ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ 5000 ಕೋಟಿ ಹಣವನ್ನು ಮಂಗಮಾಯ ಮಾಡಿದೆ: ಜೆಡಿಎಸ್ ಆರೋಪ
ಲಿಂಕ್ ನಕಲಿಸಲಾಗಿದೆ ✓
ಗೃಹಲಕ್ಷ್ಮಿ ಯೋಜನೆಯಡಿ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ಬಿಡುಗಡೆ ಮಾಡದೆ ರಾಜ್ಯದ 1.27 ಕೋಟಿ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಜೆಡಿಎಸ್ ಆರೋಪಿಸಿದೆ. ಅಲ್ಲದೆ, ₹2,660.26 ಕೋಟಿ ಸಾರ್ವಜನಿಕ ಹಣವನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ (KSWDC) ವಾಣಿಜ್ಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿರುವ ಪಕ್ಷ, ಹಣದ ಬಳಕೆಯ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿ ವಿಚಾರ ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಎರಡು ಕಂತುಗಳನ್ನು ಪಾವತಿಸದೆ ಸರ್ಕಾರ ಫಲಾನುಭವಿಗಳಿಗೆ ಒಟ್ಟು ಸುಮಾರು ₹5,000 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಜನತಾದಳ (ಜಾತ್ಯತೀತ) ಆರೋಪಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ವಿಧಾನಸಭೆಯಲ್ಲಿ ತಾಂತ್ರಿಕ ದೋಷ ಮತ್ತು ಸರ್ವರ್ ಸಮಸ್ಯೆಯ ಕಾರಣ ನೀಡಿ ಹಣ ಪಾವತಿಯಾಗಿಲ್ಲ ಎಂದು ಹೇಳಿದ್ದ ಸರ್ಕಾರ, ಹೈಕೋರ್ಟ್ನಲ್ಲಿ ಹಣಕಾಸಿನ ಕೊರತೆಯನ್ನು ಕಾರಣವಾಗಿ ನೀಡಿದೆ ಎಂದು ಟೀಕಿಸಿದೆ.
“ವಿಧಾನಸಭೆಯಲ್ಲಿ ಸರ್ವರ್ ಸಮಸ್ಯೆ ಎಂದಿದ್ದ ಸರ್ಕಾರ, ಹೈಕೋರ್ಟ್ನಲ್ಲಿ ಹಣಕಾಸಿನ ತೀವ್ರ ಅಭಾವದಿಂದ ಅನುದಾನ ನೀಡಲು ಸಾಧ್ಯವಾಗಿಲ್ಲ ಎಂದು ಒಪ್ಪಿಕೊಂಡಿದೆ. ಈ ಹಣವನ್ನು ಹಕ್ಕು ಎಂದು ಕೇಳಲು ಫಲಾನುಭವಿಗಳಿಗೆ ಕಾನೂನಾತ್ಮಕ ಅವಕಾಶವಿಲ್ಲ ಎಂದು ಸರ್ಕಾರವೇ ನ್ಯಾಯಾಲಯಕ್ಕೆ ತಿಳಿಸಿದೆ” ಎಂದು ಜೆಡಿಎಸ್ ಆರೋಪಿಸಿದೆ.
2025ರ ಮಾರ್ಚ್ 31ರಂದು ₹2,660.26 ಕೋಟಿ ಸಾರ್ವಜನಿಕ ಹಣವನ್ನು ನೇರ ಖಜಾನೆಯಿಂದ ಹೊರತೆಗೆದು ಕೆಎಸ್ಡಬ್ಲ್ಯೂಡಿಸಿ ನಿಗಮದ ವಾಣಿಜ್ಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಅನುದಾನ ಲ್ಯಾಪ್ಸ್ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ವರ್ಗಾವಣೆ ಮಾಡಲಾಗಿದೆ ಎಂದು ಪಕ್ಷ ದೂರಿದೆ.
“ಗೃಹಲಕ್ಷ್ಮಿ ಯೋಜನೆಗೆ ಮೀಸಲಾಗಿದ್ದ ಸಾರ್ವಜನಿಕ ಹಣವನ್ನು ಬೇರೆಡೆಗೆ ವರ್ಗಾಯಿಸಿರುವುದು ಹಣಕಾಸು ನಿಯಮಗಳ ಉಲ್ಲಂಘನೆ. ಈ ಹಣ ಅಂತಿಮವಾಗಿ ಎಲ್ಲಿಗೆ ಹೋಯಿತು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು” ಎಂದು ಜೆಡಿಎಸ್ ಆಗ್ರಹಿಸಿದೆ.
ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು ₹2,000 ನೀಡಲಾಗುತ್ತದೆ. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ಬಿಡುಗಡೆಯಾಗಿಲ್ಲ ಎಂಬುದನ್ನು ಸರ್ಕಾರದ ವಿಧಾನಸಭಾ ಉತ್ತರದಲ್ಲೂ ಉಲ್ಲೇಖಿಸಲಾಗಿದೆ.
ಈ ಹಣ ಪಾವತಿಗೆ ಸಂಬಂಧಿಸಿದಂತೆ ಆರ್. ಗಂಗಾ ಮತ್ತು ಜಿ.ಡಿ. ಪವಿತ್ರಾ ಎಂಬ ಇಬ್ಬರು ಮಹಿಳೆಯರು ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಮೇ 21ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರದ ಹಣಕಾಸು, ಪಂಚಾಯತ್ ರಾಜ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಜೆಡಿಎಸ್ ಪ್ರಕಾರ, ಸುಮಾರು 1.27 ಕೋಟಿ ಮಹಿಳೆಯರಿಗೆ ತಲಾ ₹4,000 ಬಾಕಿ ಉಳಿದಿದೆ. ಈ ಮೊತ್ತವನ್ನು ಕೂಡಲೇ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ಹಣ ವರ್ಗಾವಣೆಯ ಕುರಿತು ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.
“ರಾಜ್ಯದ ತಾಯಂದಿರಿಗೆ ವಂಚಿಸಿರುವ ಸರ್ಕಾರ ಕೂಡಲೇ ಬಾಕಿ ಇರುವ ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಜೆಡಿಎಸ್ ತನ್ನ ಹೇಳಿಕೆಯಲ್ಲಿ ಎಚ್ಚರಿಸಿದೆ.
Peepal Media
Peepal Media · ರಾಜಕೀಯ ವಿಭಾಗ