Friday, May 3, 2024

ಸತ್ಯ | ನ್ಯಾಯ |ಧರ್ಮ

“ಬದುಕೆಂಬ ಸಾಗರದಲ್ಲೊಂದು ಜೇನಹನಿ”

ಮೆಟ್ರೋ ಟೈಮ್ಸ್-‌11

ಎಂದಿನಂತೆ ಅದೂ ಒಂದು ದಿನ.

ನೀವು ಎಲ್ಲಿಗೋ ಡ್ರೈವ್ ಮಾಡುತ್ತಿದ್ದೀರಿ. ಭಯಂಕರ ಟ್ರಾಫಿಕ್ಕು. ಕ್ಲಚ್ ಸತತವಾಗಿ ಒತ್ತಿದ್ದಕ್ಕೆ ಪಾದವೂ, ಕಾಲೂ ನೋಯುತ್ತಿದೆ. ಮನಸ್ಸಿನಲ್ಲೇನೋ ಯೋಚನೆ. ಈ ನಡುವಿಲ್ಲೊಂದು ಫೋನು. ಯಾರೆಂದು ನೋಡಿದರೆ ಅಪರಿಚಿತ ನಂಬರ್. ಏನೋ ತುರ್ತು ಕರೆಯಿರಬಹುದು ಎಂದು ಕಾಲ್ ರಿಸೀವ್ ಮಾಡಿದರೆ, ಮಾತಿಗೆ ಅಸಹಜ ರಾಗವೊಂದನ್ನು ಲೇಪಿಸಿ ಮಾತಾಡುತ್ತಿರುವ ಹುಡುಗಿಯೊಬ್ಬಳು ಕ್ರೆಡಿಟ್ ಕಾರ್ಡ್ ಮಾರುವ ಉತ್ಸಾಹದಲ್ಲಿದ್ದಾಳೆ. ನೀವು ಕೆಟ್ಟದಾಗಿ ಒಳಗೊಳಗೇ ಗೊಣಗಿ ಫೋನ್ ಕುಕ್ಕುತ್ತೀರಿ. ಇನ್ನೇನು ಸಿಗ್ನಲ್ಲಿನ ಕೆಂಪು ದೀಪವು ಹಸಿರಾಗಬೇಕು ಎನ್ನುವಷ್ಟರಲ್ಲಿ ಯಾರೋ ಒಬ್ಬ ಬೈಕಿನವನು ಬಂದು, ಸಿಕ್ಕ ಒಂದು ಸಪೂರ ಮೂಲೆಯಿಂದ ನುಸುಳಿ ನಿಮ್ಮ ಕಾರಿನೆದುರೇ ನಿಂತುಬಿಡುತ್ತಾನೆ. ಅಂತೂ ಹೊರಡಲು ಮತ್ತೊಂದು ನಿಮಿಷ ವಿಳಂಬವಾಗುತ್ತದೆ. ನಿಮಗೆ ಮೈಯೆಲ್ಲಾ ಉರಿದುಹೋಗುತ್ತದೆ.

