ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆಗೆ ಕೇರಳ ಸರ್ಕಾರ ಆದೇಶ – 2006ರ ಹಳೆಯ ಕೇಸ್ ಮರುಜೀವ
ಲಿಂಕ್ ನಕಲಿಸಲಾಗಿದೆ ✓
ತಿರುವನಂತಪುರಂ : ದೇಶದ ಮುಖ್ಯ ಚುನಾವಣೆ ಆಯುಕ್ತ (CEC) ಜ್ಞಾನೇಶ್ ಕುಮಾರ್(Gyanesh Kumar) ವಿರುದ್ಧ ಸುಮಾರು ಎರಡು ದಶಕಗಳಷ್ಟು ಹಳೆಯದಾದ ಭ್ರಷ್ಟಾಚಾರ ಮತ್ತು ಇಂಜಿನಿಯರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ದೂರು ಸಲ್ಲಿಕೆಯಾಗಿದ್ದು, ಈ ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ಕೇರಳ(Kerala) ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ (VACB) ಆದೇಶಿಸಿದ್ದಾರೆ.
ಜ್ಞಾನೇಶ್ ಕುಮಾರ್ ಅವರು 2006ರಲ್ಲಿ ಕೇರಳ ಲೋಕೋಪಯೋಗಿ ಇಲಾಖೆಯ (PWD) ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ರಸ್ತೆ ಕಾಮಗಾರಿಯ ಬಿಲ್ಲುಗಳನ್ನು ಬಿಡುಗಡೆ ಮಾಡಲು ₹2 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಹಾಗೂ ಈ ಹಣಕಾಸಿನ ಬಿಕ್ಕಟ್ಟಿನಿಂದಾಗಿ ಮಲೇಷ್ಯಾ ಮೂಲದ ಇಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪ್ರಕರಣದ ಹಿನ್ನೆಲೆ ಮತ್ತು ₹2 ಕೋಟಿ ಲಂಚದ ಆರೋಪ
ಕೊಲ್ಲಂ ಜಿಲ್ಲೆಯ ಮಾಜಿ ಗುತ್ತಿಗೆದಾರ ಸಾಜನ್ ಎಂಬುವವರು ವಿಜಿಲೆನ್ಸ್ ಡೈರೆಕ್ಟರ್ಗೆ ದೂರು ನೀಡಿದ್ದು, ಕೇರಳ ರಾಜ್ಯ ಸಾರಿಗೆ ಯೋಜನೆ (KSTP) ಅಡಿಯಲ್ಲಿ ಮಲಬಾರ್ ಕರಾವಳಿ ರಸ್ತೆ (MC Road) ಅಭಿವೃದ್ಧಿ ಕಾಮಗಾರಿ ನಡೆಸಿದ್ದ ‘ಪಟಿಯಾನ್-ಬೆಲ್’ (PATI-BEL) ಕನ್ಸೋರ್ಟಿಯಂ ಸಂಸ್ಥೆಗೆ ಬಿಡುಗಡೆಯಾಗಬೇಕಿದ್ದ ₹17 ಕೋಟಿ ಮೌಲ್ಯದ ಚೆಕ್ಗಳನ್ನು ಜ್ಞಾನೇಶ್ ಕುಮಾರ್ ತಡೆಹಿಡಿದಿದ್ದರು ಎಂದು ಆರೋಪಿಸಿದ್ದಾರೆ.
ಇಂಜಿನಿಯರ್ಗಳು ಈಗಾಗಲೇ ಅನುಮೋದಿಸಿದ್ದ ಬಿಲ್ಲುಗಳನ್ನು ಬಿಡುಗಡೆ ಮಾಡಲು ಜ್ಞಾನೇಶ್ ಕುಮಾರ್ ₹2 ಕೋಟಿ ಲಂಚ ನೀಡುವಂತೆ ಒತ್ತಾಯಿಸಿದ್ದರು. ಆದರೆ ಲಂಚ ನೀಡಲು ಕಂಪನಿಯ ಆಡಳಿತ ಮಂಡಳಿ ಒಪ್ಪಿರಲಿಲ್ಲ.
