ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಪ್ರೀತಿಯ ಅನುಭೂತಿ ಪಡೆಯದ ಗಂಡಸರು!ಬೆಂಗಳೂರಿನ ಮೊದಲ ಮುಖ್ಯ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಯಾರು?: 1996ರ ಬ್ಯಾಚ್‌ನ ಅಧಿಕಾರಿಗೆ ಹೊಸ ವ್ಯವಸ್ಥೆಯ ಹೊಣೆ!ರೈಲ್ವೆ ಕಾಮಗಾರಿ ಪ್ರಕ್ರಿಯೆ: ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಟಿಕೆಟ್‌ ಇಲ್ಲದೆ ವಂದೇ ಭಾರತ್ ಪ್ರಯಾಣ – 36 ಸಾವಿರ ದಂಡ ನೆಟ್ಟಿಗರ ಆಕ್ರೋಶಅಮೆರಿಕ–ಚೀನಾ–ರಷ್ಯಾ ಮಹಾಶಕ್ತಿಗಳ ಮುಖಾಮುಖಿ: ಶೆನ್‌ಜೆನ್‌ನಲ್ಲಿ ಟ್ರಂಪ್, ಕ್ಸಿ ಮತ್ತು ಪುಟಿನ್ ಭೇಟಿ; ಭಾರತದ ಪಾಲಿಗೆ ಇದು ಎಚ್ಚರಿಕೆಯ ಸಮಯವೇ?ರೈತರ ಸಂಕಷ್ಟದ ವಿಚಾರದಲ್ಲಿ ರಾಜಕೀಯ ಬೇಡ: ಕೇಂದ್ರದಿಂದ ಪರಿಹಾರ ಪಡೆಯಲು ಮೂರು ಬಾರಿ ಮನವಿ ಸಲ್ಲಿಸಿದ್ದೇವೆ – ಜಿ. ಪರಮೇಶ್ವರಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣದಲ್ಲಿ ವ್ಯತ್ಯಾಸ: ಕೇಂದ್ರಕ್ಕೆ ಕರ್ನಾಟಕ ಸರ್ಕಾರದಿಂದ ಪತ್ರ; ಐದು ಪ್ರಮುಖ ಬೇಡಿಕೆಗಳ ಮಂಡನೆಕಾಶ್ಮೀರದಲ್ಲಿ ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ: ಮಸೀದಿಯಲ್ಲಿ ಆಶ್ರಯ; ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾದ ಕಾರ್ಯಾಚರಣೆಭಾರತದ ಆರ್ಥಿಕತೆ ಸಂಕಷ್ಟದಲ್ಲಿದೆ, ಉತ್ಪಾದನಾ ವಲಯದ ಬೆನ್ನೆಲುಬು ಮುರಿದಿದೆ: ರಾಹುಲ್‌ ಗಾಂಧಿಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡವರಿಗೆ ಮತ್ತೊಂದು ಅವಕಾಶ: ಚುನಾವಣಾ ಆಯೋಗದ ಹೊಸ ಗಡುವುಆರ್‌ಎಫ್‌ಒ ಹೇಮಂತ್‌ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ – ಆದಾಯಕ್ಕಿಂತ ಅಧಿಕ ಆಸ್ತಿ ತೀವ್ರ ಶೋಧಆಗುಂಬೆ ಕಾಳಿಂಗ ಪ್ರಕರಣ: ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಪರಿಸರ ಸಂಘಟನೆಗಳ ತೀವ್ರ ಒತ್ತಾಯ5,000 ಮಾಸಿಕ ಗೌರವ ಧನಕ್ಕೆ ಆಗ್ರಹಿಸಿ ರಾಜಧಾನಿಯಲ್ಲಿ ಆಶಾ ಕಾರ್ಯಕರ್ತೆಯರ‌ – ಬೃಹತ್ ಪ್ರತಿಭಟನೆಜಾವೇದ್ ಅಖ್ತರ್‌ಗೆ ಮೌಲ್ವಿ ಟಾಂಗ್: ‘ಹೆಸರು ಬದಲಿಸಿಕೊಂಡು ರಾಮ್ ಪಾಲ್ ಆಗಿ’ ಎಂದು ವ್ಯಂಗ್ಯಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ: ಎಂಬಿ ಪಾಟೀಲ್ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ – ಹೆಚ್​​​​​ಡಿಕೆ ಗರಂಮಸೀದಿಯೊಳಗೆ ಅಡಗಿದ್ದ ಉಗ್ರನ ವಿರುದ್ಧ ಕಾರ್ಯಾಚರಣೆ ; ಕುಲ್ಗಾಮ್‌ನಲ್ಲಿ ಲಷ್ಕರ್ ಉಗ್ರ ಲತೀಫ್ ಭಟ್ ಹತKPSC ನೇಮಕಾತಿ ಹಗರಣ: ಸರ್ಕಾರಿ ಉದ್ಯೋಗದ ಕನಸಿಗೂ ಬೆಲೆ ನಿಗದಿ! ಆಯೋಗದ ಸದಸ್ಯೆಯೇ ಎಸ್‌ಐಟಿ ಬಲೆಗೆಜಾತಿ ಮತ್ತು ಮರ್ಯಾದೆಯ ಸಂಕೋಲೆಯಲ್ಲಿ ಯುವಜನರ ಸ್ವಾತಂತ್ರ್ಯಬಂಗಾಳ ಕೊಲ್ಲಿಯಲ್ಲಿ ಅಕ್ವಾನ್ ಚಂಡಮಾರುತ: ಆಂಧ್ರ ಕರಾವಳಿಗೆ ಅಪ್ಪಳಿಸಲು ಸಿದ್ಧತೆ; ಕರ್ನಾಟಕದಲ್ಲೂ ಮಳೆಯ ಮುನ್ಸೂಚನೆ

ಪ್ರೀತಿಯ ಅನುಭೂತಿ ಪಡೆಯದ ಗಂಡಸರು!

CCharan Aivarnad

Charan Aivarnad ಅಂಕಣ

• 3 ನಿಮಿಷದ ಓದು

ಪ್ರೀತಿಯ ಅನುಭೂತಿ ಪಡೆಯದ ಗಂಡಸರು!

“..ಗಂಡ-ಹೆಂಡತಿ ಅಥವಾ ಪ್ರೇಮಿಗಳು ಸಾರ್ವಜನಿಕವಾಗಿ ಅಪ್ಪಿಕೊಂಡರೆ, ಮುತ್ತಿಕ್ಕಿದರೆ – ಅದು ಅಸಹ್ಯ, ಅಶ್ಲೀಲ ಎಂದು ಪರಿಗಣಿಸುವ ಅತ್ಯಂತ ಕೀಳಾದ ಸಂಸ್ಕೃತಿಯಲ್ಲಿ ನಾವು ಬದುಕುತ್ತಿದ್ದೇವೆ..” ಪತ್ರಕರ್ತ ಚರಣ್ ಐವರ್ನಾಡು ಅವರ ಬರಹದಲ್ಲಿ

ಗಂಡಸರು ತಮ್ಮ ಸಂಗಾತಿಯನ್ನು ತಮ್ಮ ತೊಡೆಯ ಮೇಲೆ ಕೂರಿಸಬಾರದು ಎಂಬುದು ಭಾರತೀಯ ಸಂಸ್ಕೃತಿಯೆಂದು ನಾವು ಅಂದುಕೊಂಡಿದ್ದೇವೆ. ಗಂಡ-ಹೆಂಡತಿ ಅಥವಾ ಪ್ರೇಮಿಗಳು ಸಾರ್ವಜನಿಕವಾಗಿ ಅಪ್ಪಿಕೊಂಡರೆ, ಮುತ್ತಿಕ್ಕಿದರೆ – ಅದು ಅಸಹ್ಯ, ಅಶ್ಲೀಲ ಎಂದು ಪರಿಗಣಿಸುವ ಅತ್ಯಂತ ಕೀಳಾದ ಸಂಸ್ಕೃತಿಯಲ್ಲಿ ನಾವು ಬದುಕುತ್ತಿದ್ದೇವೆ. ಹೀಗಾಗಿ ಪ್ರೇಮವನ್ನು ಮುಕ್ತವಾಗಿ ಹಂಚಿಕೊಳ್ಳುವುದು ನಮ್ಮಲ್ಲಿ ಅಪರಾಧ.

ಪ್ರೇಮಿಗಳು ಒಂದು ಕಡೆ ತಮ್ಮ ಪಾಡಿಗೆ ತಾವು ಕೂತಿದ್ದರೆ ಅವರ ಮೇಲೆ ದಾಳಿ ಮಾಡುವುದು, ಪ್ರೇಮಿಗಳ ದಿನದಂದು ಬಜರಂಗ ದಳದ ಗೂಂಡಾಗಳು ದೊಣ್ಣೆ ಹಿಡಿದುಕೊಂಡು ಅವರ ಮೇಲೆ ದಾಳಿ ಮಾಡುವುದು, ರಕ್ಷಾಬಂಧನ ಕಟ್ಟಿಸುವುದು, ಮದುವೆ ಮಾಡಿಸುವುದು – ಇಂಥ ಕೃತ್ಯಗಳು ಪ್ರೀತಿಸಲು ಬಾರದ, ಮನಸ್ಸಿನಲ್ಲಿ ತುಂಬಾ ದ್ವೇಷವನ್ನು ಇಟ್ಟುಕೊಂಡು “ಅನೈಸರ್ಗಿಕ”ವಾಗಿ ಬದುಕುವವರ ಲಕ್ಷಣ.

ಈ ಗಂಡಸರು ಡೇಂಜರ್. 2012ರ ದೆಹಲಿ ಗ್ಯಾಂಗ್ರೇಪ್ ಪ್ರಕರಣದಲ್ಲಿ ಮಹಿಳೆಯ ಜೊತೆಗೆ ಆಕೆಯ ಸಂಗಾತಿ ಇದ್ದ. ಆತನನ್ನು ಹೊಡೆದು ಬಸ್ಸಿನಿಂದ ಹೊರಗೆ ಹಾಕಿದ್ದರು.

ಇಲ್ಲಿ ಅತ್ಯಾಚಾರ ಮಾಡಿದವರಲ್ಲಿ ಒಬ್ಬನಾದ ಮುಖೇಶ್ ಸಿಂಗ್ ಎಂಬವನು ಹೆಣ್ಣುಮಕ್ಕಳ ಬಗ್ಗೆ ಇಟ್ಟುಕೊಂಡಿದ್ದ ಅಭಿಪ್ರಾಯ ನೋಡಿ: “ಸಭ್ಯ ಹುಡುಗಿ ರಾತ್ರಿ ಒಂಬತ್ತು ಗಂಟೆಗೆ ತಿರುಗಾಡುವುದಿಲ್ಲ. ಅತ್ಯಾಚಾರಕ್ಕೆ ಹುಡುಗನಿಗಿಂತ ಹುಡುಗಿ ಹೆಚ್ಚು ಜವಾಬ್ದಾರಳು. ಹುಡುಗಿಯರು ಮನೆಗೆಲಸ ಮಾಡಬೇಕೇ ಹೊರತು, ರಾತ್ರಿಯಲ್ಲಿ ಡಿಸ್ಕೋಗಳು ಮತ್ತು ಬಾರ್ಗಳಲ್ಲಿ ಸುತ್ತಾಡುವುದು, ತಪ್ಪು ಕೆಲಸಗಳನ್ನು ಮಾಡುವುದು, ಅಸಭ್ಯ ಬಟ್ಟೆಗಳನ್ನು ಧರಿಸುವುದು ಸರಿಯಲ್ಲ” [Profiles: Who were the Delhi gang rape convicts? – Report by BBC – 20 March 2020]
ಅಂದರೆ, ಹೆಣ್ಣುಮಕ್ಕಳು “ಸಭ್ಯರಾಗಿರಬೇಕು”, “ರಾಜೀವ್ ಗಾಂಧಿ ಸೋನಿಯಾ ಗಾಂಧಿಯನ್ನು ತೊಡೆಯ ಮೇಲೆ ಕೂರಿಸಿದಂತೆ” ಕೂರಿಸಿಕೊಳ್ಳಬಾರದು, ಆ ಬಗ್ಗೆ ಮಾತನಾಡಬಾರದು, ರಾಹುಲ್ ಗಾಂಧಿ ಹೇಳಿದ್ದು ಅಶ್ಲೀಲ – ಎಂದೆಲ್ಲಾ ಹೇಳುವ ಜನರ ಒಳಗೆ ಒಬ್ಬ ಮುಖೇಶ್ ಸಿಂಗ್ ಇದ್ದಾನೆ.

ಪ್ರೇಮಿಗಳ ದಿನದಂದು ಇಂಥವರು ಶಾಲು ಹಾಕಿ ಪಾರ್ಕ್ಗಳಲ್ಲಿ ಓಡಾಡುತ್ತಿರುತ್ತಾರೆ. ಇಲ್ಲವೇ, ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದಲ್ಲಿ ಪತ್ರಕರ್ತ ಎಂದು ಕರೆದುಕೊಂಡಿರುವ “ಆಂತರ್ಯದಲ್ಲಿ ಈಶ್ವರನೂ ಇಲ್ಲದ – ಸಭ್ಯತೆಯಿಂದ ರೂಪುಗೊಳ್ಳುವ ತೇಜಸ್ಸೂ ಇಲ್ಲದ” ಮನುಷ್ಯನಂತೆ “ನೇಹಾ ಬೋರಿ” ಎಂದು ಬರೆಯುತ್ತಾರೆ.

ಇವರೆಲ್ಲರ, ಸಂಗಾತಿಯ ಜೊತೆಗೆ ಸ್ವಚ್ಛಂದವಾಗಿರುವ ಹೆಣ್ಣು “ಸುಲಭವಾಗಿ ದಕ್ಕುವವಳು” ಎಂಬುದು “ಹೆಣ್ಣು ದೇವತೆ” ಎಂಬ ಸಂಸ್ಕೃತಿಯ ಒಳಗೆ ಹುದುಗಿರುವ ಅನಾಗರಿಕ ನಂಬಿಕೆ. ನೋಡಲು ಸಭ್ಯವಾಗಿರುತ್ತಾರೆ, ಒಳಗೆ ಅವಕಾಶಕ್ಕಾಗಿ ಹೊಂಚುಹಾಕುತ್ತಾ ಇರುತ್ತಾರೆ.

ಗಂಡಸರು ಯಾಕೆ ಪ್ರೀತಿಯನ್ನು ಮುಚ್ಚಿಡುತ್ತಾರೆ?
“ನನ್ನ ಅಪ್ಪ ತುಂಬಾ ಸೀರಿಯಸ್. ಅಮ್ಮ ಅವರ ಮುಂದೆ ಇಲಿ.. ಇಲಿ ತರ ಇರ್ತಾ ಇದ್ರು. ಅಪ್ಪ ತುಂಬಾ ಸ್ಟ್ರಿಕ್ಟ್!” ಎಂದು ಅಪ್ಪನ ಬಗ್ಗೆ ಹೇಳುವ ನಮ್ಮ ಮಾತುಗಳು, ನಮ್ಮ ಅಪ್ಪ ಒಬ್ಬ ಹುಂಬ ಎಂಬುದನ್ನೇ ತೋರಿಸುವುದು. ಇಂಥ ಗಂಡಸರು ಒಂದೋ ದೈಹಿಕವಾಗಿ ಹೆಂಡತಿಗೆ ಹಿಂಸೆ ಕೊಡುತ್ತಾರೆ, ಇಲ್ಲವೇ ಭಯದಲ್ಲಿ ಇಟ್ಟು ಮಾನಸಿಕವಾಗಿ ಹಿಂಸೆ ಕೊಡುತ್ತಾರೆ.

ಅಮೆರಿಕದ ಖ್ಯಾತ ಲೇಖಕಿ, ಸ್ತ್ರೀವಾದಿ ಚಿಂತಕಿ ಬೆಲ್ ಹುಕ್ಸ್ ತಮ್ಮ All About Love: New Visions (2000) ನಲ್ಲಿ ಗಂಡಸರ ಈ ಪ್ರವೃತ್ತಿಯನ್ನು ವಿಶ್ಲೇಷಿಸುತ್ತಾರೆ. “ಅನೇಕ ಪುರುಷರು ನಿಜವಾದ ಪ್ರೀತಿಯಿಂದ ದೂರ ಸರಿದು, ತಮಗೆ ಬೇಕೆನಿಸಿದಾಗ ಭಾವನಾತ್ಮಕವಾಗಿ ದೂರ ಉಳಿಯಬಹುದಾದ ಸಂಬಂಧಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಅದೇ ಸಮಯದಲ್ಲಿ ಬೇರೆಯವರಿಂದ ಪ್ರೀತಿಯನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಅಂತಿಮವಾಗಿ, ಅವರು ಪ್ರೀತಿಗಿಂತ ಅಧಿಕಾರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.”

ಇಲ್ಲಿ ತಮಗೆ ಬೇಕಾದಾಗ ಹೆಂಡತಿಯಿಂದ ಪ್ರೀತಿಯನ್ನು ಪಡೆಯುವುದರಲ್ಲಿ – ಲೈಂಗಿಕ ಸಂಪರ್ಕ ಬೆಳೆಸಲು ನಡೆಸುವ ಓಲೈಕೆಯಿರಬಹುದು. ಇಂತಹ ಗಂಡನಿಗೆ ಹೆಂಡತಿ “ಬೇಡ!” ಎಂದು ಹೇಳಲು ಹೆದರುತ್ತಾಳೆ. ಹಾಸಿಗೆಯ ಕೆಲಸ ಮುಗಿದ ಮೇಲೆ ಯಥಾಸ್ಥಿತಿಯಲ್ಲಿ ಅಧಿಕಾರ ಸ್ಥಾಪನೆಯ ಕೆಲಸ ಮುಂದುವರಿಯುತ್ತದೆ.

ಹೀಗಾಗಿ, “ನನ್ನ ಅಪ್ಪ ತುಂಬಾ ಸ್ಟ್ರಿಕ್ಟ್! ಅಮ್ಮ ಇಲಿ ತರ ಇರ್ತಾ ಇದ್ರು!” ಎಂಬುದು ನಮ್ಮ ಅಪ್ಪ ಒಬ್ಬ ಪ್ರೀತಿಸಲು ಬಾರದ ಮೂರ್ಖ ಎಂಬುದನ್ನೇ ಹೇಳುವುದು. ಇದಕ್ಕೆ “ಅವರು ಕಷ್ಟಪಟ್ಟು ದುಡಿದು ತರ್ತಾ ಇದ್ರು!” ಎಂಬುದು ಸಮರ್ಥನೆಯಾಗುವುದಿಲ್ಲ.

ಇದಕ್ಕೆ ಕಾರಣ ಏನು? ಇದನ್ನು ಬೆಲ್ ಹುಕ್ಸ್ ತಮ್ಮ The Will to Change: Men, Masculinity, and Love (2004) ನಲ್ಲಿ ಚರ್ಚೆ ಮಾಡುತ್ತಾರೆ. ಇದಕ್ಕೆ ಪಿತೃಪ್ರಧಾನ ವ್ಯವಸ್ಥೆಯೇ ಪ್ರಮುಖ ಕಾರಣ. “ಭಾವನೆಗಳನ್ನು ವ್ಯಕ್ತಪಡಿಸುವುದು ದುರ್ಬಲರ ಲಕ್ಷಣ. ಅಳುವುದು ಪುರುಷತ್ವಕ್ಕೆ ವಿರುದ್ಧ. ಬೇರೆಯವರ ಮೇಲೆ ಭಾವನಾತ್ಮಕವಾಗಿ ಅವಲಂಬಿತರಾಗುವುದು ತಪ್ಪು. ಸಂಬಂಧದಲ್ಲಿ ನಿಯಂತ್ರಣ ಮತ್ತು ಪ್ರಾಬಲ್ಯ ಹೊಂದಿರುವುದೇ ಪುರುಷತ್ವದ ಲಕ್ಷಣ – ಇಂತಹ ಪಾಠವನ್ನು ಮನೆಯಲ್ಲಿ ಗಂಡಸರಿಗೆ ಕಲಿಸಲಾಗುತ್ತದೆ,” ಎಂದು ಬೆಲ್ ಹುಕ್ಸ್ ಬರೆಯುತ್ತಾರೆ. ಭಾರತದಂತಹ ದೇಶದಲ್ಲಿ ಈ ರೀತಿಯ ಪಾಠಗಳನ್ನು ತಂದೆ ಮಾತ್ರ ಅಲ್ಲ, ತಾಯಿಯೂ ಹೇಳಿಕೊಡುತ್ತಾಳೆ.

ಹೆಂಗಸರು ಗಂಡಸರಾಗುವ ಪ್ರಕ್ರಿಯೆಯಲ್ಲಿರುತ್ತಾರೆ. ಪಿತೃಪ್ರಧಾನ ವ್ಯವಸ್ಥೆಯು ಒಂದು ಚೂರು ಬದಲಾಗದಂತೆ ಕಾಪಾಡುವ ಕೆಲಸವನ್ನು ಹೆಣ್ಣೂ ಮಾಡುತ್ತಾಳೆ. ಮಗಳಿಗೆ ಗಂಡಸಿಗೆ ಬೇಕಾದಂತೆ “ಹೇಗಿರಬೇಕು!” ಎಂಬುದನ್ನು ತಾಯಿ ಹೇಳಿಕೊಡುತ್ತಾಳೆ. ಇಂತಹ ಅನೇಕ ತಾಯಂದಿರನ್ನು ನಾವು ಸೋಷಿಯಲ್‌ ಮಿಡಿಯಾದ ಕಮೆಂಟ್‌ ಬಾಕ್ಸ್‌ಗಳಲ್ಲಿ ನೋಡಬಹುದು.

ಪಿತೃಪ್ರಧಾನ ವ್ಯವಸ್ಥೆ ಹೆಣ್ಣನ್ನು ಎಷ್ಟು ನೀಚವಾಗಿ ಬದಲಿಸಬಹುದು ಎಂಬುದಕ್ಕೆ ಒಳ್ಳೆಯ ಉದಾಹರಣೆ: ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಹೂ ಹಾರಗಳನ್ನು ಹಾಕಿ, ಆರತಿ ಎತ್ತಿ ಸ್ವಾಗತಿಸಿದ ಹೆಂಗಸರು. ಈಗ ರಾಹುಲ್‌ ಗಾಂಧಿಯ ಹೇಳಿಕೆಗಳಲ್ಲಿ ಅಶ್ಲೀಲತೆಯನ್ನು ಹುಡುಕುವ ಹೆಂಗಸರಲ್ಲಿ ಇಂತವರು ಇರುತ್ತಾರೆ.

ಈ ರೀತಿಯ ಅಸಹ್ಯ ಕುಟುಂಬ ವ್ಯವಸ್ಥೆಯಲ್ಲಿ ಬೆಳೆದ ಮಕ್ಕಳಿಗೆ – ಗಂಡಸರಿಗೆ, ಗಂಡಸರ ಮನಸ್ಸಿರುವ ಹೆಂಗಸರಿಗೆ – “ನನ್ನ ಅಪ್ಪ ಅಮ್ಮನನ್ನು ತೊಡೆಯ ಮೇಲೆ ಕೂರಿಸ್ತಾ ಇದ್ರು,” ಎಂದು ರಾಹುಲ್ ಗಾಂಧಿ ಹೇಳಿರುವುದು ತಪ್ಪಾಗಿ ಕಾಣುತ್ತದೆ.

CCharan Aivarnad

Charan Aivarnad

Peepal Media · ಅಂಕಣ ವಿಭಾಗ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಜಾನಪದ, ಇತಿಹಾಸ, ರಾಜಕೀಯ, ಸಾಂಸ್ಕೃತಿಕ ಅಧ್ಯಯನ, ಸಬಾಲ್ಟರ್ನ್‌ ಸ್ಟಡೀಸ್, ಭಾಷೆ, ಸಾಂಸ್ಕೃತಿಕ ರಾಜಕಾರಣ ಇವರ‌ ಆಸಕ್ತಿಯ ಕ್ಷೇತ್ರಗಳು.

ಸಂಬಂಧಿತ ಸುದ್ದಿಗಳು