ಟ್ರಾನ್ಸ್ಜೆಂಡರ್ ಹಕ್ಕುಗಳ ಕಾಯ್ದೆಗೆ ತಿದ್ದುಪಡಿ: ಸ್ವಯಂ ಗುರುತಿಸುವಿಕೆ ಬದಲು ವೈದ್ಯಕೀಯ ಅನುಮೋದನೆಗೆ ಆದ್ಯತೆ; ದೇಶಾದ್ಯಂತ ಚರ್ಚೆ
ಲಿಂಕ್ ನಕಲಿಸಲಾಗಿದೆ ✓
ನವದೆಹಲಿ: ಟ್ರಾನ್ಸ್ಜೆಂಡರ್ ಸಮುದಾಯದ ಹಕ್ಕುಗಳು ಮತ್ತು ಕಾನೂನು ಮಾನ್ಯತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2026ರ ತಿದ್ದುಪಡಿ ಕಾಯ್ದೆ ಹೊಸ ಚರ್ಚೆಗೆ ಕಾರಣವಾಗಿದೆ. 2019ರ ಕಾಯ್ದೆಯಲ್ಲಿದ್ದ ಸ್ವಯಂ-ಗುತಿಸುವಿಕೆಯ ತತ್ವದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಟ್ರಾನ್ಸ್ಜೆಂಡರ್ ಗುರುತಿನ ಪ್ರಮಾಣೀಕರಣಕ್ಕೆ ವೈದ್ಯಕೀಯ ಮಂಡಳಿಯ ಶಿಫಾರಸು ಮತ್ತು ಜಿಲ್ಲಾಧಿಕಾರಿಗಳ ಅನುಮೋದನೆ ಅಗತ್ಯವಾಗಲಿದೆ.
ಟ್ರಾನ್ಸ್ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ಕ್ಕೆ ಮಾರ್ಚ್ 30ರಂದು ರಾಷ್ಟ್ರಪತಿಗಳ ಅಂಕಿತ ದೊರೆತಿದ್ದು, ಮೇ 25ರಿಂದ ಜಾರಿಗೆ ಬಂದಿದೆ. ಹೊಸ ಕಾನೂನಿನ ಪ್ರಕಾರ, ಗುರುತಿನ ಪ್ರಮಾಣಪತ್ರಕ್ಕಾಗಿ ಸಲ್ಲಿಸುವ ಅರ್ಜಿಯನ್ನು ವೈದ್ಯಕೀಯ ಮಂಡಳಿ ಪರಿಶೀಲಿಸಿ ಶಿಫಾರಸು ಮಾಡಬೇಕು. ನಂತರ ಜಿಲ್ಲಾಧಿಕಾರಿಗಳು ಪ್ರಮಾಣಪತ್ರ ನೀಡುವ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ.
2019ರ ಕಾಯ್ದೆಯಲ್ಲಿ ವ್ಯಕ್ತಿಯ ಸ್ವಯಂ-ಗುರುತಿಸುವಿಕೆಗೆ ಮಹತ್ವ ನೀಡಲಾಗಿತ್ತು. ಆದರೆ ಹೊಸ ತಿದ್ದುಪಡಿಯು ಗುರುತಿನ ಮಾನ್ಯತೆಯನ್ನು ವೈದ್ಯಕೀಯ ಮತ್ತು ಆಡಳಿತಾತ್ಮಕ ಪರಿಶೀಲನೆಯೊಂದಿಗೆ ಜೋಡಿಸಿರುವುದು ಪ್ರಮುಖ ಬದಲಾವಣೆಯಾಗಿದೆ. ಅಲ್ಲದೆ, ಟ್ರಾನ್ಸ್ಜೆಂಡರ್ ವ್ಯಕ್ತಿಗಳ ವ್ಯಾಖ್ಯಾನದಲ್ಲಿಯೂ ಬದಲಾವಣೆ ಮಾಡಲಾಗಿದ್ದು, ನಿರ್ದಿಷ್ಟ ಸಾಮಾಜಿಕ ಹಾಗೂ ಇತರ ವರ್ಗಗಳನ್ನು ಗುರುತಿಸುವ ಮೂಲಕ ಕಾಯ್ದೆಯ ವ್ಯಾಪ್ತಿಯನ್ನು ಮರುರೂಪಿಸಲಾಗಿದೆ.
