ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಭದ್ರಾ ಅರಣ್ಯಕ್ಕೆ 56 ಕಾಡಾನೆಗಳ ಸ್ಥಳಾಂತರಕ್ಕೆ ವಿರೋಧ: ಪ್ರಸ್ತಾವನೆ ಕೈಬಿಡುವಂತೆ ಅರಣ್ಯ ಸಚಿವರಿಗೆ ಶಾಸಕ ರಾಜೇಗೌಡ ಮನವಿಹಾಸನದ ಬೇಲೂರಿನಲ್ಲಿ ಕಾಡಾನೆ ಸೆರೆ – ಸ್ಥಳಾಂತರ ಕಾರ್ಯಾಚರಣೆಗೆ ಚಾಲನೆಅನುದಿನದ ಅಂತರಂಗ: ತುಳಿದಷ್ಟೂ ಬೆಳೆಯುತ್ತೇನೆ ತಿಳಿದಿರಲಿ ನಿಮಗೆಬೊಗಸೆಗೆ ದಕ್ಕಿದ್ದು-101 : ಮೇಲ್ವರ್ಗದ ರಕ್ಷಣೆ, ಕೆಳವರ್ಗದ ಗುಲಾಮಿಯೇ ಸರ್ವಾಧಿಕಾರದ ಗುರಿ!SIR ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ಸುಪ್ರೀಂ ಕೋರ್ಟ್ ಅಂಗಳಕ್ಕೆ!ಹಾಸನದಲ್ಲಿ ಕಾಡಾನೆ ಕಾರ್ಯಾಚರಣೆಗೆ ಸಿದ್ಧತೆ: 300ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಕೇಂದ್ರದ ವಿರುದ್ಧ ಸುಪ್ರೀಂ ದೂರು – ರಾಜ್ಯ ಬರಬೇಕಾದ 2186 ಕೋಟಿ ರೂ. ಬಾಕಿಕೋಲಾರ : ಆಟೋಗೆ ಸ್ಕೊಡಾ ಕಾರಿನ ನಡುವೆ ಬೀಕರ ಅಪಘಾತ – ಇಬ್ಬರು ದುರ್ಮರಣಎಂಎಸ್ ಧೋನಿ ಐಪಿಎಲ್ ನಿವೃತ್ತಿ: 2027ರಿಂದ CSK ಮೆಂಟರ್ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ – ಮಧು ಬಂಗಾರಪ್ಪಸಾತನೂರು: ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ; ಬೋನಿಗೆ.ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಐದನೇ ಸಾಲಿನ ಆಸನ! ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ತಲೆ ಮೇಲೆ ತಾನೇ ಕಲ್ಲು ಎಳೆದುಕೊಂಡಿದೆ ಎಂಬ ಚರ್ಚೆಧರ್ಮಸ್ಥಳದ ಪ್ರತಿಭಟನೆಗೆ ಪ್ರಚಾರ, ಸೌಜನ್ಯಳ ನ್ಯಾಯದ ಪ್ರಶ್ನೆಗಳಿಗೆ ಇಲ್ಲ ಉಪಚಾರ!ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್ನಮ್ಮ ಕುಟುಂಬದ ಬಗ್ಗೆ ಹರಡಿರುವ ಬಹುತೇಕ ಕಥೆಗಳು ಸತ್ಯಕ್ಕೆ ದೂರ: ಆತ್ಮಕಥೆ ಬರೆಯಲು ಕಾರಣ ತಿಳಿಸಿದ ಸೋನಿಯಾ ಗಾಂಧಿಸ್ಥಳೀಯ ಸಂಸ್ಥೆಗಳ ಚುನಾವಣಾ ಮೀಸಲಾತಿ ಹಂಚಿಕೆ ಹಕ್ಕು ಸರ್ಕಾರದ್ದು, ಜನರದ್ದಲ್ಲ: ಸುಪ್ರೀಂಕೋರ್ಟ್ಮತದಾರರ ಪಟ್ಟಿಯಿಂದ ಹೆಸರು ತೆಗೆದರೆ ದೇಶದಿಂದಲೇ ಗಡಿಪಾರು ಭೀತಿ: ಮುಸ್ಲಿಂ ಕುಟುಂಬಗಳಲ್ಲಿ ಹೆಚ್ಚಿದ ಪೌರತ್ವ ಕಳೆದುಕೊಳ್ಳುವ ಆತಂಕಶಿವಮೊಗ್ಗ ವಿಮಾನ ನಿಲ್ದಾಣ: ಮಲೆನಾಡಿಗೆ ಕಿರೀಟವಾಗಬೇಕಿದ್ದದ್ದು, “ಕಪ್ಪುಚುಕ್ಕೆ” ಆದ ಬಗೆತಿಂಗಳಿಗೆ ₹15 ಸಾವಿರ ಸಂಬಳ ಪಡೆಯುವ ಯುವಕನ ಹೆಸರಿನಲ್ಲಿ ₹350 ಕೋಟಿ ಜಿಎಸ್‌ಟಿ ವಹಿವಾಟು!ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಅಮಾನತುಗೊಂಡ ಅಧ್ಯಕ್ಷರಿಂದ ₹4.17 ಕೋಟಿ ಅಕ್ರಮ ಹಣ ವರ್ಗಾವಣೆ ಆರೋಪ

