ಬಸವಣ್ಣನವರನ್ನು ಅವಮಾನಿಸುವ “ಬಸವ ಮಂಟಪ” ಕೃತಿಗೆ ಕಾಂಗ್ರೆಸ್ ನಾಯಕರ ಆಪ್ತ ವಿಶ್ವೇಶ್ವರ ಭಟ್ ಪ್ರಕಾಶಕ! ಭಟ್ಟರ ಮೇಲೆ ಕ್ರಮಕ್ಕೆ ಬಿಜೆಪಿ ನಾಯಕರ ಮೌನವೇಕೆ?
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಹಾಗೂ ಲಿಂಗಾಯತ ಸಮುದಾಯದ ಕುರಿತು ವಿವಾದಾತ್ಮಕ ಅಂಶಗಳನ್ನು ಒಳಗೊಂಡಿದೆ ಎನ್ನಲಾದ ಲೇಖಕ ರವಿ ಹಂಜ್ ಅವರ ‘ಬಸವಮಂಟಪ’ ಕೃತಿ ರಾಜ್ಯದಲ್ಲಿ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಗಿದೆ. ಕೃತಿಯಲ್ಲಿನ ಬರಹಗಳ ವಿರುದ್ಧ ಆಕ್ಷೇಪಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಇದೀಗ ಕೃತಿಯ ಲೇಖಕರ ಜತೆಗೆ ಅದನ್ನು ಪ್ರಕಟಿಸಿರುವ ಪತ್ರಕರ್ತ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್ ಅವರ ಜವಾಬ್ದಾರಿಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಚಿವ ಈಶ್ವರ ಬಿ. ಖಂಡ್ರೆ ಅವರು ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಲೇಖಕ ರವಿ ಹಂಜ್ ಅವರ ಆಕ್ಷೇಪಾರ್ಹ ಹೇಳಿಕೆಗಳನ್ನು ಒಳಗೊಂಡ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬಸವಣ್ಣನವರ ವ್ಯಕ್ತಿತ್ವ, ಬಸವಾದಿ ಶಿವಶರಣರ ಚಿಂತನೆ ಹಾಗೂ ವಚನ ಪರಂಪರೆಯ ಘನತೆಗೆ ಧಕ್ಕೆ ತರುವ ಪ್ರಯತ್ನಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಹಲವು ನಾಯಕರು ಈ ವಿಚಾರದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಕಾಶಕರ ಜವಾಬ್ದಾರಿ ಎಲ್ಲಿಗೆ ಹೋಯಿತು?
ಈ ವಿವಾದದಲ್ಲಿ ಅತ್ಯಂತ ಮಹತ್ವದ ಪ್ರಶ್ನೆಯೊಂದು ಉದ್ಭವಿಸಿದೆ. ಹಿರಿಯ ಪತ್ರಕರ್ತರಾಗಿ, ಮಾಧ್ಯಮ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ವಿಶ್ವೇಶ್ವರ ಭಟ್ ಅವರು ಈ ಕೃತಿಯ ಪ್ರಕಾಶಕರಾಗಿರುವುದು ಏಕೆ? ಒಂದು ಪುಸ್ತಕವನ್ನು ಪ್ರಕಟಿಸುವುದು ಕೇವಲ ವ್ಯಾಪಾರಿಕ ನಿರ್ಧಾರವಷ್ಟೇ ಅಲ್ಲ; ಅದರಲ್ಲಿರುವ ವಿಷಯ, ಐತಿಹಾಸಿಕ ಉಲ್ಲೇಖಗಳು ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆಯೂ ಪ್ರಕಾಶಕರಿಗೆ ಜವಾಬ್ದಾರಿ ಇರುತ್ತದೆ.
ಬಸವಣ್ಣನವರಂತಹ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಮಾಜ ಸುಧಾರಕರ ಕುರಿತು ಗಂಭೀರ ಆಕ್ಷೇಪಗಳಿಗೆ ಕಾರಣವಾಗಿರುವ ಬರಹಗಳನ್ನು ಪ್ರಕಟಿಸುವ ಮುನ್ನ ಅವುಗಳ ಸತ್ಯಾಸತ್ಯತೆ ಮತ್ತು ಐತಿಹಾಸಿಕ ಆಧಾರಗಳನ್ನು ಪರಿಶೀಲಿಸಲಾಗಿತ್ತೇ? ಹಿರಿಯ ಪತ್ರಕರ್ತರಾಗಿರುವ ವಿಶ್ವೇಶ್ವರ ಭಟ್ ಈ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆಯೇ? ಕೃತಿಯ ಪ್ರಕಟಣೆಯ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಗಳಿಗೆ ಅವರು ಸ್ಪಷ್ಟನೆ ನೀಡಬೇಕಿದೆ.
