ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಪ್ರೀತಿಯ ಅನುಭೂತಿ ಪಡೆಯದ ಗಂಡಸರು!ಬೆಂಗಳೂರಿನ ಮೊದಲ ಮುಖ್ಯ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಯಾರು?: 1996ರ ಬ್ಯಾಚ್‌ನ ಅಧಿಕಾರಿಗೆ ಹೊಸ ವ್ಯವಸ್ಥೆಯ ಹೊಣೆ!ರೈಲ್ವೆ ಕಾಮಗಾರಿ ಪ್ರಕ್ರಿಯೆ: ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಟಿಕೆಟ್‌ ಇಲ್ಲದೆ ವಂದೇ ಭಾರತ್ ಪ್ರಯಾಣ – 36 ಸಾವಿರ ದಂಡ ನೆಟ್ಟಿಗರ ಆಕ್ರೋಶಅಮೆರಿಕ–ಚೀನಾ–ರಷ್ಯಾ ಮಹಾಶಕ್ತಿಗಳ ಮುಖಾಮುಖಿ: ಶೆನ್‌ಜೆನ್‌ನಲ್ಲಿ ಟ್ರಂಪ್, ಕ್ಸಿ ಮತ್ತು ಪುಟಿನ್ ಭೇಟಿ; ಭಾರತದ ಪಾಲಿಗೆ ಇದು ಎಚ್ಚರಿಕೆಯ ಸಮಯವೇ?ರೈತರ ಸಂಕಷ್ಟದ ವಿಚಾರದಲ್ಲಿ ರಾಜಕೀಯ ಬೇಡ: ಕೇಂದ್ರದಿಂದ ಪರಿಹಾರ ಪಡೆಯಲು ಮೂರು ಬಾರಿ ಮನವಿ ಸಲ್ಲಿಸಿದ್ದೇವೆ – ಜಿ. ಪರಮೇಶ್ವರಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣದಲ್ಲಿ ವ್ಯತ್ಯಾಸ: ಕೇಂದ್ರಕ್ಕೆ ಕರ್ನಾಟಕ ಸರ್ಕಾರದಿಂದ ಪತ್ರ; ಐದು ಪ್ರಮುಖ ಬೇಡಿಕೆಗಳ ಮಂಡನೆಕಾಶ್ಮೀರದಲ್ಲಿ ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ: ಮಸೀದಿಯಲ್ಲಿ ಆಶ್ರಯ; ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾದ ಕಾರ್ಯಾಚರಣೆಭಾರತದ ಆರ್ಥಿಕತೆ ಸಂಕಷ್ಟದಲ್ಲಿದೆ, ಉತ್ಪಾದನಾ ವಲಯದ ಬೆನ್ನೆಲುಬು ಮುರಿದಿದೆ: ರಾಹುಲ್‌ ಗಾಂಧಿಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡವರಿಗೆ ಮತ್ತೊಂದು ಅವಕಾಶ: ಚುನಾವಣಾ ಆಯೋಗದ ಹೊಸ ಗಡುವುಆರ್‌ಎಫ್‌ಒ ಹೇಮಂತ್‌ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ – ಆದಾಯಕ್ಕಿಂತ ಅಧಿಕ ಆಸ್ತಿ ತೀವ್ರ ಶೋಧಆಗುಂಬೆ ಕಾಳಿಂಗ ಪ್ರಕರಣ: ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಪರಿಸರ ಸಂಘಟನೆಗಳ ತೀವ್ರ ಒತ್ತಾಯ5,000 ಮಾಸಿಕ ಗೌರವ ಧನಕ್ಕೆ ಆಗ್ರಹಿಸಿ ರಾಜಧಾನಿಯಲ್ಲಿ ಆಶಾ ಕಾರ್ಯಕರ್ತೆಯರ‌ – ಬೃಹತ್ ಪ್ರತಿಭಟನೆಜಾವೇದ್ ಅಖ್ತರ್‌ಗೆ ಮೌಲ್ವಿ ಟಾಂಗ್: ‘ಹೆಸರು ಬದಲಿಸಿಕೊಂಡು ರಾಮ್ ಪಾಲ್ ಆಗಿ’ ಎಂದು ವ್ಯಂಗ್ಯಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ: ಎಂಬಿ ಪಾಟೀಲ್ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ – ಹೆಚ್​​​​​ಡಿಕೆ ಗರಂಮಸೀದಿಯೊಳಗೆ ಅಡಗಿದ್ದ ಉಗ್ರನ ವಿರುದ್ಧ ಕಾರ್ಯಾಚರಣೆ ; ಕುಲ್ಗಾಮ್‌ನಲ್ಲಿ ಲಷ್ಕರ್ ಉಗ್ರ ಲತೀಫ್ ಭಟ್ ಹತKPSC ನೇಮಕಾತಿ ಹಗರಣ: ಸರ್ಕಾರಿ ಉದ್ಯೋಗದ ಕನಸಿಗೂ ಬೆಲೆ ನಿಗದಿ! ಆಯೋಗದ ಸದಸ್ಯೆಯೇ ಎಸ್‌ಐಟಿ ಬಲೆಗೆಜಾತಿ ಮತ್ತು ಮರ್ಯಾದೆಯ ಸಂಕೋಲೆಯಲ್ಲಿ ಯುವಜನರ ಸ್ವಾತಂತ್ರ್ಯಬಂಗಾಳ ಕೊಲ್ಲಿಯಲ್ಲಿ ಅಕ್ವಾನ್ ಚಂಡಮಾರುತ: ಆಂಧ್ರ ಕರಾವಳಿಗೆ ಅಪ್ಪಳಿಸಲು ಸಿದ್ಧತೆ; ಕರ್ನಾಟಕದಲ್ಲೂ ಮಳೆಯ ಮುನ್ಸೂಚನೆ

