ಪೆಟ್ರೋಲ್ನಲ್ಲಿ ಎಥನಾಲ್ ಪ್ರಮಾಣದಲ್ಲಿ ವ್ಯತ್ಯಾಸ: ಕೇಂದ್ರಕ್ಕೆ ಕರ್ನಾಟಕ ಸರ್ಕಾರದಿಂದ ಪತ್ರ; ಐದು ಪ್ರಮುಖ ಬೇಡಿಕೆಗಳ ಮಂಡನೆ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ಪೆಟ್ರೋಲ್ನಲ್ಲಿ ಎಥನಾಲ್ ಮಿಶ್ರಣದ ಪ್ರಮಾಣ ಮತ್ತು ಇಂಧನ ವಿತರಣೆಯಲ್ಲಿನ ಅಳತೆಗಳ ಕುರಿತು ಗ್ರಾಹಕರ ಹಿತಾಸಕ್ತಿ ಕಾಪಾಡಲು ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಖಚಿತಪಡಿಸಬೇಕು ಎಂದು ಕರ್ನಾಟಕ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ. ಈ ಸಂಬಂಧ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ನವೆಂಬರ್ 17ರಂದು ಪತ್ರ ಬರೆದಿದ್ದಾರೆ.
ರಾಜ್ಯಾದ್ಯಂತ ನಡೆಸಿದ ತಪಾಸಣೆ ಮತ್ತು ಸ್ವತಂತ್ರ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ ಪೆಟ್ರೋಲ್ನಲ್ಲಿನ ಎಥನಾಲ್ ಪ್ರಮಾಣದಲ್ಲಿ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ವ್ಯತ್ಯಾಸ ಕಂಡುಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕ ಸರ್ಕಾರ ಎಥನಾಲ್ ಮಿಶ್ರಣ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಿಶ್ರಣ ಮತ್ತು ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯಾಗುವುದನ್ನು ವಿರೋಧಿಸುತ್ತಿದೆ ಎಂದು ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.
14 ಮಾದರಿಗಳಲ್ಲಿ 11ರಲ್ಲಿ ಶೇ.20ಕ್ಕಿಂತ ಹೆಚ್ಚು ಎಥನಾಲ್
2026ರ ಸೆಪ್ಟೆಂಬರ್ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್), ಬಿಪಿಸಿಎಲ್, ಎಚ್ಪಿಸಿಎಲ್ ಮತ್ತು ಎಂಆರ್ಪಿಎಲ್ಗೆ ಸೇರಿದ 63 ಪೆಟ್ರೋಲ್ ಬಂಕ್ಗಳಲ್ಲಿ ಅಧಿಕಾರಿಗಳು ಮಾದರಿಗಳನ್ನು ಸಂಗ್ರಹಿಸಿದ್ದರು. ಈ ಪೈಕಿ 42 ಮಾದರಿಗಳ ಪರೀಕ್ಷಾ ವರದಿಗಳು ಮಾತ್ರ ಲಭ್ಯವಾಗಿದ್ದು, ಅವುಗಳಲ್ಲಿ ಯಾವುದರಲ್ಲೂ ಎಥನಾಲ್ ಪ್ರಮಾಣದ ವಿವರ ಇರಲಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದರಿಂದ ತೃಪ್ತರಾಗದ ರಾಜ್ಯ ಸರ್ಕಾರ, ರಾಷ್ಟ್ರೀಯ ಮಾನ್ಯತೆ ಪಡೆದ ಪರೀಕ್ಷಾ ಮತ್ತು ಮಾಪನಾಂಕ ಪ್ರಯೋಗಾಲಯಗಳ (ಎನ್ಎಬಿಎಲ್) ಮೂಲಕ ಹೊಸದಾಗಿ 14 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿತ್ತು. ಈ ಪೈಕಿ 11 ಮಾದರಿಗಳಲ್ಲಿ ಶೇ.20ಕ್ಕಿಂತ ಹೆಚ್ಚು ಎಥನಾಲ್ ಇರುವುದು ಪತ್ತೆಯಾಗಿದೆ. ಅತಿ ಹೆಚ್ಚು ಪ್ರಮಾಣವು ಶೇ.31ಕ್ಕಿಂತಲೂ ಹೆಚ್ಚಿತ್ತು ಎಂದು ಪತ್ರದಲ್ಲಿ ಹೇಳಲಾಗಿದೆ.
