Home ಬ್ರೇಕಿಂಗ್ ಸುದ್ದಿ ಜಿಲ್ಲಾಧಿಕಾರಿ ಕ್ಷಮೆ ಕೇಳದಿದ್ರೆ ಉಗ್ರ ಹೋರಾಟ – ಅಗಿಲೆ ಯೋಗೇಶ್ ಎಚ್ಚರಿಕೆ

ಜಿಲ್ಲಾಧಿಕಾರಿ ಕ್ಷಮೆ ಕೇಳದಿದ್ರೆ ಉಗ್ರ ಹೋರಾಟ – ಅಗಿಲೆ ಯೋಗೇಶ್ ಎಚ್ಚರಿಕೆ

ಹಾಸನ : ಹಾಸನಾಂಬ ಉತ್ಸವದ ವೇಳೆ ಜಿಲ್ಲಾಡಳಿತದಿಂದ ನಡೆದಿರುವ ಲೋಪದೋಷಗಳಿಗೆ ಜಿಲ್ಲಾಧಿಕಾರಿಯು ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ಅವರ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೇಶ್ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರೆಯನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಂಡಿದ್ದಾರೆ. ಉತ್ಸವವನ್ನು ಕೆಲವರನ್ನು ಓಲೈಸಿಕೊಳ್ಳುವ ವೇದಿಕೆಯಾಗಿ ಬಳಸಲಾಗಿದೆ. ಇದರಿಂದ ನಿಜವಾದ ಗಣ್ಯರಿಗೆ ಅವಮಾನವಾಗಿದೆ ಎಂದು ಆರೋಪಿಸಿದರು. ಹಾಸನ ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಸಾಹಿತಿ ಎಸ್. ಎಲ್. ಭೈರಪ್ಪ, ಬೂಕರ್ ಪ್ರಶಸ್ತಿ ವಿಜೇತೆ ಭಾನುಮುಶ್ಟಾಕ್ ಸೇರಿದಂತೆ ಅನೇಕ ಗಣ್ಯರು ಇದ್ದರೂ ಅವರನ್ನು ಕಡೆಗಣಿಸಿ ಕೆಲ ಯೂಟ್ಯೂಬರ್ಗಳು ಮತ್ತು ರೀಲ್ಸ್ ಮಾಡುವವರ ಮೂಲಕ ಜಿಲ್ಲಾಡಳಿತ ಸ್ವಪ್ರಚಾರ ಮಾಡಿಕೊಂಡಿದೆ. ಇದೊಂದು ಹಾಸನದ ಸಾಧಕರಿಗೆ ಅವಮಾನ ಎಂದರು.

ಪಾಸ್ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿ, ಗೋಲ್ಡನ್ ಪಾಸ್ ಹಂಚಿಕೆ ವೇಳೆ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ನೀಡಲಾಗಿದೆ, ನಿಜವಾದ ಗಣ್ಯರಿಗೆ ನೀಡಲಿಲ್ಲ. ಜಿಲ್ಲಾಡಳಿತ ಒಂದು ಪಕ್ಷದ ಏಜೆಂಟ್ ಆಗಿ ವರ್ತಿಸಿದೆ ಎಂದು ಹೇಳಿದರು. ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ವಿರುದ್ಧವೂ ಟೀಕೆಯೊಡ್ಡಿದ ಅವರು, ತಮ್ಮ ಪಕ್ಷದವರಿಗೂ ಅಪಮಾನವಾದಾಗಲೂ ಧ್ವನಿ ಎತ್ತದಿರುವ ನಿಷ್ಕ್ರಿಯ ಶಾಸಕರು ಹಾಸನ ಜನತೆಗೆ ದುರಂತ. ತಮ್ಮ ಸ್ಥಾನವನ್ನು ಸರಿಯಾಗಿ ನಿರ್ವಹಿಸಲಾರದೇ ಇದ್ದರೆ ರಾಜೀನಾಮೆ ನೀಡಲಿ ಎಂದು ಕಿಡಿಕಾರಿದರು. ಸಿದ್ದೇಶ್ವರ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡದೇ ಇರುವುದು ಮಹಾ ಅಪರಾಧ. ಜನರ ಭಾವನೆಗೆ ಧಕ್ಕೆ ಉಂಟಾಗಿದೆ. ಇದನ್ನು ಸಹಿಸಲಾಗುವುದಿಲ್ಲ ಎಂದು ಅವರು ಎಚ್ಚರಿಸಿದರು. ಹಾಸನಾಂಬ ಉತ್ಸವದ ಆದಾಯವನ್ನು ಅಭಿವೃದ್ಧಿಗೆ ಬಳಸಬೇಕು ಎಂದು ಆಗ್ರಹಿಸಿದ ಅವರು, ಈ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು. ದೇವಾಲಯ ಮತ್ತು ಹಾಸನ ನಗರದ ಅಭಿವೃದ್ಧಿಗೆ ಮೀಸಲಿಡಬೇಕು ಎಂದರು. ಹಾಸನಾಂಬಾ ಉತ್ಸವದ ಸಮಯದಲ್ಲಿ ಇಲ್ಲಿನ ಸುತ್ತಮುತ್ತಲ ವ್ಯಾಪಾರ ಸ್ಥಗಿತಗೊಂಡು ನಷ್ಟ ಅನುಭವಿಸಿದ ವ್ಯಾಪಾರಸ್ಥರಿಗೆ ಪರಿಹಾರ ನೀಡಬೇಕು ಹಾಗೂ ಪೌರಕಾರ್ಮಿಕರು, ಡಿ ಗ್ರೂಪ್ ನೌಕರರು, ಸುತ್ತಮುತ್ತಲ ನಿವಾಸಿಗಳಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಬೇಕು ಎಂದು ಅವರು ಕೋರಿದರು. ಜಿಲ್ಲಾಡಳಿತ ತನ್ನ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಹಾಸನಾಂಬ ಉತ್ಸವದ ಲೋಪದೋಷಗಳ ವಿರುದ್ಧ ಉಗ್ರ ಹೋರಾಟ ಅನಿವಾರ್ಯ ಎಂದು ಹೇಳಿದರು.

You cannot copy content of this page

Exit mobile version