ಸ್ವತಃ ಬ್ರಾಹ್ಮಣರಾಗಿರುವ ವಿಶ್ವೇಶ್ವರ ಭಟ್, ಬಸವಣ್ಣನವರ ಸಮಾನತೆ, ಜಾತಿ ವಿರೋಧಿ ಚಿಂತನೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಪ್ರಶ್ನಿಸುವ ಅಥವಾ ಅವಹೇಳನ ಮಾಡುವ ರೀತಿಯ ಬರಹಗಳಿಗೆ ಪ್ರಕಟಣೆಯ ಮೂಲಕ ವೇದಿಕೆ ಒದಗಿಸಲಾಗಿದೆಯೇ ಎಂಬುದನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸುವ ಅಗತ್ಯವಿದೆ.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜತೆಗಿನ ಒಡನಾಟದ ಬಗ್ಗೆಯೂ ಪ್ರಶ್ನೆ
ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ವಿಶ್ವೇಶ್ವರ ಭಟ್ ಅವರು ತಮ್ಮ ಅಂಕಣಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳಲ್ಲಿ ಕಾಂಗ್ರೆಸ್ ನಾಯಕರನ್ನು ಹಲವು ಬಾರಿ ಟೀಕಿಸುತ್ತಾ ಬಂದಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರೊಂದಿಗೆ ಅವರ ಸಾರ್ವಜನಿಕ ಒಡನಾಟ ಕಂಡುಬರುತ್ತದೆ. ಕಾಂಗ್ರೆಸ್ ಮಾತ್ರವಲ್ಲದೇ ಬಹುತೇಕ ಬಿಜೆಪಿ ನಾಯಕರೊಂದಿಗೂ ವಿಶ್ವೇಶ್ವರ ಭಟ್ ನಿಕಟ ಸಂಪರ್ಕವಿದೆ. ಪತ್ರಕರ್ತರಾಗಿ ಎಲ್ಲಾ ರಾಜಕಾರಣಿಗಳಂದಿಗಿನ ನಿಕಟ ಸಂಪರ್ಕ ಸಹಜವೇ ಆದರೂ ಸರ್ಕಾರದ ಹಲವು ಪ್ರಮುಖ ನಿರ್ಧಾರಗಳಲ್ಲಿ, ನೇಮಕಾತಿಗಳಲ್ಲಿ ವಿಶ್ವೇಶ್ವರ ಭಟ್ ನೇರ ಹಸ್ತಕ್ಷೇಪ ಮಾಡುವ ಬಗ್ಗೆಯೂ ಪ್ರಮುಖ ಚರ್ಚೆ ಇದೆ. ಇಂತಹ ಸಂದರ್ಭದಲ್ಲಿ ವಿವಾದಿತ ಕೃತಿಯ ಪ್ರಕಟಣೆಯ ಕುರಿತು ಕಾಂಗ್ರೆಸ್ ನಾಯಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ.
ಸರ್ಕಾರದ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಬಸವಣ್ಣನವರ ಸಾಮಾಜಿಕ ನ್ಯಾಯದ ಪರಂಪರೆಯನ್ನು ಸಾರ್ವಜನಿಕವಾಗಿ ಪ್ರತಿಪಾದಿಸುತ್ತಾರೆ. ಹಾಗಿದ್ದರೆ ಬಸವಣ್ಣನವರ ಘನತೆಗೆ ಧಕ್ಕೆ ತಂದಿದೆ ಎಂಬ ಆರೋಪ ಎದುರಿಸುತ್ತಿರುವ ಕೃತಿಯ ಪ್ರಕಾಶಕರ ಜವಾಬ್ದಾರಿಯ ಕುರಿತು ಅವರ ನಿಲುವು ಏನು? ರಾಜಕೀಯ ಮತ್ತು ವೈಯಕ್ತಿಕ ಒಡನಾಟಗಳನ್ನು ಬದಿಗಿಟ್ಟು ಈ ಪ್ರಕರಣವನ್ನು ಸಮಾನವಾಗಿ ಪರಿಗಣಿಸುವರೇ ಎಂಬ ಪ್ರಶ್ನೆಯೂ ಸಹಜವಾಗಿ ಮೂಡುತ್ತದೆ.
