ರಾಜಕರಣಿಗಳ ಖರ್ಚುಗಳಿಗೆ ಹಣವಿದೆ, ನಮಗ್ಯಾಕಿಲ್ಲ – ಧರಣಿ ಮುಂದುವರಿಸಿದ ಆಶಾ ಕಾರ್ಯಕರ್ತೆಯರು
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು : ಹಗಲು-ರಾತ್ರಿ ಎನ್ನದೆ, ಬಿಸಿಲು ಹಾಗೂ ಚಳಿಯನ್ನೂ ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು (Asha Workers) ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ತಮ್ಮ (Protest) ಧರಣಿಯನ್ನು ಮುಂದುವರಿಸಿದ್ದಾರೆ. ಪ್ರತಿ ತಿಂಗಳು 15,000 ರೂಪಾಯಿ ಗೌರವಧನ ನಿಗದಿಪಡಿಸಬೇಕು ಮತ್ತು ನಿವೃತ್ತಿ ಸಂದರ್ಭದಲ್ಲಿ 5 ಲಕ್ಷ ರೂಪಾಯಿ ಇಡಿಗಂಟು ನೀಡಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಕಳೆದ ನಾಲ್ಕು ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರ ಮುಂದಿಟ್ಟ ಮನವೊಲಿಕೆ ಮಾತುಗಳಿಗೆ ಒಪ್ಪದ ಪ್ರತಿಭಟನಾಕಾರರು, ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಬೇಡಿಕೆಗಳ ಈಡೇರಿಕೆ ಕುರಿತು ಮುಖ್ಯಮಂತ್ರಿಗಳಿಂದಲೇ ಲಿಖಿತ ಭರವಸೆ ದೊರೆಯಬೇಕು ಎಂದು ಸ್ಪಷ್ಟವಾಗಿ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ವೆಚ್ಚದ ವಿರುದ್ಧ ಆಶಾ ಕಾರ್ಯಕರ್ತೆಯರ ಕಿಡಿ
ಆಶಾ ಕಾರ್ಯಕರ್ತೆಯರ ಬೇಡಿಕೆಗಳ ವಿಚಾರದಲ್ಲಿ ಇದು ಕೇಂದ್ರದ ಯೋಜನೆಯ ವ್ಯಾಪ್ತಿಗೆ ಬರುತ್ತದೆ ಎಂದು ಹೇಳುತ್ತಾ ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ಧರಣಿನಿರತರು ಆರೋಪಿಸಿದ್ದಾರೆ. ರಾಜ್ಯದಲ್ಲಿ ಹಣಕಾಸಿನ ಕೊರತೆ ಹಾಗೂ ಆರ್ಥಿಕ ಬಿಕ್ಕಟ್ಟು ಇದೆ ಎಂಬ ಸರ್ಕಾರದ ಸಮರ್ಥನೆಯನ್ನು ಅವರು ತೀವ್ರವಾಗಿ ತಳ್ಳಿಹಾಕಿದ್ದಾರೆ.
ಜಾಹೀರಾತು ಮತ್ತು ಪ್ರಚಾರಕ್ಕಾಗಿಯೇ 500 ಕೋಟಿ ರೂಪಾಯಿ ಖರ್ಚು ಮಾಡುವ ಸರ್ಕಾರಕ್ಕೆ, ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡಲು ಹಣವಿಲ್ಲವೇ ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಸುರಂಗ ಮಾರ್ಗ ಯೋಜನೆಗಾಗಿ 17,000 ಕೋಟಿಯಿಂದ 20,000 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಸಂಸದರಿಗೆ 30 ಲಕ್ಷ ರೂಪಾಯಿ ಬೆಲೆಯ ವಾಹನಗಳನ್ನು ಖರೀದಿಸಿಕೊಡುವ ಸರ್ಕಾರ, ವಾರಕ್ಕೊಮ್ಮೆ ಸಾವಿರಾರು ಕೋಟಿ ರೂಪಾಯಿಗಳ ಹೊಸ ಯೋಜನೆಗಳನ್ನು ಪ್ರಕಟಿಸುತ್ತಿದೆ. ಆದರೆ, ಆಶಾ ಕಾರ್ಯಕರ್ತೆಯರ ಬೇಡಿಕೆಗಳ ವಿಷಯ ಬಂದಾಗ ಮಾತ್ರ ಬಜೆಟ್ ಕೊರತೆಯ ಸಬೂಬು ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೌಕರರ ಸ್ಥಾನಮಾನಕ್ಕೆ ಒತ್ತಾಯ, ಸರ್ಕಾರದ ತಂತ್ರಕ್ಕೆ ಆಕ್ಷೇಪ
ನಾವು ಸಲ್ಲಿಸುತ್ತಿರುವ ಪರಿಹಾರ ಹಾಗೂ ಗೌರವಧನವು ರಾಜ್ಯದ ತೆರಿಗೆದಾರರ ಹಣವಾಗಿದ್ದು, ಅದನ್ನು ತಾರತಮ್ಯವಿಲ್ಲದೆ ಮತ್ತು ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ದಿನನಿತ್ಯ ಸರ್ಕಾರಿ ನೌಕರರಂತೆಯೇ ಜವಾಬ್ದಾರಿ ನಿಭಾಯಿಸುತ್ತಿದ್ದರೂ, ತಮಗೆ ಇನ್ನೂ ಖಾಯಂ ನೌಕರರ ಸ್ಥಾನಮಾನ ನೀಡಿಲ್ಲ ಎಂಬ ನೋವನ್ನು ಅವರು ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ನೌಕರರು, ಬಿಸಿಯೂಟ ಕಾರ್ಯಕರ್ತರು ಹಾಗೂ ಅತಿಥಿ ಶಿಕ್ಷಕರು ಸೇರಿದಂತೆ ಇತರ ವರ್ಗಗಳ ಹೋರಾಟದ ಉದಾಹರಣೆಗಳನ್ನು ಮುಂದಿಡುವ ಮೂಲಕ, ವಿವಿಧ ನೌಕರರ ಸಂಘಟನೆಗಳ ಒಗ್ಗಟ್ಟನ್ನು ಮುರಿಯುವ ಮತ್ತು ಹೋರಾಟವನ್ನು ದುರ್ಬಲಗೊಳಿಸುವ ತಂತ್ರವನ್ನು ಸರ್ಕಾರ ಹೆಣೆಯುತ್ತಿದೆ ಎಂದು ಆಶಾ ಕಾರ್ಯಕರ್ತರ ಸಂಘಟನೆ ದೂರಿದೆ. ಮುಖ್ಯಮಂತ್ರಿಗಳು ಲಿಖಿತ ರೂಪದಲ್ಲಿ ಭರವಸೆ ನೀಡುವವರೆಗೂ ಫ್ರೀಡಂಪಾರ್ಕ್‌ನಿಂದ ಕದಲುವುದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