Home ದೇಶ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ ಆಮ್‌ ಆದ್ಮಿ ಪಾರ್ಟಿ

ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ ಆಮ್‌ ಆದ್ಮಿ ಪಾರ್ಟಿ

0

ಹೊಸದಿಲ್ಲಿ: ಹತ್ತು ವರ್ಷಗಳ ಹಿಂದೆ ಅರವಿಂದ ಕೇಜ್ರಿವಾಲ್ ಆಮ್‌ ಆದ್ಮಿ ಪಕ್ಷವನ್ನು ಸ್ಥಾಪಿಸಿದಾಗ ಇದೂ ಕೂಡ ಹತ್ತರಲ್ಲಿ ಹನ್ನೊಂದು ಎಂದು ಭಾವಿಸಿದವರೇ ಹೆಚ್ಚು. ರಾಜಕೀಯ ಅನುಭವವಿಲ್ಲದೆ, ಮಾಜಿ ತೆರಿಗೆ ಅಧಿಕಾರಿ, ಆರ್‌ಟಿಐ ಕಾರ್ಯಕರ್ತ ಕೇಜ್ರಿವಾಲ್‌ ಅವರ ಬೆನ್ನಿಗಿದ್ದಿದ್ದು ಒಂದಷ್ಟು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಮಾತ್ರ.

ಹತ್ತು ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. 2011ರಲ್ಲಿ ಅಣ್ಣಾ ಹಜಾರೆ ಜನಲೋಕಪಾಲ್‌ ಗಾಗಿ ಆರಂಭಿಸಿದ ದೇಶವ್ಯಾಪಿ ಚಳವಳಿಯ ಚಾಲನಾ ಶಕ್ತಿಯಾಗಿದ್ದ ಕೇಜ್ರಿವಾಲ್‌ ಭಾರತದ ಜನತೆಗೆ ಪರಿಚಿತರಾಗಿದ್ದರು. ಚಳವಳಿ ಮಾಡಿ ಸರ್ಕಾರಗಳನ್ನು ಬ್ಲಾಕ್‌ ಮೇಲ್‌ ಮಾಡುವ ಬದಲು ನೀವೇ ರಾಜಕೀಯಕ್ಕೆ ಬನ್ನಿ ಎಂದು ಕಾಲೆಳೆದರು ಅಂದಿನ ಕಾಂಗ್ರೆಸ್‌ ನಾಯಕರು. ಬಹುಶಃ ಅದೇ ಕಾಂಗ್ರೆಸ್‌ ಪಾಲಿಗೆ ಮುಳುವಾಯಿತು. ಕೇಜ್ರಿವಾಲ್‌ ಕಟ್ಟಿದ ಆಮ್‌ ಆದ್ಮಿ ಪಾರ್ಟಿ ಈಗ ದೆಹಲಿ ಪಾರ್ಟಿಯಾಗಿ ಉಳಿದಿಲ್ಲ, ಬದಲಾಗಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ ಪಕ್ಷಕ್ಕೆ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಆಮ್‌ ಆದ್ಮಿ ಪಾರ್ಟಿಯನ್ನು ಸ್ಥಾಪಿಸಿ, ಮೊದಲ ಪ್ರಯತ್ನದಲ್ಲೇ ದೆಹಲಿಯ ಮುಖ್ಯಮಂತ್ರಿಯಾಗುವಲ್ಲಿ ಅರವಿಂದ ಕೇಜ್ರಿವಾಲ್‌ ಯಶಸ್ವಿಯಾದರು. ಈ ಹತ್ತು ವರ್ಷಗಳಲ್ಲಿ ಅತ್ಯಂತ ಗಮನಾರ್ಹವಾದ ವಿದ್ಯಮಾನವೆಂದರೆ ಬಿಜೆಪಿಯ ಭರ್ಜರಿ ಬೆಳವಣಿಗೆ ಮತ್ತು ಕಾಂಗ್ರೆಸ್‌ ನ ಹೀನಾಯ ಹಿನ್ನೆಡೆಗಳು. ಈ ಎರಡರ ನಡುವೆ ಎಎಪಿ ರಾಷ್ಟ್ರ ರಾಜಕಾರಣದ ಹೊಸ ಆಟಗಾರನಂತೆ ಬೆಳೆದಿರುವುದು ಕಾಕತಾಳೀಯವೇನೂ ಅಲ್ಲ.

