ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಕನ್ನಡ ಪತ್ರಿಕೆ ಕಡ್ಡಾಯಗೊಳಿಸಲು ಆಗ್ರಹ
ಲಿಂಕ್ ನಕಲಿಸಲಾಗಿದೆ ✓
KEA ಮೂಲಕ ಸರ್ಕಾರಕ್ಕೆ ‘ನಾವು ದ್ರಾವಿಡ ಕನ್ನಡಿಗರು ಚಳುವಳಿ’ಯಿಂದ ಹೋರಾಟದ ಎಚ್ಚರಿಕೆ
ಶಿವಮೊಗ್ಗ: ಕರ್ನಾಟಕದ ಸರ್ಕಾರಿ ಉದ್ಯೋಗ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಹಿಂದೆ ಇದ್ದಂತೆ 100 ಅಂಕಗಳ ‘ಸಾಮಾನ್ಯ ಕನ್ನಡ’ ಪ್ರಶ್ನೆ ಪತ್ರಿಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿರುವ ‘ನಾವು ದ್ರಾವಿಡ ಕನ್ನಡಿಗರು ಚಳುವಳಿ’ ಸಂಘಟನೆಯು, ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ರಾಜ್ಯ ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ಪತ್ರ ಸಲ್ಲಿಸಿದೆ.
2026ನೇ ಸಾಲಿನ SDA ಮತ್ತು FDA ನೇಮಕಾತಿ ಅಧಿಸೂಚನೆಗಳಲ್ಲಿ ಈ ಹಿಂದಿನ ಪರೀಕ್ಷಾ ಮಾದರಿಯಲ್ಲಿದ್ದ ಸಾಮಾನ್ಯ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಕೈಬಿಟ್ಟು, ಕೇವಲ ಸಂವಹನ ಪತ್ರಿಕೆಯನ್ನು ಸೇರಿಸಲಾಗಿದೆ. ಇದೇ ರೀತಿ ಆಬಕಾರಿ ಗಾರ್ಡ್ ನೇಮಕಾತಿ ಪರೀಕ್ಷೆಯಲ್ಲಿಯೂ ಸಾಮಾನ್ಯ ಕನ್ನಡ ಪತ್ರಿಕೆಯನ್ನು ಕೈಬಿಟ್ಟು ಸಾಮಾನ್ಯ ಜ್ಞಾನ ಪತ್ರಿಕೆಗೆ ಮಾತ್ರ ಅವಕಾಶ ಕಲ್ಪಿಸಿರುವುದು ಕನ್ನಡ ಭಾಷೆ ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವೆಂದು ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ.



ಸಾಮಾನ್ಯ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಕೈಬಿಟ್ಟಿರುವುದರಿಂದ ಗ್ರಾಮೀಣ ಭಾಗದ ಹಾಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಅಭ್ಯರ್ಥಿಗಳ ಸ್ಪರ್ಧಾತ್ಮಕ ಅವಕಾಶಗಳಿಗೆ ಹಿನ್ನಡೆಯಾಗಲಿದೆ. ಈ ಹಿಂದೆ 100 ಅಂಕಗಳ ಸಾಮಾನ್ಯ ಕನ್ನಡ ಪತ್ರಿಕೆಯು ಅಭ್ಯರ್ಥಿಗಳ ಭಾಷಾ ಜ್ಞಾನ, ವ್ಯಾಕರಣ ಮತ್ತು ಆಡಳಿತಾತ್ಮಕ ಕನ್ನಡದ ತಿಳಿವಳಿಕೆಯನ್ನು ಪರೀಕ್ಷಿಸಲು ಸಹಕಾರಿಯಾಗಿತ್ತು. ಆದರೆ, ಇದೀಗ ಅದನ್ನು ಕೈಬಿಟ್ಟಿರುವುದು ಆಡಳಿತ ಭಾಷೆಯಾಗಿ ಕನ್ನಡದ ಬಳಕೆಯನ್ನು ಉತ್ತೇಜಿಸುವ ಆಶಯಕ್ಕೆ ವಿರುದ್ಧವಾಗಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ಕನ್ನಡವನ್ನು ಪದವಿ ಹಂತದಲ್ಲಿ ಪ್ರಮುಖ ವಿಷಯವಾಗಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳಿಗೂ ಈ ಬದಲಾವಣೆಯಿಂದ ಉದ್ಯೋಗಾವಕಾಶಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷಾ ಜ್ಞಾನಕ್ಕೆ ಸೂಕ್ತ ಆದ್ಯತೆ ಇಲ್ಲದಿರುವುದು ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣದಲ್ಲಿ ಕನ್ನಡ ಅಧ್ಯಯನದ ಆಸಕ್ತಿಯ ಮೇಲೂ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.
