ಹೊಸದೆಹಲಿ: ವ್ಯಕ್ತಿಯ ವಯಸ್ಸನ್ನು ಸಾಬೀತುಪಡಿಸಲು ಆಧಾರ್ ಕಾರ್ಡ್ ಮಾನ್ಯ ದಾಖಲೆಯಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ರಸ್ತೆ ಅಪಘಾತದಲ್ಲಿ ಬಲಿಯಾದವರ ವಯಸ್ಸನ್ನು ಖಚಿತಪಡಿಸಿಕೊಳ್ಳಲು ಆಧಾರ್ ಕಾರ್ಡ್ ಪೂರಕ ದಾಖಲೆಯಾಗಬಹುದು ಎಂಬ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ಸ್ಕೂಲ್ ಲೀವಿಂಗ್ ಸರ್ಟಿಫಿಕೇಟಿನಲ್ಲಿ (ಎಸ್ ಎಲ್ ಸಿ) ನಮೂದಿಸಿರುವ ಜನ್ಮದಿನಾಂಕದ ಆಧಾರದ ಮೇಲೆ ವಯಸ್ಸನ್ನು ನಿರ್ಧರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಆಧಾರ್ ಕಾರ್ಡ್ ವ್ಯಕ್ತಿಯ ಜನ್ಮ ದಿನಾಂಕವನ್ನು ಸಾಬೀತುಪಡಿಸುವ ದಾಖಲೆಯಲ್ಲ ಎಂದು ಆಧಾರ್ ಸಂಸ್ಥೆ ಈ ಹಿಂದೆ ಸುತ್ತೋಲೆ ಹೊರಡಿಸಿತ್ತು.
ರೋಹ್ಟಕ್‌ನಲ್ಲಿರುವ ಮೋಟಾರು ಅಪಘಾತದ ಹಕ್ಕುಗಳ ನ್ಯಾಯಮಂಡಳಿ ಪ್ರಕರಣವೊಂದರಲ್ಲಿ ತೀರ್ಪು ನೀಡಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ (47) ವಯಸ್ಸನ್ನು ಎಸ್‌ಎಲ್‌ಸಿ ಪ್ರಮಾಣಪತ್ರದ ಆಧಾರದ ಮೇಲೆ ಲೆಕ್ಕಹಾಕಿ ರೂ.19.35 ಲಕ್ಷ ಪರಿಹಾರವನ್ನು ಘೋಷಿಸಿತು. ಆದರೆ, ಹೈಕೋರ್ಟ್ ಆಧಾರ್ ಕಾರ್ಡ್‌ನಲ್ಲಿರುವ ವಯಸ್ಸು (45) ಆಧರಿಸಿ ಪರಿಹಾರವನ್ನು 9.22 ಲಕ್ಷ ರೂ.ಗೆ ಇಳಿಸಿತ್ತು.