ಯಾವುದೇ ಒಂದು ರಾಜಕೀಯ ಪಕ್ಷ ರಾಷ್ಟ್ರೀಯ ಪಕ್ಷವೆನಿಸಿಕೊಳ್ಳಬೇಕು ಎಂದರೆ ಕನಿಷ್ಠ ಮೂರು ರಾಜ್ಯಗಳಲ್ಲಿ ಶೇ.3ರಷ್ಟು ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿರಬೇಕು. ಈ ಲೆಕ್ಕಾಚಾರದ ಪ್ರಕಾರ ಮೂರು ರಾಜ್ಯಗಳಿಂದ 11 ಲೋಕಸಭಾ ಸದಸ್ಯ ಸ್ಥಾನಗಳನ್ನು ಗೆದ್ದಿರಬೇಕು. ಸದ್ಯದ ಮಟ್ಟಿಗೆ ಎಎಪಿ ಬಳಿ ಒಬ್ಬನೇ ಒಬ್ಬ ಲೋಕಸಭಾ ಸದಸ್ಯನಿಲ್ಲ.

ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯಲು ಇರುವ ಮತ್ತೊಂದು ಮಾನದಂಡವೇನೆಂದರೆ, ಒಂದು ರಾಜಕೀಯ ಪಕ್ಷ ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಮಾನ್ಯತೆ ಹೊಂದಿರಬೇಕು. ಇದಕ್ಕಾಗಿ ಆಯಾ ರಾಜ್ಯದ ಶೇ.6ರಷ್ಟು ಮತಪ್ರಮಾಣ (ವೋಟ್‌ ಶೇರ್) ಅಥವಾ ಕನಿಷ್ಠ ಇಬ್ಬರು ಶಾಸಕರನ್ನು ಹೊಂದಿರಬೇಕು. ಒಂದುವೇಳೆ ಶೇ.6ರಷ್ಟು ಮತಪ್ರಮಾಣವಿಲ್ಲದೇ ಹೋದರೆ ಕನಿಷ್ಠ ಮೂರು ಮಂದಿ ಶಾಸಕರನ್ನು ಹೊಂದಿರಬೇಕು.

ಈ ಮಾನದಂಡದ ಪ್ರಕಾರ ಎಎಪಿ ಈಗ ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಂಡಿದೆ. ದೆಹಲಿ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ಆ ಪಕ್ಷಕ್ಕೆ ಈಗ ಭಾರೀ ಬಹುಮತವಿದೆ. ಗೋವಾದಲ್ಲಿ ಶೇ.6ರಷ್ಟು ಮತಪ್ರಮಾಣ ಮಾತ್ರವಲ್ಲದೆ, ಎರಡು ಶಾಸಕ ಸ್ಥಾನವೂ ಆ ಪಕ್ಷಕ್ಕಿದೆ. ಈಗ ಗುಜರಾತ್‌ ಚುನಾವಣೆಯಲ್ಲೂ ಖಾತೆ ತೆರೆಯುವ ಮೂಲಕ, ಅಲ್ಲೂ ಸಹ ರಾಜ್ಯಮಟ್ಟದ ಪಕ್ಷವಾಗಿ ಎಎಪಿ ಹೊರಹೊಮ್ಮಿದೆ.

ಸದ್ಯಕ್ಕೆ ಭಾರತದ ರಾಜಕಾರಣದಲ್ಲಿ ಒಟ್ಟು ಎಂಟು ರಾಜಕೀಯ ಪಕ್ಷಗಳಿಗೆ ರಾಷ್ಟ್ರೀಯ ಪಕ್ಷಗಳೆಂಬ ಮಾನ್ಯತೆಯನ್ನು ಚುನಾವಣಾ ಆಯೋಗ ನೀಡಿದೆ. ಬಿಜೆಪಿ, ಕಾಂಗ್ರೆಸ್‌, ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ, ತೃಣಮೂಲ ಕಾಂಗ್ರೆಸ್‌ ಪಕ್ಷ, ಎನ್‌ ಸಿಪಿ, ಸಿಪಿಐ, ಸಿಪಿಎಂ ಮತ್ತು ಬಹುಜನ ಸಮಾಜ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಮಾನ್ಯತೆ ಪಡೆದಿರುವ ಪಕ್ಷಗಳು. ಗಮನಾರ್ಹ ಅಂಶವೆಂದರೆ ಎನ್‌ ಸಿಪಿ, ಟಿಎಂಸಿ, ಸಿಪಿಐ ಮತ್ತು ಬಿಎಸ್‌ ಪಿ ಪಕ್ಷಗಳ ಬಲ ಕುಸಿಯುತ್ತ ಬಂದಿದ್ದು, ರಾಷ್ಟ್ರೀಯ ಪಕ್ಷದ ಮಾನ್ಯತೆ ಕಳೆದುಕೊಳ್ಳುವ ಹಂತ ತಲುಪಿವೆ. ಈ ಪಕ್ಷಗಳಿಗೆ ಈಗಾಗಲೇ ಚುನಾವಣಾ ಆಯೋಗ ನೋಟಿಸ್‌ ಜಾರಿ ಮಾಡಿದ್ದು, ರಾಷ್ಟ್ರೀಯ ಪಕ್ಷಗಳ ಸ್ಥಾನಮಾನದಿಂದ ಯಾಕೆ ಕೆಳಗೆ ಇಳಿಸಬಾರದು ಎಂದು ಕೇಳಿದೆ. 2024ರ ಸಾರ್ವತ್ರಿಕ ಚುನಾವಣೆವರೆಗೆ ತಮಗೆ ನೀಡಲಾಗಿರುವ ರಾಷ್ಟ್ರೀಯ ಪಕ್ಷದ ಸ್ಥಾನಮಾನದಿಂದ ಕೆಳಗೆ ಇಳಿಸಬಾರದು ಎಂದು ಈ ಪಕ್ಷಗಳು ಕೋರಿವೆ. ಚುನಾವಣಾ ಆಯೋಗ ಈ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಟಿಎಂಸಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಬೇಕಾಗಿರುವುದಕ್ಕಿಂತ ಹೆಚ್ಚು ಲೋಕಸಭಾ ಸದಸ್ಯ ಸ್ಥಾನಗಳು ಇದ್ದರೂ, ಅವೆಲ್ಲವೂ ಪಶ್ಚಿಮ ಬಂಗಾಳದಿಂದಲೇ ಬಂದಿವೆ. ಎನ್‌ ಸಿಪಿ ಈಗ ಕೇವಲ ಮಹಾರಾಷ್ಟ್ರಕ್ಕೆ ಸೀಮಿತವಾಗಿದೆ. ಸಿಪಿಎಂ ಕೂಡ ಕೇರಳ ಮತ್ತು ತ್ರಿಪುರಕ್ಕೆ ಸೀಮಿತವಾಗಿದೆ. ಸಿಪಿಎಂ ಇದಕ್ಕಿಂತ ದಾರುಣವಾದ ಸ್ಥಿತಿಯನ್ನು ಎದುರಿಸುತ್ತಿದೆ.

ಈ ಎಲ್ಲ ರಾಜಕೀಯ ಪಕ್ಷಗಳು ತಮ್ಮ ರಾಷ್ಟ್ರೀಯ ಸ್ಥಾನಮಾನ ಉಳಿಸಿಕೊಳ್ಳಲು ಹೆಣಗುತ್ತಿದ್ದರೆ ಎಎಪಿ ದೇಶದ ಎಲ್ಲ ಭಾಗಗಳಲ್ಲೂ ತನ್ನ ಅಸ್ತಿತ್ವ ಮೂಡಿಸುತ್ತ ಹೊಸ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುತ್ತಿದೆ.

ರಾಷ್ಟ್ರೀಯ ಪಕ್ಷವಾದರೆ ಇರುವ ಲಾಭಗಳು:

ಒಂದು ರಾಜಕೀಯ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ದೊರೆತರೆ ಸಿಗುವ ಲಾಭವೇನೆಂದರೆ ಆ ಪಕ್ಷಕ್ಕೆ ನೀಡಲಾದ ಚುನಾವಣಾ ಚಿಹ್ನೆ ಬೇರೆ ಯಾವ ರಾಜ್ಯದಲ್ಲೂ ಇನ್ಯಾವುದೇ ಪಕ್ಷ, ಅಭ್ಯರ್ಥಿಗೆ ನೀಡಲಾಗುವುದಿಲ್ಲ. ಉದಾಹರಣೆಗೆ ಎಎಪಿ ಪಕ್ಷಕ್ಕೆ ನೀಡಲಾಗಿರುವ ಪೊರಕೆಯ ಚಿಹ್ನೆ ಆ ಪಕ್ಷದ ಬಳಿಯೇ ಉಳಿಯುತ್ತದೆ.

ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಮಾತ್ರ ಪ್ರಸಾರಭಾರತಿ ಅಡಿಯಲ್ಲಿರುವ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ  ಪ್ರಚಾರ ಮಾಡುವ ಅವಕಾಶ ಲಭಿಸುತ್ತದೆ.