ಅಲ್ಲಿಯ ರೆಡ್ ಲೈಟ್ ಕಳೆದು ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಮತ್ತೊಂದು ಸಿಗ್ನಲ್ ಬಂತು ಎಂದಿಟ್ಟುಕೊಳ್ಳೋಣ. ನಿಧಾನವಾಗಿ ಚಲಿಸುತ್ತಿದ್ದ ಕಾರು ಈಗ ಮತ್ತೊಮ್ಮೆ ನಿಂತಿದೆ. ಸಿಗ್ನಲ್ ಎಂದರೆ ಬೇರೆಯದ್ದೇ ಜಗತ್ತು. ಕಾರುಗಳು ಸಾಲಾಗಿ ನಿಂತಾಗ ಹಲವರು ಎಲ್ಲಿಂದಲೋ ಥಟ್ಟನೆ ಪ್ರತ್ಯಕ್ಷರಾದಂತೆ ಏಕಾಏಕಿ ಮುಗಿಬೀಳುತ್ತಾರೆ. ಚೆಂಗುಲಾಬಿಯನ್ನು ಮಾರುತ್ತಿರುವ ಬಾಲಕ, ಅಗ್ಗದ ಪೈರೇಟೆಡ್ ಪುಸ್ತಕಗಳನ್ನು ಒಂದರ ಮೇಲೊಂದು ಇಟ್ಟಿಗೆಗಳಂತೆ ಪೇರಿಸಿಟ್ಟು ಮಾರುತ್ತಿರುವ ಯುವಕ, ಚಪ್ಪಾಳೆ ತಟ್ಟುತ್ತಾ ಕಾಸು ಕೇಳುತ್ತಿರುವ ತೃತೀಯಲಿಂಗಿ, ಕೈಯಲ್ಲಿ ನಾಣ್ಯದ ತಟ್ಟೆಯನ್ನು ಮತ್ತು ಕಣ್ಣಲ್ಲಿ ದೈನ್ಯವನ್ನು ಹಿಡಿದಿಟ್ಟಿರುವ ಭಿಕ್ಷುಕ… ಹೀಗೆ ಹತ್ತಾರು ಮಂದಿ. ನೀವೀಗ ಕಾರಿನ ಗಾಜನ್ನು ಭದ್ರವಾಗಿ ಮೇಲಕ್ಕೇರಿಸುತ್ತೀರಿ. ಜಿಪುಣತನ ಅಂತಲ್ಲ. ಕೊಟ್ಟರೂ ಯಾರಿಗೆ ಅಂತ ಕೊಡೋದು? ಎಷ್ಟೂಂತ ಕೊಡೋದು? ಥತ್!

ಚಿತ್ರ : ಗೂಗಲ್

ಈ ಮಧ್ಯೆ ಬಿಳಿಕೂದಲಿನ ಗಡ್ಡಧಾರಿ ವೃದ್ಧನೊಬ್ಬ ತಂಬೂರಿ ಮೀಟುತ್ತಾ ಎಲ್ಲಿಂದಲೋ ಬರುತ್ತಾನೆ. ನಿಮಗೆ ತಿಳಿಯದ ಭಾಷೆಯಲ್ಲಿ ಏನನ್ನೋ ಮೋಹಕವಾಗಿ ಹಾಡುತ್ತಿದ್ದಾನೆ. ನೀವು ಕಾರಿನ ಗಾಜನ್ನು ಒಂದಿಂಚು ಕೆಳಗಿಳಿಸುತ್ತೀರಿ. ಅವನ ಮಧುರ ಹಾಡಿಗೆ ಕಿವಿಯಾಗುತ್ತೀರಿ. ಜೊತೆಯಲ್ಲಿ ಅವನ ಮೊಮ್ಮಗಳೋ ಏನೋ! ಚಿಕ್ಕ ಟೊಪ್ಪಿಯೊಂದನ್ನು ಎಲ್ಲರ ಮುಂದೆ ಹಿಡಿಯುತ್ತಾ ಕಾಸು ಕೇಳುತ್ತಾಳೆ. ಸಿಕ್ಕರೆ ಸಿಕ್ಕಿತು. ಇಲ್ಲವಾದರೆ ಇಲ್ಲ. ಕೆಲವರು ಆ ಟೊಪ್ಪಿಯೊಳಗೆ ನಾಣ್ಯ ಎಸೆಯುತ್ತಾರೆ. ಇನ್ನು ಕೆಲವರು ಕೇಳಿಯೂ ಕೇಳದವರಂತೆ ನಟಿಸಿ ಬಿಮ್ಮನೆ ಮುನ್ನಡೆಯುತ್ತಾರೆ. ಮತ್ತೆ ಕೆಲವರು ತಾವು ಕೂತಲ್ಲೇ ವೃದ್ಧನದ್ದು ವೀಡಿಯೋ ಮಾಡುತ್ತಾರೆ. ಪುಟ್ಟ ರೀಲ್ಸ್ ಮಾಡಿ ಎಲ್ಲೆಲ್ಲೋ ಅಪ್ಲೋಡ್ ಮಾಡುತ್ತಾರೆ.

