Home ಬೆಂಗಳೂರು ಬೆಳಗಾವಿಯಲ್ಲಿ 4.5 ಲಕ್ಷ ಮತದಾರರ ಹೆಸರು ಡಿಲೀಟ್ – ನಕಲಿ ಮತದಾರರ ಪತ್ತೆ

ಬೆಳಗಾವಿಯಲ್ಲಿ 4.5 ಲಕ್ಷ ಮತದಾರರ ಹೆಸರು ಡಿಲೀಟ್ – ನಕಲಿ ಮತದಾರರ ಪತ್ತೆ

ಬೆಳಗಾವಿ: ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ಬೆಳಗಾವಿ ಜಿಲ್ಲೆಯಲ್ಲೂ ಬಿರುಸಿನಿಂದ ಸಾಗುತ್ತಿದೆ. ಈವರೆಗೆ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 4.68 ಲಕ್ಷ ಪತ್ತೆಯಾಗದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 41.07 ಲಕ್ಷ ಮತದಾರರನ್ನು ಎಸ್‌ಐಆರ್‌ ಪ್ರಕ್ರಿಯೆಗೆ ಒಳಪಡಿಸಲಾಗಿದ್ದು, ಇದುವರೆಗೆ 35,54,497 ಮತದಾರರ ಅರ್ಜಿಗಳನ್ನು ಬಿಎಲ್‌ಒಗಳು (BLO) ಗಣಕೀಕರಿಸಿದ್ದಾರೆ. ಪರಿಶೀಲನೆ ವೇಳೆ ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದವರನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಆಡಳಿತದ ಮಾಹಿತಿ ಪ್ರಕಾರ, 1.32 ಲಕ್ಷ ಮೃತರು, 2.50 ಲಕ್ಷ ಸ್ಥಳಾಂತರಗೊಂಡವರು ಹಾಗೂ 63 ಸಾವಿರಕ್ಕೂ ಹೆಚ್ಚು ನಕಲಿ ಅಥವಾ ದ್ವಂದ್ವ ಮತದಾರರ ಹೆಸರನ್ನು ರದ್ದುಪಡಿಸಲಾಗಿದೆ.ಜೂನ್‌ 30ರಿಂದ ಆರಂಭವಾದ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಅರ್ಜಿಗಳನ್ನು ವಿತರಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆದರೆ ಅನೇಕ ಮತದಾರರು ಅರ್ಜಿಗಳನ್ನು ಭರ್ತಿ ಮಾಡದ ಕಾರಣ, ಬಿಎಲ್‌ಒಗಳೇ ಮಾಹಿತಿ ಪಡೆದು ಅರ್ಜಿಗಳನ್ನು ಪೂರ್ಣಗೊಳಿಸುವ ಪರಿಸ್ಥಿತಿ ಎದುರಾಗಿದೆ.

ಇನ್ನೊಂದೆಡೆ, ಬೆಳಗಾವಿ ಜಿಲ್ಲೆಯ ಅನೇಕರು ಮುಂಬೈ, ಪುಣೆ, ಗೋವಾ ಹಾಗೂ ಬೆಂಗಳೂರಿಗೆ ವಲಸೆ ಹೋಗಿರುವುದರಿಂದ ಮತ್ತು ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆ ಬದಲಾಯಿಸುತ್ತಿರುವುದರಿಂದ ಮನೆಮನೆ ಸಮೀಕ್ಷೆ ನಡೆಸುವುದು ಬಿಎಲ್‌ಒಗಳಿಗೆ ದೊಡ್ಡ ಸವಾಲಾಗಿದೆ. ಆದಾಗ್ಯೂ, ಅರ್ಹ ಮತದಾರರ ಹೆಸರು ತಪ್ಪಾಗಿ ಪಟ್ಟಿಯಿಂದ ಕೈಬಿಡಲಾಗಿದ್ದರೆ ಆತಂಕಪಡುವ ಅಗತ್ಯವಿಲ್ಲ. ನಮೂನೆ-6 (Form-6) ಸಲ್ಲಿಸುವ ಮೂಲಕ ತಮ್ಮ ಹೆಸರನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

You cannot copy content of this page

Exit mobile version