ಚುನಾವಣೆಗಳ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು 40 ಮಂದಿ ಸ್ಟಾರ್‌ ಪ್ರಚಾರಕರನ್ನು ಹೊಂದಬಹುದಾಗಿದೆ. ಅವರ ಪ್ರಯಾಣದ ಖರ್ಚುಗಳನ್ನು ಅಭ್ಯರ್ಥಿಗಳ ಖರ್ಚಿನ ಲೆಕ್ಕಕ್ಕೆ ಪಡೆಯಲಾಗುವುದಿಲ್ಲ.

ರಾಷ್ಟ್ರೀಯ ಪಕ್ಷಗಳಿಗೆ ತಮ್ಮ ಪಕ್ಷದ ಪ್ರಧಾನ ಕಚೇರಿ ನಿರ್ಮಿಸಿಕೊಳ್ಳಲು ಸರ್ಕಾರಿ ಜಾಗವನ್ನು ನೀಡಲಾಗುತ್ತದೆ. ರಾಷ್ಟ್ರೀಯ ಪಕ್ಷಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕೇವಲ ಒಬ್ಬ ಅನುಮೋದಕರ ಸಹಿ ಸಾಕಾಗುತ್ತದೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಎರಡು ಸೆಟ್‌ ಪರಿಷ್ಕೃತ ಪಟ್ಟಿಯನ್ನು ಉಚಿತವಾಗಿ ಒದಗಿಸಲಾಗುತ್ತದೆ. ಚುನಾವಣೆಗಳ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಉಚಿತವಾಗಿ ಮತದಾರರ ಪಟ್ಟಿಯನ್ನು ನೀಡಲಾಗುತ್ತದೆ.

ಎಎಪಿ ಈಗ ಹೊಸ ಕಾಂಗ್ರೆಸ್:

ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಒಂದಾದ ಮೇಲೊಂದರಂತೆ ರಾಜ್ಯಗಳನ್ನು ಕಳೆದುಕೊಳ್ಳುತ್ತ ಸಾಗುತ್ತಿರುವಂತೆ ಎಎಪಿ ರಾಷ್ಟ್ರ ರಾಜಕಾರಣದ ಹೊಸ ಕಾಂಗ್ರೆಸ್‌ ಪಕ್ಷವಾಗಿ ಗುರುತಿಸಿಕೊಳ್ಳುತ್ತಿದೆ. ಅರ್ಥಾತ್‌ ಬಿಜೆಪಿಗೆ ಕಾಂಗ್ರೆಸ್‌ ಹೊರತಾದ ಪರ್ಯಾಯವಾಗಿ ಗುರುತಿಸಿಕೊಳ್ಳುತ್ತಿದೆ.

ದೇಶದ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಎದುರಾಳಿಗಳಾಗಿ ಈವರೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಹಣಾಹಣಿ ನಡೆಸುತ್ತಿದ್ದವು. ಈಗ ಕಾಂಗ್ರೆಸ್‌ ಸ್ಥಾನವನ್ನು ನಿಧಾನವಾಗಿ ಎಎಪಿ ತುಂಬುತ್ತಿದೆ.

ಗುಜರಾತ್‌ ಚುನಾವಣೆಯಲ್ಲಿ ಖಾತೆ ತೆರೆದಿರುವ ಎಎಪಿ ಹಿಮಾಚಲ ಪ್ರದೇಶದಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ. ಹಿಮಾಚಲ ಪ್ರದೇಶದ ಎಎಪಿ ಘಟಕವನ್ನೇ ಬಿಜೆಪಿ ತನ್ನ ಒಳಗೆ ಸೇರಿಸಿಕೊಂಡ ನಂತರ ಹೊಸದಾಗಿ ಪಕ್ಷವನ್ನು ಸಂಘಟಿಸುವ ಸವಾಲನ್ನು ಎಎಪಿ ಎದುರಿಸಬೇಕಾಗಿ ಬಂದಿತ್ತು.

ಕೇಜ್ರಿವಾಲ್‌ ಅವರ ಮುಂದಿನ ಗುರಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ ಘಡ ಮತ್ತು ಕರ್ನಾಟಕ.

ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಭಾಷಣ ಮಾಡುವುದು ಸಾಮಾನ್ಯ. ಆದರೆ ಆ ಕೆಲಸವನ್ನು ನಿಜವಾಗಿಯೂ ಮಾಡಲು ಹೊರಟಿರುವುದು ಆಮ್‌ ಆದ್ಮಿ ಪಾರ್ಟಿ ಎಂದರೆ ಅತಿಶಯೋಕ್ತಿಯೇನಲ್ಲ.

You cannot copy content of this page

Exit mobile version