ಅದೇನೇ ಇರಲಿ. ಅಷ್ಟು ಹೊತ್ತು ಸೆಟೆದುಕೊಂಡಿದ್ದ ನಿಮ್ಮ ಮನಸ್ಸು ಆತನ ಹಾಡನ್ನು, ಆ ತಂಬೂರಿಯ ನಾದವನ್ನು ಕೇಳಿದಾಗ ಸುಮ್ಮನೆ ತಲೆದೂಗುತ್ತದೆ. ನಿತ್ಯವೂ ಹಿಂಸೆಯೆನಿಸುವ ಟ್ರಾಫಿಕ್ಕು ಆ ಕೆಲವೇ ಕೆಲವು ಕ್ಷಣಗಳಲ್ಲಿ ಮನಸ್ಸಿಗೆ ಭಾರವೆನಿಸದೆ ಹಾಡಿನ ಲಯದಲ್ಲಿ ಕಳೆದುಹೋಗುತ್ತದೆ. ರೆಡ್ ಲೈಟ್ ಇನ್ನೂ ಮೂವತ್ತು ಸೆಕೆಂಡು ಇರಲಿ, ಆತನ ಹಾಡೂ ಮುಗಿಯದಿರಲಿ ಎಂದು ಮನಸ್ಸು ನಮಗರಿವಿಲ್ಲದಂತೆಯೇ ಹಂಬಲಿಸ ತೊಡಗುತ್ತದೆ.

ಇದೊಂದು ಕಾಲ್ಪನಿಕ ಸನ್ನಿವೇಶವಾದರೂ ನಮ್ಮಲ್ಲಿ ಬಹುತೇಕರಿಗೆ ಪರಿಚಿತ ಸಂದರ್ಭವೂ ಹೌದು. ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಆ ಆಗಂತುಕನೊಬ್ಬನ ಹಾಡು ಅದೆಂಥದ್ದೋ ಮಾಯಕದ ರೀತಿಯಲ್ಲಿ ನಮ್ಮನ್ನು ತಟ್ಟಿರುತ್ತದೆ. ಅದೊಂದು ಸಂಗೀತ ಕಛೇರಿಯಲ್ಲ. ಅದಕ್ಕೆಂದು ನಾವು ಒಂದು ಪೈಸೆ ಖರ್ಚು ಮಾಡಿಲ್ಲ. ಆತ ಅದ್ಯಾವ ಜನಪ್ರಿಯ ಗಾಯಕನೂ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಒಂದೂವರೆ-ಎರಡು ನಿಮಿಷಗಳಿಗಿಂತ ಹೆಚ್ಚು ಕಾಲ ನಾವು ಆ ಹಾಡನ್ನು ಕೇಳಿರುವುದೂ ಇಲ್ಲ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ನಾಳೆ ಇದೇ ಹೊತ್ತಿಗೆ, ಇದೇ ಸರ್ಕಲ್ಲಿನಲ್ಲಿ ಅವನು ಸಿಗಬಹುದು. ಇಲ್ಲವಾದರೆ ಅದೂ ಇಲ್ಲ. ಆದರೆ ನಿಮ್ಮ ದಿನದ ಅಷ್ಟೂ ತಾಸುಗಳ ಸುಸ್ತಿಗೆ ಅವನ ಅನಾಮಿಕ ಹಾಡೊಂದು ವಿಶಿಷ್ಟ ರೀತಿಯಲ್ಲಿ ಸಾಂತ್ವನ ಹೇಳಿರುತ್ತದೆ.

ಸಂಗೀತದ ಈ ಮ್ಯಾಜಿಕ್ಕಿಗೆ ಏನೆಂದು ಹೆಸರಿಡುವುದು!

*************

ನಮ್ಮದು ಸತ್ಯ ಮತ್ತು ಭ್ರಮೆಗಳ ನಡುವಿನಲ್ಲಿ ಬೇಯುತ್ತಿರುವ ತ್ರಿಶಂಕು ಜೀವನ ಎಂದು ಅವನು ಹೇಳಿದಾಗ ನನಗೆ ಒಪ್ಪದಿರಲು ಕಾರಣವೇ ಇರಲಿಲ್ಲ.