ಕಾಂಗ್ರೆಸ್–ಬಿಜೆಪಿ ನಾಯಕರ ಮೌನ ಏಕೆ?
ಬಸವಣ್ಣನವರ ವಿಚಾರದಲ್ಲಿ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟವಾಗಿ ಪ್ರಕಟಿಸಬೇಕಾದ ಸಮಯವಿದು. ಕಾಂಗ್ರೆಸ್ ನಾಯಕರು ಕೃತಿಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೆ, ಬಿಜೆಪಿಯ ನಾಯಕರು ಕೂಡ ಈ ವಿಚಾರದಲ್ಲಿ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಬೇಕಿದೆ.
ಲೇಖಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸುವ ನಾಯಕರು, ಕೃತಿಯನ್ನು ಪ್ರಕಟಿಸಿದ ಪ್ರಕಾಶಕರ ಜವಾಬ್ದಾರಿಯ ವಿಚಾರದಲ್ಲಿ ಮೌನವಾಗಿರುವುದೇಕೆ? ಲೇಖಕ ಮತ್ತು ಪ್ರಕಾಶಕ ಇಬ್ಬರ ಪಾತ್ರವನ್ನೂ ಸಮಾನವಾಗಿ ಪರಿಶೀಲಿಸುವಂತೆ ಒತ್ತಾಯಿಸಲು ರಾಜಕೀಯ ಪಕ್ಷಗಳಿಗೆ ಇರುವ ಹಿಂಜರಿಕೆ ಏನು? ವಿಶ್ವೇಶ್ವರ ಭಟ್ ಅವರ ರಾಜಕೀಯ ಸಂಪರ್ಕಗಳು ಅಥವಾ ವೈಯಕ್ತಿಕ ಒಡನಾಟಗಳು ಈ ವಿಚಾರದಲ್ಲಿ ಪ್ರಭಾವ ಬೀರುತ್ತಿವೆಯೇ ಎಂಬ ಪ್ರಶ್ನೆಗೂ ಸಂಬಂಧಪಟ್ಟ ನಾಯಕರು ಉತ್ತರಿಸಬೇಕಿದೆ.
ಬಸವಣ್ಣನವರು ಒಂದು ಧರ್ಮ ಅಥವಾ ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಮಹಾನ್ ಸಮಾಜ ಸುಧಾರಕರು. ಅವರ ವಿಚಾರಧಾರೆಯನ್ನು ವಿಮರ್ಶಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಐತಿಹಾಸಿಕ ಸಂಗತಿಗಳನ್ನು ಆಧಾರಸಹಿತ ಚರ್ಚಿಸುವುದಕ್ಕೂ ವ್ಯಕ್ತಿತ್ವವನ್ನು ಅವಹೇಳನ ಮಾಡುವುದಕ್ಕೂ ವ್ಯತ್ಯಾಸವಿದೆ.
‘ಬಸವಮಂಟಪ’ ವಿವಾದದಲ್ಲಿ ಕೇವಲ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವ ಬೇಡಿಕೆಗೆ ಸೀಮಿತವಾಗದೆ, ಲೇಖಕ ಮತ್ತು ಪ್ರಕಾಶಕರ ಹೊಣೆಗಾರಿಕೆ, ಕೃತಿಯಲ್ಲಿನ ವಿವಾದಾತ್ಮಕ ಅಂಶಗಳ ಸತ್ಯಾಸತ್ಯತೆ ಹಾಗೂ ರಾಜಕೀಯ ನಾಯಕರ ನಿಲುವುಗಳೂ ಸಾರ್ವಜನಿಕ ಚರ್ಚೆಗೆ ಬರಬೇಕಿವೆ. ಬಸವಣ್ಣನವರ ಹೆಸರನ್ನು ರಾಜಕೀಯ ವೇದಿಕೆಗಳಲ್ಲಿ ಬಳಸುವ ಎಲ್ಲ ಪಕ್ಷಗಳೂ ಈ ವಿವಾದದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸುವುದು ಅಗತ್ಯವಾಗಿದೆ.
Peepal Media Desk
Peepal Media · ರಾಜಕೀಯ ವಿಭಾಗ