ಬೊಗಸೆಗೆ ದಕ್ಕಿದ್ದು-101 : ಮೇಲ್ವರ್ಗದ ರಕ್ಷಣೆ, ಕೆಳವರ್ಗದ ಗುಲಾಮಿಯೇ ಸರ್ವಾಧಿಕಾರದ ಗುರಿ!

PPeepal Media Desk

Peepal Media Desk ಅಂಕಣ

• 4 ನಿಮಿಷದ ಓದು

ಬೊಗಸೆಗೆ ದಕ್ಕಿದ್ದು-101 : ಮೇಲ್ವರ್ಗದ ರಕ್ಷಣೆ, ಕೆಳವರ್ಗದ ಗುಲಾಮಿಯೇ ಸರ್ವಾಧಿಕಾರದ ಗುರಿ!

“..ಎಲ್ಲಾ ಇತಿಹಾಸಗಳನ್ನು ಆಳುವ ಮೇಲ್ವರ್ಗ ತನಗೆ ಬೇಕಾದಂತೆ ಬರೆದಿದೆ. ಬಡವರ ಸಾವುನೋವುಗಳನ್ನು ಮರೆತಿದೆ. ರಾಜರನ್ನು, ಅವರ ಪರಾಕ್ರಮಗಳನ್ನು ವಿಜ್ರಂಭಿಸಲಾಗಿದೆ..” ಲೇಖಕರಾದ ನಿಖಿಲ್ ಕೋಲ್ಪೆಯವರ ಬರಹದಲ್ಲಿ

​ಹಿಟ್ಲರ್ ಜರ್ಮನಿಯಲ್ಲಿ ಮೊದಲಿಗೆ ಅಷ್ಟೊಂದು ಜನಪ್ರಿಯನಾಗದಿದ್ದರೂ, ತನ್ನ ಪಕ್ಷದೊಳಗೆ ಮಾತ್ರ ಹೇಗೆ ಪ್ರಭಾವಶಾಲಿಯಾಗಿ ಏಕೈಕ ನಾಯಕನಾಗಿ ಬೆಳೆದ ಎಂಬುದನ್ನು ಸಂಕ್ಷಿಪ್ತವಾಗಿ ನೋಡಿದ್ದೆವು. ಆ ಹೊತ್ತಿಗೆ ಅಂದರೆ, 1928ರ ದಯನೀಯ ಚುನಾವಣಾ ಸೋಲಿನ ಬಳಿಕ ಆತನ ನ್ಯಾಷನಲ್‌ ಸೋಶಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ (NSDAP) ತನ್ನ ಕಾರ್ಯತಂತ್ರವನ್ನು ಬದಲಿಸಿತು. ಅದು ಹೆಚ್ಚು ಹೆಚ್ಚು ತೀವ್ರಗಾಮಿಯಾಗಿ, ಕಾರ್ಮಿಕ ಸಂಘಟನೆಗಳನ್ನು ಹತ್ತಿಕ್ಕುತ್ತಾ, ಹಿಂಸಾತ್ಮಕ ಮಾರ್ಗವನ್ನು ತುಳಿಯಿತು. ಹಿಟ್ಲರ್ ಮತ್ತು ಆತನ ಸಹಚರರು ಉಗ್ರ, ಪ್ರಚೋದಕ ಭಾಷಣಗಳಿಂದ ಜನಾಂಗೀಯ ದ್ವೇಷ ಹರಡಲು, ಅಗಲೇ ಜನರಲ್ಲಿ ಆಡಳಿತ ವ್ಯವಸ್ಥೆಯ ಕುರಿತು ಇದ್ದ ಆರ್ಥಿಕ ಮುಗ್ಗಟ್ಟು ಮತ್ತು ಅಸಮಾಧಾನಕ್ಕೆ ಕೋಮುವಾದಿ ಹಾಗೂ ಜನಾಂಗೀಯ ಭಾವನೆಯ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಆರಂಭಿಸಿದರು. ಅದಕ್ಕಾಗಿ ಅವರು ತಿರುಚಿದ ಇತಿಹಾಸವನ್ನು, ಗತಕಾಲದ ಜರ್ಮನ್ ‘ಆರ್ಯನ್’ ವೈಭವವನ್ನು ಚಾಣಾಕ್ಷತನದಿಂದ ಬಳಸಿಕೊಂಡರು.