ಮಾದರಿಗಳಲ್ಲಿನ ಎಥನಾಲ್ ಪ್ರಮಾಣ ಶೇ.13.5ರಿಂದ ಶೇ.31.2ರವರೆಗೆ ವ್ಯತ್ಯಾಸ ಹೊಂದಿತ್ತು. ಕೇಂದ್ರ ಸರ್ಕಾರದ ಅಧಿಸೂಚನೆಯ ಪ್ರಕಾರ ಪೆಟ್ರೋಲ್ನಲ್ಲಿ ಶೇ.20ರಷ್ಟು ಎಥನಾಲ್ ಮಿಶ್ರಣ ಇರಬೇಕು. ಆದರೆ, ಪರೀಕ್ಷೆಯಲ್ಲಿ ಕಂಡುಬಂದಿರುವ ಈ ವ್ಯತ್ಯಾಸವು ನಿಗದಿತ ಮಾನದಂಡ ಪಾಲನೆಯಾಗುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ.
ಪ್ರೀಮಿಯಂ ಪೆಟ್ರೋಲ್ನಲ್ಲೂ ಹೆಚ್ಚಿನ ಎಥನಾಲ್
ಲೀಟರ್ಗೆ ಸುಮಾರು ₹120ರಿಂದ ₹140ರವರೆಗೆ ಬೆಲೆ ಹೊಂದಿರುವ ಪ್ರೀಮಿಯಂ ಹೈ-ಸ್ಪೀಡ್ ಪೆಟ್ರೋಲ್ನಲ್ಲೂ ಹೆಚ್ಚಿನ ಪ್ರಮಾಣದ ಎಥನಾಲ್ ಪತ್ತೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಉತ್ತಮ ಗುಣಮಟ್ಟದ ಇಂಧನವೆಂದು ಹೆಚ್ಚಿನ ಬೆಲೆ ನೀಡಿ ಖರೀದಿಸುವ ಗ್ರಾಹಕರಿಗೂ ಎಥನಾಲ್ ಪ್ರಮಾಣದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ರಾಜ್ಯ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಇದರ ಜೊತೆಗೆ, ಪೆಟ್ರೋಲ್ ಬಂಕ್ಗಳಲ್ಲಿ ಇಂಧನದ ಪ್ರಮಾಣದಲ್ಲಿನ ವ್ಯತ್ಯಾಸವನ್ನೂ ರಾಜ್ಯ ಸರ್ಕಾರ ಪರಿಶೀಲಿಸಿದೆ. ಕರ್ನಾಟಕದ ಒಟ್ಟು 5,946 ಪೆಟ್ರೋಲ್ ಬಂಕ್ಗಳ ಪೈಕಿ 805 ಬಂಕ್ಗಳಲ್ಲಿ ತಪಾಸಣೆ ನಡೆಸಲಾಗಿತ್ತು. ಪರಿಶೀಲಿಸಿದ 3,071 ನಳಿಕೆಗಳಲ್ಲಿ 2,618 ನಳಿಕೆಗಳು ನಿಗದಿತ ಅಳತೆಯ ನಿಖರತೆಯಿಂದ ವ್ಯತ್ಯಾಸ ಹೊಂದಿರುವುದು ಕಂಡುಬಂದಿದೆ. 101 ಬಂಕ್ಗಳಲ್ಲಿ ಅನುಮತಿಸಲಾದ ಗರಿಷ್ಠ ಮಿತಿಗಿಂತ ಹೆಚ್ಚಿನ ವ್ಯತ್ಯಾಸದೊಂದಿಗೆ ಇಂಧನ ವಿತರಣೆ ಮಾಡಿರುವುದು ಪತ್ತೆಯಾಗಿದ್ದು, ಅವುಗಳ ವಿರುದ್ಧ ಪ್ರಕರಣ ದಾಖಲಿಸಿ ₹6.66 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೇಂದ್ರದ ಎರಡು ಅಧಿಸೂಚನೆಗಳಿಗೆ ರಾಜ್ಯದ ವಿರೋಧ
ಪೆಟ್ರೋಲ್ ಮತ್ತು ಡೀಸೆಲ್ ವಿತರಣಾ ಯಂತ್ರಗಳ ಕಡ್ಡಾಯ ಪರಿಶೀಲನೆಯ ಅವಧಿಯನ್ನು 12 ತಿಂಗಳಿಂದ 24 ತಿಂಗಳಿಗೆ ಹೆಚ್ಚಿಸುವ ಕೇಂದ್ರದ ಅಧಿಸೂಚನೆಗೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳ ಬದಲಿಗೆ ಖಾಸಗಿ ಪರೀಕ್ಷಾ ಕೇಂದ್ರಗಳಿಗೂ ಇಂಧನ ವಿತರಣಾ ಯಂತ್ರಗಳನ್ನು ಪರಿಶೀಲಿಸುವ ಅವಕಾಶ ನೀಡುವ ಮತ್ತೊಂದು ಅಧಿಸೂಚನೆಯನ್ನೂ ರಾಜ್ಯ ಸರ್ಕಾರ ಒಪ್ಪಿಲ್ಲ.
ಈ ಬದಲಾವಣೆಗಳು ಗ್ರಾಹಕರ ಹಿತಾಸಕ್ತಿಗೆ ಧಕ್ಕೆಯುಂಟುಮಾಡಬಹುದು ಎಂಬ ಕಾರಣಕ್ಕೆ, ರಾಜ್ಯದಲ್ಲಿ ಪ್ರತಿ ವರ್ಷ ಸರ್ಕಾರಿ ಅಧಿಕಾರಿಗಳ ಮೂಲಕವೇ ಎಲ್ಲ ಇಂಧನ ವಿತರಣಾ ಯಂತ್ರಗಳ ಪರಿಶೀಲನೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಎರಡೂ ಅಧಿಸೂಚನೆಗಳನ್ನು ಮರುಪರಿಶೀಲಿಸುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರಿಗೂ ರಾಜ್ಯ ಸರ್ಕಾರ ಪತ್ರ ಬರೆದಿರುವುದಾಗಿ ಉಲ್ಲೇಖಿಸಲಾಗಿದೆ.
ಕೇಂದ್ರದ ಮುಂದೆ ಐದು ಬೇಡಿಕೆಗಳು
ಗ್ರಾಹಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕೇಂದ್ರದ ಮುಂದೆ ಐದು ಪ್ರಮುಖ ಬೇಡಿಕೆಗಳನ್ನು ಇರಿಸಿದೆ.
- ಪ್ರತಿ ಪೆಟ್ರೋಲ್ ಬಂಕ್ನಲ್ಲಿ ಮಾರಾಟ ಮಾಡುವ ಇಂಧನದಲ್ಲಿನ ನಿಜವಾದ ಎಥನಾಲ್ ಪ್ರಮಾಣವನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು.
- ಗ್ರಾಹಕರಿಗೆ ನೀಡುವ ಪ್ರತಿಯೊಂದು ಬಿಲ್ನಲ್ಲೂ ಎಥನಾಲ್ ಪ್ರಮಾಣವನ್ನು ನಮೂದಿಸಬೇಕು.
- ವಾಹನಗಳ ಹೊಂದಾಣಿಕೆಗೆ ಅನುಗುಣವಾಗಿ ಇ-10 ಮತ್ತು ಎಥನಾಲ್ ರಹಿತ ಪೆಟ್ರೋಲ್ ಅನ್ನು ಇ-20 ಪೆಟ್ರೋಲ್ ಜೊತೆಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಬೇಕು.
- ಎನ್ಎಬಿಎಲ್ ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯಗಳ ಮೂಲಕ ಇಂಧನದ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸುವ ವ್ಯವಸ್ಥೆ ರೂಪಿಸಬೇಕು.
- ನಿಗದಿತ ಮಿತಿಗಿಂತ ಹೆಚ್ಚಿನ ಎಥನಾಲ್ ಮಿಶ್ರಣದಿಂದ ವಾಹನಗಳಿಗೆ ಹಾನಿಯಾದರೆ ಗ್ರಾಹಕರಿಗೆ ಪರಿಹಾರ ನೀಡಲು ವಿಶೇಷ ಇ-20 ಪರಿಹಾರ ನಿಧಿ ಸ್ಥಾಪಿಸಬೇಕು.
ಎಥನಾಲ್ ಮಿಶ್ರಣ ನೀತಿಯನ್ನು ಜಾರಿಗೊಳಿಸುವಾಗ ವಾಹನಗಳು, ಪೆಟ್ರೋಲ್ ಬಂಕ್ಗಳ ಮೂಲಸೌಕರ್ಯ, ಸಂಗ್ರಹಣೆ ಮತ್ತು ಪರೀಕ್ಷಾ ವ್ಯವಸ್ಥೆಗಳನ್ನು ಸಿದ್ಧಪಡಿಸಲು ಸಾಕಷ್ಟು ಸಮಯ ನೀಡಬೇಕು ಎಂದು ರಾಜ್ಯ ಸರ್ಕಾರ ಪತ್ರದಲ್ಲಿ ಒತ್ತಾಯಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ಗ್ರಾಹಕರ ಹಿತಾಸಕ್ತಿ, ಇಂಧನದ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದ್ದಾರೆ.
Peepal Media
Peepal Media · ರಾಜ್ಯ ವಿಭಾಗ