ಅಲ್ಲದೆ, ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕೆಗೆ ದೊರೆಯುತ್ತಿದ್ದ ಪ್ರೋತ್ಸಾಹ ಕಡಿಮೆಯಾಗುವ ಸಾಧ್ಯತೆಯಿದ್ದು, ಸರ್ಕಾರಿ ಶಾಲೆಗಳು ಹಾಗೂ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆಯ ಮೇಲೂ ಪರೋಕ್ಷ ಪರಿಣಾಮ ಬೀರಬಹುದು ಎಂದು ಸಂಘಟನೆ ಎಚ್ಚರಿಸಿದೆ.
SDA, FDA ಮತ್ತು ಆಬಕಾರಿ ಗಾರ್ಡ್ನಂತಹ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುವ ಸರ್ಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಕನ್ನಡ ಭಾಷೆಯ ಉತ್ತಮ ಜ್ಞಾನ ಅತ್ಯಗತ್ಯ. ಕೇವಲ ಸಂವಹನ ಪತ್ರಿಕೆಯ ಮೂಲಕ ಅಭ್ಯರ್ಥಿಗಳ ಸಮಗ್ರ ಕನ್ನಡ ಭಾಷಾ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ. ಸರ್ಕಾರಿ ಆಡಳಿತದಲ್ಲಿ ಕನ್ನಡದ ಸಮರ್ಪಕ ಅನುಷ್ಠಾನವಾಗಬೇಕಾದರೆ ನೇಮಕಾತಿ ಹಂತದಲ್ಲಿಯೇ ಭಾಷಾ ಜ್ಞಾನಕ್ಕೆ ಆದ್ಯತೆ ನೀಡಬೇಕು ಎಂಬುದು ಸಂಘಟನೆಯ ವಾದವಾಗಿದೆ.
100 ಅಂಕಗಳ ಸಾಮಾನ್ಯ ಕನ್ನಡ ಪತ್ರಿಕೆ ಮರುಜಾರಿಗೆ ಆಗ್ರಹ
ಎಲ್ಲಾ ಸರ್ಕಾರಿ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದಿನ ಮಾದರಿಯಂತೆ ಕಡ್ಡಾಯವಾಗಿ 100 ಅಂಕಗಳ ಸಾಮಾನ್ಯ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಮರುಸೇರ್ಪಡೆ ಮಾಡಬೇಕು. ಕೇವಲ ಸಂವಹನ ಪತ್ರಿಕೆಗೆ ಸೀಮಿತಗೊಳಿಸದೆ, ಅಭ್ಯರ್ಥಿಗಳ ಕನ್ನಡ ಭಾಷಾ ಜ್ಞಾನವನ್ನು ಸಮಗ್ರವಾಗಿ ಪರೀಕ್ಷಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ.
ಕನ್ನಡನಾಡಿನಲ್ಲಿಯೇ ಕನ್ನಡ ಭಾಷೆಗೆ ನೇಮಕಾತಿ ಪರೀಕ್ಷೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯದಿರುವುದು ಆತಂಕಕಾರಿ ಬೆಳವಣಿಗೆ. ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕನ್ನಡ ನಾಡು, ನುಡಿಯ ರಕ್ಷಣೆಗಾಗಿ ಬೀದಿಗಿಳಿದು ಹೋರಾಟ ನಡೆಸುವುದರ ಜೊತೆಗೆ ಕಾನೂನು ಹೋರಾಟವನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದು ‘ನಾವು ದ್ರಾವಿಡ ಕನ್ನಡಿಗರು ಚಳುವಳಿ’ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಚಳುವಳಿಯ ವಿದ್ಯಾರ್ಥಿ ನಾಯಕ ತೇಜಸ್ ಸೇರಿದಂತೆ ಸಂಘಟನೆಯ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Peepal Media Desk
Peepal Media · ರಾಜ್ಯ ವಿಭಾಗ