​ಜಗತ್ತಿನಾದ್ಯಂತ ಬಲಪಂಥೀಯ ಸರ್ವಾಧಿಕಾರಿಗಳ ಮೊದಲ ಕಾರ್ಯತಂತ್ರ ಇದೇ ಆಗಿರುತ್ತದೆ. ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟಿ ಅವರು ಬಡಿದಾಡುವಂತೆ ಮಾಡಿ, ಎಲ್ಲರಿಗೂ ಕಾಲ್ಪನಿಕ ಶತ್ರುವನ್ನು (ಜರ್ಮನಿಯಲ್ಲಿ ಯೆಹೂದಿಗಳು ಮತ್ತು ಕಮ್ಯುನಿಸ್ಟರು) ತೋರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು! ಜರ್ಮನ್ ಬಂಡವಾಳಿಗರು, ಕೈಗಾರಿಕೋದ್ಯಮಿಗಳು ಮತ್ತು ಪಾಳೆಯಗಾರರು ಹಿಟ್ಲರನ ಪಕ್ಷವನ್ನು ಬೆಳೆಸುವಲ್ಲಿ ಮತ್ತು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾರ್ಮಿಕರ ಮತ್ತು ಕಮ್ಯುನಿಸ್ಟರ ದಮನಿಸುವುದು ಅವರ ಮೂಲ ಉದ್ದೇಶವಾಗಿತ್ತು.

​ಜಾಗತಿಕ ಬಲಪಂಥೀಯ ರಾಜಕೀಯದ ಅದೇ ಮಾದರಿಯನ್ನು ಭಾರತದಲ್ಲೂ ಕಾಣಬಹುದು. ಸ್ವಾತಂತ್ರ್ಯಾನಂತರ ರೂಪುಗೊಂಡ ಭಾರತೀಯ ಜನಸಂಘ ಮತ್ತು ನಂತರದ ದಿನಗಳಲ್ಲಿ (1980ರಲ್ಲಿ) ಅದರಿಂದಲೇ ಹುಟ್ಟಿದ ಭಾರತೀಯ ಜನತಾ ಪಕ್ಷವು (BJP) ದೀರ್ಘಕಾಲದವರೆಗೆ ಭಾರತೀಯ ರಾಜಕಾರಣದಲ್ಲಿ ಅಂಚಿನಲ್ಲಿದ್ದವು (ಚುನಾವಣೆಗಳಲ್ಲಿ ಅತ್ಯಂತ ದಯನೀಯ ಪ್ರದರ್ಶನ ನೀಡಿದ್ದವು). ಯಾವುದೇ ಸ್ಪಷ್ಟವಾದ ಆರ್ಥಿಕ ನೀತಿ ಇಲ್ಲದ ಬಿಜೆಪಿ ​1980ರ ದಶಕದ ಉತ್ತರಾರ್ಧದಲ್ಲಿ ಮತ್ತು 1990ರ ದಶಕದ ಆರಂಭದಲ್ಲಿ ನಡೆದ ‘ರಾಮಮಂದಿರ ಚಳವಳಿ’ ಮತ್ತು ಎಲ್.ಕೆ. ಅಡ್ವಾಣಿ ಅವರ ‘ರಥಯಾತ್ರೆ’ ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ತಿರುವನ್ನುಂಟುಮಾಡಿತು. ಈ ಯಾತ್ರೆಗಳು ಕೇವಲ ಪ್ರಚಾರದ ಕಾರಣಕ್ಕಲ್ಲದೆ, ದೇಶಾದ್ಯಂತ ವ್ಯವಸ್ಥಿತವಾದ ಕೋಮುಗಲಭೆಗಳನ್ನು, ದ್ವೇಷವನ್ನು ಸೃಷ್ಟಿಸುವ ಮೂಲಕ ಬಹುಸಂಖ್ಯಾತ ಮೇಲ್ಜಾತಿ-ಮೇಲ್ವರ್ಗದ ಪ್ರಾಬಲ್ಯವನ್ನು ಗಟ್ಟಿಗೊಳಿಸಲು ಮತ್ತು ಕೆಳವರ್ಗ ಹಾಗೂ ಶೂದ್ರರನ್ನು ಜಾತಿ ಮೀರಿದ ‘ಹಿಂದೂ’ ಎಂಬ ಭಾವನಾತ್ಮಕ ಚೌಕಟ್ಟಿನಲ್ಲಿ ಧ್ರುವೀಕರಿಸಲು ಬಳಸಲಾದ ರಾಜಕೀಯ ಅಸ್ತ್ರಗಳಾಗಿದ್ದವು.