ಅದೊಂದು ದೊಡ್ಡ, ಪ್ರಖ್ಯಾತ ಸಂಸ್ಥೆ. ಅಲ್ಲಿ ಉದ್ಯೋಗಿಯಾಗಿ ಸೇರುವುದೇ ದೊಡ್ಡ ಸಂಗತಿ ಎಂಬ ಮಾತುಗಳು ಸಾಮಾನ್ಯವಾಗಿ ಎಲ್ಲೆಲ್ಲೂ ಕೇಳಿ ಬರುತ್ತಿದ್ದವು. ಚಂಡೀಗಢ ಮೂಲದ ಆ ಪ್ರತಿಭಾವಂತ ಹುಡುಗ ಅಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದರಲ್ಲಿ ಸಫಲನೂ ಆದ. ಆತನಿಗೆ ಸಿಕ್ಕ ನೇಮಕಾತಿ ಪತ್ರವೂ ಆಕರ್ಷಕವಾಗಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಅದರಲ್ಲಿ ಬರೆದಿರುವಂತೆ ಆತ ಅಲ್ಲಿ ಒಂದೆರಡು ವರ್ಷಗಳ ಸೇವೆಯನ್ನು ಸಲ್ಲಿಸಿದ ನಂತರ, ಮುಂದಿನ ವಿದ್ಯಾಭ್ಯಾಸದ ವಿಶೇಷ ಸೌಲಭ್ಯವನ್ನೂ ಕೂಡ ಸಂಸ್ಥೆಯಿಂದ ಪಡೆಯಬಹುದಿತ್ತು.

ಇತ್ತ ಓದಿನ ಬಗ್ಗೆ ಅಪಾರ ಹಸಿವಿದ್ದ ನಮ್ಮ ಕಥಾನಾಯಕ ಕೆಲ ಕಾಲದ ನಂತರ ಉದ್ಯೋಗದಲ್ಲಿರುವಂತೆಯೇ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಒಂದು ಅರ್ಜಿಯನ್ನೂ ಹಾಕಿದ. ಈ ಕುರಿತಂತೆ ಸಂಸ್ಥೆಯ ಪಾಲಿಸಿಯಲ್ಲಿದ್ದ ಹಲವು ಷರತ್ತುಗಳಿಗೊಪ್ಪಿ ಸಂಬಂಧಿ ದಸ್ತಾವೇಜುಗಳಿಗೆ ಸಹಿಯನ್ನೂ ಹಾಕಿದ್ದ. ಆದರೆ ಅವನ ಅರ್ಜಿಯು ಅಲೆಮಾರಿಯಂತೆ ಅಧಿಕಾರಿಗಳ ಒಂದು ಮೇಜಿನಿಂದ ಮತ್ತೊಂದು ಮೇಜಿಗೆ ಸುಮ್ಮನೆ ಹಾರಿಕೊಂಡು ಹೋಯಿತೇ ಹೊರತು ಕೆಲಸ ಕೈಗೂಡಲಿಲ್ಲ. ಬಂದವರೆಲ್ಲ ಹೀಗೆ ಓದು-ಗೀದು ಅಂತ ಹೊರಟರೆ ಇಲ್ಲಿ ಕೆಲಸ ನಡೆಯುವುದು ಅಷ್ಟರಲ್ಲೇ ಇದೆ ಎಂದು ಓರ್ವ ಮೇಲಧಿಕಾರಿಯಂತೂ ಆತನ ಅರ್ಜಿಯನ್ನು ರಾಕೆಟ್ ಮಾಡಿ ಕಿಟಕಿಯಾಚೆಗೆ ಹಾರಿಸಿಬಿಟ್ಟ. ಅಲ್ಲಿಗೆ ಆತನ ಕನಸೊಂದು ಅರಳುವ ಮೊದಲೇ ಮುರುಟಿ ಹೋದಂತಾಗಿತ್ತು.