ಆಗುಂಬೆ ಕಾಳಿಂಗ ಪ್ರಕರಣ: ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಪರಿಸರ ಸಂಘಟನೆಗಳ ತೀವ್ರ ಒತ್ತಾಯ

PPeepal Media Desk

Peepal Media Desk ರಾಜ್ಯ

• 4 ನಿಮಿಷದ ಓದು

ಆಗುಂಬೆ ಕಾಳಿಂಗ ಪ್ರಕರಣ: ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಪರಿಸರ ಸಂಘಟನೆಗಳ ತೀವ್ರ ಒತ್ತಾಯ

ವನ್ಯಜೀವಿ ಅಪರಾಧದ ವಿಷಯದಲ್ಲಿ ಅರಣ್ಯ ಇಲಾಖೆಯ ಬೇಜವಾಬ್ದಾರಿ ವಿರುದ್ಧ ಕೆರಳಿದ ಹಸಿರು ಕಾರ್ಯಕರ್ತರು

ಶಿವಮೊಗ್ಗ/ಬೆಂಗಳೂರು: ಕಳೆದ ವರ್ಷ ರಾಜ್ಯದ ವನ್ಯಜೀವಿ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿದ್ದ, ಆಗುಂಬೆ ಕಾಳಿಂಗ ಶೋಷಣೆ ಪ್ರಕರಣ, ಕೆಲವೇ ತಿಂಗಳುಗಳು ಕಳೆಯುವುದರೊಳಗೆ ಹೈಕೋರ್ಟ್ ನಲ್ಲಿ ಸಾಕ್ಷಿ ಕೊರತೆಯಿಂದ ರದ್ದಾಗಿದೆ!! ಇದು ರಾಜ್ಯದ ವನ್ಯಜೀವಿ ಪ್ರೇಮಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

“ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸರ್ಕಾರಿ ವಕೀಲರ ದುರ್ಬಲ ವಾದ(weak argument ) ಇದಕ್ಕೆ ಕಾರಣ” ಎಂದು ಪರಿಸರಾಸಕ್ತರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ಈ ಕೂಡಲೇ ವಿಶೇಷ ಮೇಲ್ಮನವಿ ಸಲ್ಲಿಸಬೇಕೆಂದು, ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು, ಕಾಳಿಂಗ ಸರ್ಪ ಶೋಷಣೆಗೆ ನ್ಯಾಯ ಒದಗಿಸಲು ಕ್ರಮವಹಿಸಬೇಕೆಂದು ಹಸಿರು ಕಾರ್ಯಕರ್ತರು ತೀವ್ರವಾಗಿ ಒತ್ತಾಯಿಸಿದ್ದಾರೆ. ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಆಗುಂಬೆ ಕಾಳಿಂಗ ಪ್ರಕರಣದ ಹಿನ್ನೆಲೆ:

“ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ಅಕ್ರಮ ಫೋಟೋ ಶೂಟ್, ಅನುಮತಿ ಇಲ್ಲದೆ ಸಂಶೋಧನೆ ಹಾಗೂ ಅಧ್ಯಯನದ ಮುಖವಾಡದಲ್ಲಿ ಕಾಳಿಂಗದ ಹೆಸರಿನಲ್ಲಿ ವಿವಿಧ ಸಂಸ್ಥೆಗಳನ್ನು ಮಾಡಿಕೊಂಡು, ಸೋಮೇಶ್ವರ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರೆಸಾರ್ಟ್, ವಾಣಿಜ್ಯಿಕ ಚಟುವಟಿಕೆಗಳು ನಡೆಯುತ್ತಿವೆ” ಎಂದು ಆರೋಪಿಸಿ 2025 ರ ಸೆಪ್ಟೆಂಬರ್ ನಲ್ಲಿ ಅರಣ್ಯ ಇಲಾಖೆಗೆ ಹಲವರು ದೂರು ಸಲ್ಲಿಸಿದ್ದರು. ಪ್ರಕರಣದ ಗಂಭೀರತೆಯನ್ನು ಮನಗಂಡ ಅಂದಿನ ಅರಣ್ಯ ಸಚಿವರಾದ ಈಶ್ವರ್ ಬಿ ಖಂಡ್ರೆಯವರು ತನಿಖೆಗೆ ಆದೇಶಿಸಿದ್ದರು.

ತನಿಖೆ ನಡೆಸಿದ್ದ ಅಧಿಕಾರಿಗಳು “ಕಾಳಿಂಗ ಮನೆ/ಕಾಳಿಂಗ ಸೆಂಟರ್ ಫಾರ್ ರೈನ್ ಫಾರೆಸ್ಟ್ ಇಕಾಲಜಿ” ಹೆಸರಿನಲ್ಲಿ ನಡೆಯುತ್ತಿರುವ ಹಲವು ಕಾನೂನು ಬಾಹಿರ ಚಟುವಟಿಕೆಗಳನ್ನು ಗುರುತಿಸಿದ್ದರು. ಈ ಸಂಬಂಧ ಕಾಳಿಂಗ ಸಂಶೋಧಕ ಎಂದು ಬಿಂಬಿಸಿಕೊಂಡಿರುವ ಪಿ. ಗೌರಿಶಂಕರ್ ಎಂಬ ವ್ಯಕ್ತಿಯ ಮೇಲೆ ಅರಣ್ಯ ಇಲಾಖೆ ಮೂರು ಪ್ರಕರಣ ದಾಖಲಿಸಿತ್ತು. ಅದರಲ್ಲಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ- 1972ರ ಅಡಿಯಲ್ಲಿ ದಾಖಲಿಸಿದ ಪ್ರಕರಣ ಪ್ರಮುಖವಾಗಿತ್ತು.

ಪಿ. ಗೌರಿಶಂಕರ್ ಅವರಿಗೆ 2017 ರ ಆಗಸ್ಟ್ 31ರ ನಂತರ ಸಂಶೋಧನೆಗೆ ಯಾವುದೇ ಅನುಮತಿ ಇಲ್ಲ ಎಂಬ ವಿಚಾರ ತನಿಖೆಯ ವೇಳೆ ಬಹಿರಂಗವಾಗಿತ್ತು. ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್ ಅವರಿಂದ ಯಾವುದೇ ಲಿಖಿತ ಪೂರ್ವಾನುಮತಿ ಇಲ್ಲದೆ ಗೌರಿಶಂಕರ್ ಕಾಳಿಂಗ ಸರ್ಪ ಸೆರೆ ಹಿಡಿದಿದ್ದಾರೆ ಎಂಬುದು ಕಂಡುಬಂದಿತ್ತು. “ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972 ರ ಸೆಕ್ಷನ್ 9 ಹಾಗೂ ಹಾವು ರಕ್ಷಣೆಯ SOP- 2022” ರ ಸ್ಪಷ್ಟ ಉಲ್ಲಂಘನೆ ಎಂದು ಆಗ ವನ್ಯಜೀವಿ ಕಾನೂನು ತಜ್ಞರು ಸ್ಪಷ್ಟಪಡಿಸಿದ್ದರು.