ಮಲೇಷ್ಯಾ ಇಂಜಿನಿಯರ್ ಆತ್ಮಹತ್ಯೆ ಮತ್ತು ಡೆತ್ನೋಟ್!
ಬಿಲ್ಲುಗಳು ಪಾವತಿಯಾಗದೇ ಕಾರ್ಮಿಕರು ಹಾಗೂ ಗುತ್ತಿಗೆದಾರರಿಗೆ ಹಣ ನೀಡಲಾಗದೆ ತೀವ್ರ ಸಾಲದ ಸುಳಿಗೆ ಸಿಲುಕಿದ್ದ ಕಂಪನಿಯ ಪ್ರಾಜೆಕ್ಟ್ ಇಂಜಿನಿಯರ್, ಮಲೇಷ್ಯಾ ಪ್ರಜೆ ಲೀ ಸಿ ಬೀನ್ (Lee See Been) ಅವರು 2006ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಆತ್ಮಹತ್ಯೆಗೂ ಮುನ್ನ ಲೀ ಅವರು ಬರೆದಿಟ್ಟಿದ್ದರೆನ್ನಲಾದ ಡೆತ್ನೋಟ್ನಲ್ಲಿ ಜ್ಞಾನೇಶ್ ಕುಮಾರ್ ಅವರ ಹೆಸರು ಮತ್ತು ಲಂಚದ ಬೇಡಿಕೆಯ ಉಲ್ಲೇಖವಿತ್ತು ಎಂದು ದೂರುದಾರರು ತಿಳಿಸಿದ್ದಾರೆ. 2006ರಲ್ಲೇ ಈ ಪ್ರಕರಣದ ಕುರಿತು ವಿಜಿಲೆನ್ಸ್ ತನಿಖೆ ಆರಂಭವಾಗಿದ್ದರೂ, ಸಾಕ್ಷ್ಯಾಧಾರಗಳ ಕೊರತೆಯ ನೆಪವೊಡ್ಡಿ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು.
ಪುನರ್ ತನಿಖೆಗೆ ಗೃಹ ಸಚಿವರ ಸಮ್ಮತಿ
ಹಿಂದಿನ ತನಿಖೆಯ ವೇಳೆ ತಮ್ಮನ್ನು ಅಥವಾ ಪ್ರತ್ಯಕ್ಷದರ್ಶಿಗಳನ್ನು ವಿಜಿಲೆನ್ಸ್ ಅಧಿಕಾರಿಗಳು ವಿಚಾರಣೆಗೊಳಪಡಿಸಿರಲಿಲ್ಲ ಎಂದು ಸಾಜನ್ ಆರೋಪಿಸಿದ್ದಾರೆ. ಲೀ ಅವರ ಕುಟುಂಬಸ್ಥರು ಹಾಗೂ ಸಾಕ್ಷಿಗಳನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸಲು ಸಿದ್ಧರಿರುವುದಾಗಿ ಅವರು ತಿಳಿಸಿದ್ದಾರೆ.
ದೂರಿನ ಗಂಭೀರತೆಯನ್ನು ಪರಿಗಣಿಸಿ, ಕಾನೂನು ಸಲಹೆ ಪಡೆದ ನಂತರ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ನೂತನ ದೂರಿನ ಬಗ್ಗೆ ಮರುತನಿಖೆ ನಡೆಸಿ ವರದಿ ಸಲ್ಲಿಸುವಂತೆ ವಿಜಿಲೆನ್ಸ್ ಇಲಾಖೆಗೆ ಸೂಚಿಸಿದ್ದಾರೆ.
ದೇಶಾದ್ಯಂತ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ವಿಚಾರದಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಈ ಹಳೆಯ ಭ್ರಷ್ಟಾಚಾರದ ದೂರು ಮರುಜೀವ ಪಡೆದುಕೊಂಡಿದೆ. ಆದರೆ, ಈ ಆರೋಪಗಳ ಕುರಿತು ಜ್ಞಾನೇಶ್ ಕುಮಾರ್ ಅವರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಮೇಶ್ ಹಾಸನ್
Peepal Media · ದೇಶ ವಿಭಾಗ