ಇದು ಇಲ್ಲಿಗೇ ಮುಗಿಯಲಿಲ್ಲ. ಈ ಘಟನೆಯ ನಂತರ ಅಗತ್ಯವಿಲ್ಲದ ಹತ್ತಾರು ಕೆಲಸಗಳನ್ನು ಉದ್ದೇಶಪೂರ್ವಕವಾಗಿ ಆತನ ಮೇಲೆ ತಂದು ಸುರಿಯುವುದು, ಸಾಧ್ಯವೇ ಇಲ್ಲದ ಟಾರ್ಗೆಟ್ಟುಗಳನ್ನು ಹೇರುವುದು… ಇಂಥದ್ದೆಲ್ಲಾ ನಿಧಾನವಾಗಿ ಪ್ರಾರಂಭವಾಯಿತು. ಒಟ್ಟಿನಲ್ಲಿ ಉದ್ಯೋಗವನ್ನು ಬಿಟ್ಟು ತನಗೊಂದು ಬದುಕೇ ಇಲ್ಲ ಎಂಬಂತಹ ಸ್ಥಿತಿಯನ್ನು ಸಂಸ್ಥೆಯು ಕ್ರಮೇಣ ಆತನಿಗೋಸ್ಕರ ಸೃಷ್ಟಿ ಮಾಡಿತು. ಇನ್ನೂ ಇಲ್ಲೇ ಇದ್ದರೆ ತಾನು ಈ ವಿಷಚಕ್ರದಲ್ಲಿ ಕಳೆದುಹೋಗುತ್ತೇನೆ ಎಂಬುದನ್ನು ಮನಗಂಡ ಆ ಹುಡುಗ ಹೆಚ್ಚು ತಡಮಾಡದೆ ರಾಜೀನಾಮೆ ಪತ್ರವನ್ನು ನೀಡಿ ಮುಂದೆ ಹೆಜ್ಜೆಯಿಟ್ಟಿದ್ದ. ಹಾಗೆ ನೋಡಿದರೆ ಅವನಿದ್ದ ಹುದ್ದೆಯು ಅದೆಷ್ಟೋ ಮಂದಿಯ ಕನಸಾಗಿರಬಹುದು. ಹಾಗಂತ ತನ್ನಿಡೀ ಬದುಕನ್ನು ಅದಕ್ಕಾಗಿ ಕಂದಾಯವಾಗಿ ತೆರುವುದು ಅವನಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಅವನು ಅದನ್ನು ಸಾಧಿಸಿಯೂಬಿಟ್ಟಿದ್ದ.

ಕಾಲಾಂತರದಲ್ಲಿ ಇಷ್ಟಿಷ್ಟೇ ಬದಲಾಗುತ್ತಿರುವ ನಮ್ಮ ಬಯೋಡೇಟಾಗಳನ್ನು ನೋಡುತ್ತಿದ್ದರೆ ನನಗೆ ಆ ಹುಡುಗನದ್ದೇ ಮಾತು ನೆನಪಾಗುತ್ತದೆ. ಹೊಸ ಉದ್ಯೋಗಿಗಳ ಬಯೋಡೇಟಾಗಳಲ್ಲಿ ಹವ್ಯಾಸಗಳ ಕೆಟಗರಿಯಡಿಯಲ್ಲಿ ಸಂಗೀತ, ಚಿತ್ರಕಲೆ, ಕ್ರಿಕೆಟ್, ಓದು, ಬರವಣಿಗೆ… ಇತ್ಯಾದಿಗಳನ್ನು ಓದುತ್ತಿದ್ದರೆ ಇದು ಕಾಗದದ ಮೇಲಷ್ಟೇ ಕಾಣಸಿಗುವ ಸಂಗತಿಯೇನೋ ಎಂದು ದಿಗಿಲಾಗುತ್ತದೆ. ಏಕೆಂದರೆ ಬಾಲ್ಯದಲ್ಲಿ ನಾವೆಲ್ಲರೂ ಎಲ್ಲರಂತೆ ಒಂದಲ್ಲ ಒಂದು ಹವ್ಯಾಸಗಳಿಗೆ ಅಂಟಿಕೊಂಡಿದ್ದವರೇ. ಆದರೆ ನನಗೆ ತಿಳಿದಿರುವಂತೆ ಅದರಲ್ಲಿ ಸುಮಾರು ತೊಂಭತ್ತು ಪ್ರತಿಶತ ಮಂದಿ ತಮಗೂ, ತಮ್ಮ ನೆಚ್ಚಿನ ಆ ಹವ್ಯಾಸಗಳಿಗೂ ಸಂಬಂಧವೇ ಇಲ್ಲದಂತೆ ಸದ್ಯ ಬದುಕುತ್ತಿದ್ದಾರೆ. ಅವುಗಳೆಲ್ಲಾ ಅವರ ಬಾಲ್ಯದೊಂದಿಗೆ ಭೂತಕಾಲದ ನೆನಪಿನ ಓಣಿಯಲ್ಲಿ ಕಳೆದೇಹೋಗಿದೆ.

