ಓದೋಣ ಬಾ ಗುರು – ‘ನಾಗೇಶಿ ದ್ವಿಪದಿಗಳು’ : ಸಮಾಜದ ಓರೆಕೋರೆಗೆ ಹಿಡಿದ ಕನ್ನಡಿ
ಲಿಂಕ್ ನಕಲಿಸಲಾಗಿದೆ ✓
“..ಸಮಾಜದ ಓರೆಕೋರೆಗಳಿಗೆ ಎದುರಾಗುವ ಧೈರ್ಯ ಕವಿಯಾದವನಿಗೆ ಇರಲೇ ಬೇಕು. ನಾಗೇಶ್ ನಾಯಕ್ ಅವರು ಇಲ್ಲಿ ತಮ್ಮ ಭಾವ ಕೋಶವದ ಸೂಕ್ಷ್ಮ ಸಂಗತಿಗಳನ್ನು ಸಮರ್ಥವಾಗಿ ಪ್ರಶ್ನಿಸುತ್ತಾರೆ..” ಲೇಖಕಿ ಶಿಲ್ಪಾ ಮ್ಯಾಗೇರಿಯವರ ಪುಸ್ತಕ ವಿಮರ್ಶೆ
ಮಾತಿನಿಂ ನಗೆ-ನುಡಿಯು,
ಮಾತಿನಿಂ ಹಗೆ ಕೊಲೆಯು,
ಮಾತಿನಿಂ ಸರ್ವ ಸಂಪದವು ಲೋಕಕ್ಕೆ,
ಮಾತೆ ಮಾಣಿಕವು ಸರ್ವಜ್ಞ.
ಎಂಬ ಸರ್ವಜ್ಞನ ವಚನ ನೆನಪಿಸುವ ‘ಅರಿಯದೆ ಆಡಿದ ಒಂದು ಮಾತು ಮನಸುಗಳ ಮಧ್ಯೆ ಬಿರುಕು ಮೂಡಿಸಬಹುದು.
ನಾಲಿಗೆಗೆ ನಯವಂತಿಕೆ ಕಲಿಸುವುದೇ ಇಂದಿನ ತುರ್ತು’
ಪ್ರಸ್ತುತ ಸಾಲುಗಳು ನಾಗೇಶ್ ನಾಯಕ್ ಅವರ ‘ನಾಗೇಶಿ ದ್ವಿಪದಿಗಳು’ ಎಂಬ ದ್ವಿಪದಿಗಳ ಸಂಕಲನದ ಸಾಲುಗಳು.
ಗಜಲ್ ಮತ್ತು ಕವಿತೆಗಳ ಮೂಲಕ ನಾಡಿನ ಉದ್ದಗಲಕ್ಕೂ ಪರಿಚಿತರಾಗಿರುವ ಕವಿ ನಾಗೇಶ್ ನಾಯಕ್ ಅವರ ಎರಡೇ ಪಾದದ ಅಪಾರ ಅರ್ಥದ ದ್ವಿಪದಿಗಳನ್ನು ಇಲ್ಲಿ ನೋಡಬಹುದು.
ಕಟ್ಟುವ ಮತ್ತು ಕೆಡವುವ ಎರಡು ಭಿನ್ನ ಕಾಯಕವಿದೆ ಜಗದಲ್ಲಿ
ಒಂದು ರುಚಿಸಿದವರಿಗೆ ಇನ್ನೊಂದು ರುಚಿಸದು
‘ಜೋಡಿಸುವುದರಲ್ಲಿ ಇರುವ ಖುಷಿ ಅವನಿಗೆ ಹೇಗೆ ಗೊತ್ತಾಗಬೇಕು’ ಹೀಗೆ ಹೇಳುವಲ್ಲಿ ಕಟ್ಟುಗಾರಿಕೆಯ ಕಸರತ್ತು ಎಂತಹುದು ಎಂದು ಗಮನಿಸಬಹುದು.
‘ಅವಳಷ್ಟು ನಗುತ್ತಿದ್ದಾಳೆಂದರೆ ಯಾವುದೋ ನೋವು ಮುಚ್ಚಿಡುತ್ತಿದ್ದಾಳೆಂದೇ ಅರ್ಥ ನಾಗೇಶಿ ನಿವಾರಿಸಲಾಗದಿದ್ದರೂ ನೋವು ನೇವರಿಸಿ ಸಂತೈಸು ಒಮ್ಮೆ ದುಃಖ ಕೆನ್ನೆಗಿಳಿದೀತು’ ಹರಳುಗಟ್ಟಿದ ನೋವುಗಳಿಗೆ ಮಾತಿನ ಮದ್ದು ಬೇಕಿಲ್ಲ ಬೆಚ್ಚನೆಯ ಭಾವದ ಸಾಂಗತ್ಯ ಸಾಕು ನನ್ನದೆನ್ನುವ ಹೆಗಲು ಸಾಕು ನೂರು ಮಾತನಾಡದೆ ಸುಮ್ಮನೆ ಜೊತೆನಿಲ್ಲುವುದು ಮಹತ್ವದ ಸಂಗತಿ.
‘ಜೀವಗಳ ಬೇರೆಯಾಗಿಸುವ ಧರ್ಮಗಳ ಗೊಡವೆ ನಮಗೆ ಬೇಡ ನಾಗೇಶಿ’ ಮನುಷ್ಯತ್ವ ಶ್ರೇಷ್ಠವೆಂಬ ಸತ್ಯದ ಜೊತೆಗೆ ಕವಿಯ ಪ್ರಜ್ಞಾಪೂರ್ವಕ ನಿಲುವು ಇಲ್ಲಿದೆ.
ಅಯೋಗ್ಯರ ಮಾತಿಗಿಂತ ಯೋಗ್ಯರ ಮೌನ ಹೆಚ್ಚು ಹಾಳು ಮಾಡುತ್ತದೆ ಎಂಬಂತೆ ‘ಪ್ರೀತಿಸುವುದಕ್ಕಷ್ಟೇ ಅಲ್ಲ, ದ್ವೇಷಿಸುವುದಕ್ಕೂ ಅರ್ಹತೆಗಳಿರಬೇಕು ನಾಗೇಶಿ
‘ಯಾವುದಕ್ಕೂ ಸಲ್ಲದವರಿಗೆ ದಿವ್ಯ ನಿರ್ಲಕ್ಷ್ಯವೇ ಮದ್ದು’
ವರ್ತಮಾನಕ್ಕೆ ಮುಖಾಮುಖಿಯಾಗುವ ಅದೆಷ್ಟೊ ಸಾಲುಗಳಿವೆ ಸಂಕಲನದುದ್ದಕ್ಕೂ ಬದುಕಿನ ತಲ್ಲಣಗಳಿಗೆ ಎದೆಯೊಡ್ಡಿದ ಹಲವು ಸಂಕಟಗಳನ್ನು ಇಲ್ಲಿ ಕಾಣಬಹುದು. ‘ಸೀತೆಗೆ ಒಮ್ಮೆ ಅಗ್ನಿಪರೀಕ್ಷೆಯಾದರೆ ಈ ನೆಲದ ಹೆಣ್ಣಿಗೋ ನಿತ್ಯ ಅಗ್ನಿ ಕುಂಡ’
‘ಜಗದಲಿ ಯಾವ ನೆಮ್ಮದಿಯ ತಾಣಗಳೂ ಇಲ್ಲ ನಾಗೇಶಿ ಅವ್ವನ ಮಡಿಲ ವಿನಹ’
‘ಬಾಯಾರಿಕೆಯೆಂದು ಬೊಗಸೆಯೊಡ್ಡಿದರೂ ಕುಲ ಜಾತಿ ಕೇಳುತ್ತಿದೆ ಲೋಕ’
ಸಮತೆಯ ಮಂತ್ರ ಪಠಿಸುತ್ತಿರುವವರೇ ಬಾಗಿಲಲ್ಲಿ ಬಾಕು ಹಿಡಿದು ಹಣಿಯಲು ಕೂತಿದ್ದಾರೆ’
‘ಗಾಂಧಿ, ಬುದ್ಧ, ಬಸವನನ್ನೂ ಇಷ್ಟ ಪಡದ ಮನಸುಗಳಿದ್ದವು’
ಸಮಾಜದ ಓರೆಕೋರೆಗಳಿಗೆ ಎದುರಾಗುವ ಧೈರ್ಯ ಕವಿಯಾದವನಿಗೆ ಇರಲೇ ಬೇಕು. ನಾಗೇಶ್ ನಾಯಕ್ ಅವರು ಇಲ್ಲಿ ತಮ್ಮ ಭಾವ ಕೋಶವದ ಸೂಕ್ಷ್ಮ ಸಂಗತಿಗಳನ್ನು ಸಮರ್ಥವಾಗಿ ಪ್ರಶ್ನಿಸುತ್ತಾರೆ.
ಈ ಜಗದ ಎಲ್ಲಕ್ಕಿಂತ ಸುಂದರ ಭಾವವೊಂದಿದ್ದರೆ ಅದು ಕೃತಜ್ಞತೆ ಪ್ರತಿಯೊಬ್ಬದಲ್ಲೂ ಇರಬೇಕಾರ ಮೂಲಭೂತ ಅಂಶವೂ ಇದೇ, ಕವಿ ನಾಗೇಶ್ ನಾಯಕ್ ಅವರು ಒಂದು ದ್ವಿಪದಿಯಲ್ಲಿ ಹೇಳುತ್ತಾರೆ. ‘ಇಂದು ಸಾಧನೆಯ ಕಿರೀಟ ಮುಕುಟವೇರಿದೆ, ಹೋದ ಕಡೆಯಲ್ಲೆಲ್ಲಾ ಚಪ್ಪಾಳೆಗಳ ಸದ್ದು ಇದಕ್ಕೆಲ್ಲ ಕಾರಣವಾದವರಿಗೆ ಹೃದಯ ತುಂಬಿ ಕೃತಜ್ಞತೆ ಸಲ್ಲಿಸಿಬಿಡು ನಾಗೇಶಿ’ ಹೀಗೆ ವಾಸ್ತವರ ಅರಿವು ಧನ್ಯತೆಯ ಭಾವ ಇರುವ ನಾಗೇಶ್ ನಾಯಕ್ ಅವರಿಗೆ ಶುಭಕೋರುತ್ತ ಒಂದು ಒಳ್ಳೆಯ ಸಂಕಲನ ಓದಿನ ಖುಷಿಯಾಗಿ ಒಮ್ಮೆ ನಾಗೇಶಿ ದ್ವಿಪದಿಗಳನ್ನು ಓದಬೇಕು.
Peepal Media Desk
Peepal Media · ಅಂಕಣ ವಿಭಾಗ