ಬಸವಣ್ಣ ಮತ್ತು ಲಿಂಗಾಯತ ಪರಂಪರೆಯನ್ನು ಅವಹೇಳನ ಮಾಡುವ ಪ್ರಯತ್ನವನ್ನು ಸಹಿಸುವುದಿಲ್ಲ: ಪ್ರಿಯಾಂಕ್ ಖರ್ಗೆ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ಬಸವಣ್ಣನವರ ತತ್ವಗಳು ಮತ್ತು ಲಿಂಗಾಯತ ಪರಂಪರೆಯನ್ನು ಅವಹೇಳನ ಮಾಡುವ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ‘ಬಸವ ಮಂಟಪ’ ಕೃತಿಯಲ್ಲಿ ಜಗಜ್ಯೋತಿ ಬಸವಣ್ಣನವರನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಬಸವಣ್ಣನವರ ಪರಂಪರೆಯನ್ನು ತಿರುಚುವ ಪ್ರಯತ್ನಗಳನ್ನು ಪ್ರಜ್ಞಾವಂತ ಕನ್ನಡಿಗರು ಸಹಿಸುವುದಿಲ್ಲ ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಪ್ರಿಯಾಂಕ್ ಖರ್ಗೆ, 12ನೇ ಶತಮಾನದ ವೈಚಾರಿಕ ಕ್ರಾಂತಿಯ ಮೂಲಕ ಜಗತ್ತಿಗೆ ಬೆಳಕು ತೋರಿದ ಬಸವಣ್ಣನವರನ್ನು ರವಿ ಹಂಜ್ ಎಂಬವರು ‘ಬಸವ ಮಂಟಪ’ ಕೃತಿಯಲ್ಲಿ ಅವಹೇಳನ ಮಾಡಿರುವುದನ್ನು ಕಲ್ಯಾಣ ನಾಡಿನ ಶರಣ ಪರಂಪರೆಯ ಮಣ್ಣಿನ ಮಗನಾಗಿ ತಾನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ತಮ್ಮ ಹೇಳಿಕೆಯ ಆರಂಭದಲ್ಲಿ ಅಕ್ಕಮಹಾದೇವಿಯವರ ವಚನವನ್ನು ಉಲ್ಲೇಖಿಸಿರುವ ಅವರು, ಬಸವಣ್ಣನವರ ಸಾಮಾಜಿಕ ಮತ್ತು ವೈಚಾರಿಕ ಕೊಡುಗೆಯನ್ನು ಸ್ಮರಿಸಿದ್ದಾರೆ.
ಬುದ್ಧನ ನಂತರ ಜಗತ್ತಿಗೆ ಸಮಸಮಾಜದ ಪರಿಕಲ್ಪನೆ ಹಾಗೂ ಪ್ರಜಾಪ್ರಭುತ್ವದ ಮಾದರಿಯನ್ನು ತೋರಿಸಿಕೊಟ್ಟವರು ಬಸವಣ್ಣ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬಸವಣ್ಣನವರು ಕನ್ನಡನಾಡಿನ ಅಸ್ಮಿತೆಯಾಗಿ ಮತ್ತು ಕನ್ನಡಿಗರ ಹೆಮ್ಮೆಯಾಗಿ ಗುರುತಿಸಿಕೊಂಡಿದ್ದಾರೆ. ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರಿಂದ ಗೌರವಿಸಲ್ಪಟ್ಟ ಬಸವಣ್ಣನವರ ಅರಿವು, ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ತಿಳಿಸಿದ್ದಾರೆ. ತಮ್ಮ ಸರ್ಕಾರವೂ ಬಸವಣ್ಣನವರ ತತ್ವಗಳ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದಿದ್ದಾರೆ.
ಏನಿದು ‘ಬಸವ ಮಂಟಪ’ ವಿವಾದ?
ಲೇಖಕ ರವಿ ಹಂಜ್ ಬರೆದಿರುವ ‘ಬಸವ ಮಂಟಪ’ ಕೃತಿಯಲ್ಲಿನ ಕೆಲವು ಅಂಶಗಳು ಬಸವಣ್ಣನವರ ಬೋಧನೆ, ತತ್ವ ಮತ್ತು ಪರಂಪರೆಯನ್ನು ತಪ್ಪಾಗಿ ಚಿತ್ರಿಸುತ್ತವೆ ಹಾಗೂ ಅವಹೇಳನ ಮಾಡುತ್ತವೆ ಎಂಬ ಆಕ್ಷೇಪ ವೀರಶೈವ-ಲಿಂಗಾಯತ ಸಮುದಾಯದ ಮುಖಂಡರಿಂದ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಪುಸ್ತಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅದನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು.
ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವ ಸಮಿತಿಯ ಸದಸ್ಯರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಲೇಖಕ ರವಿ ಹಂಜ್ ವಿರುದ್ಧ ದೂರು ದಾಖಲಿಸಿದ್ದರು. ಪುಸ್ತಕದ ಪ್ರತಿಗಳನ್ನು ಸುಟ್ಟು ಪ್ರತಿಭಟನೆಯನ್ನೂ ನಡೆಸಿದ್ದರು. ಲೇಖಕ ರವಿ ಹಂಜ್ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾಗಿದ್ದು, ಪುಸ್ತಕದ ಪ್ರಕಾಶಕ ಹಾಗೂ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿತ್ತು.
ಈ ವಿವಾದದ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪುಸ್ತಕವನ್ನು ನಿಷೇಧಿಸುವುದು, ಈಗಾಗಲೇ ಪ್ರಸಾರದಲ್ಲಿರುವ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಲೇಖಕ ರವಿ ಹಂಜ್ ಹಾಗೂ ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದ್ದರು.
ವ್ಯವಸ್ಥಿತ ಪ್ರಯತ್ನಗಳಿಗೆ ಯಶಸ್ಸು ಸಿಗುವುದಿಲ್ಲ: ಪ್ರಿಯಾಂಕ್ ಖರ್ಗೆ
ಇತ್ತೀಚಿನ ದಿನಗಳಲ್ಲಿ ಬಸವ ಪರಂಪರೆಯನ್ನು ತಿರುಚುವ, ಅವಹೇಳನ ಮಾಡುವ ಮತ್ತು ಅಪ್ರಸ್ತುತಗೊಳಿಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ‘ಲಿಂಗಾಯತ’ ಎಂಬ ವೈಚಾರಿಕ ಪರಂಪರೆ ಮತ್ತು ಬಸವಣ್ಣನವರನ್ನು ಅಪ್ರಸ್ತುತಗೊಳಿಸುವ ಪ್ರಯತ್ನಗಳಿಗೆ ಯಶಸ್ಸು ದೊರೆಯುವುದಿಲ್ಲ. ಇಂತಹ ಪ್ರಯತ್ನಗಳನ್ನು ಪ್ರಜ್ಞಾವಂತ ಕನ್ನಡಿಗರು ಸಹಿಸುವುದಿಲ್ಲ ಎಂದಿದ್ದಾರೆ.
ಬಸವಣ್ಣನವರು ಮತ್ತು ಲಿಂಗಾಯತ ಪರಂಪರೆಯನ್ನು ಹೀಯಾಳಿಸುವ ಕೃತ್ಯಗಳನ್ನು ತಮ್ಮ ಸರ್ಕಾರ ಸಹಿಸುವುದಿಲ್ಲ. ನಾಡಿನ ಯಾವುದೇ ಮಹನೀಯರನ್ನು ಅವಮಾನಿಸುವ ಪ್ರಯತ್ನಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಗಮನಿಸಿ
Peepal Media
Peepal Media · ರಾಜ್ಯ ವಿಭಾಗ