ಹಾಗಿದ್ದರೆ ನಾವೆಲ್ಲಾ ಆ ದಿನಗಳನ್ನು ಕೈಯಾರೆ ಕಳೆದುಕೊಂಡು ಬಿಟ್ಟೆವೋ? ಒಂದು ಕ್ಷಣಕ್ಕೆ ಹೌದೆನಿಸಿದರೂ ಅದು ಸಂಪೂರ್ಣವಾಗಿ ಸತ್ಯವೇನಲ್ಲ. ಏಕೆಂದರೆ ಸಹಜವಾಗಿ ಬದುಕಿನ ವಿವಿಧ ಹಂತಗಳಲ್ಲಿ ನಮ್ಮ ಆದ್ಯತೆಗಳೂ ಬದಲಾಗುತ್ತವೆ. ಹೀಗಾದಾಗ ಒಂದೊಮ್ಮೆ ತಮ್ಮ ಖುಷಿಗಾಗಿ ಮಾಡುತ್ತಿದ್ದ ಹಲವು ಚಿಕ್ಕಪುಟ್ಟ ಸಂಗತಿಗಳು ಒಂದೊಂದಾಗಿ ಹಿಂದಕ್ಕೆ ಸರಿಯತೊಡಗುತ್ತವೆ. ಅದಕ್ಕೆ ತ್ಯಾಗ ಅಂತೆಲ್ಲಾ ತೂಕದ ಪದಗಳನ್ನು ನೀಡಬೇಕಿಲ್ಲ. ಸರಳವಾಗಿ ಪ್ರಾಕ್ಟಿಕಲ್ ಭಾಷೆಯಲ್ಲಿ ಅನಿವಾರ್ಯತೆಯೆಂದೋ, ಹೊಂದಾಣಿಕೆಯೆಂದೂ ಹೇಳಿಕೊಳ್ಳಬಹುದು. ಆದರೆ ಆ ನಮ್ಮತನದಿಂದ ಶಾಶ್ವತವಾಗಿ ಸಂಬಂಧವನ್ನು ಕಡಿದುಕೊಳ್ಳುವುದಿದೆಯಲ್ಲಾ… ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ.

ಚಿತ್ರ : ಗೂಗಲ್

ಆದರೆ ಬದುಕು ಎಂದಾದ ಮೇಲೆ ಹಲವು ಹಂತಗಳಲ್ಲಿ ಒಂದಾದರೊಂದು ಆಯ್ಕೆಯನ್ನು ಮಾಡಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಹಳಷ್ಟು ಮಂದಿ “ಕಂಫರ್ಟ್ ಝೋನ್” ಇರುವ ಆಯ್ಕೆಗಳಿಗಷ್ಟೇ ಅಂಟಿಕೊಳ್ಳುತ್ತಾರೆ. ಒಂದಾನೊಂದು ಕಾಲದಲ್ಲಿ ನಿತ್ಯವೂ ರಿಯಾಜ್ ಮಾಡುತ್ತಿದ್ದ ಹುಡುಗಿ ಈಗ ಅಪರೂಪಕ್ಕೂ ಹಾಡುವುದಿಲ್ಲ. ಕಾಲೇಜು ದಿನಗಳಲ್ಲಿ ಚಂದಗೆ ಚಿತ್ರ ಬಿಡಿಸುತ್ತಿದ್ದ ಹುಡುಗನಿಗೀಗ ಬಣ್ಣಗಳ ವಾಸನೆಯೇ ಮರೆತುಹೋಗಿದೆ. ಶಾಪದಂತೆ ಕಾಡುವ ನಿತ್ಯದ ಡ್ರೈವಿಂಗ್, ಬಿಡುವಿಲ್ಲದ ದಿನಚರಿ, ಆಫೀಸು ಟೂರುಗಳು, ಟಾರ್ಗೆಟ್-ಅಪ್ರೈಸಲ್, ನೆಟ್ ಫ್ಲಿಕ್ಸ್-ಆಂಡ್-ಚಿಲ್, ಸಾಧ್ಯವಿದ್ದರೆ ಕುಟುಂಬದೊಂದಿಗೆ ಒಂದಷ್ಟು ಹೊತ್ತು, ಇಲ್ಲವಾದರೆ ಮತ್ತದೇ ಫೋನು-ವೈನು-ಮತ್ತು… ಇವೆಲ್ಲದರ ಮಧ್ಯೆ ನಮ್ಮ ಒಳದನಿಗೆ ಕಿವಿಯಾಗುವುದನ್ನೇ ನಾವು ಮರೆತುಬಿಟ್ಟಿರುತ್ತೇವೆ. ವಿಪರ್ಯಾಸವೆಂದರೆ “ಇದು ಸಹಜ” ಎಂದು ಕೂಡ ನಮಗೆ ನಾವೇ ಒಂದು ಚಂದದ ಸುಳ್ಳನ್ನು ಹೇಳಿ ನಂಬಿಸಿದ್ದೇವೆ.

ನಿಮ್ಮ ಉದ್ಯೋಗವನ್ನು ಹೊರತುಪಡಿಸಿ ನಿಮ್ಮ ವೈಯಕ್ತಿಕ ಖುಷಿಗಾಗಿ ಅಥವಾ ಕಲಿಕೆ-ಬೆಳವಣಿಗೆಯ ನಿಟ್ಟಿನಲ್ಲಿ ನೀವು ಏನೆಲ್ಲಾ ಮಾಡುತ್ತೀರಿ ಎಂದು ನಾನು ಹಲವರಲ್ಲಿ ಕೇಳುತ್ತಿರುತ್ತೇನೆ. ಈ ಪೈಕಿ ಬೆರಳೆಣಿಕೆಯ ಮಂದಿಯನ್ನು ಹೊರತುಪಡಿಸಿ ಉಳಿದವರೆಲ್ಲ ಏನೂ ಇಲ್ಲ ಎಂದೇ ಉತ್ತರಿಸುತ್ತಾರೆ. ಅದಕ್ಕೆಲ್ಲ ಸಮಯವೆಲ್ಲಿ ಎಂದು ನಿಟ್ಟುಸಿರಾಗುತ್ತಾರೆ. ಇನ್ನು ಕೆಲವು ಮಂದಿ ಕತೆ ಬರೆದರೆ, ಪೈಂಟಿಂಗ್ ಮಾಡಿದರೆ, ಚಂದದ ಕವಿತೆಯೊಂದನ್ನು ಓದಿದರೆ, ಜಗತ್ತನ್ನೇ ಮರೆತು ಕುಣಿದರೆ, ತಮ್ಮ ಪಾಡಿಗೆ ತಾವು ಸೈಕ್ಲಿಂಗ್ ಮಾಡಿದರೆ, ಒಂದೊಳ್ಳೆಯ ಚರ್ಚೆಗೆ ಕಿವಿಯಾದರೆ… ಏನು ಲಾಭ ಎಂಬ ಮಿಲಿಯನ್ ಡಾಲರ್ ಪ್ರಶ್ನೆಯೊಂದನ್ನೂ ಕೇಳುತ್ತಾರೆ. ಕಾಸು ಹುಟ್ಟದ ಯಾವ ಚಟುವಟಿಕೆಯೂ ತೊಡಗಿಸಿಕೊಳ್ಳಲು ಲಾಯಕ್ಕಲ್ಲ ಎಂಬ ವಿಚಿತ್ರ ಮನೋಭಾವವೊಂದು ನಮ್ಮ ನಡುವಿನಲ್ಲಿ ಕೊಂಚ ಬಲವಾಗಿಯೇ ಬೇರೂರಿಬಿಟ್ಟಿದೆ.

ಬಹುಷಃ ಲೇಖಕ ಜೇಕ್ ನಾಪ್ ಬರೆದಿದ್ದು ಎಂದನ್ನಿಸುತ್ತೆ. ಅವರು ಹೇಳುವಂತೆ ತಮ್ಮ ಪಾಡಿಗೆ ಹಾಯಾಗಿ ಹಾಡುತ್ತಲೋ, ಚಿತ್ರ ಬಿಡಿಸುತ್ತಲೋ ಖುಷಿಯಾಗಿದ್ದವರು ತಮ್ಮ ಹವ್ಯಾಸಕ್ಕೊಂದು ಪ್ರೈಸ್ ಟ್ಯಾಗ್ ಅಂಟಿಸಿದ ಕೂಡಲೇ, ಒಂದು ಬಗೆಯ ವಿಚಿತ್ರ ಒತ್ತಡದಲ್ಲಿ ಸಿಲುಕಿಕೊಂಡು ಒದ್ದಾಡುತ್ತಾರಂತೆ. ಏಕೆಂದರೆ ಹಿಂದೆ ಕಲಾತ್ಮಕ ಸೃಷ್ಟಿಯಷ್ಟೇ ಆಗಿದ್ದ ಸಂಗತಿಯೊಂದು ಈಗ ಮಾರುಕಟ್ಟೆಯ ಉತ್ಪನ್ನವಾಗಿ ಬದಲಾಗಿರುತ್ತದೆ. ಹಿಂದೆ ತಮ್ಮ ಖುಷಿಗಷ್ಟೇ ಸೀಮಿತವಾಗಿದ್ದ ಚಟುವಟಿಕೆಯೊಂದಕ್ಕೆ ಈಗ ಮಾರ್ಕೆಟ್ಟು, ಮಾರಾಟ, ಲಾಭ, ಖ್ಯಾತಿ… ಹೀಗೆ ಬಹಳಷ್ಟು ಸಂಗತಿಗಳು ಜೊತೆಯಾಗಿರುತ್ತವೆ. ಒಟ್ಟಾರೆಯಾಗಿ ಆ ಸೃಷ್ಟಿಯ ಪ್ರಕ್ರಿಯೆಯಲ್ಲಿರುವ ಅಪರೂಪದ ಸುಖಕ್ಕಿಂತ, ಅಂತಿಮ ಫಲಿತಾಂಶದ ಆತಂಕ-ಒತ್ತಡಗಳೇ ಈಗ ಮುನ್ನೆಲೆಗೆ ಬಂದಿರುತ್ತವೆ. ಹೀಗಿರುವಾಗ ನಿಮ್ಮ ಹವ್ಯಾಸವು ನಿಮ್ಮ ಸಂಪಾದನೆಗೂ ದಾರಿಯಾದರೆ ಒಳ್ಳೆಯದು. ಆದರೆ ಅದನ್ನೇ ನಿಮ್ಮ ಹವ್ಯಾಸದ ಅಂತಿಮ ಉದ್ದೇಶವನ್ನಾಗಿಸಬೇಡಿ ಎಂಬುದು ಅವರ ಕಳಕಳಿಯ ಸಲಹೆ.

ನೀವೇ ಹೇಳಿ. ನೀವು ಸಂಜೆಯ ಟ್ರಾಫಿಕ್ಕಿನಲ್ಲಿ ಒದ್ದಾಡಿಕೊಂಡಿದ್ದಾಗ ಆ ಅಪರಿಚಿತ ವೃದ್ಧನೊಬ್ಬ ಚಿಕ್ಕ ಹಾಡೊಂದನ್ನು ಹಾಡಿ, ಯಾವುದೇ ಮಹಾ ನಿರೀಕ್ಷೆ-ಉದ್ದೇಶಗಳಿಲ್ಲದೆ ನಿಮಗೆ ಆಹ್ಲಾದವನ್ನು ತಂದಿದ್ದನಲ್ಲ! ಅದಕ್ಕೆಷ್ಟು ಬೆಲೆ ಕಟ್ಟೋಣ?

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್, ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

ಈ ಹಿಂದಿನ ಅಂಕಣ ಓದಿದ್ದೀರಾ?

“ದುಡ್ಡೆಂಬ ದೊಡ್ಡಪ್ಪನ ತಾಪತ್ರಯಗಳು” https://peepalmedia.com/metro-times-10/

ಕಂಡಿದ್ದು, ಕೇಳಿದ್ದು, ದಕ್ಕಿದ್ದು” https://peepalmedia.com/seen-heard-found/

ಮಹಾನಗರವೊಂದರ ಜೀವನ ಕಥನ https://peepalmedia.com/a-life-story-of-a-metropolis/

ಬದುಕಿನ ಕೊಲಾಜ್ ಚಿತ್ರಪಟಗಳು” https://peepalmedia.com/collage-pictures-of-life/

“ನೆಟ್ವರ್ಕಿಂಗ್ ಎಂಬ ನವೀನ ತಲಾಶೆ” https://peepalmedia.com/the-innovative-quest-of-networking/

ಮಹಾನಗರ Vs. ಮಹತ್ವಾಕಾಂಕ್ಷೆ”https://peepalmedia.com/metropolis-city-vs-ambition/

“ಒಂದು ಮಿನಿಮಳೆಯ ಕಥೆ”https://peepalmedia.com/the-story-of-a-mini-rain/

“ಕೂತು ಕೂತು ಕೆಟ್ಟವರು”https://peepalmedia.com/kootu-kootu-kettavaru/

“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”https://peepalmedia.com/from-bedroom-to-boardroom/

Related Articles

ಇತ್ತೀಚಿನ ಸುದ್ದಿಗಳು