2025ರ ಸೆಪ್ಟೆಂಬರ್ ನಲ್ಲಿ, ಸೋಷಿಯಲ್ ಮೀಡಿಯಾ ರೀಲ್ಸ್ ಆಧಾರದ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ- 1972ರ ಸೆಕ್ಷನ್ 2(1)(16), 9, 50, 51, 55 & 57ರ ಅಡಿಯಲ್ಲಿ ಪಿ. ಗೌರಿಶಂಕರ್ ಮೇಲೆ ಕೇಸ್ ದಾಖಲಿಸಿ ಹಾವು ಹಿಡಿಯಲು ಬಳಸುವ ಸ್ಟಿಕ್ ಮತ್ತು ಬ್ಯಾಗ್ ವಶಪಡಿಸಿಕೊಳ್ಳಲಾಗಿತ್ತು. ಇತ್ತೀಚೆಗೆ ವನ್ಯಜೀವಿ ಕಾರ್ಯಕರ್ತರ ತೀವ್ರ ಒತ್ತಾಯದ ನಂತರ ಆಗುಂಬೆ ಅರಣ್ಯ ಇಲಾಖೆ ತೀರ್ಥಹಳ್ಳಿ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಕೂಡಾ ಸಲ್ಲಿಸಿತ್ತು. ಇದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಇಲಾಖೆಯ ಕ್ರಮವನ್ನು ವನ್ಯಜೀವಿ ಕಾರ್ಯಕರ್ತರು ಶ್ಲಾಘಿಸಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳ, ಸರ್ಕಾರಿ ವಕೀಲರ ನಿರ್ಲಕ್ಷ್ಯ? : ಕೆರಳಿದ ವನ್ಯ ಪ್ರೇಮಿಗಳು

ಪಿ. ಗೌರಿಶಂಕರ್, ಈ ವನ್ಯಜೀವಿ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್ ಗೆ 31/08/2026ರಂದು ಅರ್ಜಿ ಸಲ್ಲಿಸಿದ್ದರು. ಗೌರಿಶಂಕರ್ ಅವರ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ 02/11/2026ರಂದು ಈ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಗಂಭೀರವಾದ ವನ್ಯಜೀವಿ ಅಪರಾಧ ಪ್ರಕರಣವೊಂದು ಹೀಗೆ ರದ್ದಾಗಿರುವುದು ವನ್ಯಜೀವಿ ಪ್ರೇಮಿಗಳ ಬಳಗದಲ್ಲಿ ಏಕಕಾಲದಲ್ಲಿ ಆಚ್ಚರಿ ಮತ್ತು ಆಘಾತ ಎರಡನ್ನೂ ಉಂಟುಮಾಡಿದೆ.

“ತೀರ್ಥಹಳ್ಳಿ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಹಾಕಿದ ಕೆಲವೇ ತಿಂಗಳುಗಳಲ್ಲಿ, ಹೈಕೋರ್ಟ್ ನಲ್ಲಿ ಪ್ರಕರಣ ರದ್ದುಗೊಳ್ಳಲು, ಶಿವಮೊಗ್ಗ ಅರಣ್ಯ ವಿಭಾಗದ, ಆಗುಂಬೆ ಅರಣ್ಯಾಧಿಕಾರಿಗಳ ತೀವ್ರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಕಾರಣ. ಇವರು ದುರ್ಬಲವಾದ ಚಾರ್ಜ್ ಶೀಟ್ ಹಾಕಿದ್ದಾರೆ. ಎಲ್ಲಾ ಆಧಾರಗಳನ್ನು ಹಾಗೂ ಡಿಜಿಟಲ್ ಸಾಕ್ಷಿಗಳನ್ನು ಸಂಗ್ರಹಿಸಿ ಅಡಕಗೊಳಿಸಿಲ್ಲ. ಕೂಲಂಕಷವಾಗಿ ತನಿಖೆ ನಡೆಸಿಲ್ಲ” ಎಂದು ಈಗ ವನ್ಯಜೀವಿ ಪ್ರೇಮಿಗಳು ಕೆರಳಿದ್ದಾರೆ. “ಈ ಹಿಂದೆ ಪಿ. ಗೌರಿಶಂಕರ್ ಅವರ ಮೇಲೆ ಪ್ರಕರಣ ದಾಖಲಿಸಿದ್ದ ಆಗುಂಬೆ ವಲಯ ಅರಣ್ಯಾಧಿಕಾರಿಗಳು (RFO) ಹಾಗೂ ತನಿಖೆ ನಡೆಸಿದ್ದ ತೀರ್ಥಹಳ್ಳಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು(ACF) ವರ್ಗಾವಣೆ ಆಗಿದ್ದಾರೆ. ಆ ಸ್ಥಾನಕ್ಕೆ ಈಗ ಹೊಸ ಅಧಿಕಾರಿಗಳು ಬಂದಿದ್ದಾರೆ. ಹೊಸ ಅಧಿಕಾರಿಗಳು ಪ್ರಭಾವಿಗಳ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆಯೇ? ಈ ಪ್ರಕರಣದಲ್ಲಿ ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ(DCF) ಸರಿಯಾದ ಮೇಲ್ವಿಚಾರಣೆ ಮಾಡಿಲ್ಲವೇ?” ಎಂಬ ಬಿರುಸಿನ ಚರ್ಚೆ ಪರಿಸರಾಸಕ್ತರ ವಲಯಗಳಲ್ಲಿ ಜೋರಾಗುತ್ತಿದೆ. ಕೆಲವರು ಭ್ರಷ್ಟಾಚಾರದ ಶಂಕೆಯನ್ನೂ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ.

ಅರಣ್ಯ ಇಲಾಖೆಯ ಆದೇಶಕ್ಕೆ ಗೌರಿಶಂಕರ್ ಆಕ್ಷೇಪ…!!

ರಾಜ್ಯದಲ್ಲಿ ನಡೆಯುತ್ತಿದ್ದ ಕಾಳಿಂಗ ಶೋಷಣೆಯ ಗಂಭೀರತೆಯನ್ನು ಮನಗಂಡ ಈ ಹಿಂದಿನ ಅರಣ್ಯ ಸಚಿವರಾದ ಈಶ್ವರ್ ಬಿ ಖಂಡ್ರೆಯವರು ” ಖಾಸಗಿ ವ್ಯಕ್ತಿಗಳು ಮತ್ತು ಖಾಸಗಿ ಸಂಸ್ಥೆಗಳು ಕಾಳಿಂಗ ಸರ್ಪ ಸೆರೆಹಿಡಿಯುವಂತಿಲ್ಲ. ಕಾಳಿಂಗ ಸರ್ಪಗಳು ಮನೆ, ತೋಟ ಮತ್ತು ಜನವಸತಿ ಪ್ರದೇಶಗಳತ್ತ ಬಂದಾಗ ಅರಣ್ಯ ಇಲಾಖೆಯ ಸಿಬ್ಬಂದಿಯೇ ರಕ್ಷಣೆ ಮಾಡಬೇಕು” ಎಂದು ಚಾರಿತ್ರಿಕ ಆದೇಶ ಹೊರಡಿಸಿದ್ದರು. ಉರಗ ರಕ್ಷಣೆಯ ವಿಷಯದಲ್ಲಿ ಇಲಾಖೆಯನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಇದು ಅತ್ಯಂತ ಮಹತ್ವದ ನಿರ್ದೇಶನವಾಗಿತ್ತು.
ಈ ಆದೇಶದ ನಂತರ ಸೋಷಿಯಲ್ ಮೀಡಿಯಾ ರೀಲ್ಸ್ ಗಳಿಗಾಗಿ ಕಾಳಿಂಗ ಸರ್ಪ ಶೋಷಣೆ ಪ್ರಕರಣಗಳು ತೀವ್ರಗತಿಯಲ್ಲಿ ಇಳಿಕೆಯಾಗಿತ್ತು.

ಇತ್ತೀಚೆಗೆ, ಈ ಆದೇಶವನ್ನು ಪಿ. ಗೌರಿಶಂಕರ್ ಅವರು ತೀವ್ರವಾಗಿ ಟೀಕಿಸಿದ್ದರು. ಎರಡೆರಡು ವಿಡಿಯೋ ಮಾಡಿ, ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹರಿಬಿಟ್ಟಿದ್ದರು. ಅದರಲ್ಲಿ, ಇಂತಹ ಆದೇಶದಿಂದ ಹಾವು ಕಡಿತ ಜಾಸ್ತಿಯಾಗುತ್ತದೆ ಎಂಬರ್ಥದಲ್ಲಿ ಹೇಳಿದ್ದರು. ಆದರೆ, ಆಶ್ಚರ್ಯವೆಂದರೆ, ಕಳೆದ ಇಪ್ಪತ್ತೈದು ವರ್ಷಗಳಲ್ಲೇ ಮಲೆನಾಡು ಭಾಗಗಳಲ್ಲಿ ಕಾಳಿಂಗ ಸರ್ಪ ಕಡಿತದ ಪ್ರಕರಣಗಳೇ ವಿರಳ. ಅದರಲ್ಲೂ ಸಾವು ಉಂಟಾಗಿರುವ ಪ್ರಕರಣಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಮಲೆನಾಡು ಮಾನವ-ಕಾಳಿಂಗ ಸರ್ಪ ಸಹಬಾಳ್ವೆಗೆ ಹೆಸರಾಗಿದೆ. ಕಾಳಿಂಗ ಸಂರಕ್ಷಣೆ ಇಲ್ಲಿನ ಜನ ಸಂಸ್ಕೃತಿಯೊಂದಿಗೆ ಮಿಳಿತವಾಗಿದೆ.

ಕಳೆದ ವರ್ಷ ಅರಣ್ಯ ಇಲಾಖೆಯು ಪಿ. ಗೌರಿಶಂಕರ್ ಮೇಲೆ ಕೇಸ್ ದಾಖಲಿಸಿದ ನಂತರ ಅವರು ತೀರ್ಥಹಳ್ಳಿ ಮತ್ತು ಶಿವಮೊಗ್ಗದಲ್ಲಿ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿದ್ದರು. “ಇಲಾಖೆಯ ಸಹಯೋಗದೊಂದಿಗೆ ನಾವು ಕಾಳಿಂಗ ಸಂರಕ್ಷಣೆ ಮಾಡಿದ್ದೇವೆ” ಎಂಬರ್ಥದಲ್ಲಿ ಮಾತನಾಡಿದ್ದರು. ಆದರೆ ಅರಣ್ಯ ಇಲಾಖೆಯ ದಾಖಲೆಗಳು ಇದಕ್ಕೆ ವ್ಯತಿರಿಕ್ತ ಅಂಶಗಳನ್ನು ಹೇಳುತ್ತವೆ. ಪಿ. ಗೌರಿಶಂಕರ್ ಅವರಿಗೆ ಕಾಳಿಂಗ ಸರ್ಪ ಸೆರೆಗೆ ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್ ಅವರಿಂದ ಯಾವುದೇ ಅನುಮತಿ ಇಲ್ಲ. ಅಪಾಯದ ಸಂದರ್ಭದಲ್ಲಿ ಕಾಳಿಂಗ ಸರ್ಪ ಸೆರೆ ಹಿಡಿದು ಸುರಕ್ಷಿತವಾಗಿ ಬಿಡಲಾಗಿದೆ ಎಂಬುದಕ್ಕೆ ಸಾಂಸ್ಥಿಕ ದಾಖಲೆಗಳು ಇಲ್ಲ ಎಂದು ಕಂಡುಬರುತ್ತಿದೆ.

“ಕೆಲವರು, ತಮ್ಮ ಮೇಲಿನ ಸಾರ್ವಜನಿಕ ಆರೋಪಗಳ ನಿರಾಕರಣೆಗೆ ಇಲಾಖೆಯ ಹೆಸರು ಬಳಸಿದ್ದರು. ಈ ಸಂಬಂಧ ಇಲಾಖೆ ನೊಟೀಸ್ ಕೊಟ್ಟಿತ್ತು.‌ ಅರಣ್ಯ ಇಲಾಖೆಯ ನಿರ್ಧಾರ ಹಾಗೂ ಸಾಮರ್ಥ್ಯದ ಬಗೆಗೆ ಕೇವಲವಾಗಿ ಮಾತನಾಡುವುದು, ನಾವಿಲ್ಲದಿದ್ದರೆ ಇಲಾಖೆಯ ಕೈಯಿಂದ ಉರಗ ಸಂರಕ್ಷಣೆ ಸಾಧ್ಯವಿಲ್ಲ ಎಂಬಂತೆ ಬಿಂಬಿಸುವುದು, ಉರಗ ರಕ್ಷಣೆಯ ವಿಷಯದಲ್ಲಿ ಇಲಾಖೆಯ ಸುಧಾರಣಾ ಕ್ರಮಗಳನ್ನು ವೈಯಕ್ತಿಕ ಹಿತಾಸಕ್ತಿಯ ಕಾರಣದಿಂದ ಟೀಕಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇಲಾಖೆ ಅಂತಹವರನ್ನು ಪ್ರೋತ್ಸಾಹಿಸುವುದು ಸರಿಯಲ್ಲ” ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಅಭಿಪ್ರಾಯಪಟ್ಟರು.

ರೈತ ಸಮೂಹದ ಒತ್ತಾಯ

“ಗೌರಿಶಂಕರ್ ಕಾಳಿಂಗ ಸರ್ಪ ಸೆರೆ ಹಿಡಿದ, ಅದರೆದುರು ಫೋಟೋಕ್ಕೆ ಪೋಸ್ ಕೊಟ್ಟ ಎಷ್ಟೊಂದು ವಿಡಿಯೋಗಳು, ಫೋಟೋಗಳು
ಅಂತರ್ಜಾಲದಲ್ಲಿ ಬಹಿರಂಗವಾಗಿಯೇ ಇವೆ. ಆಗುಂಬೆ ಸುತ್ತಮುತ್ತಲಿನ ಬಹುತೇಕ ಊರುಗಳಲ್ಲಿ “King Cobra Rescue” ಎಂದು ಮೊಬೈಲ್ ನಂಬರ್ ಸಮೇತ, ಜಾಹೀರಾತು ಪೋಸ್ಟರ್ ಗಳು ಅಲ್ಲಲ್ಲಿ ಕಂಡುಬರುತ್ತವೆ. 2017ರ ಆಗಸ್ಟ್ 31ರ ನಂತರ, ಅಧಿಕೃತವಾದ ಸರ್ಕಾರಿ ಅನುಮತಿ ಇಲ್ಲದೆ ಇದ್ದರೂ ಅಧ್ಯಯನ, ಸಂಶೋಧನಾ ಪ್ರಬಂಧ, ಡಿಎನ್ಎ ವಿಶ್ಲೇಷಣೆ, ಹೊಸ ಪ್ರಭೇದ… ಇತ್ಯಾದಿ ಹೇಳಿಕೆಗಳು ಪಿ. ಗೌರಿಶಂಕರ್ ಅವರಿಂದಲೇ ಬಂದಿವೆ ಆದರೂ ” ಸೂಕ್ತ ಸಾಕ್ಷಿ ಇಲ್ಲ” ಎಂದು ಗಂಭೀರ ಪ್ರಕರಣವೊಂದು ನ್ಯಾಯಾಲಯದಲ್ಲಿ ಇಷ್ಟು ಸುಲಭಕ್ಕೆ ರದ್ದಾಗುವುದು ಅರಣ್ಯ ಇಲಾಖೆಯನ್ನು ಸಾರ್ವಜನಿಕವಾಗಿ ನಗೆಪಾಟಲಿಗೆ ದೂಡುತ್ತಿದೆ. ಅರಣ್ಯಾಧಿಕಾರಿಗಳು ಕನಿಷ್ಠ ಪಕ್ಷ ಈಗಲಾದರೂ ಎಚ್ಚೆತ್ತುಕೊಂಡು ಈ ಪ್ರಕರಣದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಬೇಕು. ಈಗಾಗಲೇ ಬಹಿರಂಗವಾಗಿಯೇ ಲಭ್ಯವಿರುವ ಸಾಕ್ಷಿಗಳನ್ನು ಕ್ರೋಢೀಕರಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಹಾಗಾದರೂ, ಇಲಾಖೆಯು ತನ್ನ ಮಾರ್ಯಾದೆಯನ್ನು ಉಳಿಸಿಕೊಳ್ಳಬೇಕು” ಎಂದು ಆಗುಂಬೆಯ ರೈತರೊಬ್ಬರು ಅಭಿಪ್ರಾಯಪಟ್ಟರು. “ಕಾಳಿಂಗ ಸರ್ಪದ ಆವಾಸ ಸ್ಥಾನಕ್ಕೆ ಆಗುಂಬೆ ಸುರಂಗ ಮಾರ್ಗ ಯೋಜನೆ ಮಾರಕ. ಕಾಳಿಂಗ ಸರ್ಪ ಕೃತಕವಾಗಿ ಮರಿ ಮಾಡಿ ಕಾಡಿಗೆ ಬಿಡುವುದನ್ನು ರೈತ ಸಮುದಾಯ ಎಂದಿಗೂ ಒಪ್ಪುವುದಿಲ್ಲ, ಇದು ಪ್ರಾಕೃತಿಕ ಸಮತೋಲನಕ್ಕೆ ಧಕ್ಕೆ ತರುತ್ತದೆ” ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

“ಕಳೆದ ಒಂದೆರಡು ವರ್ಷಗಳಿಂದ ವನ್ಯಜೀವಿ ಸಂರಕ್ಷಣೆ ವಿಷಯದಲ್ಲಿ ಶಿವಮೊಗ್ಗ ವೈಫಲ್ಯದ ಕಾರಣದಿಂದ ಸುದ್ದಿಯಾಗುತ್ತಿರುವುದೇ ಹೆಚ್ಚು. ಅದು ಕಳ್ಳಬೇಟೆ, ಸಕ್ರೈಬೈಲು ಆನೆ ಬಿಡಾರ ಸಮಸ್ಯೆ, ಶಿವಮೊಗ್ಗ ದಸರಾ ಅವಘಡ, ಆನೆ-ಹುಲಿ-ಚಿರತೆ-ಕರಡಿ ಸಾವುಗಳು ಇತ್ಯಾದಿ… ಇದೆಲ್ಲದಕ್ಕೆ ಹೊಸ ಸೇರ್ಪಡೆ ಆಗುಂಬೆ ಕಾಳಿಂಗ ಪ್ರಕರಣ. ಇಷ್ಟಾದರೂ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಮತ್ತೆ ಮತ್ತೆ ಬೇಜವಾಬ್ದಾರಿತನ ಮುಂದುವರೆಸುತ್ತಿದೆ. ಕಾಳಿಂಗ ಪ್ರಕರಣದಲ್ಲಿ ಹೈಕೋರ್ಟ್ ಆದೇಶಕ್ಕೆ ಪ್ರತಿಯಾಗಿ ಇಲಾಖೆ ವಿಶೇಷ ಮೇಲ್ಮನವಿ ಸಲ್ಲಿಸಬೇಕು, ಆ ಮೂಲಕ ಆಗುಂಬೆಯ ಕಾಳಿಂಗ ಶೋಷಣೆಗಳಿಗೆ ನ್ಯಾಯ ಒದಗಿಸಬೇಕು. ಈಗ ಇಲಾಖೆ ಕೈ ಚೆಲ್ಲಿದರೆ, ಕಳೆದ ಒಂದು ವರ್ಷದಲ್ಲಿ ಆದ ತಳಮಟ್ಟದ ಸುಧಾರಣೆಗಳು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ವ್ಯರ್ಥವಾಗುತ್ತದೆ” ಎಂಬುದು ಶಿವಮೊಗ್ಗದ ವನ್ಯಜೀವಿ ಕಾರ್ಯಕರ್ತರೊಬ್ಬರ ಅಭಿಮತ. “ಆಗುಂಬೆ ಕಾಳಿಂಗ ಪ್ರಕರಣವನ್ನು ಇಲಾಖೆ ತನ್ನ ಸ್ವಾಭಿಮಾನದ ಹಿನ್ನೆಲೆಯಲ್ಲಿ ಅಗತ್ಯವಾಗಿ ನೋಡಬೇಕು” ಎಂಬುದನ್ನು ಅವರು ತಮ್ಮ ಮಾತಿನಲ್ಲಿ ಸೇರಿಸಿದರು.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು