ಹೊಸಪೇಟೆ ರೈಲು ನಿಲ್ದಾಣದಲ್ಲಿ ಗಾಂಜಾ ಸಾಗಾಟಕ್ಕೆ ಯತ್ನ – 8.25 ಲಕ್ಷ ಮೌಲ್ಯದ 8.5 ಕೆಜಿ ಗಾಂಜಾ ಸೀಜ್
ಲಿಂಕ್ ನಕಲಿಸಲಾಗಿದೆ ✓
ಹೊಸಪೇಟೆ ರೈಲು ನಿಲ್ದಾಣದಲ್ಲಿ ಗಾಂಜಾ ಸಾಗಾಟಕ್ಕೆ ಯತ್ನ – 8.25 ಲಕ್ಷ ಮೌಲ್ಯದ 8.5 ಕೆಜಿ ಗಾಂಜಾ ಸೀಜ್
ಬಳ್ಳಾರಿ: ರೈಲುಗಳ ಮೂಲಕ ಮಾದಕ ವಸ್ತುಗಳನ್ನು (Drugs) ಸಾಗಿಸುವ ದಂಧೆಗೆ ಕಡಿವಾಣ ಹಾಕಲು ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಸುಮಾರು 8.25 ಲಕ್ಷ ರೂಪಾಯಿ ಬೆಲೆಬಾಳುವ 8 ಕೆಜಿ 500 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಅಬಕಾರಿ (Crime) ಸಿಬ್ಬಂದಿ, ಸ್ಥಳೀಯ ಪೊಲೀಸ್ ತಂಡ ಹಾಗೂ ರೈಲ್ವೆ ರಕ್ಷಣಾ ದಳದ (RPF) ಸಿಬ್ಬಂದಿ ಈ ಜಂಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಮೊದಲ ಪ್ಲಾಟ್‌ಫಾರಂನಲ್ಲಿ ಅನುಮಾನಾಸ್ಪದ ಕೆಂಪು ಬ್ಯಾಗ್
ರೈಲು ಮಾರ್ಗದ ಮೂಲಕ ನಡೆಯುವ ಅಕ್ರಮ ಸಾಗಾಟವನ್ನು ಪತ್ತೆಹಚ್ಚುವ ಉದ್ದೇಶದಿಂದ ಅಧಿಕಾರಿಗಳ ತಂಡ ನಿಲ್ದಾಣದ ಆವರಣದಲ್ಲಿ ತಪಾಸಣೆ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಹೊಸಪೇಟೆ ರೈಲ್ವೆ ನಿಲ್ದಾಣದ 1ನೇ ಪ್ಲಾಟ್‌ಫಾರಂನಲ್ಲಿ ಯಾರೂ ಇಲ್ಲದೆ ಕೆಂಪು ಬಣ್ಣದ ಬ್ಯಾಗ್ ಒಂದು ಬಿದ್ದಿರುವುದು ಕಂಡುಬಂದಿದೆ. ಬ್ಯಾಗ್ ಯಾರದ್ದು ಎಂದು ಸುತ್ತಮುತ್ತ ವಿಚಾರಿಸಿದರೂ ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸಂಶಯ ಮೂಡಿದೆ.
ವಾರಸುದಾರರಿಲ್ಲದ ಕೆಂಪು ಬ್ಯಾಗ್ ಕುರಿತು ಅನುಮಾನಗೊಂಡ ಸಿಬ್ಬಂದಿ, ತಕ್ಷಣವೇ ಪೊಲೀಸ್ ಶ್ವಾನದಳವನ್ನು (Dog Squad) ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬ್ಯಾಗ್ ತೆರೆದು ನೋಡಿದಾಗ, ಐದು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ಇರಿಸಲಾಗಿದ್ದ 8 ಕೆಜಿ 500 ಗ್ರಾಂ ಒಣ ಗಾಂಜಾ ಸಿಕ್ಕಿದೆ. ಇದರ ಮೌಲ್ಯ ಸುಮಾರು 8.25 ಲಕ್ಷ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ, ಸಿಸಿಟಿವಿ ಪರಿಶೀಲನೆ
ಪತ್ತೆಯಾದ ಬ್ಯಾಗ್ ಯಾರಿಗೆ ಸೇರಿದ್ದು, ಗಾಂಜಾವನ್ನು ಎಲ್ಲಿಂದ ತರಲಾಗಿತ್ತು ಹಾಗೂ ಎಲ್ಲಿಗೆ ಸಾಗಿಸಲು ಯತ್ನಿಸಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಗಳು ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಲ್ದಾಣದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಆಧರಿಸಿ, ಬ್ಯಾಗ್ ಬಿಟ್ಟು ಹೋದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆಯನ್ನು ಮುಂದುವರಿಸಿದ್ದಾರೆ.
ರಮೇಶ್ ಹಾಸನ್
Peepal Media · ಬ್ರೇಕಿಂಗ್ ಸುದ್ದಿ ವಿಭಾಗ