ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಸ್ಟಿಂಗ್ ಆಪರೇಷನ್ ಪರಿಣಾಮ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ – ಆರ್. ಅಶೋಕ್ಸಾಲು ಸಮಸ್ಯೆಗಳು ದತ್ತಾಂಶ ಹಂಚಿಕೊಳ್ಳದ ಕೇಂದ್ರ ಚುನಾವಣಾ ಆಯೋಗ – GBA ಚುನಾವಣೆ ಇನ್ನಷ್ಟು ವಿಳಂಬಬಿಜೆಪಿಯ ಫಾರಿನ್‌ ಫಂಡ್‌ ಕಥೆರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ 5000 ಕೋಟಿ ಹಣವನ್ನು ಮಂಗಮಾಯ ಮಾಡಿದೆ: ಜೆಡಿಎಸ್‌ ಆರೋಪಎರಡು ಮಕ್ಕಳ ನೀತಿಗೆ ಸುಪ್ರೀಂ ಕೋರ್ಟ್ ಮರುಪರಿಶೀಲನೆಯ ಅಸ್ತು: ಜನಸಂಖ್ಯೆ ಇಳಿಯುತ್ತಿರುವಾಗ ಹಳೆಯ ಕಾನೂನುಗಳಿಗೇಕೆ ಶಿಕ್ಷೆ?ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆಗೆ ಕೇರಳ ಸರ್ಕಾರ ಆದೇಶ – 2006ರ ಹಳೆಯ ಕೇಸ್ ಮರುಜೀವಟಿಕೆಟ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅಸ್ತು; ಇಂದು ಮಧ್ಯರಾತ್ರಿಯಿಂದಲೇ ಜಾರಿಯಾರು ಸೂಳೆಯರು? : ದೇಹ, ಸಮ್ಮತಿ ಮತ್ತು ದ್ವಂದ್ವ ನೈತಿಕತೆಯ ಸುತ್ತಬೊಗಸೆಗೆ ದಕ್ಕಿದ್ದು-99 : ಸರ್ವಾಧಿಕಾರಿ ದೇಶದಲ್ಲಿ ಭಟ್ಟಂಗಿಗಳು ‘ಕ್ಲಿಕ್’; ಎದುರಾಡಿದರೆ ‘ಕಿಕ್’!ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಪಾದಚಾರಿಗಳಿಗೆ ಕೊನೆಗೂ ಸುರಕ್ಷತೆಯ ಆಸರೆ: ಮೂರು ಜಂಕ್ಷನ್‌ಗಳಲ್ಲಿ ₹60 ಲಕ್ಷದ ಕಾಮಗಾರಿಟ್ರಂಪ್‌ಗೆ ಅಮೆರಿಕದ ಜನರ ರಾಜಕೀಯ ಏಟು: ಭಾರತದ ಮೇಲೆ ಇದರ ಪರಿಣಾಮವೇನು?ಕರ್ನಾಟಕದಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರಿಸ್ಕೂಲ್‌ಗಳು ಮುಚ್ಚುವ ಭೀತಿ: 4 ಲಕ್ಷ ಮಹಿಳೆಯರ ಉದ್ಯೋಗಕ್ಕೆ ಕುತ್ತುಅಮೆರಿಕ ಮಧ್ಯಂತರ ಚುನಾವಣೆ: ಸೋಲೊಪ್ಪಿಕೊಂಡು ಡೆಮಾಕ್ರಟ್‌ಗಳಿಗೆ ಅಭಿನಂದನೆ ಸಲ್ಲಿಸಿದ ಟ್ರಂಪ್ರಾಹುಲ್ ಗಾಂಧಿ ಜಾರ್ಜ್ ಸೋರೋಸ್‌ನಿಂದ ಹಣ ಪಡೆದು ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ: ಬಸವರಾಜ ಬೊಮ್ಮಾಯಿ ಆರೋಪಕಾಂಗ್ರೆಸ್‌ನದ್ದು ‘ಸ್ಟಿಂಗ್ ಕರ್ನಾಟಕ ಮಾಡೆಲ್’: ಜೆಡಿಎಸ್ ವಾಗ್ದಾಳಿಎಂಎಲ್‌ಸಿ ಸೋಲಿನ ಹೊಣೆ ಹೊತ್ತು 26 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿ: ಕೆ.ಎನ್. ರಾಜಣ್ಣಹಿರಿಯೂರು ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ: ಎಚ್‌ಡಿಕೆಸ್ಟಿಂಗ್‌ ಪ್ರಕರಣ | ಸರ್ಕಾರ ನಿಜವಾದ ಆರೋಪಿಗಳನ್ನು ಬಿಟ್ಟು ನಮ್ಮ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ಕೊಡುತ್ತಿದೆ: ಕುಮಾರಸ್ವಾಮಿಅಮೆರಿಕದಲ್ಲಿ ಜನಪ್ರಿಯತೆ ಕುಸಿದರೆ ಇಸ್ರೇಲ್‌ಗೆ ಹೋಗಿ ಪ್ರಧಾನಿ ಆಗ್ತೀನಿ! : ಸೋಲಿನ ಮುನ್ಸೂಚನೆ ನಡುವೆಯೇ ಟ್ರಂಪ್ ಹಾಸ್ಯಚಟಾಕಿಹೋರಾಟಗಳಿಂದ ವ್ಯಾಪರಕ್ಕೆ ಕೇವಲ ನಷ್ಟವಷ್ಟೇ ಅಲ್ಲ, ಲಾಭವೂ ಆಗುತ್ತದೆ: ಸುಪ್ರೀಂ ಕೋರ್ಟ್ ಅಭಿಪ್ರಾಯ

ಯಾರು ಸೂಳೆಯರು? : ದೇಹ, ಸಮ್ಮತಿ ಮತ್ತು ದ್ವಂದ್ವ ನೈತಿಕತೆಯ ಸುತ್ತ

PPeepal Media Desk

Peepal Media Desk ಅಂಕಣ

• 3 ನಿಮಿಷದ ಓದು

ಯಾರು ಸೂಳೆಯರು? : ದೇಹ, ಸಮ್ಮತಿ ಮತ್ತು ದ್ವಂದ್ವ ನೈತಿಕತೆಯ ಸುತ್ತ

“..ಹದಿನೆಂಟು ಕಥೆಗಳು, ಹದಿನೆಂಟು ಬದುಕುಗಳು. ಲೈಂಗಿಕ ಕೆಲಸದಲ್ಲಿ ತೊಡಗಿರುವ ಮಹಿಳೆಯರು ಮತ್ತು ಟ್ರಾನ್ಸ್ ಸಮುದಾಯದ ಹದಿನೆಂಟು ಜನರ ಬದುಕಿನ ಅನುಭವಗಳನ್ನು ಅಕ್ಕೈ ಪದ್ಮಶಾಲಿ ಇಲ್ಲಿ ನಿರೂಪಿಸಿದ್ದಾರೆ..” ಲೇಖಕಿ ರುಕ್ಮಿಣಿ ನಾಗಣ್ಣವರ ಬರಹದಲ್ಲಿ

ಇತ್ತೀಚೆಗೆ ನನ್ನ ಕಿರಿಯ ಸ್ನೇಹಿತರೊಬ್ಬರು ಅಕ್ಕೈ ಪದ್ಮಶಾಲಿ ಅವರ ‘ಯಾರು ಸೂಳೆಯರು?’ ಎಂಬ ಪುಟ್ಟ ಪುಸ್ತಕವನ್ನು ಓದಲು ಕೊಟ್ಟಿದ್ದರು. ನೋಡಲು ಚಿಕ್ಕದಾಗಿದ್ದ ಈ ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದಿದ್ದರು. ಪುಸ್ತಕ ನನ್ನ ಮೇಜಿನ ಮೇಲೆಯೇ ಒಂದು ವಾರಕ್ಕೂ ಹೆಚ್ಚು ಕಾಲ ಹಾಗೇ ಇತ್ತು. ಕೊನೆಗೆ ಕೈಗೆತ್ತಿಕೊಂಡು ಓದತೊಡಗಿದೆ. ಓದುತ್ತಾ ಹೋದಂತೆ ಕೆಲವು ಕಥೆಗಳು ನನ್ನನ್ನು ಅಲ್ಲಲ್ಲಿ ನಿಲ್ಲಿಸಿದವು. ಕೆಲವು ಘಟನೆಗಳನ್ನು ಓದಿದಾಗ ಏನು ಹೇಳಬೇಕೆಂದೇ ತೋಚಲಿಲ್ಲ. ಇನ್ನೂ ಕೆಲವು ಕಡೆ ನನ್ನೊಳಗೇ ಪ್ರಶ್ನೆಗಳು ಶುರುವಾದವು.

ಪುಸ್ತಕ ಓದಿ ಮುಗಿಸಿದ ಮೇಲೆ ಅದನ್ನ ಅಲ್ಲೇ ಇಟ್ಟುಬಿಡೋಕೆ ಆಗಲಿಲ್ಲ. ಅದರಲ್ಲಿನ ಕೆಲವು ಕಥೆಗಳು, ಅವುಗಳ ಹಿಂದಿನ ಬದುಕು, ಅಕ್ಕೈ ಎತ್ತಿರುವ ಪ್ರಶ್ನೆಗಳು ಮತ್ತೆ ಮತ್ತೆ ನೆನಪಾಗ್ತಾನೇ ಇವೆ.

ಅಕ್ಕೈ ಪದ್ಮಶಾಲಿ ಅವರು ಟ್ರಾನ್ಸ್ ಸಮುದಾಯದ ಹಕ್ಕು, ಘನತೆ ಮತ್ತು ಸಮಾನತೆಗಾಗಿ ನಿರಂತರವಾಗಿ ಹೋರಾಡುತ್ತಿರುವ ಸಾಮಾಜಿಕ ಹೋರಾಟಗಾರ್ತಿ. ತಮ್ಮ ಬದುಕಿನ ಅನುಭವಗಳ ಮೂಲಕ ಸಮಾಜದ ತಾರತಮ್ಯ ಮತ್ತು ಅನ್ಯಾಯಗಳನ್ನು ಪ್ರಶ್ನಿಸುತ್ತಾ ಬಂದವರು. ಈ ಪುಸ್ತಕದಲ್ಲಿಯೂ ಸಮಾಜದ ಅಂಚಿಗೆ ತಳ್ಳಲ್ಪಟ್ಟ ಬದುಕುಗಳ ಅನುಭವಗಳನ್ನು ನಮ್ಮ ಮುಂದೆ ತೆರೆದಿಡುತ್ತಾರೆ.

ಹದಿನೆಂಟು ಕಥೆಗಳು, ಹದಿನೆಂಟು ಬದುಕುಗಳು. ಲೈಂಗಿಕ ಕೆಲಸದಲ್ಲಿ ತೊಡಗಿರುವ ಮಹಿಳೆಯರು ಮತ್ತು ಟ್ರಾನ್ಸ್ ಸಮುದಾಯದ ಹದಿನೆಂಟು ಜನರ ಬದುಕಿನ ಅನುಭವಗಳನ್ನು ಅಕ್ಕೈ ಪದ್ಮಶಾಲಿ ಇಲ್ಲಿ ನಿರೂಪಿಸಿದ್ದಾರೆ. ಕುಟುಂಬದಿಂದ ತಿರಸ್ಕಾರ, ಬಡತನ, ಹಸಿವು, ಲೈಂಗಿಕ ಹಿಂಸೆ, ವಂಚನೆ, ಬೆದರಿಕೆ, ಬಲವಂತ, ಪೊಲೀಸ್ ವ್ಯವಸ್ಥೆಯ ನಿರ್ಲಕ್ಷ್ಯ, ಅವಮಾನ, ಸಂಬಂಧಗಳ ಸಂಕೀರ್ಣತೆ, ಆಸೆ-ಆಕಾಂಕ್ಷೆಗಳು ಹೀಗೆ ಬದುಕಿನ ಹಲವು ಸಂಗತಿಗಳು ಈ ಕಥನಗಳಲ್ಲಿ ತೆರೆದುಕೊಳ್ಳುತ್ತವೆ.

