿಗಳು ಪೆಟ್ಟಿಗೆಯನ್ನು ತೆರೆದರು. ತೆರೆದಾಕ್ಷಣ ಪ್ರಖರ ಬೆಳಕನ್ನು ಕಂಡವರಂತೆ ಒಮ್ಮೆಲೇ ಕಣ್ಣುಗಳನ್ನು ಮುಚ್ಚಿಕೊಂಡು ಮೆಲ್ಲನೆ ಪೆಟ್ಟಿಗೆಯಿಂದ ಬಟ್ಟೆಯನ್ನು ಹೊರ ತೆಗೆದಂತೆ ನಟಿಸಿದರು. ಇಬ್ಬರು ವ್ಯಾಪಾರಿಗಳು ಕೈಯಲ್ಲಿ ಬಟ್ಟೆಗಳ ಎರಡು ತುದಿಗಳನ್ನು ಹಿಡಿದಂತೆ ನಟಿಸಿದರೆ, ಉಳಿದವವರು ಅದರ ಗುಣಗಾನದಲ್ಲಿ ತೊಡಗಿದರು!
ರಾಜನಿಗೆ ಅಲ್ಲೇನೂ ಕಾಣಿಸಲಿಲ್ಲ. ಆದರೆ ಆ ಬಟ್ಟೆ ತನಗೆ ಕಾಣಿಸದಿದ್ದರೆ ಪ್ರಜೆಗಳ ಎದುರು ತನಗೆ ದೇಶಭಕ್ತಿ ಇಲ್ಲ ಎಂದು ಸಾಬೀತಾಗುತ್ತದೆ ಎಂದು ಅವನಿಗೆ ಆತಂಕವಾಯಿತು. ಅವನು ತನ್ನ ಮಂತ್ರಿಯೆಡೆಗೆ ನೋಡಿದ. ಮಂತ್ರಿಗೂ ಅಲ್ಲೇನೂ ಕಾಣಲಿಲ್ಲ. ಅದರೆ, ಕಾಣುತ್ತಿಲ್ಲ ಎಂದರೆ ದೇಶದ್ರೋಹಿ, ರಾಜದ್ರೋಹಿ ಅಗುತ್ತೇನೆ ಎಂದು ಭಯಗೊಂಡ ಮಂತ್ರಿ ಬಟ್ಟೆಯನ್ನು ನೋಡಿದಂತೆ ನಟಿಸಿ, ಬಟ್ಟೆಯ ಅದ್ಬುತ ಗುಣಗಳನ್ನು ಹೊಗಳಲು ಪ್ರಾರಂಭಿಸಿದ. ಮಂತ್ರಿಯ ಹಿಂದೆಯೇ ಸೇನಾಪತಿಯೂ ಬಟ್ಟೆಯನ್ನು ಹೊಗಳಲು ಅರಂಭಿಸಿದ. ಇಬ್ಬರ ನಡುವೆ ಬಟ್ಟೆಯ ಗುಣಗಳ ಚರ್ಚೆಯೇ ನಡೆಯಿತು. ಈಗ ವ್ಯಾಪಾರಿಗಳೇ ಅಚ್ಚರಿ ಪಡುವಂತೆ ಆಸ್ಥಾನದಲ್ಲಿರುವ ಎಲ್ಲರೂ ಬಟ್ಟೆಯ ಮಹಾಸೌಂದರ್ಯವನ್ನು ರಾಜನಿಗೆ ವರ್ಣಿಸತೊಡಗಿದರು. ರಾಜನೂ ಆ ಬಟ್ಟೆಯ ಸೌಂದರ್ಯವನ್ನು ಆಸ್ವಾದಿಸತೊಡಗಿದ!
ಸ್ವಲ್ಪ ಸಮಯದಲ್ಲಿಯೇ ಇಡೀ ದೇಶಕ್ಕೆ ವಿಷಯ ಹರಡಿತು. ದೇಶಪ್ರೇಮ, ರಾಜನಿಷ್ಟೆ ಇಲ್ಲದವರಿಗೆ ಬಟ್ಟೆ ಕಾಣುವುದಿಲ್ಲ ಎಂಬ ಸುದ್ದಿಯಿಂದ ಅವರಿಗೆ ಆತಂಕವಾಯಿತು. ಅವರಲ್ಲಿ ದೇಶಪ್ರೇಮ ಇದ್ದರೂ, ಬಹಳಷ್ಟು ಮಂದಿ ರಾಜನಿಗೆ ಬೈಯ್ಯುವವರೇ ಆಗಿದ್ದರು. ಕೆಲವು ದಿನಗಳ ಕಾಲ ವ್ಯಾಪಾರಿಗಳು ಬಟ್ಟೆ ಹೊಲಿಯುವ ನಾಟಕವಾಡಿದರು. ಪ್ರಜೆಗಳ ಎದುರು ಬಟ್ಟೆಯ ಪ್ರದರ್ಶನಕ್ಕೆ ದಿನ ನಿಗದಿಯಾಯಿತು. ಡಂಗುರವನ್ನೂ ಸಾರಲಾಯಿತು.
ವ್ಯಾಪಾರಿಗಳು ಆ ದಿನ ರಾಜನಿಗೆ ಬಟ್ಟೆ ಉಡಿಸುವ ನಾಟಕವಾಡಿ ಆಸ್ಥಾನಕ್ಕೆ ಕರೆದುಕೊಂಡು ಬಂದರು. ಆಸ್ಥಾನಿಗರೆಲ್ಲ ಬೆರಗಾಗಿ ನೋಡುತ್ತಾರೆ- ರಾಜ ಸಂಪೂರ್ಣ ಬೆತ್ತಲಾಗಿ ನಿಂತಿದ್ದಾನೆ. ಆದರೆ ಯಾರಿಗೂ ಅದನ್ನು ಹೇಳುವ ಧೈರ್ಯವಿಲ್ಲ. ಒಬ್ಬೊಬ್ಬರಾಗಿ ಬಟ್ಟೆಯ ಸೌಂದರ್ಯವನ್ನು ಹೊಗಳತೊಡಗಿದರು. ರಾಜ ಖುಷಿಯಿಂದ ಬೀಗಿದ. ವ್ಯಾಪಾರಿಗಳು ಆತ ನೀಡಿ ಅಪಾರ ಹಣವನ್ನು, ಹಿಡಿದುಕೊಂಡು ಉಳಿದ ಅಸಲಿ ಬಟ್ಟೆಗಳೊಂದಿಗೆ ಅಲ್ಲಿಂದ ಕಾಲುಕಿತ್ತರು! (ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶಬಿಟ್ಟು ಓಡಿದವರ ನೆನಪಾದರೆ ಅಚ್ಚರಿಯಿಲ್ಲ!)
“ಬತ್ತಲೆ ರಾಜ!” ಎಂದು ಕೂಗಾಡಿದ “ಜೆನ್ ಝಿ” ಮಕ್ಕಳು!
ರಾಜನೋ ರಾಜಮಾರ್ಗದಲ್ಲಿ ಮೆರವಣಿಗೆ ಹೊರಟು ಪ್ರಜೆಗಳಿಗೆ ದರ್ಶನ ನೀಡಿದ. ಜನರಿಗೆ ಬತ್ತಲೆ ರಾಜನನ್ನು ಕಂಡು ನಗು ಬಂದರೂ ಭಯದಿಂದ ಯಾರೂ ತುಟಿ ಬಿಚ್ಚಲಿಲ್ಲ! ಆದರೆ ಮನಸ್ಸಿನೊಳಗೆ ರಾಜನನ್ನು ನೋಡಿ ನಗುತ್ತಿದ್ದರು, ಅಸಹ್ಯ ಪಡುತ್ತಿದ್ದರು. ಆದರೆ, ಕೆಲವು (ಜೆನ್ ಜಿ);ಮಕ್ಕಳು ಮಾತ್ರ ಸುಳ್ಳು ಹೇಳಲು ಗೊತ್ತಿಲ್ಲದೇ, “ಬತ್ತಲೆ ರಾಜ! ಬತ್ತಲೆ ರಾಜ!” ಎಂದು ಕೂಗತೊಡಗಿದರು. ತಕ್ಷಣ ಸೈನಿಕರು ಆ ‘“ರಾಜದ್ರೋಹಿ, ದೇಶದ್ರೋಹಿ” ಮಕ್ಕಳನ್ನು ಬಂಧಿಸಿ ಜೈಲಿಗೆ ತಳ್ಳಿದರು. ರಾಜ ಈಗಲೂ ಅದೇ ಬಟ್ಟೆಯಲ್ಲಿ ತಿರುಗಾಡುತ್ತಿದ್ದಾನಂತೆ…ಜನರು ಅವನನ್ನೂ, ಅವನ ಬಟ್ಟೆಯನ್ನೂ ಹೊಗಳುತ್ತಲೇ ಇದ್ದಾರಂತೆ!
ನಮ್ಮಲ್ಲಿಯೂ ಹೀಗೆಯೇ ಆಗುತ್ತಿದೆಯೇ?! ಸತ್ಯ ಹೇಳಿದ್ದಕ್ಕಾಗಿ ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಅಂತವರ ಕೊಲೆಯಾಗಿರುವ, ಹಲವು ಬುದ್ಧಿಜೀವಿಗಳನ್ನು ನಗರ ನಕ್ಸಲರು, ದೇಶದ್ರೋಹಿಗಳೆಂಬ ಆಧಾರ ರಹಿತ ಅರೋಪ ಹೊರಿಸಿ ಜೈಲಿಗೆ ತಳ್ಳಿರುವ, ಮತ್ತೀಗ ಜೆನ್ ಜಿ ಪ್ರತಿಭಟನಕಾರರನ್ನು ಹಿಂಸಾತ್ಮಕವಾಗಿ ದಮನಿಸಿರುವ, ಸಿಜೆಪಿ ಪ್ರತಿಭಟನೆಗಳು ಹೆಚ್ಚು ಜನರನ್ನು ತಲಪುತ್ತಿರುವ ಸಂದರ್ಭದಲ್ಲಿ ಇದನ್ನೊಮ್ಮೆ ಯೋಚಿಸಿ ನೋಡಿ.
ಈ ಸಂದರ್ಭದಲ್ಲಿ ದಶಕಗಳ ಹಿಂದೆ ನೋಡಿದ್ದ ಖ್ಯಾತ ನಿರ್ದೇಶಕ ಕೇತನ್ ಮೆಹ್ತಾ ಅವರ ಬವ್ನಿ ಬವಾಯ್ (bhavni bhavai) ಗುಜರಾತಿ ಚಿತ್ರದ ನೆನಪಾಗುತ್ತದೆ. ಇದು ಎಂಬತ್ತರ ದಶಕದ ಚಿತ್ರ. (ಓದುಗರು ನೋಡಲು ಬಯಸಿದಲ್ಲಿ ಯೂ ಟ್ಯೂಬ್ನಲ್ಲಿ ಲಭ್ಯವಿದೆ.) ಎಡೆಬಿಡಂಗಿ ಸರ್ವಾಧಿಕಾರಿ ರಾಜನ ವಿಡಂಬನೆ ಇಲ್ಲಿದೆ. ನಾಸಿರುದ್ದೀನ್ ಷಾ ಮತ್ತು ದಿವಂಗತ ಸದಾಶಿವ ಅಮರಾಪುರ್ಕರ್ ಅದ್ಭುತವಾಗಿ ನಟಿಸಿದ್ದಾರೆ. ನಿಮಗೆ ಯಾರದ್ದಾದರೂ ನೆನಪು ಬರುವುದಂತೂ ಖಂಡಿತ!
ಹೇಲು ತುಳಿದ ರಾಜ- ವಾಸನೆಯ ಮೂಲ ಹುಡುಕಿದ!
ಚಿತ್ರದ ಒಂದು ದೃಶ್ಯ ಇಂತಿದೆ: ಒಂದು ದಿನ ಸರ್ವಾಧಿಕಾರಿ ರಾಜ ಹೇಲು ತುಳಿದು ಅರಮನೆಗೆ ಬರುತ್ತಾನೆ. ಅರಮನೆಯಿಡಿ ದುರ್ವಾಸನೆ ಹರಡುತ್ತದೆ. “ಯಾರು ಹೇಲು ತುಳಿದು ಬಂದವರು?” ಎಂದು ಆತ ಘರ್ಜಿಸುತ್ತಾನೆ. ತಾನೇ ತುಳಿದಿರಬಹುದು ಎಂದು ಅವನಿಗೆ ಅನಿಸುವುದೇ ಇಲ್ಲ! ಸರ್ವಾಧಿಕಾರಿಯಲ್ಲವೇ? ಆಸ್ಥಾನದಲ್ಲಿರುವವರಿಗೆ “ನೀನೇ ತುಳಿದದ್ದು!” ಎಂದು ಹೇಳಲು ಧೈರ್ಯವಿಲ್ಲ. ಭಟ್ಟಂಗಿಗಳಲ್ಲವೇ?
ಅರ್ಧ ಮೀಸೆ ರಾಜ ಊರು ಸುತ್ತಾಡಿದ!
ಎರಡನೇ ದೃಶ್ಯ: ಒಮ್ಮೆ ಸರ್ವಾಧಿಕಾರಿ ರಾಜನ ಮೀಸೆಯನ್ನು ಕ್ಷೌರಿಕ ಟ್ರಿಮ್ ಮಾಡುತ್ತಿರುತ್ತಾನೆ. ಆಗ ದೂತ ಬಂದು ನೆರೆಯ ರಾಜ್ಯದವರು ಕಿತಾಪತಿ ಮಾಡುತ್ತಿದ್ದಾರೆ ಎಂದು ಸುದ್ದಿ ಮುಟ್ಟಿಸುತ್ತಾನೆ. ಎಷ್ಟೋ ಇಂಚಿನ ಎದೆ ಇರುವ ರಾಜ ವೀರಾವೇಶದಿಂದ ಈಗಲೇ ದಂಡೆತ್ತಿಹೋಗಿ (ಸರ್ಜಿಕಲ್ ಸ್ಟ್ರೈಕ್?) ಎಂದು ಮುಖ ತಿರುಗಿಸಿ ಕೈಯನ್ನು ಪಶ್ಚಿಮದ ನೆರೆಯ ದೇಶದತ್ತ ತೋರಿಸಿ ಅಬ್ಬರಿಸುತ್ತಾನೆ. ಕ್ಷೌರಿಕನ ಕತ್ತಿ ಮೀಸೆ ಮೇಲೆ ಇದ್ದುದರಿಂದ ಅರ್ಧ ಮೀಸೆ ಹಾರಿಹೋಗುತ್ತದೆ. ಕ್ಷೌರಿಕ ಜೀವ ಭಯದಿಂದ ಏನೂ ಹೇಳುವುದಿಲ್ಲ. ಉಳಿದವರು ಕೂಡ ಭಯದಿಂದಾಗಿ ಇದನ್ನು ಹೇಳುವುದಿಲ್ಲ. ಸರ್ವಾಧಿಕಾರಿ ರಾಜ ಅರ್ಧ ಮೀಸೆಯಲ್ಲೇ ತಿರುಗುತ್ತಿರುತ್ತಾನೆ.
ಎಲ್ಲಾ ಸರ್ವಾಧಿಕಾರಿಗಳ ಮತ್ತು ಹಾಗೆ ಆಗಬಯಸುವವರ ಕತೆ ಇದೇ ಅಗಿರುತ್ತದೆ. ಕೊನೆಯಲ್ಲಿ ಅವರು ದುರಂತ ಅಂತ್ಯ ಕಾಣುತ್ತಾರೆ. ಇತಿಹಾಸದುದ್ದಕ್ಕೂ ಇದೇ ನಡೆದಿದೆ. ಕೊನೆಗೊಮ್ಮೆ ಅಧಿಕಾರ ಕೈಬಿಟ್ಟಾಗ ಇದೇ ಭಟ್ಟಂಗಿಗಳು ಕೈಕೊಡುತ್ತಾರೆ! ಸರ್ವಾಧಿಕಾರಿಗಳು ತಮ್ಮ ಸುತ್ತಮುತ್ತ ತಮಗಿಂತ ಕಡಿಮೆ ಬುದ್ಧಿಮತ್ತೆ ಇರುವವರನ್ನೇ ನೇಮಿಸುತ್ತಾರೆ. ಬುದ್ಧಿವಂತರು ಅವರಿಗೆ ಅಪಾಯಕಾರಿಗಳಂತೆ ಕಾಣುತ್ತಾರೆ! ತಮಗೆ ಎದುರಾಡಿದವರನ್ನು ತಮಗೆ ಎದುರಾಳಿ ಆಗಬಹುದಾದವರನ್ನು ಮಟ್ಟಹಾಕಿ ಮೂಲೆಗುಂಪು ಮಾಡುತ್ತಾರೆ.
ಭಟ್ಟಂಗಿಗಳು ಕ್ಲಿಕ್! ಎದುರಾಡಿದರೆ ಕಿಕ್!
ಭಾರತದಲ್ಲಿ ನೇರ ಸರ್ವಾಧಿಕಾರವೇನೂ ಬಂದಿಲ್ಲವಾದರೂ ಅಂತಹ ಲಕ್ಷಣಗಳು ಗೋಚರಿಸುತ್ತಿವೆಯೇ?! ಸರಕಾರ ಒಬ್ಬ ವ್ಯಕ್ತಿಯ ಸುತ್ತ ಸುತ್ತುತ್ತಿರುವುದು ನಿಜವಲ್ಲವೇ?! ಮುಂದೆ ನಾನು ಯಾರ ಹೆಸರನ್ನೂ ಉಲ್ಲೇಖಿಸುವುದಿಲ್ಲ. ಓದುತ್ತಾ ಹೋದಂತೆ ಅಲ್ಲಲ್ಲಿ ನಿಲ್ಲಿಸಿ, ನೀವೇ ಹೆಸರುಗಳನ್ನೂ, ಸಂದರ್ಭಗಳನ್ನೂ, ಹೇಳಿಕೆಗಳನ್ನೂ ನೆನೆಪಿಸಿಕೊಳ್ಳಿ! ನಮ್ಮಲ್ಲಿಯೂ ನಾವೆಲ್ಲರೂ ತಾತ್ವಿಕವಾಗಿ ವಿರೋಧಿಸಬಹುದಾದರೂ- ಪಕ್ಷಕ್ಕಾಗಿ ಜೀವ ತೇದ ಹಿರಿಯ ನಾಯಕರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿರುವುದು, ಅವಮಾನ ಮಾಡಲಾಗಿರುವುದು ನಿಜವಲ್ಲವೆ?
ಯಾವುದೇ ಅರ್ಹತೆ ಇಲ್ಲದ ರಾಜಕೀಯ ಅನನುಭವಿ ಮಾಜಿ ಟಿವಿ ನಟಿಗೆ ಮೊದಲಿಗೆ ಅತ್ಯಂತ ಮಹತ್ವದ ಖಾತೆಯೊಂದರಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿ ನಂತರ ಹಿಂಬಡ್ತಿ ನೀಡಿ, ಕೊನೆಗೆ ಗುರುತೇ ಇಲ್ಲದವರಂತೆ ಮೂಲೆಗುಂಪು ಮಾಡಿದ್ದು ನಿಜವಲ್ಲವೆ? ಆಕೆಯ ದಕ್ಷತೆ ಒಮ್ಮೆಲೇ ಕಡಿಮೆಯಾಯಿತೆ? ಈಗ ಮತ್ತೆ ಆಕೆ “ದೇವರ” ಕೃಪಾ ಕಟಾಕ್ಷದಿಂದ ಮತ್ತೆ ಪುಂಗಿ ಊದಲಾರಂಭಿಸಿರುವುದನ್ನು ನೀವು ಗಮನಿಸಿಯೇ ಇರುತ್ತೀರಿ. ಕೇಂದ್ರ ಮಟ್ಟದಲ್ಲಿ ಒಬ್ಬ ಕರ್ನಾಟಕದ ಕೇಂದ್ರಕ್ಕೆ ಹೊಸಬನನ್ನು “ರೈಲು” ಹತ್ತಿಸಿ, ಆ ಅತ್ಯಂತ ಮಹತ್ವದ ಖಾತೆಯ ಕ್ಯಾಬಿನೆಟ್ ಮಂತ್ರಿ ಮಾಡಿ ನಂತರ ಏಕಾಏಕಿ ಹಿಂಬಡ್ತಿ ನೀಡಿ ಅಂಕಿ- ಅಂಶ ಎಣಿಸುವಂತೆ ಮಾಡಿದ್ದು, ಇದೀಗ ಚಲಿಸುವ ರೈಲಿನಿಂದಲೇ ಒದ್ದು ಹೊರಹಾಕಿದ್ದು ಯಾಕಾಗಿ? ತಾನು ಏನು ಬೇಕಾದರೂ ಮಾಡಬಲ್ಲೆ; ನನಗೆ ಎದುರು ಬಿದ್ದವರಿಗೆ ಇದೇ ಗತಿ ಎಂಬ ಸಂದೇಶ ರವಾನಿಸುವ ಸಲುವಾಗಿ ಅಲ್ಲವೇ! ಅದೇ ರೀತಿ ಮೂರು ಕಾಸಿನ ಅರ್ಹತೆ ಇಲ್ಲದ ಕ್ರಿಮಿನಲ್ಗಳೂ, ಬೂದಿಬಡುಕ ಕಾವಿಧಾರಿಗಳೂ, ಬಾಯಿಬಡುಕ “ಅಪ್ಪಟ ಭಾರತೀಯ” ನಟಿಯರೂ- ಸಂಸದರು, ಮಂತ್ರಿಗಳೂ ಆಗಿಲ್ಲವೆ?!
ಎಲ್ಲೆಲ್ಲೂ ಭಟ್ಟಂಗಿಗಳು… ನಿಮ್ಮ ಟಿವಿ, ಮೊಬೈಲಲ್ಲೂ!
ಹಿಟ್ಲರ್ ಕೂಡಾ ತನ್ನ ಸುತ್ತ ಇಂತದ್ದೇ ಬಾಲಬಡುಕರನ್ನು ತುಂಬಿಸಿಕೊಂಡಿದ್ದ. ಅವರು ಅವನನ್ನು ಎಚ್ಚರಿಸುವ ಬದಲು ಹುರಿದುಂಬಿಸುತ್ತಾ ದೇಶವನ್ನೇ ವಿನಾಶಕ್ಕೆ ತಳ್ಳಿದರು. ಹಿಂದಿನ ಕಾಲದ ಆಸ್ಥಾನಿಕರು ಕೇವಲ ಅರಮನೆಯ ದರ್ಬಾರ್ ಹಾಲ್ನಲ್ಲಿ ಮಾತ್ರವೇ ಇರುತ್ತಿದ್ದರು; ಆದರೆ ಇಂದಿನ ಆಸ್ಥಾನಿಕರು ನಮ್ಮ ಮೊಬೈಲ್ ಸ್ಕ್ರೀನ್ಗಳ ಒಳಗೂ, ಸಾಮಾಜಿಕ ಜಾಲತಾಣಗಳ ಐಟಿ ಸೆಲ್ಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಸರಕಾರದ ಜನವಿರೋಧಿ ನೀತಿಗಳನ್ನು ಯಾರಾದರೂ ಪ್ರಶ್ನಿಸಿದರೆ ಸಾಕು, ಈ ಡಿಜಿಟಲ್ ಭಟ್ಟಂಗಿಗಳ ಪಡೆ ತಕ್ಷಣವೇ ಸಕ್ರಿಯವಾಗಿ, ಆ ವ್ಯಕ್ತಿಯ ಮೇಲೆ ವೈಯಕ್ತಿಕ ದಾಳಿ ನಡೆಸಿ ‘ದೇಶದ್ರೋಹಿ’, ‘ಟೂಲ್ಕಿಟ್ ಗ್ಯಾಂಗ್’ ಎಂದು ಬ್ರಾಂಡ್ ಮಾಡಿ ಮೂಲೆಗುಂಪು ಮಾಡುತ್ತದೆ.
ರಾಜನಿಗೆ ಬಟ್ಟೆ ಕಾಣದಿದ್ದರೂ ಆಸ್ಥಾನಿಕರು ಬಟ್ಟೆಯ ಸೌಂದರ್ಯವನ್ನು ಹೊಗಳಿದಂತೆ, ಇಂದಿನ ಮುಖ್ಯವಾಹಿನಿ ಮಾಧ್ಯಮಗಳು ಸಹ ದೇಶದ ನಿರುದ್ಯೋಗ, ಹಣದುಬ್ಬರ ಹಾಗೂ ರೈತರ ಪ್ರತಿಭಟನೆಗಳಂತಹ ನೈಜ ಬಿಕ್ಕಟ್ಟುಗಳನ್ನು ಮರೆಮಾಚಿ, ಸರಕಾರದ ಪ್ರಚಾರದ ಕಹಳೆಗಳನ್ನು ಮಾತ್ರ ಮೊಳಗಿಸುತ್ತವೆ. ಪ್ರತಿಯೊಬ್ಬ ನಿರೂಪಕ ಸ್ಟುಡಿಯೋದಲ್ಲಿ ಕುಳಿತು- ಪ್ರಶ್ನಿಸಬೇಕಾದವರನ್ನು ಬಿಟ್ಟು, ಪ್ರತಿಪಕ್ಷಗಳನ್ನು ಹಳಿಯುತ್ತಾ, ರಾಜನ ದೈನಂದಿನ ಜೀವನಶೈಲಿಯನ್ನು ದೈವೀಕರಿಸುವುದರಲ್ಲಿಯೇ ತಮ್ಮ ಪತ್ರಿಕೋದ್ಯಮದ ಸಾರ್ಥಕತೆ ಕಾಣುತ್ತಾರೆ.
ಇಂದಿನ ಭಟ್ಟಂಗಿಗಳು ನಾಯಕನನ್ನು ಕೇವಲ ಒಬ್ಬ ಜನಪ್ರತಿನಿಧಿಯಂತೆ ನೋಡದೆ, ‘ಅವತಾರ ಪುರುಷ’ ಅಥವಾ ‘ದೈವಿಕ ಶಕ್ತಿ’ಯೆಂಬಂತೆ ಬಿಂಬಿಸುತ್ತಾರೆ. ‘ಅವರು ನಿದ್ರಿಸುವುದೇ ಇಲ್ಲ, ಇಡೀ ವಿಶ್ವವೇ ಅವರ ಕಡೆ ನೋಡುತ್ತಿದೆ’ ಎಂಬಂತಹ ಉತ್ಪ್ರೇಕ್ಷೆಯ ಕಥೆಗಳನ್ನು ಕಟ್ಟಿ, ನಾಯಕನನ್ನು ಪ್ರಶ್ನಿಸುವುದು ಎಂದರೆ ಸಾಕ್ಷಾತ್ ದೇವರನ್ನೇ ಪ್ರಶ್ನಿಸಿದಂತೆ ಎಂಬ ಕೃತಕ ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ.
ಕೇವಲ ಭೌತಿಕವಾಗಿ ಲಾಠಿ ಬೀಸಿ ಧ್ವನಿ ಅಡಗಿಸುವುದಷ್ಟೇ ಅಲ್ಲದೆ, ಇಂದು ಡಿಜಿಟಲ್ ಅಸ್ತ್ರಗಳ ಮೂಲಕವೂ ಸೆನ್ಸಾರ್ಶಿಪ್ ಹೇರಲಾಗುತ್ತದೆ. ಸರಕಾರಕ್ಕೆ ಕನ್ನಡಿ ಹಿಡಿಯುವ ಸ್ವತಂತ್ರ ಪತ್ರಕರ್ತರು ಮತ್ತು ವಿಮರ್ಶಕರ ಯೂಟ್ಯೂಬ್ ಹಾಗೂ ಎಕ್ಸ್ (ಟ್ವಿಟರ್) ಖಾತೆಗಳನ್ನು ನಿರ್ಬಂಧಿಸುವುದು, ಪೆಗಾಸಸ್ನಂತಹ ಕಣ್ಗಾವಲು ತಂತ್ರಜ್ಞಾನಗಳನ್ನು ಬಳಸಿ ಬಾಯಿ ಮುಚ್ಚಿಸುವ ಹೊಸ ಕಾಲದ ಸರ್ವಾಧಿಕಾರಿ ತಂತ್ರಗಳು ರಾಜಾರೋಷವಾಗಿ ನಡೆಯುತ್ತಿವೆ. ಭಟ್ಟಂಗಿಗಳು ಇಂದು ಬರೇ ಆಸ್ಥಾನದಲ್ಲಿ ಇರುವುದಲ್ಲ! ನಮ್ಮ ಟಿವಿ, ಮೊಬೈಲುಗಳಲ್ಲಿಯೂ ತುಂಬಿದ್ದಾರೆ; ಪ್ರಜೆಗಳು ಕೂಡಾ ತಾವು ಕಾಣದ ಬತ್ತಲೆ ರಾಜನ “ಅದ್ಭುತ” ಬಟ್ಟೆಯನ್ನು ಹೊಗಳುವಂತೆ ಮಾಡುತ್ತಿದ್ದಾರೆ! ನಿಜ ಹೇಳುವ ಮಕ್ಕಳ ಮೇಲೆ ಸಿಟ್ಟಿಗೇಳುವಂತೆ ಮಾಡುತ್ತಿದ್ದಾರೆ!
Peepal Media Desk
Peepal Media · ಅಂಕಣ ವಿಭಾಗ