ಈ ಬದಲಾವಣೆಯ ಕುರಿತು ಆರೋಗ್ಯ ಕ್ಷೇತ್ರದ ತಜ್ಞರು ಮತ್ತು ಹಕ್ಕುಗಳ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ICD-11 ಹಾಗೂ ವಿಶ್ವ ವೃತ್ತಿಪರ ಟ್ರಾನ್ಸ್ಜೆಂಡರ್ ಆರೋಗ್ಯ ಸಂಘದ (WPATH) ಎಂಟನೇ ಆವೃತ್ತಿಯ ಆರೋಗ್ಯ ಆರೈಕೆ ಮಾರ್ಗಸೂಚಿಗಳನ್ನು ಉಲ್ಲೇಖಿಸಿರುವ ಲೇಖಕರು, ಹೊಸ ಕಾನೂನಿನ ವಿಧಾನವು ವ್ಯಕ್ತಿಯ ಸ್ವಾಯತ್ತತೆ ಮತ್ತು ಅಂತರರಾಷ್ಟ್ರೀಯ ಆರೋಗ್ಯ ಮಾನದಂಡಗಳೊಂದಿಗೆ ಹೊಂದಿಕೆಯಾಗುತ್ತದೆಯೇ ಎಂಬ ಪ್ರಶ್ನೆ ಎತ್ತಿದ್ದಾರೆ.
ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಗುರುತನ್ನು ವೈದ್ಯಕೀಯ ಪರಿಶೀಲನೆಯ ಮೂಲಕ ನಿರ್ಧರಿಸುವ ವ್ಯವಸ್ಥೆಯು ಅವರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸ್ವಯಂ-ಗುತಿಸುವಿಕೆಯ ಹಕ್ಕಿನ ಮೇಲೆ ಪರಿಣಾಮ ಬೀರಬಹುದು ಎಂಬುದು ಪ್ರಮುಖ ಆತಂಕವಾಗಿದೆ. ಮತ್ತೊಂದೆಡೆ, ದೌರ್ಜನ್ಯ, ಶೋಷಣೆ ಮತ್ತು ಬಲವಂತದ ಲಿಂಗ ಬದಲಾವಣೆಯನ್ನು ತಡೆಯುವ ಉದ್ದೇಶದಿಂದ ಹೊಸ ಕಾನೂನಿನಲ್ಲಿ ಕೆಲವು ರಕ್ಷಣಾತ್ಮಕ ಕ್ರಮಗಳನ್ನು ಪರಿಚಯಿಸಲಾಗಿದೆ.
ಇದೇ ವೇಳೆ, ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಸೂಕ್ತ ಆರೋಗ್ಯ ಸೇವೆ ಒದಗಿಸುವ ವಿಚಾರವೂ ಚರ್ಚೆಯಲ್ಲಿದೆ. ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು, ಸ್ವಾಗತ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಉದ್ಯೋಗಿಗಳಿಗೆ ಈ ಸಮುದಾಯದ ಆರೋಗ್ಯ ಅಗತ್ಯತೆಗಳು ಹಾಗೂ ಗೌರವಯುತ ಸಂವಹನದ ಕುರಿತು ತರಬೇತಿ ನೀಡುವ ಅಗತ್ಯವಿದೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿಯೂ ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ ಈ ಕಾನೂನಿನ ಮುಂದಿನ ಅನುಷ್ಠಾನ ಮತ್ತು ನ್ಯಾಯಾಂಗದ ನಿಲುವು ಮಹತ್ವ ಪಡೆದುಕೊಂಡಿದೆ.
Peepal Media Desk
Peepal Media · ಕಾನೂನು ವಿಭಾಗ