ಈ ಕಥೆಗಳು ಕೇವಲ ಹಿಂಸೆಯನ್ನು ದಾಖಲಿಸುವುದಿಲ್ಲ. ಇಂತಹ ಹಿಂಸೆಯ ಬಗ್ಗೆ ಸಮಾಜ ಮಾತನಾಡಬೇಕು, ಅದನ್ನು ಖಂಡಿಸಬೇಕು ಮತ್ತು ತಡೆಯುವ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತವೆ. ಲೈಂಗಿಕ ಕೆಲಸ ಮಾಡುವವರ ಮೇಲೆ ನಡೆಯುವ ಹಿಂಸೆಯನ್ನು ಅವರ ವೃತ್ತಿಯ ಭಾಗವೆಂಬಂತೆ ನೋಡುವ ಮನಸ್ಥಿತಿ ಬದಲಾಗಬೇಕು. ಅವರು ಯಾವ ವೃತ್ತಿಯಲ್ಲಿದ್ದರೂ ಹಿಂಸೆಗೆ ಒಳಗಾಗದಿರುವುದು ಅವರ ಹಕ್ಕು. ಅದು ಪ್ರತಿಯೊಬ್ಬರಿಗೂ ಇರುವ ಮೂಲಭೂತ ಹಕ್ಕು.

ಕೆಲವು ಕಥನಗಳನ್ನು ಓದುವಾಗ ಅಲ್ಲಿ ವಿವರಿಸಿರುವ ಹಿಂಸೆ ನಿಜವಾಗಿಯೂ ನಡೆಯುತ್ತದೆಯೇ ಎಂಬ ಅನುಮಾನವೂ ನನ್ನೊಳಗೆ ಮೂಡಿತು. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಮೇಲೆ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳಲು ಸಾಧ್ಯವೇ ಎಂದು ಯೋಚಿಸಿದೆ. ಇಂತಹ ಘಟನೆಗಳನ್ನು ಕೆಲವೊಮ್ಮೆ ಅತಿರಂಜಿತವಾಗಿ ಹೇಳಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಬಂತು. ಆದರೆ ಇಂತಹ ಅನುಮಾನ ನನ್ನೊಳಗೆ ಮೂಡಿದ್ದಕ್ಕೆ ನನಗೇ ಬೇಸರವಾಯಿತು. ಸಮಾಜದ ಅಂಚಿನಲ್ಲಿರುವವರು ತಮ್ಮ ನೋವನ್ನೂ ಹಿಂಸೆಯನ್ನೂ ಮತ್ತೆ ಮತ್ತೆ ಸಾಬೀತುಪಡಿಸಬೇಕಾದ ಸ್ಥಿತಿಯನ್ನು ನಾವೇ ಸೃಷ್ಟಿಸಿದ್ದೇವೆಯೇ ಎನಿಸಿತು. ಎಲ್ಲವನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳಬೇಕೆಂದಲ್ಲ. ಆದರೆ ನಮ್ಮ ಅನುಮಾನಗಳ ಕಾರಣಕ್ಕೆ ಅವರ ನೋವನ್ನು ತಳ್ಳಿಹಾಕುವುದೂ ಸರಿಯಲ್ಲ.

ಇಲ್ಲಿ ಸಮ್ಮತಿಯ ಪ್ರಶ್ನೆಯೂ ಮುಖ್ಯವಾಗುತ್ತದೆ. ಲೈಂಗಿಕ ಕೆಲಸ ಮಾಡುತ್ತಾರೆ ಎಂದ ಮಾತ್ರಕ್ಕೆ ತಮ್ಮ ದೇಹದ ಮೇಲಿನ ಎಲ್ಲ ಹಕ್ಕುಗಳನ್ನೂ ಬೇರೆಯವರಿಗೆ ಕೊಟ್ಟಿದ್ದಾರೆ ಎಂದರ್ಥವಲ್ಲ. ಹಣ ಕೊಟ್ಟಿದ್ದೇವೆ ಎಂಬ ಕಾರಣಕ್ಕೆ ಅವರ ದೇಹದ ಮೇಲೆ ಸಂಪೂರ್ಣ ಹಕ್ಕು ಸಿಗುವುದಿಲ್ಲ. ಒಂದು ಕ್ರಿಯೆಗೆ ಒಪ್ಪಿಗೆ ನೀಡಿದರೆ ಎಲ್ಲದಕ್ಕೂ ಒಪ್ಪಿಗೆ ನೀಡಿದಂತಲ್ಲ. ಅವರ ‘ಇಲ್ಲ’ ಎನ್ನುವ ಮಾತಿಗೂ ಗೌರವ ಇರಬೇಕು. ಸಮಸ್ಯೆ ಅವರ ವೃತ್ತಿಯಲ್ಲಲ್ಲ ಅವರ ಸಮ್ಮತಿಯನ್ನು ಗೌರವಿಸದ ಮನಸ್ಥಿತಿಯಲ್ಲಿದೆ.

ಲೈಂಗಿಕ ಕೆಲಸದ ವಿಚಾರದಲ್ಲಿ ಸ್ತ್ರೀವಾದದೊಳಗೂ ಭಿನ್ನ ಅಭಿಪ್ರಾಯಗಳಿವೆ. ಆದರೆ ಮಹಿಳೆಯರ ದೇಹದ ಮೇಲಿನ ಸ್ವಾಯತ್ತತೆ, ಘನತೆ ಮತ್ತು ಆಯ್ಕೆಯ ಹಕ್ಕುಗಳ ಬಗ್ಗೆ ಮಾತನಾಡುವಾಗ ಲೈಂಗಿಕ ಕೆಲಸದಲ್ಲಿರುವ ಮಹಿಳೆಯರನ್ನೂ ಒಳಗೊಳ್ಳಬೇಕಲ್ಲವೇ? ಅವರ ಆಯ್ಕೆಯನ್ನು ಗೌರವಿಸುವುದರ ಜೊತೆಗೆ, ಆ ಆಯ್ಕೆಯ ಹಿಂದೆ ಇರುವ ಅನಿವಾರ್ಯತೆ ಮತ್ತು ಶೋಷಣೆಯನ್ನೂ ಪ್ರಶ್ನಿಸುವುದು ಸ್ತ್ರೀವಾದದ ಭಾಗವಾಗಬೇಕಿದೆ.

ಪುಸ್ತಕದಲ್ಲಿ ಲೈಂಗಿಕ ಕೆಲಸ ಮಾಡುವ ಮಹಿಳೆಯರ ಬದುಕಿನ ಜೊತೆಗೆ ಟ್ರಾನ್ಸ್ ಸಮುದಾಯದ ಅನುಭವಗಳೂ ಇವೆ. ಕುಟುಂಬ, ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಬದುಕಿನಲ್ಲಿ ಅವರು ಎದುರಿಸುವ ತಾರತಮ್ಯ, ಅವಮಾನ ಮತ್ತು ನಿರಾಕರಣೆಗಳು ನಮ್ಮ ಸಮಾಜದ ನಡವಳಿಕೆಯನ್ನು ಪ್ರಶ್ನಿಸುವಂತಿವೆ. ಸುಪ್ರೀಂ ಕೋರ್ಟ್ನ ನಲ್ಸಾ ತೀರ್ಪು ವ್ಯಕ್ತಿಯ ಸ್ವಯಂ ಗುರುತಿನ ಹಕ್ಕು ಮತ್ತು ಘನತೆಯನ್ನು ಗುರುತಿಸಿದ್ದರೂ, ಆ ಹಕ್ಕುಗಳು ನಿಜವಾದ ಬದುಕಿನಲ್ಲಿ ಎಷ್ಟರಮಟ್ಟಿಗೆ ಸಿಗುತ್ತಿವೆ ಎಂಬ ಪ್ರಶ್ನೆ ಉಳಿದೇ ಇದೆ. ಕಾನೂನಿನಲ್ಲಿ ಹಕ್ಕು ಸಿಕ್ಕರೆ ಸಾಲದು, ಬದುಕಿನಲ್ಲೂ ಅದು ಸಿಗಬೇಕು.

ಅಕ್ಕೈ ಪದ್ಮಶಾಲಿ ಲೈಂಗಿಕ ಕೆಲಸವನ್ನು ಒಂದು ವೃತ್ತಿಯಾಗಿ ಗುರುತಿಸಬೇಕು ಎಂಬ ನಿಲುವನ್ನು ಮುಂದಿಡುತ್ತಾರೆ. ಈ ವಿಚಾರದಲ್ಲಿ ಒಂದು ವ್ಯತ್ಯಾಸವನ್ನು ಗುರುತಿಸುವುದು ಮುಖ್ಯ. ವಯಸ್ಕರು ತಮ್ಮ ಸಮ್ಮತಿಯಿಂದ ಮಾಡುವ ಲೈಂಗಿಕ ಕೆಲಸ ಮತ್ತು ಬಲವಂತ, ವಂಚನೆ, ಮಾನವ ಕಳ್ಳಸಾಗಣೆ ಅಥವಾ ಶೋಷಣೆಯ ಮೂಲಕ ನಡೆಯುವ ಕೆಲಸ ಎರಡೂ ಒಂದೇ ಅಲ್ಲ. ಇವೆರಡನ್ನೂ ಒಂದೇ ರೀತಿಯಲ್ಲಿ ನೋಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ವೃತ್ತಿಯ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಅದೇ ರೀತಿ ಆ ವೃತ್ತಿಯಲ್ಲಿರುವ ಎಲ್ಲರನ್ನೂ ಶೋಷಣೆಗೆ ಒಳಗಾದವರಂತೆ ಮಾತ್ರ ನೋಡುವುದೂ ಸರಿಯಲ್ಲ.

ಇಂತಹ ಬದುಕುಗಳ ಬಗ್ಗೆ ಮಾತನಾಡುವಾಗ ನಮ್ಮಲ್ಲಿ ಬಹಳ ಸುಲಭವಾಗಿ ‘ಅಯ್ಯೋ ಪಾಪ’ ಎಂಬ ಭಾವನೆ ಮೂಡುತ್ತದೆ. ಆದರೆ ಬೇಕಿರುವುದು ಕೇವಲ ಕರುಣೆಯಲ್ಲ. ಘನತೆಯಿಂದ ಬದುಕುವ ಹಕ್ಕು, ತಮ್ಮ ದೇಹದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ, ಹಿಂಸೆಯಿಂದ ರಕ್ಷಣೆ ಮತ್ತು ಸಮಾಜದಲ್ಲಿ ಸಮಾನವಾಗಿ ಬದುಕುವ ಅವಕಾಶ. ಹಸಿವು, ಬಡತನ, ಕುಟುಂಬದ ನಿರಾಕರಣೆ ಮತ್ತು ಅವಕಾಶಗಳ ಕೊರತೆಯ ನಡುವೆ ತೆಗೆದುಕೊಳ್ಳುವ ನಿರ್ಧಾರಗಳನ್ನು ಹೊರಗಿನಿಂದ ನಿಂತು ಸುಲಭವಾಗಿ ಅಳೆಯಲು ಸಾಧ್ಯವಿಲ್ಲ.

ಇದಕ್ಕೆ ಸಮಾಜದ ಮನಸ್ಥಿತಿ ಬದಲಾಗುವುದಷ್ಟೇ ಸಾಲದು. ಶಿಕ್ಷಣ, ಆರೋಗ್ಯ, ಕಾನೂನು ನೆರವು ಮತ್ತು ಗೌರವಯುತ ಉದ್ಯೋಗದ ಅವಕಾಶಗಳು ಎಲ್ಲರಿಗೂ ಸಿಗುವಂತೆ ಸರ್ಕಾರವೂ ಜವಾಬ್ದಾರಿ ವಹಿಸಬೇಕು. ಯಾರ ಬದುಕನ್ನೂ ಅವರ ಪರವಾಗಿ ನಿರ್ಧರಿಸುವುದಲ್ಲ, ತಮ್ಮ ಬದುಕಿನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಬೇಕಾದ ಅವಕಾಶಗಳನ್ನು ಕಲ್ಪಿಸುವುದು ಮುಖ್ಯ.

ರಾತ್ರಿ ಅವರ ಸೇವೆಯನ್ನು ಬಯಸುವ ಸಮಾಜವೇ ಹಗಲಿನಲ್ಲಿ ಅವರನ್ನು ಕೀಳಾಗಿ ಕಾಣುತ್ತದೆ. ಅವರ ಸೇವೆಯನ್ನು ಪಡೆಯುವ ಪುರುಷರಿಗೆ ಮಾತ್ರ ಸಮಾಜ ಯಾವ ಹೆಸರಿಡುತ್ತದೆ? ನೈತಿಕತೆಯ ಮಾನದಂಡಗಳು ಮಹಿಳೆಯರಿಗೆ ಮಾತ್ರ ಯಾಕೆ ಅನ್ವಯಿಸುತ್ತವೆ? ಈ ದ್ವಂದ್ವ ನೀತಿಯನ್ನೂ ಪುಸ್ತಕ ನಮ್ಮ ಮುಂದೆ ಪ್ರಶ್ನೆಯಾಗಿ ಇಡುತ್ತದೆ.

ಅಕ್ಕೈ ಅವರ ಕೆಲವು ಮಾತುಗಳು ಮತ್ತು ಅಭಿವ್ಯಕ್ತಿಗಳು ನನಗೆ ಕಟುವಾಗಿ ಅನಿಸಿದವು. ಕೆಲವು ಕಥನಗಳನ್ನು ಓದುವಾಗ ಅವರೊಂದಿಗೆ ವಾದಿಸಬೇಕೆಂದೂ ಅನಿಸಿತು. ಆದರೆ ಆ ಮಾತುಗಳ ಹಿಂದಿನ ಬದುಕನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ, ಆ ಕಟುವಿನ ಹಿಂದೆ ಇರುವ ನೋವು ಮತ್ತು ಆಕ್ರೋಶವೂ ಅರ್ಥವಾಗತೊಡಗಿತು. ಹಿಂಸೆ ಮತ್ತು ಅವಮಾನಗಳನ್ನು ಅನುಭವಿಸಿದವರು ತಮ್ಮ ನೋವನ್ನು ಯಾವಾಗಲೂ ಮೃದುವಾದ ಭಾಷೆಯಲ್ಲೇ ಹೇಳಬೇಕು ಎಂದು ನಿರೀಕ್ಷಿಸುವುದು ಸರಿಯೇ? ಅವರ ಎಲ್ಲ ಮಾತುಗಳನ್ನೂ ಒಪ್ಪಿಕೊಳ್ಳಬೇಕೆಂದಿಲ್ಲ. ಆದರೆ ಅವರು ಯಾವ ಬದುಕಿನ ನೆಲೆಯಿಂದ ಮಾತನಾಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವೆನಿಸಿತು.

‘ಯಾರು ಸೂಳೆಯರು?’ ಓದಿ ಮುಗಿಸಿದಾಗ ಕೆಲವು ಕಥೆಗಳು ಮನಸ್ಸಿನಲ್ಲಿ ಉಳಿದವು. ನಮ್ಮ ಸುತ್ತಲಿನ ಬದುಕುಗಳನ್ನೇ ನಾವು ಎಷ್ಟು ಕಡಿಮೆ ಅರ್ಥಮಾಡಿಕೊಂಡಿದ್ದೇವೆ ಅನ್ನಿಸಿತು. ಲೈಂಗಿಕ ಕೆಲಸ ಮಾಡುವ ಮಹಿಳೆಯರು ಮತ್ತು ಟ್ರಾನ್ಸ್ ಸಮುದಾಯದ ಬದುಕನ್ನು ನೋಡುವ ನಮ್ಮ ದೃಷ್ಟಿಕೋನ, ಅವರ ಘನತೆ ಮತ್ತು ಹಕ್ಕುಗಳ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಮಾಡಿತು.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು