ಅನುದಿನದ ಅಂತರಂಗ: ತುಳಿದಷ್ಟೂ ಬೆಳೆಯುತ್ತೇನೆ ತಿಳಿದಿರಲಿ ನಿಮಗೆ
ಲಿಂಕ್ ನಕಲಿಸಲಾಗಿದೆ ✓
“..ನನ್ನ ಬದುಕು ನೂರೆಂಟು ದಢಕಿಗಳ ನಂತರ ನಾನು ಕಂಡರಿಯದ ಯಶಸ್ಸಿನ ತಿರುವಿಗೆ ತಂದು ನಿಲ್ಲಿಸಿದಾಗ ಆದ ಒಂದೆರಡು ಘಟನೆಗಳನ್ನು ನಿಮ್ಮೆದುರು ಹಂಚಿಕೊಳ್ಳಬಯಸುತ್ತೇನೆ..” ಕವಿ ನಾಗೇಶ್ ಜೆ ನಾಯಕ ಅವರ ಬರಹದಲ್ಲಿ
‘ಮನುಷ್ಯ ಎತ್ತರೆತ್ತರಕ್ಕೆ ಏರಿದಂತೆ ನೆಲದ ನಂಟುಗಳು ಕಳಚಿಕೊಳ್ಳುತ್ತವೆ’ ಎಂದು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಹೇಳುತ್ತಿದ್ದರು. ಪ್ರತಿ ಯಶಸ್ಸು ಸುಮ್ಮನೆ ಒಲಿದು ಬರುವಂತದ್ದಲ್ಲ; ಒಂದಷ್ಟು ಕಡ ಕೇಳುತ್ತದೆ. ಅದೆಷ್ಟೋ ರಾತ್ರಿಗಳ ನಿದ್ದೆ ಸುಡಬೇಕಾಗುತ್ತದೆ. ಹೆಜ್ಜೆ ಹೆಜ್ಜೆಗೂ ಇದಿರಾಗುವ ಎಡರು ತೊಡರುಗಳನ್ನು ದಾಟಿ ಮುನ್ನಡೆಯಬೇಕಾಗುತ್ತದೆ. ಧುತ್ತೆಂದು ತಲೆಯೆತ್ತಿ ನಿಲ್ಲುವ ಅಪರಿಮಿತ ವಾಂಛೆಗಳ ಗೋಣು ಮುರಿಯಬೇಕಾಗುತ್ತದೆ. ಸಾಲು ಸಾಲಾಗಿ ಬರುವ ಬರ್ತಡೇಗಳನ್ನು ಮರೆಯಬೇಕಾಗುತ್ತದೆ. ಆದ ಅವಮಾನಗಳನ್ನೆಲ್ಲ ಅವುಡುಗಚ್ಚಿ ನುಂಗಿ, ಬಿಕ್ಕಬೇಕಾದ ದುಃಖಗಳನ್ನೆಲ್ಲ ಒಂಟಿಯಾಗಿ ಬೀದಿಯ ಕೊನೆಯ ತಿರುವಿನಲ್ಲಿ ಕಣ್ಣೀರ ಮೂಲಕ ಕೆಡವಬೇಕಾಗುತ್ತದೆ. ನೆಟ್ಟ ನೋಟ ಕೀಳದೆ ಗುರಿಯ ಕಡೆಗೆ ಕೇಂದ್ರೀಕರಿಸಿ ನುಗ್ಗಿದಾಗಲೇ ಯಶಸ್ಸು ನಮ್ಮ ಅಂಗಾಲು ನೆಕ್ಕಲು ಸಾಧ್ಯ. ಸಾಧನೆ ನಿನ್ನ ಹೆಗಲಿಗೇರಿತೋ, ನಿನ್ನ ಹಣಿಯಲು ಸುತ್ತಮುತ್ತ ಹಿತಶತ್ರುಗಳ ಸಂಖ್ಯೆ ಹೆಚ್ಚಿತೆಂದೇ ಅರ್ಥ. ಇವರು ಪ್ರತಿ ನಡೆಗೂ ಕೊಂಕು ಹುಡುಕುತ್ತಾರೆ, ನಿನ್ನಾತ್ಮಬಲ ಕುಗ್ಗಿಸಲು ಶತಾಯಗತಾಯ ಪ್ರಯತ್ನಿಸುತ್ತಾರೆ, ಬೆನ್ನ ಹಿಂದೆ ಚೂರಿ ಹಾಕಲು ಹವಣಿಸುತ್ತಾರೆ.
ಒಟ್ಟಾರೆ ನಿನ್ನ ಗೆಲುವು ಇವರಿಗೆ ಸಹಿಸಲಸಾಧ್ಯ ಎನಿಸಿಬಿಡುತ್ತದೆ. ನನ್ನ ಬದುಕು ನೂರೆಂಟು ದಢಕಿಗಳ ನಂತರ ನಾನು ಕಂಡರಿಯದ ಯಶಸ್ಸಿನ ತಿರುವಿಗೆ ತಂದು ನಿಲ್ಲಿಸಿದಾಗ ಆದ ಒಂದೆರಡು ಘಟನೆಗಳನ್ನು ನಿಮ್ಮೆದುರು ಹಂಚಿಕೊಳ್ಳಬಯಸುತ್ತೇನೆ.
ಅದು ಹೇಗೋ ಹರಸಾಹಸ ಪಟ್ಟು ಬದುಕನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿ, ಬರವಣಿಗೆಯಲ್ಲಿ ಒಂದಷ್ಟು ಹೆಸರು ಮಾಡಿದ ನಂತರ ಸಹಜವಾಗಿಯೇ ಕನ್ನಡಪರ ಸಂಘಟನೆಗಳು, ಶಾಲೆ-ಕಾಲೇಜಿನ ಮುಖ್ಯಸ್ಥರು, ತಾಲೂಕಾ ಆಡಳಿತ ಮುಂತಾದವರು ಪ್ರೀತಿಯಿಂದ ಸನ್ಮಾನಿಸಲು ಆಮಂತ್ರಣ ನೀಡತೊಡಗಿದರು. ‘ಕವಿ ಸನ್ಮಾನಕ್ಕೆ ಒಳಗಾದಂತೆ ಕವಿತೆಗಳು ಕಣ್ಮರೆಯಾಗುತ್ತವೆ’ ಎಂಬುದನ್ನು ಹಿರಿಯ ಕವಿ ಡಾ. ಪ್ರಕಾಶ್ ಖಾಡೆ ಚಂದ ಬಣ್ಣಿಸುತ್ತಾರೆ. ಅವೆಲ್ಲ ಎಚ್ಚರ ಪ್ರಜ್ಞೆ ಇಟ್ಟುಕೊಂಡೇ ಬಲು ಮುಜುಗರದಿಂದ, ಪ್ರೀತಿಯಿಂದ ಕರೆದ ಕಡೆಯಲ್ಲಿ ಗೌರವ ಸ್ವೀಕರಿಸಲು ಒಪ್ಪಿಕೊಳ್ಳುತ್ತಿದ್ದೆ. ಒಂದು ದಿನ ತಾಲೂಕಾ ಆಡಳಿತದಿಂದ ನನ್ನ ಗಮನಾರ್ಹ ಸಾಧನೆಯನ್ನು ಮೆಚ್ಚಿ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಸನ್ಮಾನಿಸಲು ಆಹ್ವಾನ ಬಂತು. ಬಹಳ ಖುಷಿಯಾಯ್ತು; ತವರು ನೆಲದಲ್ಲಿ ಗೌರವ ಸಿಗುವುದು ಭಾಗ್ಯವೇ ಸರಿ. ಒಪ್ಪಿಕೊಂಡು, ಅಂದು ನನ್ನ ಶಾಲೆಯ ಧ್ವಜಾರೋಹಣ ಮುಗಿಸಿ ತಾಲೂಕಾ ಕಾರ್ಯಕ್ರಮಕ್ಕೆ ಹೋದೆ. ಕಾರ್ಯಕ್ರಮ ಶುರುವಾಗಿತ್ತು, ಮೂಲೆಯಲ್ಲಿ ನಿಂತುಕೊಂಡೆ.
ಒಂದು ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಮಿತ್ರನೊಬ್ಬ ನನ್ನನ್ನು ದಿಟ್ಟಿಸಿದ. ಬಳಿ ಬಂದು ‘ನೀನು ಇಲ್ಲಿ ಯಾಕೆ?’ ಎಂದು ವಿಚಾರಿಸಿದ. ನಾನು ಹೇಳಿದೆ, ಇಂದು ಈ ಕಾರ್ಯಕ್ರಮದಲ್ಲಿ ನನಗೆ ಸನ್ಮಾನವಿದೆ, ಆ ಕಾರಣಕ್ಕೆ ಬಂದಿರುವೆ. ಆತ ಮರುಕ್ಷಣವೇ ಬಾಣದಂತೆ, ವ್ಯಂಗ್ಯವಾಗಿ ‘ಸನ್ಮಾನ… ನಿನಗಾ? ನಿನಗ್ಯಾವ ಕಾರಣಕ್ಕೆ ಸನ್ಮಾನ ಮಾಡ್ತಿದಾರೆ. ಅಂತಹದ್ದು ನೀನೇನು ಮಾಡಿದ್ದೀ?’ ಎಂಬ ಪ್ರಶ್ನೆಗಳನ್ನು ತೂರಿಬಿಟ್ಟ.
ಒಂದರೆಕ್ಷಣ ನನಗೆ ಶಾಕ್ ಆದಂತಾಯಿತು. ಅವನ ವ್ಯಂಗ್ಯ, ತಾತ್ಸಾರದ ನುಡಿ, ಎದೆಗೇ ಚುಚ್ಚುವಂತ ಮೊನಚು ಮಾತು ನೋವುಂಟು ಮಾಡಿದವು. ‘ಅಲ್ಲಿ ಸನ್ಮಾನ ಮಾಡುವಾಗ, ನಾನು ಏನು ಮಾಡಿದ್ದೇನೆ ಎಂಬುದನ್ನು ಹೇಳುತ್ತಾರೆ, ಕೇಳಿಸಿಕೋ…’ ಎಂದು ಹೇಳಿ ಸುಮ್ಮನಾಗಿಬಿಟ್ಟೆ. ನಾನು ಸನ್ಮಾನಿಸಲ್ಪಡುವಾಗ ನಿರೂಪಕರು ನನ್ನ ಸಾಹಿತ್ಯಿಕ ಸಾಧನೆ ಹೇಳುವಾಗ ಆಸಾಮಿ ತುಟಿಪಿಟಕ್ಕೆನ್ನದೆ ಗರಬಡಿದವನಂತೆ ನಿಂತುಬಿಟ್ಟಿದ್ದ. ನಂತರ ನನ್ನ ಶಾಲು, ಸನ್ಮಾನದ ತಟ್ಟೆ, ಹಾರ ಎಲ್ಲವನ್ನೂ ಬ್ಯಾಗಿನಲ್ಲಿ ಹಾಕಿಕೊಡುವಾಗ ಅವನ ಮುಖ ಕಪ್ಪಿಟ್ಟಿದ್ದು ಎದ್ದು ತೋರುತ್ತಿತ್ತು.
ಮತ್ತೊಮ್ಮೆ ಇನ್ನೊಂದು ಸಂಘಟನೆಯವರು ನನ್ನನ್ನು ಸನ್ಮಾನಿಸಲು ಆಹ್ವಾನಿಸಿದಾಗ, ಒಬ್ಬರು ದೊಡ್ಡ ಅಧಿಕಾರ ಸ್ಥಾನದಲ್ಲಿದ್ದು ನಿವೃತ್ತರಾದ ವ್ಯಕ್ತಿ, ಹಿರಿಯ (?) ಸಾಹಿತಿಗಳೆಂದು ಕರೆಸಿಕೊಂಡವರು ಆ ಸಂಘಟನೆಯವರಿಗೆ ತರಾಟೆಗೆ ತೆಗೆದುಕೊಂಡಿದ್ದರಂತೆ. ‘ಅವನನ್ನೇಕೆ ಸನ್ಮಾನಿಸುತ್ತಿದ್ದೀರಿ? ಅವನ ಬಗ್ಗೆ ಕಂಪ್ಲೇಂಟ್ ಇದೆ ನಿಮಗೆ ಗೊತ್ತಾ? ನೀವು ಮಾಡ್ತಾ ಇರೋದು ದೊಡ್ಡ ತಪ್ಪು’ ಎಂದೆಲ್ಲ ಹರಿಹಾಯ್ದಿದ್ದರಂತೆ. ಹಾಗೆಂದು ನನ್ನ ಕುರಿತು ಒಳ್ಳೆಯ ಅಭಿಮಾನ ಇದ್ದ ಆ ಸಂಘಟನೆಯ ವ್ಯಕ್ತಿಯೊಬ್ಬರು ಫೋನ್ ಮಾಡಿ ಹೇಳಿದ್ದರು. ‘ಅವನಿಗ್ಯಾಕೆ ಸರ್, ನಿಮ್ಮ ಮೇಲೆ ಅಷ್ಟು ದ್ವೇಷ?’ ಎಂದು ಅವರು ಕೇಳಿದಾಗ ನಕ್ಕು ಸುಮ್ಮನಾಗಿಬಿಟ್ಟಿದ್ದೆ.
‘ಕವಿಗೆ ಕವಿ ಮುನಿವಂ’ ಎಂಬ ಮಾತಿದೆ ನಿಮಗೆ ಗೊತ್ತಿರಬೇಕು. ನಾನು ಅದಕ್ಕೆ ಸೇರಿಸೋದು ‘ಕವಿಯೇ ಕವಿಯ ಕಾಲೆಳೆವಂ’ ಎಂತಹ ತಮಾಷೆ ಅಲ್ಲವೆ? ಒಂಚೂರು ನೀವು ಮುಂದೆ ಹೊರಟರೆ ಸಾಕು, ಖೆಡ್ಡಾ ತೋಡಿ ನಿಮ್ಮನ್ನು ಮತ್ತೆಂದೂ ಮೇಲೇಳದಂತೆ ಮಾಡುವ ಹಿತಶತ್ರುಗಳ ದಂಡೇ ಸುತ್ತಮುತ್ತಲೂ ಇರುತ್ತದೆ ಎಂಬುದನ್ನು ನಾವು ಯಾವತ್ತಿಗೂ ಮರೆಯಬಾರದು. ನಮ್ಮತನ ಬಿಟ್ಟುಕೊಡದೆ, ಪ್ರಾಮಾಣಿಕವಾಗಿ ಯಾವುದೇ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ನನ್ನದೇ ಒಂದು ಪುಟ್ಟ ಪದ್ಯದೊಂದಿಗೆ ಮಾತು ಮುಗಿಸುತ್ತೇನೆ…
ತುಳಿದಷ್ಟೂ ಬೆಳೆಯುತ್ತೇನೆ
ಕಿತ್ತೊಗೆದಷ್ಟೂ ಸಮೃದ್ಧವಾಗಿ
ಹಬ್ಬಿ ನಿಲ್ಲುತ್ತೇನೆ…
ತುಳಿದ ಅಂಗಾಲು ನೋಯದಿರಲಿ
ಕಿತ್ತ ಕೈಗಳೂ ಸೋಲದಿರಲಿ
ಹತ್ತುವ ಏಣಿಗೆ ಅವರೇ ಹಲ್ಲುಗಳಿದ್ದಂತೆ!
Peepal Media Desk
Peepal Media · ಅಂಕಣ ವಿಭಾಗ