ಬೆಂಗಳೂರು: ಮಹಿಳೆಯರ ಮೆನೋಪಾಸ್ (ಋತುಬಂಧ) ಸಮಸ್ಯೆಗಳಿಗೆ ಸೂಕ್ತ ಆರೈಕೆ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಋತುತಾರೆ’ ಎಂಬ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಬೆಂಗಳೂರಿನ ಆರೋಗ್ಯ ಸೌಧದಲ್ಲಿ ನಟಿ ರಮ್ಯಾ ಹಾಗೂ ಮಹಿಳಾ ಆರೋಗ್ಯ ತಜ್ಞರೊಂದಿಗೆ ನಡೆದ ಸಂವಾದದ ಬಳಿಕ ಮಾತನಾಡಿದ ಸಚಿವರು, ಮೆನೋಪಾಸ್ ಸಂದರ್ಭದಲ್ಲಿ ಮಹಿಳೆಯರು ಮಾನಸಿಕ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ತಜ್ಞೆ ಜೋಸ್ನಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ಯೋಜನೆಯ ಪ್ರಚಾರಕ್ಕಾಗಿ ನಟಿ ರಮ್ಯಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಮಹಿಳೆಯರ ಆರೋಗ್ಯ ಮಾಹಿತಿ ಸಂಗ್ರಹಿಸಲಿದ್ದು, ಪ್ರೀ-ಮೆನೋಪಾಸ್ ಮತ್ತು ಪೋಸ್ಟ್-ಮೆನೋಪಾಸ್ ಅವಧಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.
ಮೆನೋಪಾಸ್ ಕುರಿತು ಮಾತನಾಡಿದ ತಜ್ಞೆ ಜೋಸ್ನಾ, ಮಹಿಳೆಯರಿಗೆ ಋತುಬಂಧ ಯಾವ ಸಂದರ್ಭದಲ್ಲಿ ಆರಂಭವಾಗಿದೆ ಹಾಗೂ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ ಎಂದರು. ನಾರ್ಮಲ್ ಮತ್ತು ಸರ್ಜಿಕಲ್ ಮೆನೋಪಾಸ್ ಎಂಬ ಎರಡು ವಿಧಗಳಿದ್ದು, ಈ ಅವಧಿಯಲ್ಲಿ ಹೃದಯ ಮತ್ತು ಮೂಳೆ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು. ಹೀಗಾಗಿ ಹೆಚ್ಚಿನ ಗಮನ ಅಗತ್ಯ ಎಂದು ಹೇಳಿದರು.
ಯೋಜನೆಯ ಕುರಿತು ಪ್ರತಿಕ್ರಿಯಿಸಿದ ನಟಿ ರಮ್ಯಾ, ಭಾರತದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಮೆನೋಪಾಸ್ ಬೇಗ ಕಾಣಿಸಿಕೊಳ್ಳುತ್ತದೆ. ನಗರ ಪ್ರದೇಶಗಳಲ್ಲಿಯೂ ಈ ಬಗ್ಗೆ ಹೆಚ್ಚಿನ ಅರಿವು ಇಲ್ಲ, ಗ್ರಾಮೀಣ ಭಾಗಗಳಲ್ಲಿ ಮಾಹಿತಿ ಇನ್ನಷ್ಟು ಕಡಿಮೆ ಇದೆ ಎಂದರು.
ಮೆನೋಪಾಸ್ ಸಮಸ್ಯೆಗಳ ಕುರಿತು ಗೃಹ ಆರೋಗ್ಯ ಪುಸ್ತಕದಲ್ಲಿ ಮಾಹಿತಿ ಸೇರಿಸುವಂತೆ ಮನವಿ ಮಾಡಲಾಗಿತ್ತು. ಇದೀಗ ಸರ್ಕಾರ ‘ಋತುತಾರೆ’ ಯೋಜನೆ ಘೋಷಿಸಿ, ತಮ್ಮನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ರಮ್ಯಾ ಹೇಳಿದರು.