​ಇದರ ಪರಿಣಾಮವಾಗಿ ದೇಶದಲ್ಲಿ ಹುಸಿ ಧರ್ಮ ಅಥವಾ ರಾಜಕೀಯ ಧರ್ಮ (pseudo-religion) ಮುನ್ನೆಲೆಗೆ ಬಂತು. ನಿಜವಾದ ಆಧ್ಯಾತ್ಮಿಕತೆ ಅಥವಾ ಮಾನವೀಯ ಮೌಲ್ಯಗಳ ಧರ್ಮ ಮರೆಯಾಗಿ, ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸುವ ಉಗ್ರವಾದಿ ಸ್ವರೂಪ ಗಟ್ಟಿಯಾಯಿತು. ಜರ್ಮನಿಯಲ್ಲಿ ಜರ್ಮನ್ ವೈಭವದ ಹೆಸರಿನಲ್ಲಿ ಜನರನ್ನು ಭಾವನಾತ್ಮಕವಾಗಿ ಮರುಳುಗೊಳಿಸಿದಂತೆ, ಭಾರತದಲ್ಲೂ ಗತಕಾಲದ ಮಿಥ್ಯೆಗಳನ್ನು ಮತ್ತು ಧಾರ್ಮಿಕ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಬಲಪಂಥೀಯ ರಾಜಕೀಯವು ಇಂದು ದೇಶದ ಸರ್ವಾಧಿಕಾರಿ ಧೋರಣೆಗಳಿಗೆ ಬುನಾದಿ ಹಾಕಿದೆ.

​ಭಾರತದಲ್ಲಿಯೂ ನಾವು ಜರ್ಮನ್ ವಿದ್ಯಮಾನವನ್ನು ಇತಿಹಾಸದಿಂದಲೂ ಗುರುತಿಸಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಮೊದಲಿಗೆ ಮೊಗಲರೂ ಸೇರಿದಂತೆ ರಾಜರ ಮತ್ತು ನಂತರ ಬ್ರಿಟಿಷರ ಪರವಾಗಿದ್ದು, ತಮ್ಮ ಮಠ, ಗುರುಕುಲ ಪದ್ಧತಿಯ ಶಿಕ್ಷಣ ಮರೆತು, ಬ್ರಿಟಿಷ್ ಮಾದರಿಯ ಇಂಗ್ಲಿಷ್ ಶಿಕ್ಷಣ ಪಡೆದು, ಅವರ ಆಡಳಿತ ಯಂತ್ರದಲ್ಲಿ ಮೊದಲಿಗೆ ಸೇರಿಕೊಂಡು ಭಾರತೀಯರಿಗೆ ಲಭ್ಯವಿದ್ದ ಉನ್ನತ ಹುದ್ದೆಗಳನ್ನು ಕಬಳಿಸಿದ ವರ್ಗಗಳಿದ್ದವು; ಈಗಲೂ ನಮ್ಮ ಆಡಳಿತಶಾಹಿಯಲ್ಲಿ, ಉನ್ನತ ಅಧಿಕಾರಗಳಲ್ಲಿ ಅವುಗಳದ್ದೇ ಪ್ರಭಾವ! ಅದೇರೀತಿ, ತಮ್ಮ ಜಮೀನ್ದಾರಿಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಬ್ರಿಟಿಷರ ಗುಲಾಮರಾಗಿ, ಅವರಿಗೆ ಕಂದಾಯ ಸಲ್ಲಿಸುತ್ತಾ, ಹೆಸರಿಗೆ ಮಾತ್ರ ಅವರ ಕಾನೂನನ್ನು ಮೇಲುಮೇಲಿಗೆ ಪಾಲಿಸುತ್ತಾ ತಮ್ಮ ಸಾಮಾನ್ಯ ಪ್ರಜೆಗಳ ಮೇಲೆ ಮಾತ್ರ ಹಿಂದಿನ ಕಾಲದ ದಬ್ಬಾಳಿಕೆಯನ್ನು ಎಗ್ಗಿಲ್ಲದೆ ಮುಂದುವರಿಸಿದ್ದ ಪಾಳೆಯಗಾರಿ ವರ್ಗಗಳು ಮುಂದೆ ತಮ್ಮ ಹಿತಾಸಕ್ತಿಗೆ ಭಾರೀ ಧಕ್ಕೆಯಾದಾಗ ಮಾತ್ರವೇ ಬ್ರಿಟಿಷರಿಗೆ ಎದುರುಬಿದ್ದರು ಎಂಬುದನ್ನು ನಾವು ಗಮನಿಸಬೇಕು! ಆಗ ಮೇಲೆ ಹೇಳಿದ ಕುಟಿಲ ಪುರೋಹಿತ ವರ್ಗವೂ ಅವರಿಗೆ ಒಳಗೊಳಗೇ ಬೆಂಬಲ ನೀಡಿತು. ಆದರೆ, ಬ್ರಿಟಿಷರನ್ನೂ ಎದುರುಹಾಕಿಕೊಳ್ಳದೆ ಎರಡೂ ಕಡೆಯಿಂದಲೂ ಉಣ್ಣುತ್ತಿತ್ತು!

​ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆ ಎಂದು ಕರೆಯಲ್ಪಡುವ 1857ರ ಬಂಡಾಯದ ನಾಯಕತ್ವ ವಹಿಸಿದ್ದು ಬಹುತೇಕ ಈ ಮೇಲ್ವರ್ಗದ ಜಮೀನ್ದಾರರು ಮತ್ತು ರಾಜರಾಗಿದ್ದರು. ಆದರೆ, ಸಾಮಾನ್ಯ ಜನರು “ನಮಗೆ ಇವರಾದರೇನು, ಅವರಾದರೇನು ನಮ್ಮ ಪಾಡು ಅದೇ” ಎಂಬ ಉದಾಸೀನ ಮನೋಭಾವದಿಂದ ಈ ಬಂಡಾಯದಲ್ಲಿ ಸಕ್ರಿಯವಾಗಿ ಭಾಗವಹಿಸಿರಲಿಲ್ಲ ಎಂಬುದನ್ನು ಇತಿಹಾಸ ದಾಖಲಿಸಿದೆ. ಇದನ್ನು ಸ್ಪಷ್ಟಪಡಿಸಿಕೊಳ್ಳುವ ಸಲುವಾಗಿ ನಾವು ನಮ್ಮದೇ ಸ್ವಾತಂತ್ರ್ಯಪೂರ್ವ ಇತಿಹಾಸದ ಇತರ ಆಯಾಮಗಳನ್ನು ನೋಡಬೇಕು.

​1857ರಲ್ಲಿ ನಡೆದ ದಂಗೆಯನ್ನು ಹೆಚ್ಚಿನವರು ಕೊಂಡಾಡುತ್ತಾರೆ. ತಪ್ಪಲ್ಲ! ಆದರೆ, ಅದಕ್ಕಿಂತ ಮೊದಲು ನಡೆದ ವೆಲ್ಲೂರು ದಂಗೆ (1806), ಹಲವು ವರ್ಷ ನಡೆದ ಸಾಧು ಫಕೀರ ದಂಗೆ, ಸಂತಾಲ್ ದಂಗೆ (1855), ಮುಂಡಾ ದಂಗೆ, ಭಿಲ್ ದಂಗೆ, ಅಷ್ಟೇ ಯಾಕೆ- ನಮ್ಮಲ್ಲೇ ಕಲ್ಯಾಣಪ್ಪ ಮತ್ತು ಪುಟ್ಟಬಸಪ್ಪನವರ (ಅಮರ ಸುಳ್ಯ ಬಂಡಾಯ) ನೇತೃತ್ವದಲ್ಲಿ ನಡೆದ ಅಮರ ಸುಳ್ಯ ದಂಗೆ (1837) ಇವೆಲ್ಲವೂ ಯಾರಿಗೂ- ಅದರಲ್ಲೂ ಮುಖ್ಯವಾಗಿ ಈಗ ದೇಶಪ್ರೇಮದ ಗುತ್ತಿಗೆ ಪಡೆದಂತೆ ವರ್ತಿಸುವವರಿಗೆ ಕಾಣುವುದಿಲ್ಲ. ಅವೆಲ್ಲವೂ ಬದುಕುವ ಹಕ್ಕಿಗಾಗಿ ದುಡಿಯುವ ಜಾತಿ ವರ್ಗಗಳು ನಡೆಸಿದ ಬಂಡಾಯಗಳಾಗಿದ್ದವು. ಇವೆಲ್ಲಾ ವ್ಯವಸ್ಥಿತವಾಗಿ ನಗಣ್ಯವಾದದ್ದು ಯಾಕೆ!?

​ಈ ಹಿನ್ನೆಲೆಯಲ್ಲಿ ನಮ್ಮಲ್ಲೇ ನಡೆದ ವಿದ್ಯಮಾನವನ್ನು ಚುಟುಕಾಗಿ ನೋಡಬಹುದು. ಕರಾವಳಿಯಲ್ಲಿ ನಡೆದ ಅಮರಸುಳ್ಯ ದಂಗೆಯನ್ನು ಮೇಲ್ಜಾತಿ ಮೇಲ್ವರ್ಗದವರು ‘ಕಲ್ಯಾಣಪ್ಪನ ಕಾಟುಕಾಯಿ’ ಅಂದರೆ ಲೂಟಿ ಎಂದು ಅಪಹಾಸ್ಯ ಮಾಡಿದ್ದುಂಟು. ಇತ್ತೀಚಿನ ವರೆಗೂ ಲೇವಡಿ ಮಾಡುತ್ತಿದ್ದ ಇದನ್ನು ಈಗ ಎಲ್ಲರೂ ಮರೆಯುವಂತೆ ಮಾಡಲಾಗಿದೆ. ​ದಕ್ಷಿಣ ಕನ್ನಡದ ನೆಲದಲ್ಲಿ ನಡೆದರೂ ಈ ದಂಗೆಯ ಮೂಲ ಇರುವುದು ಕೊಡಗಿನಲ್ಲಿ. ಬ್ರಿಟಿಷರು ಕೊಡಗಿನ ಅರಸ ಚಿಕ್ಕವೀರರಾಜೇಂದ್ರನನ್ನು 1834ರಲ್ಲಿ ಪದಚ್ಯುತಗೊಳಿಸಿ ಗಡೀಪಾರು ಮಾಡಿದರು. ಇದರ ಬೆನ್ನಲ್ಲೇ ಬ್ರಿಟಿಷರು ರೈತರ ತೆರಿಗೆಯನ್ನು ನಗದು ರೂಪದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದರು. ಹಿಂದೆ ಧಾನ್ಯದ ರೂಪದಲ್ಲಿದ್ದ ಕಂದಾಯ ಪದ್ಧತಿಯನ್ನು ಬದಲಿಸಿ, ಬೆಳೆ ಏನೇ ಆಗಿದ್ದರೂ ನಿರ್ದಿಷ್ಟ ನಗದು ಮೊತ್ತವನ್ನು ಕಡ್ಡಾಯವಾಗಿ ಕಟ್ಟಬೇಕೆಂದು ತಾಕೀತು ಮಾಡಿದರು. ಇದರಿಂದ ತತ್ತರಿಸಿದ ರೈತರು, ಜಮೀನ್ದಾರರು ಬ್ರಿಟಿಷರ ವಿರುದ್ಧ ಸಿಡಿದೆದ್ದರು. ಈ ಅಸಮಾಧಾನವನ್ನು ಬಳಸಿಕೊಂಡ ಚಿಕ್ಕವೀರರಾಜೇಂದ್ರನ ಭಾವನೆಗಳೊಂದಿಗೆ ಗುರುತಿಸಿಕೊಂಡು ಅಥವಾ ಆ ವಂಶದ ಹೆಸರನ್ನು ಬಳಸಿ ಕಲ್ಯಾಣಸ್ವಾಮಿ (ಜಂಗಮ ಕಲ್ಯಾಣಪ್ಪ) ಹಾಗೂ ಪುಟ್ಟಬಸಪ್ಪ ಬ್ರಿಟಿಷರ ವಿರುದ್ಧ ದಂಗೆಯೆದ್ದರು.

​ಈ ದಂಗೆಗೆ ಬಲನೀಡಿದವರು ತುಳುನಾಡಿನ ರೈತರು ಮತ್ತು ಕೊಡಗಿನ ಪ್ರಜೆಗಳು. ಪರವಾಗಿ ಹೋರಾಡಿದವರು ಹೆಚ್ಚಾಗಿ ಶೂದ್ರರು, ಬಲಿಜರು ಮತ್ತು ಮಲೆಕುಡಿಯ ಮುಂತಾದ ಬುಡಕಟ್ಟು ಜನರು. ಈ ದಂಗೆ ಸಿಪಾಯಿ ದಂಗೆಗಿಂತ ಇಪ್ಪತ್ತು ವರ್ಷ ಮೊದಲೇ ಅಂದರೆ, 1837ರಲ್ಲಿ ನಡೆದಿತ್ತು ಎಂಬುದು ಗಮನಾರ್ಹ. ಬ್ರಿಟಿಷರು ಮಂಗಳೂರಿನಿಂದ ಓಟ ಕಿತ್ತ ಪರಿಣಾಮವಾಗಿ ಹದಿಮೂರು ದಿನ ಮಂಗಳೂರು ಬಂಡುಕೋರರ ವಶದಲ್ಲಿತ್ತು. ಆದರೆ, ಬ್ರಿಟಿಷರು ಹೆಚ್ಚಿನ ಸೈನ್ಯದೊಂದಿಗೆ ಬಂದು ಬಂಡುಕೋರರನ್ನು ಕ್ರೂರವಾಗಿ ಸದೆಬಡಿದರು. ಕಲ್ಯಾಣಸ್ವಾಮಿ, ಪುಟ್ಟಬಸಪ್ಪ ಮುಂತಾದ ನಾಯಕರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಆದರೆ ಇಂದಿಗೂ ಕೋಮುವಾದಿ ರಾಜಕಾರಣದ ಕೇಂದ್ರವಾಗಿಬಿಟ್ಟಿರುವ ಕರಾವಳಿಯಲ್ಲಿ ಈ ಜನಪರ ಹೋರಾಟವನ್ನು ಯಾಕೆ ಕಡೆಗಣಿಸಲಾಗುತ್ತಿದೆ? ಇಂತಹ ಮನೋಭಾವನೆಯೇ ಭಾರತೀಯ ಬಲಪಂಥದ ಮೂಲ ಪ್ರೇರಣೆಯಾಗಿದೆ.

​ಇದಕ್ಕೆ ವ್ಯತಿರಿಕ್ತವಾಗಿ, 1857ರ ದಂಗೆಯ ಕಿಡಿಹಚ್ಚಿ ಗಲ್ಲಿಗೇರಿದ ಮಂಗಲ್ ಪಾಂಡೆ ಒಬ್ಬ ಬ್ರಾಹ್ಮಣನಾಗಿದ್ದುದು, ನಾಯಕತ್ವ ವಹಿಸಿದ ಉಳಿದವರು ರಾಜರು ಮತ್ತು ಜಮೀನ್ದಾರಿ ಮೇಲ್ವರ್ಗದವರಾಗಿದ್ದದ್ದು ಅದನ್ನು “ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಎಂದು ಬಿಂಬಿಸಲು ಪ್ರಮುಖ ಕಾರಣವಾಯಿತು. ಇದು 1857ರ ಬಂಡಾಯದ ಮಹತ್ವವನ್ನು ಕಡಿಮೆ ಮಾಡುವುದಕ್ಕಾಗಿ ಅಲ್ಲ; ಬದಲಿಗೆ, ಅದಕ್ಕಿಂತ ಮೊದಲು ನಡೆದ ಕೆಳವರ್ಗಗಳ ನಾಯಕತ್ವದ ವ್ಯಾಪಕ, ದೀರ್ಘವಾದ ಬಂಡಾಯಗಳನ್ನು ಬಲಪಂಥೀಯ ಇತಿಹಾಸಕಾರರು ಕಡೆಗಣಿಸಿದ ಮನಸ್ಥಿತಿಯನ್ನು ತಿಳಿಸುವ ಸಲುವಾಗಿ.

​ಇದರಲ್ಲಿ ಆಶ್ಚರ್ಯ ಏನಿಲ್ಲ. ಎಲ್ಲಾ ಇತಿಹಾಸಗಳನ್ನು ಆಳುವ ಮೇಲ್ವರ್ಗ ತನಗೆ ಬೇಕಾದಂತೆ ಬರೆದಿದೆ. ಬಡವರ ಸಾವುನೋವುಗಳನ್ನು ಮರೆತಿದೆ. ರಾಜರನ್ನು, ಅವರ ಪರಾಕ್ರಮಗಳನ್ನು ವಿಜ್ರಂಭಿಸಲಾಗಿದೆ. ನಮ್ಮ ಮಕ್ಕಳು ಮರೆಮಾಚಿದ, ತಿರುಚಿದ- ಆಳುವ ವರ್ಗಗಳ ವಿಜ್ರಂಭಿತ ಇತಿಹಾಸ ಓದಿ ಗುಲಾಮರಾಗುತ್ತಿದ್ದಾರೆ. ಜರ್ಮನಿಯಲ್ಲಿಯೂ ಇಂತದ್ದೇ ನಡೆದಿತ್ತು. ಅದುವೇ ಹಿಟ್ಲರನ ಬೆಳವಣಿಗೆಗೆ ಪೂರಕವಾಯ್ತು. ನಾಜಿಗಳು ತಮಗೆ ಬೇಕಾದಂತೆ ಇತಿಹಾಸವನ್ನು ತಿರುಚಿದರು. ಫ್ರೆಂಚ್ ಕ್ರಾಂತಿಯ ಬಳಿಕ ಪ್ರಜಾಪ್ರಭುತ್ವದ ಕಲ್ಪನೆಗೆ ಬಲಬಂದಿತ್ತು. ರಾಜಪ್ರಭುತ್ವ, ಪಾಳೆಯಗಾರಿ ವ್ಯವಸ್ಥೆ ದುರ್ಬಲಗೊಳ್ಳುತ್ತಿತ್ತು. ಜೊತೆಗೆ ಸೋವಿಯತ್ ಕ್ರಾಂತಿಯ ಪ್ರಭಾವವೂ ಜನರ ಮೇಲಾಗಿತ್ತು. ಪರಿಣಾಮವಾಗಿ ಕಮ್ಯುನಿಸ್ಟರು ಪ್ರಬಲವಾಗಿ ಬೆಳೆಯುತ್ತಿದ್ದರು. ಕಾರ್ಮಿಕ ವರ್ಗ ಹುಟ್ಟಿಕೊಂಡಿತ್ತು. ಮೊದಲ ಮಹಾಯುದ್ಧದ ಭಾರೀ ಸೋಲಿನ ಬಳಿಕ ಜರ್ಮನಿಯು ಸ್ವಾತಂತ್ರ್ಯದ ಹೊತ್ತಿನ ಭಾರತದಂತೆ ಎಷ್ಟು ದುರ್ಬಲವಾಗಿತ್ತೆಂದರೆ, ರಾಜಪ್ರಭುತ್ವವೇ ಕೊನೆಗೊಂಡಿತು. ಹೊಸ ವ್ಯವಸ್ಥೆ ಸ್ಥಾಪನೆಯಾಗಿ ಇನ್ನೂ ಬೇರೂರಬೇಕಿತ್ತು. ಆದರೆ ಮೇಲ್ವರ್ಗಕ್ಕೆ ತನ್ನ ಆರ್ಥಿಕ ಮತ್ತು ಸಾಮಾಜಿಕ ಅಸ್ತಿತ್ವ, ಪ್ರಾಬಲ್ಯ ಉಳಿಸಿಕೊಳ್ಳಬೇಕಾಗಿತ್ತು.

​ಭಾರತವು ಬ್ರಿಟಿಷರಿಂದ ಸ್ವತಂತ್ರವಾದ ಬಳಿಕ ಉಂಟಾಗಿದ್ದ ಪರಿಸ್ಥಿತಿಗೂ ಜರ್ಮನಿಯಲ್ಲಿದ್ದ ಪರಿಸ್ಥಿತಿಗೂ ವ್ಯತ್ಯಾಸಗಳಿರುವಂತೆ ಗಮನಾರ್ಹ ಸಾಮ್ಯತೆಗಳಿವೆ. ಅಧಿಕಾರವು ಕೆಳವರ್ಗಗಳ ಕೈಗೆ ಸಿಗುವ ಮುನ್ನವೇ, ಮೇಲ್ವರ್ಗ ಹಾಗೂ ಬಂಡವಾಳಶಾಹಿಗಳು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಧರ್ಮ, ರಾಷ್ಟ್ರೀಯತೆ ಮತ್ತು ಇತಿಹಾಸದ ತಿರುಚುವಿಕೆಯ ಮೊರೆ ಹೋದರು. ಅಂದು ಜರ್ಮನಿಯಲ್ಲಿ ಹಿಟ್ಲರ್ ಮಾಡಿದ್ದನ್ನು, ಇಂದು ಭಾರತದಲ್ಲಿ ಬಲಪಂಥೀಯ ರಾಜಕೀಯ ಶಕ್ತಿಗಳು ತಡವಾಗಿ, ಆದರೆ ವ್ಯವಸ್ಥಿತವಾಗಿ ಮಾಡುತ್ತಿವೆ. ಮೇಲ್ವರ್ಗದ ರಕ್ಷಣೆ ಮತ್ತು ಕೆಳವರ್ಗದ ಗುಲಾಮಗಿರಿಯೇ ಇಂದಿನ ಸರ್ವಾಧಿಕಾರಿ ರಾಜಕಾರಣದ ಗುರಿಯಾಗಿದೆ. ಇದನ್ನು ಗ್ರಹಿಸದೆ ಹೋದರೆ ಪ್ರಜಾಪ್ರಭುತ್ವದ ಉಳಿವಿಗೆ ಕುತ್ತು ತಪ್ಪಿದ್ದಲ್ಲ.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು